ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರಕಾರ್ಯದಲ್ಲಿಯೇ ಕೃಷಿ ಪಾಠ

Last Updated 3 ಜುಲೈ 2017, 19:30 IST
ಅಕ್ಷರ ಗಾತ್ರ

–ಹರೀಶ ಬಿ.ಎಸ್‌

ಅನುಭವಕ್ಕಿಂತ ದೊಡ್ಡ ಗುರು ಇಲ್ಲ. ಅನುಭವದ ಆಧಾರದ ಮೇಲೆಯೇ ಕಲಿತಾಗ ಅದು ಹೆಚ್ಚು ಸರಳ, ಸ್ಪಷ್ಟ ಹಾಗೂ ಗರಿಷ್ಠ ಮಟ್ಟದ ಕಲಿಕೆಯಾಗಿರುತ್ತದೆ. ಕೃಷಿ ಕಲಿಕೆ ಕೂಡ ಇದಕ್ಕೆ ಹೊರತಲ್ಲ. ನೋಡಿದರೆ ತಿಳಿಯಬಹುದಷ್ಟೆ. ಕಲಿಯಬೇಕೆಂದರೆ ಸ್ವತಃ ಮಾಡಲೇಬೇಕು.

ನಮ್ಮ ರಾಜ್ಯದಲ್ಲಿ ಸದ್ಯ ಆರು ಕೃಷಿ ಸಂಬಂಧಿ ವಿಶ್ವವಿದ್ಯಾಲಯಗಳಿದ್ದು ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳು ಕೃಷಿ ಪದವೀಧರರಾಗುತ್ತಿದ್ದಾರೆ. ಕೃಷಿ ಕೋರ್ಸುಗಳು ವೃತ್ತಿಪರವಾಗಿದ್ದರೂ ಬಹುತೇಕ ಪದವೀಧರರಲ್ಲಿ ಅದರ ಕೊರತೆಯೇ ಹೆಚ್ಚು. ಕೃಷಿ ಜ್ಞಾನ ಖಂಡಿತವಾಗಿಯೂ ನಾಲ್ಕು ಗೋಡೆಗಳ ನಡುವೆ ಕುಳಿತು ಕಲಿಯುವಂಥದ್ದಲ್ಲ.

ರಾಷ್ಟ್ರದ ಅತ್ಯುನ್ನತ ಸಂಸ್ಥೆಯಾದ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿಗೆ ನಾಲ್ಕೈದು ವರ್ಷಗಳ ಹಿಂದೆಯಷ್ಟೇ ಇದರ ಅರಿವಾದದ್ದು. ತಕ್ಷಣವೇ ಎಲ್ಲ ಕೃವಿವಿಗಳಲ್ಲೂ ಒಂದು ವಿಶಿಷ್ಟವಾದ ಪ್ರಯತ್ನ ಆರಂಭಿಸಿಯೇ ಬಿಟ್ಟಿತು. ಅದುವೇ ‘ಅನುಭವಾಧಾರಿತ ಕಲಿಕಾ ಕಾರ್ಯಕ್ರಮ’. ಇದಕ್ಕೆ ನಮ್ಮ ರಾಜ್ಯದ ಬಾಗಲಕೋಟೆಯ ತೋಟಗಾರಿಕೆ ವಿವಿಯೂ ಹೊರತಾಗಿಲ್ಲ. ತನ್ನ ಎಲ್ಲ ಮಹಾವಿದ್ಯಾಲಯಗಳಲ್ಲೂ ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮವನ್ನು ತಪ್ಪದೇ ಅನುಷ್ಠಾನ ಮಾಡಿಕೊಂಡು ಬಂದಿದೆ.

ಏನಿದು ಅನುಭವಾಧಾರಿತ ಕಲಿಕೆ?
ಕಸಿ ಕಟ್ಟುವುದನ್ನು ಸ್ವತಃ ಅಭ್ಯಾಸ ಮಾಡಿ ಕಲಿಯದ ಹೊರತು ಕರಗತ ಮಾಡಿಕೊಳ್ಳುವುದು ಕಷ್ಟ. ಈ ಕಲಿಕಾ ಕಾರ್ಯಕ್ರಮದಲ್ಲಿ ಅಂತಹ ಅನೇಕ ತಂತ್ರಜ್ಞಾನಗಳನ್ನು ಪದವಿಯ ಕೊನೆಯ ವರ್ಷ ಕಡ್ಡಾಯವಾಗಿ ಕೃಷಿ ಪದವೀಧರರು ಕಲಿಯುವುದರ ಜೊತೆಗೆ ಮಾರುವುದನ್ನೂ ರೂಢಿಸಿಕೊಳ್ಳಬೇಕು. ಕೃಷಿ ವಿದ್ಯಾರ್ಥಿಗಳ ಜ್ಞಾನ, ಕೌಶಲ, ಉದ್ಯಮಶೀಲತೆ ಹೆಚ್ಚಿಸುವ ಜೊತೆಗೆ ಕೃಷಿ ಸಂಬಂಧಿ ಚಟುವಟಿಕೆಗಳನ್ನು ಲಾಭದಾಯಕವಾಗಿ ಮಾಡಲು ಬೇಕಾಗುವ ಮೌಲ್ಯಗಳನ್ನು ಅವರಲ್ಲಿ ತುಂಬುವುದು ಈ ಕಲಿಕಾ ವಿಧಾನದ ಆಶಯ.

ಪ್ರತೀ ವಿದ್ಯಾರ್ಥಿಯೂ ತನ್ನನ್ನು ತಾನು ಇದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಸ್ವತಃ ಕಲಿಯುವುದರಿಂದ ಆ ವಿದ್ಯಾರ್ಥಿಯ ಅನುಭವ ವಿಸ್ತಾರವಾಗುವುದು. ಈ ಕಲಿಕೆಗೆ ಒಳಪಟ್ಟ ವಿದ್ಯಾರ್ಥಿಗಳು ಕೇವಲ ಸರ್ಕಾರಿ ಕೆಲಸದ ಮೇಲೋ ಅಥವಾ ಖಾಸಗಿ ಕಂಪೆನಿಗಳು ನೀಡುವ ಉದ್ಯೋಗದ ಮೇಲೋ ಅವಲಂಬಿತರಾಗದೆ ಪದವಿಯ ನಂತರ ಸ್ವಯಂ ಕೃಷಿ ಆಧಾರಿತ ಉದ್ಯಮಗಳನ್ನು ಪ್ರಾರಂಭಿಸಲು ಭದ್ರ ಬುನಾದಿ.

ಪದವಿಯ ಕೊನೆಯ ಅವಧಿಯಲ್ಲಿ ಒಳಗೊಳ್ಳುವ ಈ ಪ್ರಕ್ರಿಯೆ ಅವರಿಗೆ ಯೋಜನಾ ತಯಾರಿ ಮತ್ತು ಅನುಷ್ಠಾನ, ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವಿಕೆ, ಒಂದು ತಂಡವಾಗಿ ಕೃಷಿ ಉದ್ದಿಮೆ ಯೊಂದನ್ನು ನಿರ್ವಹಿಸುವಾಗ ಬೇಕಾಗುವ ಹೊಂದಾಣಿಕೆ, ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವಿಕೆ ಕುರಿತು ಪ್ರಾಯೋಗಿಕ ಮಾಹಿತಿ ನೀಡುತ್ತದೆ. ಲೆಕ್ಕಪತ್ರಗಳ ನಿರ್ವಹಣೆ, ಗುಣಮಟ್ಟ ನಿರ್ವಹಣೆ; ಉತ್ಪನ್ನಗಳ ವ್ಯವಸ್ಥಿತ ಮಾರಾಟ ಮಾಡುವ ಬಗೆ ಮುಂತಾದ ಹತ್ತು ಹಲವು ವಿಚಾರಗಳಲ್ಲೂ ಸಹಕಾರಿಯಾಗಿದೆ. ಎಲ್ಲಕ್ಕೂ ಮಿಗಿಲಾಗಿ ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿ ಪದವಿ ಪಡೆದವರ ಆತ್ಮವಿಶ್ವಾಸ ಸಹಜವಾಗಿಯೇ ಹೆಚ್ಚಿರುತ್ತದೆ.

ರಾಜ್ಯದ ಏಕೈಕ ತೋಟಗಾರಿಕೆ ವಿವಿಯ ವ್ಯಾಪ್ತಿಗೆ ಒಳಪಟ್ಟಿರುವ ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲೂ ಈ ಕಲಿಕಾ ವಿಧಾನವನ್ನು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಅನುಷ್ಠಾನ ಮಾಡಿಕೊಂಡು ಬರಲಾಗುತ್ತಿದೆ. ಪ್ರತೀ ಕಲಿಕಾ ಘಟಕಕ್ಕೂ ಉತ್ತಮ ನಿರ್ವಹಣಾ ದೃಷ್ಟಿಯಿಂದ ಒಂದು ಸಾಂಸ್ಥಿಕ ರೂಪ ನೀಡಲಾಗಿದೆ. ಮಹಾವಿದ್ಯಾಲಯದ ಡೀನ್ ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಗಿದ್ದಾರೆ, ಇಲಾಖೆಯ ಮುಖ್ಯಸ್ಥರು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ ಹಾಗೂ ಒಬ್ಬರು ವ್ಯವಸ್ಥಾಪಕರಿದ್ದಾರೆ. ಈ ಎಲ್ಲರ ಸಲಹೆ ಮತ್ತು ಮಾರ್ಗದರ್ಶನದಂತೆ ಪದವಿ ವಿದ್ಯಾರ್ಥಿಗಳು ತಾವು ಆಯ್ದುಕೊಂಡ ಅನುಭವಾಧಾರಿತ ಕಲಿಕಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕಲಿಕಾ ಘಟಕಗಳು: ಪದವಿಯ ನಂತರ ಸ್ವಂತ ತೋಟಗಾರಿಕೆ ಉದ್ಯಮ ಪ್ರಾರಂಭಿಸಲು ಬೇಕಾಗುವ ಪ್ರಾಥಮಿಕ ಜ್ಞಾನ, ಕೌಶಲ ಹಾಗೂ ಅನುಭವದ ಅವಶ್ಯಕತೆಯನ್ನು ಆಧರಿಸಿ ಐದು ಅನುಭವಾಧಾರಿತ ಕಲಿಕಾ ಘಟಕಗಳಲ್ಲಿ ಒಟ್ಟು 53 ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದಾರೆ. ವಾಣಿಜ್ಯ ತೋಟಗಾರಿಕೆ, ಜೈವಿಕ ಪೀಡೆ ನಾಶಕಗಳ ಉತ್ಪಾದನೆ, ಸಂರಕ್ಷಿತ ಕೃಷಿ, ಮೌಲ್ಯವರ್ಧನೆ ಮತ್ತು ಸಂಸ್ಕರಣೆ ಹಾಗೂ ಅಣಬೆ ಬೇಸಾಯ ಇವೇ ಆ ಐದು ಘಟಕಗಳು.

ವಿದ್ಯಾರ್ಥಿಗಳಿಗೆ ಈ ಐದು ಘಟಕಗಳಲ್ಲಿ ಒಂದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವಿದೆ. ಆರು ತಿಂಗಳ ಈಅನುಭವಾಧಾರಿತ ಕಲಿಕೆಯಲ್ಲಿ ಯೋಜನೆ ತಯಾರಿಗೆ ಎರಡು ವಾರ, ಉತ್ಪಾದನೆ ಮಾರಾಟಕ್ಕೆ ಇಪ್ಪತ್ತೆರಡು ವಾರ, ದಾಖಲಾತಿ ಮತ್ತು ವರದಿ ತಯಾರಿಗೆ ಒಂದು ವಾರ ಹಾಗೂ ಯೋಜನೆ ಅನುಷ್ಠಾನದ ಮೌಲ್ಯಮಾಪನಕ್ಕೆ ಒಂದು ವಾರ ನಿಗದಿಪಡಿಸಲಾಗಿದೆ.

ಕಲಿಕಾ ಘಟಕಗಳ ಉಪಯುಕ್ತತೆ
ಸ್ವಂತ ಉದ್ಯಮ ನಡೆಸಲು ಬೇಕಾಗಿರುವ ಕೌಶಲ ಹಾಗೂ ಅನುಭವ ಪಡೆಯುವ ಸದವಕಾಶ ಇದರಲ್ಲಿ ತೊಡಗಿ ಕೊಂಡಿರುವ ವಿದ್ಯಾರ್ಥಿಗಳಿಗೆ. ಶಿಕಾರಿಪುರದ ವಿದ್ಯಾರ್ಥಿ ಪವನ್, ‘ಸಾರ್ ನಾವೇನು ಸರ್ಕಾರಿ ಕೆಲಸ ನಂಬಿಕೊಂಡಿಲ್ಲ; ಡಿಗ್ರಿ ಮುಗಿದ ಮೇಲೆ ಪಾಲಿಹೌಸ್ ಹಾಕಿ ಕಡಿಮೆ ಜಾಗದಲ್ಲಿ ಅತೀ ಹೆಚ್ಚು ಇಳುವರಿ ಪಡೆದು ಹೆಚ್ಚು ಲಾಭ ಮಾಡಬಹುದು, ಆ ಅನುಭವ ನಮಗೆ ಈ ಕಲಿಕೆಯಿಂದ ಗೊತ್ತಾಗಿದೆ’ ಎನ್ನುತ್ತಾರೆ.

ರೈತರಿಗೆ ಬೆಳೆ ಅವಧಿಯಲ್ಲಾಗುವ ಅನುಭವಗಳು, ಉತ್ಕೃಷ್ಟ ಬೆಳೆ-ಬೆಲೆ ಬಂದಾಗ ಆಗುವ ಖುಷಿ, ಬೆಲೆ ಪಾತಾಳಕ್ಕಿಳಿದಾಗ ಆಗುವ ಹತಾಶೆ, ಸಮಗ್ರ ಬೆಳೆ ನಿರ್ವಹಣೆಯ ಅರಿವು, ಒಗ್ಗಟ್ಟಿನ ಒಳಿತು, ಕ್ಲಾಸು ರೂಮಿನಲಿ ಕಲಿತದ್ದನ್ನು ಪ್ರಾಯೋಗಿಕವಾಗಿ ಮಾಡಿ ನೋಡಿ ಪರೀಕ್ಷಿಸುವ ಅವಕಾಶ, ಉತ್ಪನ್ನದ ಮಾರಾಟದ ಬಗೆಗಿನ ಆಳ ಅರಿವು, ಬೇಡಿಕೆ ಆಧರಿಸಿ ಬೆಳೆ ಯೋಜನೆ ತಯಾರಿಸುವ ವಿಚಾರಗಳ ಕಲಿಕೆ ಈ ಅನುಭವ ಆಧಾರಿತ ಪದ್ಧತಿಯಲ್ಲಿ ಆಗಿರುವುದನ್ನು ಅವರು ಹಂಚಿಕೊಳ್ಳುತ್ತಾರೆ.

ಚಿತ್ರದುರ್ಗದ ಮತ್ತೋರ್ವ ವಿದ್ಯಾರ್ಥಿ ಯೋಗಾನಂದ್, ‘ಸಾರ್ ನೋಡಿ ಟ್ರೈಕೋಡರ್ಮ, ಸುಡೋಮೋನಾಸ್ ಮುಂತಾದ ಜೈವಿಕ ಶಿಲೀಂಧ್ರನಾಶಗಳನ್ನು ಇಷ್ಟು ಸುಲಭವಾಗಿ ಉತ್ಪಾದಿಸಿ ಮಾರಬಹುದೆಂದು ನಾವೇ ಮಾಡಿ ತಿಳಿದುಕೊಂಡಿದ್ದೇವೆ; ಇದರಿಂದ ಬೆಳೆ ರೋಗ ನಿರ್ವಹಣೆಗೆ ನಮ್ಮ ಕೃಷಿಕರಿಗೆ ಸಹಾಯ ಮಾಡಬಹುದು’ ಎಂದು ಹೇಳುತ್ತಾರೆ.

‘ಏನೇ ಹೇಳಿ, ನೋಡಿ ಕಲೀಬೇಕು, ಮಾಡಿ ತಿಳಿಬೇಕು’ ಅನ್ನೋ ವಿಚಾರ ನಮಗೆ ಅರ್ಥ ಆಗಿದ್ದೇ ಈ ಅನುಭವಾಧಾರಿತ ಕಲಿಕೆಯಿಂದ ಅಂತಾರೆ ವಿದ್ಯಾರ್ಥಿನಿ ಬಿಂದು. ಅವರ ಸಹಪಾಠಿ ನಂದಿತಾ, ‘ನಾಲ್ಕು ವರ್ಷಗಳ ಪದವಿ ಅವಧಿಯಲ್ಲಿ ಕನಿಷ್ಠ ಎರಡು ವರ್ಷವಾದ್ರೂ ಈ ಅನುಭವಾಧಾರಿತ ಕಲಿಕೆ ಜಾರಿಗೆ ಬಂದ್ರೆ ವಿದ್ಯಾರ್ಥಿಗಳಿಗೆ ಅನುಕೂಲ’ ಎನ್ನುತ್ತಾರೆ.

‘ಜಾಮ್, ಜೆಲ್ಲಿ, ಕೆಚಪ್, ಸಾಸ್ ಮಾಡೋದು ಇಷ್ಟೊಂದು ಸರಳವೆಂದು ಗೊತ್ತೇ ಇರ್ಲಿಲ್ಲ. ಬ್ರ್ಯಾಂಡ್ ಮಾಡದೇ ಮಾರ್ಕೆಟ್‌ನಲ್ಲಿ ಮಾರೋದು ಅಷ್ಟು ಸುಲಭವಲ್ಲವೆಂಬ ವಾಸ್ತವ ಸಹ ಅರಿವಿಗೆ ಬಂತು’ ಎಂದು ದನಿಗೂಡಿಸಿದ್ದು ಮೌಲ್ಯವರ್ಧನೆ ಮತ್ತು ಸಂಸ್ಕರಣೆ ಘಟಕ ಆಯ್ದುಕೊಂಡಿರುವ ವಿದ್ಯಾರ್ಥಿ ಚಿಕ್ಕಮಗಳೂರಿನ ಚಂದನ್.

ದೇಶದ ಕೃಷಿ ಶಿಕ್ಷಣ ವ್ಯವಸ್ಥೆಯಲ್ಲಿನ ಈ ತೆರನಾದ ಪ್ರಯತ್ನಗಳಿಂದ ಯುವಕರು ಹೆಚ್ಚಿನ ಕೌಶಲ, ಜ್ಞಾನ, ಅನುಭವ ಗಳಿಸಿ ಸ್ವಸಾಮಥ್ರ್ಯದಿಂದ ಸ್ವ-ಉದ್ಯೋಗ ಪ್ರಾರಂಭಿಸಲು ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಸಲು ಸಹಕಾರಿ. ಕಲಿಕೆ ಅನುಭವವಾಗಿ ಅನುಭವವೇ ಕಲಿಕೆಯಾಗಬೇಕು; ಅದು ಇಲ್ಲಿ ಇತ್ತೀಚೆಗೆ ಸಾಕಾರಗೊಳ್ಳುತ್ತಿದೆ. ಅದೇ ಎಲ್ಲ ಶಿಕ್ಷಣಗಳ ಮೂಲ ಧ್ಯೇಯ. ಏನಂತೀರಿ? ಕೃಷಿ ಶಿಕ್ಷಣ ವ್ಯವಸ್ಥೆಯಲ್ಲಿ ಅಂತಹ ಸಾಧ್ಯತೆ ಹುಟ್ಟುಹಾಕಿರುವ ವಿನೂತನ ಪ್ರಯತ್ನವೇ ಈ ಅನುಭವಾಧಾರಿತ ಕಲಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT