ಶುಕ್ರವಾರ, ಡಿಸೆಂಬರ್ 6, 2019
17 °C

ಗಡಿಬಿಡಿಯ ಗುಟ್ಟು

Published:
Updated:
ಗಡಿಬಿಡಿಯ ಗುಟ್ಟು

ಕೆಂಪೇಗೌಡ ಮೆಟ್ರೊ ರೈಲು ನಿಲ್ದಾಣದಿಂದ ಬನಶಂಕರಿಗೆ ಹೋಗಲು ರೈಲು ಹತ್ತಿದೆ. ನೂಕುನುಗ್ಗಲು ನನಗೆ ಸವಾಲಾಗಲಿಲ್ಲ. ನನ್ನ ಬೆಳ್ಳಿಕೂದಲು ನೋಡಿ ಕಿರಿಯ ನಾಗರಿಕನೊಬ್ಬ ಸೀಟು ಬಿಟ್ಟುಕೊಟ್ಟ.

ಆಗ ‘ರೀ ಮೆಟ್ರೊ ರೈಲಿನಲ್ಲಿ ‘ಹಿರಿಯ ನಾಗರಿಕರಿಗೆ’ ಅನ್ನೋ ಬೋರ್ಡ್ ಹಾಕುವವರೆಗೆ ಕೂದಲಿಗೆ ಬಣ್ಣ ಹಚ್ಚಬೇಡಿ’ ಎಂಬ ನನ್ನ ಅನುಭವಿ ಮಿತ್ರರೊಬ್ಬರ ಕಿವಿಮಾತು ನೆನಪಿಗೆ ಬಂತು!

ನೀವು ಏನೇ ಹೇಳಿ. ಆಸನ ಅಭಾವ ವೈರಾಗ್ಯ ಎನ್ನುವುದಿದೆ. ಮೆಟ್ರೊ ರೈಲಿನಲ್ಲಂತೂ ಇದು ನೂರಕ್ಕೆ ನೂರು ದಿಟ. ಕೂರಲು ಆಸನ ಸಿಗವುದೇ ಕಷ್ಟ. ‘ಅಯ್ಯೋ ಬಿಡಿ, ಪಟಪಟ ಸ್ಟೇಷನ್ನುಗಳು ಬರುತ್ವೆ... ವಿಮಾನಕ್ಕೂ ಇಷ್ಟು ವೇಗವಿಲ್ಲ. ಕೂತು ಏಳೊ ಹೊತ್ಗೆ ನಿಮ್ಮ ಸ್ಟೇಷನ್ ಬಂದಿರುತ್ತೆ’ ಅಂತ ಜನರ ಬಾಯಲ್ಲಿ ಸ್ವ-ಸಾಂತ್ವನ ರಾರಾಜಿಸಿರುತ್ತದೆ.

ಚಿಕ್ಕಪೇಟೆ ಸ್ಟೇಷನ್‌ನಲ್ಲಿ ಇಳಿದವರಿಗಿಂತ ಹತ್ತಿದವರು ಹೆಚ್ಚು. ಹತ್ತಿದವರ ಪೈಕಿ ಒಬ್ಬ ಯುವಕ, ಒಬ್ಬ ಯುವತಿ ನನ್ನ ಗಮನ ಸೆಳೆಯಲು ಕಾರಣವಿತ್ತು. ಅವರು ಪದೇ ಪದೇ ತಂತಮ್ಮ ಅರ್ಧ ಸ್ಲೇಟು ಅಗಲದ ಮೊಬೈಲಿನಲ್ಲಿ ಮಗ್ನರಾಗುತ್ತಿದ್ದರು. ಅವರಿಬ್ಬರೂ ಸ್ನೇಹಿತರೆಂದು ಸಂಭಾಷಣೆಯಿಂದಲೇ ಖಾತರಿಯಾಯಿತು.

ತಮ್ಮವರಿಗೆ ಫೋನಾಯಿಸಿದ್ದೇ ಫೋನಾಯಿಸಿದ್ದು. ‘ಒನಕೆನ ನನ್ನ ಫ್ರೆಂಡ್ ಬೈಕ್‌ನಲ್ಲಿ ತರ್ತಿದಾನೆ, ಇನ್ನೇನು ತರಬೇಕು ಬೇಗ ಹೇಳಿ’ ಅಂತ ಅವನು. ‘ಯಾರ್‍ಯಾರು ಬಂದಿದ್ದಾರೆ, ಡೆಕೊರೇಶನ್ ಮುಗೀತಾ’ ಅಂತ ಅವಳು. ಕೃಷ್ಣರಾಜ ಮಾರುಕಟ್ಟೆ ಹಿಂದೆ ಹೋದಾಗ ಅವರ ಧಾವಂತಕ್ಕೆ ಸಾಟಿಯಿರಲಿಲ್ಲ.

‘ಛೆ! ನೀನೊಳ್ಳೆ ಮಂಕ, ಅಲ್ಲಿ ನಾನೊಂದು ಬಹಳ ಮುಖ್ಯವಾದದ್ದು ಶಾಪಿಂಗ್ ಮಾಡೋದಿತ್ತು ಕಣೋ’ ಅಂತ ಅವಳು ರೇಗಿದಳು. ಬಹುಶಃ ಇವರು ಯಾವುದೋ ಶುಭ ಸಮಾರಂಭಕ್ಕೆ ಹೊರಟಿರಬೇಕೆಂದುಕೊಂಡೆ. ಉಡುಗೊರೆ ಯನ್ನೊ ಅಥವಾ ಅಗತ್ಯವಾದ ಪರಿಕರಗಳನ್ನೊ ಕೊಳ್ಳಬೇಕೆತ್ತೇನೊ?.

ನನಗೆ ಕುತೂಹಲವಾಗಿ ‘ಏನ್ರಪ್ಪಾ ಮಾರ್ಕೆಟ್‌ನಲ್ಲಿ ಇಳಿದು ಏನಾದರೂ ಖರೀದಿ ಮಾಡ್ಬೇಕಿತ್ತಾ?’ ಎಂದು ಕೇಳಿದೆ. ‘ಹೌದು ಅಂಕಲ್, ಒಂದು ಲಿಸ್ಟೇ ಕೊಟ್ಟಿದ್ದಾರೆ. ಇಂತಿಂಥದ್ದು ತಗೊಂಡು ಬಾ ಅಂತ. ಅದ್ರಲ್ಲೂ ಕರಿಮಣಿ ಸರ ಬೇಕೇ ಬೇಕಂತೆ’ ಎಂದಳು ಹುಡುಗಿ.

‘ನಾವು ಬನಶಂಕರಿಯಲ್ಲಿ ಇಳೀಬೇಕು. ಅಲ್ಲಿಗೆ ಟಿಕೆಟ್ ತಗೊಂಡಿದೀವಿ. ಅಲ್ಲೇ ಇಳಿದ್ರಾಯ್ತು. ಅಂಗಡಿ ಸಾಲೇ ಇದೆ. ಅಲ್ಲೇ ಎಲ್ಲ ಪದಾರ್ಥಗಳು ಸಿಗುತ್ತಲ್ವ ಅಂಕಲ್’ ಅಂದ ಹುಡುಗ. ‘ಖಂಡಿತ ನೀವು ಹೊಗ್ತೀರೋದು ದೇವಸ್ಥಾನಕ್ಕೆ. ಅಲ್ಲೊಂದು ಮದುವೆಗೆ ಹಾಗಾದರೆ’ ಎಂದೆ ನಾನು.

‘ನಿಜ ಅಂಕಲ್. ಸ್ವಲ್ಪ ಈ ಮಾರಾಯ್ತಿಗೆ ಬುದ್ಧಿ ಹೇಳಿ. 12 ಗಂಟೆಯೊಳಗೆ ಮುಹೂರ್ತ ಮುಗಿಯುತ್ತೆ. ಇನ್ನೂ ಬೇಕಾದಷ್ಟು ಕೆಲಸ ಇದೆ. ಬೇಗ ಬೇಗ ಹೋಗ್ಬೇಕು. ಈಗ್ಲೇ ಹತ್ತೂಮುಕ್ಕಾಲು’ ಎಂದ ಯುವಕ.

‘ನೋಡಿ ಆತುರ ಕಾತುರ ಬೇಡಿ. ನಿಧಾನವಾಗಿ ಹೋಗಿ. ಒಂದು ವೇಳೆ ಕರಿಮಣಿಯಿಲ್ಲ ಅಂದ್ರೂ, ಅದೇ ಮುಹೂರ್ತದಲ್ಲೇ ಒಂದು ಅರಿಶಿನದ ಕೊಂಬು ಕಟ್ಟು ಅನ್ನಿ ವರನಿಗೆ. ಆಮೇಲೆ ಮುಂದೆ ಎಂದಾದ್ರೂ, ಯಾವಾಗ್ಲಾದರೂ ಒಂದು ಶುಭ ಗಳಿಗೇಲೆ ಮಾಂಗಲ್ಯ ಸರ ಧರಿಸಬಹುದು. ಮುಖ್ಯ ಏನಂದ್ರೆ ಗಂಡು ಹೆಣ್ಣು ಆದರ್ಶ ದಂಪತಿಯಾಗಿ ಬಾಳ್ಬೇಕು ಅಷ್ಟೆ’ ‘ನಿಮ್ಮ ಆಶೀರ್ವಾದ ಅಂಕಲ್’ ಎಂದ ಹುಡುಗ.

ಆದರೆ ಆಕೆಯ ಮುಖದಲ್ಲಿ ಮಾತ್ರ ಏನೋ ಕಸಿವಿಸಿ.

‘ಅಲ್ಲಿ ಅರಿಶಿನ ಅಂಗಡಿಗಳಿಗೇನು ಬರಾನ ಅಂಕಲ್? ಆದ್ರೆ ನಂಗೇನೆ ಅದನ್ನ ಕಟ್ಟು ಅನ್ನೋಕೆ ಸರಿ ಅನ್ನಿಸ್ತಿಲ್ಲ’ ‘ಬಿಡಮ್ಮ, ಅದು ವರ, ವಧುವಿನ ಪಾಡು. ನೀನ್ಯಾಕೆ ವೃಥಾ ತಲೆ ಕೆಡಿಸ್ಕೋತಿ’

‘ಅಂಕಲ್... ಅಂಕಲ್. ಅದು ಹಾಗಲ್ಲ. ಅದು ಅ...ದು...’ ತಡವರಿಸಿದಳು ಹುಡುಗಿ. ಅವನು ನೆರವಿಗೆ ಬಂದಿದ್ದ.

‘ಮದುವೆ ನಮ್ಮದೇನೆ ಅಂಕಲ್!’ ನನಗೆ ಅಚ್ಚರಿ ಪಡಲು, ಹಸೆಮಣೆಯೇರುವವರನ್ನು ಹಾರೈಸಲು ಸಮಯವೇ ಸಿಗಲಿಲ್ಲ. ಯಾರೋ ದೊಡ್ಡ ಪೆಟ್ಟಿಗೆ ಯನ್ನು ಧುತ್ತನೆ ಎದುರಿಗಿರಿಸಿದಂತೆ ಬನಶಂಕರಿ ನಿಲ್ದಾಣ ಬಂದೇಬಿಟ್ಟಿತ್ತು.

 

ಪ್ರತಿಕ್ರಿಯಿಸಿ (+)