ಮಂಗಳವಾರ, ಡಿಸೆಂಬರ್ 10, 2019
16 °C

ಉಪಯುಕ್ತ ಕೃಷಿ ಯಂತ್ರಗಳು

Published:
Updated:
ಉಪಯುಕ್ತ ಯಂತ್ರಗಳು

ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಹುಡುಕುತ್ತ ಬಂದಿದೆ. ಸಂಸ್ಥೆಯ ವಿಜ್ಞಾನಿಗಳಾದ ಸೆಂಥಿಲ್ ಕುಮಾರನ್ ಮತ್ತು ಕಾರೋಲಿನ್ ಅವರು ಇದೀಗ ಈರುಳ್ಳಿ ಬೀಜ ಬಿತ್ತುವ ಯಂತ್ರ, ಗೊಬ್ಬರ ಜರಡಿ ಹಿಡಿಯುವ ಮತ್ತು ಕವರ್‌ಗಳಲ್ಲಿ ತುಂಬುವ ಯಂತ್ರ ಹಾಗೂ ಕಲ್ಲಂಗಡಿ ಹಣ್ಣಿನ ಬೀಜವನ್ನು ಬೇರ್ಪಡಿಸುವ ಯಂತ್ರವನ್ನು ಆವಿಷ್ಕಾರ ಮಾಡಿದ್ದಾರೆ.

ಈರುಳ್ಳಿಯನ್ನು ಕೈಯಿಂದ ಬಿತ್ತನೆ ಮಾಡುವಾಗ ಒಂದು ಹೆಕ್ಟೇರ್ ಭೂ ಪ್ರದೇಶಕ್ಕೆ ಮೂರು ಸಾವಿರದಿಂದ ಐದು ಸಾವಿರ ಬಿತ್ತನೆ ಬೀಜ ಬೇಕಾಗುತ್ತದೆ. ಅಲ್ಲದೆ ಬೀಜಗಳು ನೆಲದ ಆಳಕ್ಕೆ ಸರಿಯಾಗಿ ಇಳಿಯುವುದಿಲ್ಲ. ಸಂಸ್ಥೆಯಿಂದ ಅಭಿವೃದ್ಧಿ ಮಾಡಲಾಗಿರುವ ಯಂತ್ರದಿಂದ ಒಂದು ಹೆಕ್ಟೇರ್ ಭೂಪ್ರದೇಶಕ್ಕೆ ಕೇವಲ 500 ಬಿತ್ತನೆ ಬೀಜ ಸಾಕು. ಬಿತ್ತನೆ ಬೀಜ ಕ್ರಮಬದ್ಧವಾಗಿ ನೆಲದ ಆಳಕ್ಕೆ ಬೀಳುವುದರಿಂದ ಹೆಚ್ಚಿನ ಇಳುವರಿ ಸಾಧ್ಯ.

‘ಬಿತ್ತನೆ ಮಾಡಲು ಎರಡು ರೀತಿಯ ಯಂತ್ರಗಳನ್ನು ನಾವು ಅಭಿವೃದ್ಧಿಪಡಿಸಿದ್ದು, ಒಂದು ಕೈಯಿಂದ ಬಿತ್ತನೆ ಮಾಡುವುದಾದರೆ ಮತ್ತೊಂದು ಎತ್ತಿನ ನೊಗಕ್ಕೆ ಕಟ್ಟಿ ಬಿತ್ತನೆ ಮಾಡಲು ಬಳಸಬಹುದು. ಈ ಯಂತ್ರಗಳ ಬಳಕೆಯಿಂದ ರೈತರಿಗೆ ಸಮಯ ಮತ್ತು ಶ್ರಮ ಎರಡು ಉಳಿಯುತ್ತದೆ’ ಎನ್ನುತ್ತಾರೆ ಈ ಯಂತ್ರವನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿ ಸೆಂಥಿಲ್ ಕುಮಾರನ್.

‘ಕಲ್ಲಂಗಡಿ ಹಣ್ಣಿನ ಬೀಜವನ್ನು ಬೇರ್ಪಡಿಸುವುದು ರೈತರಿಗೆ ಹೊರೆಯ ಕೆಲಸ. ನಾವು ಅವಿಷ್ಕಾರ ಮಾಡಿರುವ ಯಂತ್ರದಿಂದ ಒಂದೇ ದಿನದಲ್ಲಿ ನೂರಾರು ಹಣ್ಣುಗಳ ಬೀಜವನ್ನು ಸಂಗ್ರಹಿಸಬಹುದು. ಕಲ್ಲಂಗಡಿ ಹಣ್ಣನ್ನು ಎರಡು ಹೋಳುಮಾಡಿ ಚಕ್ರಕ್ಕೆ ಇಟ್ಟರೆ, ಅದು ತಿರುಳು ಮತ್ತು ಬೀಜವನ್ನು ಬೇರೆ ಬೇರೆ ಮಾಡುತ್ತದೆ. ಅವನ್ನು ಒಂದು ಡ್ರಮ್‌ನಲ್ಲಿ ನೀರು ಹಾಕಿ ಒಂದು ರಾತ್ರಿ ಬಿಟ್ಟರೆ ಬೀಜ ತಳ ಭಾಗದಲ್ಲಿ ಹೋಗಿ ಶೇಖರಣೆ ಆಗುತ್ತದೆ. ಡ್ರಮ್‌ನ ನೀರು ಬರಿದು ಮಾಡಿದಾಗ ಬೀಜವನ್ನು ಸಂಗ್ರಹಿಸಬಹುದು’ ಎಂದು ವಿವರಿಸುತ್ತಾರೆ ಕಾರೋಲಿನ್.

‘ಗೊಬ್ಬರವನ್ನು ಬೆಳೆಗಳಿಗೆ ಹಾಕುವಾಗ ಅದನ್ನು ಜರಡಿ ಹಿಡಿದು ನಮ್ಮ ರೈತರು ಹಾಕುತ್ತಾರೆ. ಹೀಗೆ ಜರಡಿ ಹಿಡಿಯುವುದಕ್ಕೆ ಸುಮಾರು ಐದಾರು ದಿನಗಳನ್ನು ತೆಗೆದುಕೊಳ್ಳುತ್ತಾರೆ. ನಾವು ಆವಿಷ್ಕಾರ ಮಾಡಿರುವ ಯಂತ್ರದಿಂದ ಕೇವಲ ಎರಡು ದಿನಗಳಲ್ಲಿ ಒಂದು ಹೆಕ್ಟೇರ್‌ಗೆ ಬೇಕಾಗುವ ಗೊಬ್ಬರವನ್ನು ಜರಡಿ ಹಿಡಿಯಬಹುದು. ಯಂತ್ರದ ಮೇಲಿನ ಭಾಗದಲ್ಲಿ ಗೊಬ್ಬರವನ್ನು ಹಾಕಿದರೆ ಅದು ಜರಡಿ ಹಿಡಿದು ಕವರ್‌ಗಳಲ್ಲಿ ತುಂಬುತ್ತದೆ’ ಎಂದು ಯಂತ್ರದ ಕಾರ್ಯವೈಖರಿಯನ್ನು ಕುರಿತು ವಿವರಿಸುತ್ತಾರೆ ಸೆಂಥಿಲ್ ಕುಮಾರನ್. ಯಂತ್ರಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಸಂಪರ್ಕಕ್ಕೆ: 080-2846 6291

 

ಪ್ರತಿಕ್ರಿಯಿಸಿ (+)