ಶನಿವಾರ, ಡಿಸೆಂಬರ್ 14, 2019
22 °C

ಕಬ್ಬು ಹೋಗಿ ಕಲ್ಲಂಗಡಿ ಬಂತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಬ್ಬು ಹೋಗಿ ಕಲ್ಲಂಗಡಿ ಬಂತು

–ಅಕ್ಷತಾ ಬಿರಾದಾರ

ಬಾಗಲಕೋಟೆ ಜಿಲ್ಲೆಯ ಮುಧೋಳ ಭಾಗದಲ್ಲಿ ರೈತರು ಇದುವರೆಗೆ ಹೆಚ್ಚಾಗಿ ಕಬ್ಬು ಬೆಳೆಯುವುದೇ ರೂಢಿಯಾಗಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ಕಾಡುತ್ತಿರುವ ಬರಗಾಲದಿಂದ ನೀರಿಲ್ಲದೆ ಕಬ್ಬು ಬೆಳೆದೂ ನಷ್ಟ ಅನುಭವಿಸಿದ್ದರು. ಇಂತಹ ಸನ್ನಿವೇಶದಿಂದ ಪಾರಾಗಲು ಉತ್ತೂರು ಗ್ರಾಮದ ರೈತರು ಕಂಡುಕೊಂಡ ಹಾದಿ ಮಿಶ್ರ ಬೇಸಾಯ. ನಷ್ಟದ ಹಾದಿ ಹಿಡಿದಿದ್ದ ಕಬ್ಬಿನ ಬೆಳೆಯನ್ನು ಕೈಬಿಟ್ಟು ಕಲ್ಲಂಗಡಿ–ಚೆಂಡುಹೂವಿನ ಬೆಳೆಯತ್ತ ಒಲವು ತೋರಿದ ಅಜೀತಗೌಡ ಪಾಟೀಲ ಮತ್ತು ರಮೇಶ ಮಳಲಿ ಅವರಂತಹ ಪ್ರಗತಿಪರ ಕೃಷಿಕರು ತಾಲ್ಲೂಕಿನ ಉಳಿದ ರೈತರಿಗೂ ಮಾದರಿಯಾದರು.

ಐಟಿಐ ಓದಿದರೂ ಕೃಷಿಯಲ್ಲೇ ಬದುಕು ಕಂಡುಕೊಳ್ಳಲು ನಿರ್ಧರಿಸಿದವರು ಅಜೀತಗೌಡ. ತಮ್ಮ ಹೊಲದಲ್ಲಿ ಹಲವಾರು ಪ್ರಯೋಗಗಳನ್ನೂ ಮಾಡಿದವರು. ಹರಿಯಾಣದಿಂದ ಎಮ್ಮೆಗಳನ್ನು ತಂದು ಹೈನುಗಾರಿಕೆಯಲ್ಲಿ ತೊಡಗಿದ್ದ ಈ ರೈತ, ಇನ್ನೇನು ಹೈನುಗಾರಿಕೆ ಕೈಹಿಡಿಯಿತು ಎಂದು ಸಂಭ್ರಮಿಸುವಷ್ಟರಲ್ಲಿ ಎಮ್ಮೆಗಳಿಗೆ ಆರೋಗ್ಯ ಕೈಕೊಟ್ಟಿತು. ತಕ್ಷಣವೇ ಸಾವರಿಸಿಕೊಂಡು ಕಬ್ಬಿನ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಮುಂದುವರಿದಿದ್ದರು. ಆಗ ಕಾಡಿದ್ದು ಬರಗಾಲ.

ನದಿಗಳು ಬತ್ತಿ, ಕೊಳವೆ ಬಾವಿಯಲ್ಲೂ ಅಂತರ್ಜಲ ಮಟ್ಟ ಇಳಿದಾಗ ಸಿಗುವ ಅಲ್ಪ ನೀರನ್ನು ಬಳಸಿಕೊಂಡು ಯಾವ ರೀತಿಯ ಕೃಷಿ ಮಾಡಬೇಕು ಎಂದು ಈ ರೈತ ತಲೆ ಕೆರೆದುಕೊಳ್ಳುತ್ತಿದ್ದಾಗ ಗ್ರಾಮದ ಲಕ್ಷ್ಮಣ ಅವರ ತೋಟದತ್ತ ಕಣ್ಣು ಹೊರಳಿತು. ಅವರ ತೋಟದಲ್ಲಿ ಕಲ್ಲಂಗಡಿ ನಳನಳಿಸುತ್ತಿತ್ತು. ಲಕ್ಷ್ಮಣ ಅವರಂತೆಯೇ ಒಂದು ಎಕರೆಯಲ್ಲಿ ಮೊದಲಿಗೆ ಕಲ್ಲಂಗಡಿ ಬೆಳೆದ ಅಜೀತಗೌಡ, ಬಳಿಕ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಕಲ್ಲಂಗಡಿ ಜತೆಗೆ ಚೆಂಡುಹೂವನ್ನೂ ಬೆಳೆದರು.

ಎಂಟು ಟ್ರ್ಯಾಕ್ಟರ್ ಸಗಣಿ ಗೊಬ್ಬರವನ್ನಲ್ಲದೆ ಡಿಎಪಿ, ಲಘು ಹಾಗೂ ಸೂಕ್ಷ್ಮ ಪೋಷಕಾಂಶಗಳನ್ನು ಸೇರಿಸಿ ಭೂಮಿಯನ್ನು ಹದಮಾಡಿ ಕಲ್ಲಂಗಡಿ ಅಗಿಗಳನ್ನು ಹಾಕಿದರು. ಮದ್ಯದಲ್ಲಿ ಚೆಂಡು ಹೂವು ಬೆಳೆದರು. ಈಗ ಕಲ್ಲಂಗಡಿ ಮಾರಾಟಕ್ಕೆ ಬಂದಿದೆ. ಮುಂಬೈ, ಪಣಜಿ, ಬೆಂಗಳೂರಿನ ವ್ಯಾಪಾರಿಗಳು ಫಸಲನ್ನು ಬಂದು ನೋಡಿಕೊಂಡು ಹೋಗಿದ್ದು, ₹ 5 ಲಕ್ಷದವರೆಗೆ ಬೆಲೆ ಕಟ್ಟಿದ್ದಾರೆ ಎಂದು ಅಜೀತಗೌಡ ವಿವರಿಸುತ್ತಾರೆ.

‘ಸತತ ಮೂರು ವರ್ಷದ ಬರಗಾಲದಿಂದ ತತ್ತರಿಸಿ ಹೋಗಿದ್ದೆವು. ನಮ್ಮ ಭಾಗದಲ್ಲಿ ಸರಿಯಾಗಿ ನೀರು ಸಿಗದ ಕಾರಣ ಎಕರೆಗೆ 60 ಟನ್ ಬೆಳೆಯುತ್ತಿದ್ದ ಕಬ್ಬು ಈಗ 20 ಟನ್‌ಗೆ ಬಂದು ನಿಂತಿತ್ತು. ಮಾಡಿದ ಖರ್ಚು ಸಹ ವಾಪಸ್‌ ಬರುತ್ತಿರಲಿಲ್ಲ. ಹೀಗಾಗಿ ಕಬ್ಬು ಬಿಟ್ಟು ಬೇರೆ ಬೆಳೆಯತ್ತ ನಮ್ಮ ಗಮನಹರಿಯಿತು. ಮಿಶ್ರ ಬೇಸಾಯದಿಂದ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗಿದೆ. ಬೆಳೆನಷ್ಟ ಹೊಡೆತದಿಂದಲೂ ಮುಕ್ತಿ ಸಿಕ್ಕಿದೆ’ ಎಂದು ಅವರು ಖುಷಿಯಿಂದ ಹೇಳುತ್ತಾರೆ.

ಲಕ್ಷ್ಮಣ ಅವರು ಎಂಜಿನಿಯರಿಂಗ್ ಪದವೀಧರ. ಮೂರು ಎಕರೆಯಲ್ಲಿ ₹ 12 ಲಕ್ಷದಷ್ಟು ಆದಾಯ ಪಡೆದಿದ್ದರು. ಅವರಿಂದ ಪ್ರೇರಣೆ ಹೊಂದಿದ ಅಜೀತಗೌಡ ಒಂದು ಎಕರೆಯಲ್ಲೇ ಕಲ್ಲಂಗಡಿ ಕೃಷಿಮಾಡಿ ಕೈತುಂಬಾ ಕಾಸು ಕಾಣುತ್ತಿದ್ದಾರೆ. ಈ ರೈತರಿಬ್ಬರ ಯಶಸ್ಸಿನಿಂದ ಉತ್ಸಾಹಗೊಂಡ ರಮೇಶ ಮಳಲಿ ಅವರೂ ಕಲ್ಲಂಗಡಿ ಬೆಳೆದಿದ್ದಾರೆ. ಕಬ್ಬನ್ನೇ ಹೆಚ್ಚಾಗಿ ಬೆಳೆಯುವ ಈ ಭಾಗದಲ್ಲಿ ಈಗಾಗಲೇ 30 ಎಕರೆ ಪ್ರದೇಶ ಕಲ್ಲಂಗಡಿ ಹಣ್ಣಿನ ಬೆಳೆಗೆ ಬದಲಾಗಿದೆ.

‘ನಮ್ಮ ತಂದೆಯವರ ಕಾಲದಿಂದಲೂ ಬರೀ ಕಬ್ಬು ಬೆಳೆಯುತ್ತಾ ಬಂದಿದ್ದೆವು. ನಮ್ಮೂರಿನ ಇತರ ಪ್ರಗತಿಪರ ರೈತರಂತೆ ನಾನೂ ಕಬ್ಬಿನ ಬೆಳೆಯಿಂದ ಹೊರಬರಲು ನಿರ್ಧರಿಸಿ ಒಳ್ಳೆಯ ಕೆಲಸ ಮಾಡಿದೆ. ಈ ಬಾರಿ ಕೃಷಿಯಿಂದ ನಮಗೆ ಲಾಭವಾಗಿದೆ’ ಎಂದು ರಮೇಶ ತಿಳಿಸುತ್ತಾರೆ.

ಕಪ್ಪು ಮಣ್ಣಿನ ಈ ಭೂಮಿಯಲ್ಲಿ ಸಾಕಷ್ಟು ತೇವಾಂಶ ಇರುವ ಕಾರಣ ಹನಿ ನೀರಾವರಿ ಪದ್ಧತಿಯಿಂದ ಕಬ್ಬಿಗೆ ಬೇಕಾಗುವ ಶೇ 20ರಷ್ಟು ನೀರು ನೀಡಿದರೂ ಸಾಕು, ಯಾವುದೇ ತೊಂದರೆಯಿಲ್ಲದೆ ಒಳ್ಳೆಯ ಫಸಲು ಪಡೆಯಬಹುದು ಎಂದು ಕೃಷಿಯಲ್ಲಿ ಮಾರ್ಪಾಡು ಮಾಡಿಕೊಂಡ ರೈತರು ಖುಷಿಯಿಂದ ಹೇಳುತ್ತಿದ್ದಾರೆ.

ಪ್ರತಿಕ್ರಿಯಿಸಿ (+)