ಬುಧವಾರ, ಡಿಸೆಂಬರ್ 11, 2019
20 °C

ಗ್ರಿಲ್ ತಿನಿಸಿನೊಂದಿಗೆ ಮೊಲದ ಫ್ರೈ

Published:
Updated:
ಗ್ರಿಲ್ ತಿನಿಸಿನೊಂದಿಗೆ ಮೊಲದ ಫ್ರೈ

ದೊಡ್ಡ ತವಾದ ಮೇಲೆ ಅನಾನಸ್‌ ತುಂಡುಗಳನ್ನು ಹಾಕಿ ಬೇಯಿಸುತ್ತಿದ್ದ ಬಾಣಸಿಗ, ಒಂದಿಷ್ಟು ಉಪ್ಪು ಹಾಕಿ ಕಲಸಿ ತಯಾರಿಸುತ್ತಿದ್ದ ಖಾದ್ಯದ ಹೆಸರು ಜೀರಾ ಪೈನಾಪಲ್‌. ಅಲ್ಲಿಂದ ಪಕ್ಕದ ತವಾ ಕಡೆ ಹೋದ ಬಾಣಸಿಗ ಮೊಲದ ಮಾಂಸದ ಸಣ್ಣ ತುಣುಕುಗಳಿಗೆ ಮಸಾಲೆ ಬೆರೆಸಿ ಫ್ರೈ ಮಾಡುತ್ತಿದ್ದರು.

ಮಾರತ್ತಹಳ್ಳಿ ಸಮೀಪದ ಸೋಲ್‌ ಸ್ಪೇಸ್‌ ಅರೇನಾ ಮಾಲ್‌ನಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ ಬಾರ್ಬೆಕ್ಯು ನ್‌ ರೆಸ್ಟೊರೆಂಟ್‌ನ ಬಾಣಸಿಗ ನಾಗರಾಜ್‌ ಅವರು ಹೊಸ ಬಗೆಯ ಖಾದ್ಯಗಳನ್ನು ಗ್ರಾಹಕರ ಎದುರೇ ಮಾಡುತ್ತಿದ್ದರು.  ಹಾಸನ ಜಿಲ್ಲೆಯ ನಾಗರಾಜ್‌ ಈ ಹೋಟೆಲ್‌ನ ಮುಖ್ಯ ಬಾಣಸಿಗ. ಗ್ರಾಹಕರಿಗಾಗಿ ಹೊಸಹೊಸ ಖಾದ್ಯಗಳನ್ನು ಇವರು ಪರಿಚಯಿಸುತ್ತಾರೆ.

ಚಾಟ್‌ ಸ್ಯಾಂಡ್‌ವಿಚ್‌ ಇವರು ಪರಿಚಯಿಸಿದ ಮತ್ತೊಂದು ತಿನಿಸು. ಮಾವಿನಕಾಯಿ ತುರಿ, ಆಲೂಗಡ್ಡೆ, ಈರುಳ್ಳಿ, ಮೆಣಸಿನಕಾಯಿ, ಚಾಟ್‌ಮಸಾಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಾಡಿದ ಮಿಶ್ರಣವನ್ನು ಎರಡು ಸಣ್ಣ ಬ್ರೆಡ್‌ ತುಂಡುಗಳ ಮಧ್ಯೆ ಇಟ್ಟು ಕೊಡುತ್ತಾರೆ. ಹುಳಿ, ಕಾರ ಹಾಗೂ ಸ್ವಲ್ಪ ಸಿಹಿ ರುಚಿ ಕೊಡುವ ಈ ತಿನಿಸು ಮಕ್ಕಳು ಹೆಚ್ಚು ಇಷ್ಟಪಡುತ್ತಾರಂತೆ. ಇಲ್ಲಿ ಗ್ರಾಹಕರಿಗೆ ಕಾಣಿಸುವಂತೆ ಅಡುಗೆ ಮಾಡಲಾಗುತ್ತದೆ (ಲೈವ್‌ ಕೌಂಟರ್‌).

‘ಸೂಪ್‌ ಸ್ಟೇಷನ್‌’ ಎಂಬ ನಾಮಫಲಕ ಹಾಕಿರುವ ಜಾಗದಲ್ಲಿ ತರಕಾರಿ, ಕೋಳಿ ಮಾಂಸ, ಸಿಗಡಿ ಇಟ್ಟಿರುತ್ತಾರೆ. ಯಾವ ಸೂಪ್‌ ಬೇಕೋ ಆ ಸೂಪ್‌ ಅನ್ನು ಗ್ರಾಹಕರೇ ಮಾಡಿಕೊಳ್ಳಬಹುದು.

ಬಾರ್ಬೆಕ್ಯು ನೇಷನ್‌ ರೆಸ್ಟೊರೆಂಟ್‌ ಗ್ರಿಲ್ಡ್‌ ತಿನಿಸುಗಳಿಗೆ ಹೆಸರುವಾಸಿ. ಆದರೆ ಇಲ್ಲಿನ ಶಾಖೆಯಲ್ಲಿ ಫ್ರೈಡ್‌ ತಿನಿಸುಗಳನ್ನು ಮಾಡಲಾಗುತ್ತದೆ. ಕರಿದ ಸಿಗಡಿ ಹಾಗೂ ಮೀನಿನ ತಿನಿಸುಗಳು ಗರಿಗರಿಯಾಗಿರುತ್ತವೆ. ಟರ್ಕಿ ಕೋಳಿ ಮಾಂಸದ ಫ್ರೈ ಕೂಡ ಇಲ್ಲಿನ ವಿಶೇಷ ತಿನಿಸು.  ರೆಸ್ಟೊರೆಂಟ್‌ಗೆ ಹುಟ್ಟುಹಬ್ಬ ಆಚರಣೆಗಾಗಿಯೂ ಗ್ರಾಹಕರು ಬರುತ್ತಾರೆ. ಸಿಬ್ಬಂದಿ ಸಹ ಕುಟುಂಬ ಸದಸ್ಯರ ಜೊತೆಗೂಡಿ ಚಪ್ಪಾಳೆ ತಟ್ಟುತ್ತಾ ಶುಭಾಶಯ ಕೋರುತ್ತಾರೆ.

‘ನಮ್ಮೂರು ಚನ್ನರಾಯಪಟ್ಟಣ. ಹೋಟೆಲ್‌ ಉದ್ಯ ಮಕ್ಕೆ ಬಂದು 19 ವರ್ಷಗಳಾಗಿವೆ. ಐಟಿಸಿ, ಒಡಿಶಾ ಸಮೂಹದ ಹೋಟೆಲ್‌ನಲ್ಲಿ ಕೆಲಸ ಮಾಡಿದ್ದೇನೆ. ಮುಂಬೈನಲ್ಲಿದ್ದಾಗ ಕೋಬೆ ಹಾಗೂ ಸುಖಸಾಗರ್‌ ರೆಸ್ಟೊರೆಂಟ್‌ಗಳಲ್ಲಿ ಕೆಲಸ ಮಾಡಿದೆ. ಬಡತನವಿದ್ದುದರಿಂದ ಎಸ್ಸೆಸ್ಸೆಲ್ಸಿ ಮುಗಿದ ಮೇಲೆ ಕೆಲಸ ಹುಡುಕಿಕೊಂಡು ಮುಂಬೈಗೆ ಹೋಗಬೇಕಾಯಿತು. ಪರಿಚಯದವರ ನೆರವಿನಿಂದ ಕೋಬೆ ರೆಸ್ಟೊರೆಂಟ್‌ಗೆ ಸೇರಿಕೊಂಡೆ. ಸಿಜ್ಲರ್‌ ಖಾದ್ಯಗಳನ್ನು ಮಾಡುವುದನ್ನು ಕಲಿತೆ. ಅಲ್ಲಿಯೇ ಕಾರ್ಯನಿರ್ವಾಹಕ ಬಾಣಸಿಗನಾದೆ. ಕೋಬೆಯಲ್ಲಿ ಮುಂಬೈನಿಂದ ಬೆಂಗಳೂರಿಗೆ ವರ್ಗವಾಯಿತು. ನಂತರ ಬಾರ್ಬೆಕ್ಯು ನೇಷನ್‌ಗೆ ಕೆಲಸಕ್ಕೆ ಸೇರಿಕೊಂಡೆ’ ಎನ್ನುತ್ತಾರೆ ನಾಗರಾಜ್‌.

ಮಾಂಸಾಹಾರಿಗಳಿಗೆ ಹಲವು ಆಯ್ಕೆಗಳಿವೆ ಮುರ್ಗ್‌ ಟಿಕ್ಕ, ಪಂಜಾಬಿ ತಂಗ್ಡಿ ಮಸಾಲ, ಮಟನ್‌ ಮೇಥಿ, ಸೀಖ್‌ ಅಜ್ವಾನಿ, ಫಿಶ್‌ ಟಿಕ್ಕ, ಸಿಗಡಿ ಅವುಗಳಲ್ಲಿ ಕೆಲವು. ಪೆರಿಪೆರಿ ಸಾಸ್‌ನೊಂದಿಗೆ ತಿನ್ನಲು ಫ್ರೈಡ್‌ ಫಿಶ್‌ ಚೆನ್ನಾಗಿರುತ್ತದೆ.

ಸಸ್ಯಾಹಾರದಲ್ಲಿ ಬಾರ್ಬೆಕ್ಯು ಗ್ರಿಲ್ಡ್‌ ವೆಜ್‌, ಲೆಬನೀಸ್ ಬಾರ್ಬೆಕ್ಯು ಮಶ್ರೂಮ್‌, ಕರಾಚಿ ಪನ್ನೀರ್‌ ಟಿಕ್ಕ, ಗುಲ್ನರ್‌ ಕಬಾಬ್‌, ಸ್ಪೆಸ್‌ ಪೊಟ್ಯಾಟೊ, ಪೈನಾಪಲ್‌ ಚಟ್‌ಪಟ್‌ ಮುಖ್ಯವಾಗಿವೆ. ಐಸ್‌ಕ್ರೀಂ ಇಷ್ಟಪಡುವವರಿಗೆ ಮಾವು, ಪಾನ್‌, ಸ್ಟ್ರಾಬೆರಿ, ಕೇಸರಿ, ಪಿಸ್ತಾ ಸೇರಿದಂತೆ ಏಳು ಸ್ವಾದಗಳ ಕುಲ್ಫಿಗಳಿವೆ.

ಮುಖ್ಯ ಮೆನುವಿನಲ್ಲಿ ಮುರ್ಗ್‌ ಟಿಕ್ಕ ಮಸಾಲ, ಫಿಶ್ ಗಸ್ಸಿ, ಚಿಕನ್‌ ದಮ್‌ ಬಿರಿಯಾನಿ, ಮಟನ್‌ ಖೀಮ ಲಿವರ್‌, ಸಸ್ಯಾಹಾರಿಯಲ್ಲಿ ಲೌಕಿ ಕೋಫ್ತ ಕರ್ರಿ, ತವಾ ವೆಜ್‌, ಕೋಳಿ ಸುಕ್ಕ, ದಾಲ್‌ ಅಮೃತಸರಿ, ವೆಜ್‌ ದಮ್‌ ಬಿರಿಯಾನಿ, ಚಾಟ್‌ ಸ್ಯಾಂಡ್‌ವಿಚ್‌ಗಳಿವೆ.

ಲೈವ್‌ ಕೌಂಟರ್‌

‘ಎಂಟು ತಿಂಗಳ ಹಿಂದೆ ಆರಂಭವಾದ ಶಾಖೆಯಿದು. ವೈವಿಧ್ಯ ತಿನಿಸುಗಳನ್ನು ಪರಿಚಯಿಸಿದ್ದೇವೆ. ಲೈವ್‌ ಕೌಂಟರ್‌ನಲ್ಲಿ ಮೊಲ, ಟರ್ಕಿ ಕೋಳಿ ಮಾಂಸದ ತಿನಿಸುಗಳ ಫ್ರೈ ಮಾಡಿಕೊಡುತ್ತಾರೆ. ಇತ್ತೀಚೆಗೆ ಡ್ಯಾಡ್‌ಮೆನ್‌ ಹೆಸರಿನ ಆಹಾರೋತ್ಸವ ಆಯೋಜಿಸಿದ್ದೆವು. ಅಪ್ಪಂದಿರಿಗೆ ಅಡುಗೆ ಮಾಡುವ ಸ್ಪರ್ಧೆಯನ್ನೂ ಹಮ್ಮಿಕೊಂಡಿದ್ದೆವು. ಸ್ಪರ್ಧೆಯಲ್ಲಿ ಪಾಲ್ಗೊಂಡ ಅಪ್ಪಂದಿರು ಅಡುಗೆ ಮಾಡಿ ಖುಷಿಪಟ್ಟರು’ ಎನ್ನುತ್ತಾರೆ ಬಾರ್ಬೆಕ್ಯುನೇಷನ್‌ ರೆಸ್ಟೊರೆಂಟ್‌ನ ವ್ಯವಸ್ಥಾಪಕ ವಿವೇಕ್‌.

ಬಾರ್ಬೆಕ್ಯು ನೇಷನ್‌ನಲ್ಲಿ ಬಫೆ ವ್ಯವಸ್ಥೆಯಿದ್ದು, ಹೊಟ್ಟೆ ತುಂಬುವಷ್ಟು ಸ್ಟಾರ್ಟರ್‌ಗಳನ್ನು ತಿನ್ನಬಹುದು. ಟೇಬಲ್‌ ಮೇಲೆ ಗ್ರಿಲ್‌ಗಳಿರುವ ಒಲೆಯನ್ನು ಇಡುತ್ತಾರೆ. ಒಲೆಯೊಳಗಿನ ಕೆಂಡದ ಬಿಸಿಗೆ ಬೇಯುವ ತಿನಿಸುಗಳು ರುಚಿಯಾಗಿರುತ್ತವೆ.

ಪ್ರತಿಕ್ರಿಯಿಸಿ (+)