ಸೋಮವಾರ, ಡಿಸೆಂಬರ್ 16, 2019
26 °C

ವಾರದ ಏಳು ದಿನವೂ ಬಿಡುವಿಲ್ಲದೆ ಕೆಲಸ ಮಾಡುತ್ತಾರೆ 102ರ ಹರೆಯದ ಈ ಡಾಕ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾರದ ಏಳು ದಿನವೂ ಬಿಡುವಿಲ್ಲದೆ ಕೆಲಸ ಮಾಡುತ್ತಾರೆ 102ರ ಹರೆಯದ ಈ ಡಾಕ್ಟರ್

ಹೈದರಾಬಾದ್: ವೈದ್ಯೋ ನಾರಾಯಣೋ ಹರಿ ಎನ್ನುವ ಒಂದು ಮಾತಿದೆ. ಇದರ ಅರ್ಥವೆಂದರೆ ವೈದ್ಯನಾದವನು ಭಗವಂತನ ಸ್ವರೂಪ. ಡಾ. ಭಲ್ವಂತ್ ಘಟ್ಪಾಂಡೆ ಎಂಬ ಈ ವೈದ್ಯರಿಗೆ ವಯಸ್ಸು 102. ಮಾರ್ಚ್ 15 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಘಟ್ಪಾಂಡೆ ಈಗಲೂ ವೃತ್ತಿ ನಿರತರು.

ಸಾಂಪ್ರದಾಯಿಕ ಅಲೋಪತಿ ವೈದ್ಯರಾದ ಇವರು ಈ ವಯಸ್ಸಿನಲ್ಲಿಯೂ ಪುಣೆಯಲ್ಲಿ ವೈದ್ಯಕೀಯ ಸೇವೆ ಮುಂದುವರಿಸಿದ್ದಾರೆ.

ಈ ಬಗ್ಗೆ ಘಟ್ಪಾಂಡೆ ಅವರಲ್ಲಿ ಕೇಳಿದಾಗ, ನಾನು ನಿವೃತ್ತನಾಗುವುದೇ ಇಲ್ಲ. ನಾನು ಸಾಯುವವರೆಗೆ ವೈದ್ಯಕೀಯ ಸೇವೆ ಸಲ್ಲಿಸಲು ಇಚ್ಚಿಸುತ್ತೇನೆ. ನಾನು ಈ ರೀತಿ ಕೆಲಸ ಮಾಡುವಾಗಲೇ ನನಗೆ ಸಾವು ಬರಲಿ ಎಂದು ಆಶಿಸುತ್ತೇನೆ ಅಂತಾರೆ.

ಡಾಕ್ಟರ್ ಎಂಬುದು ಉದಾತ್ತ ವೃತ್ತಿ. ಈ ವೃತ್ತಿಯಲ್ಲಿ ನೀವು ಜನರ ಸೇವೆಯನ್ನು ಮಾಡಬಹುದು. ಇದು ಮಾನವೀಯತೆಯ ತೃಪ್ತಿಯನ್ನು ನೀಡುವುದರ ಜತೆಗೆ ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ. ಈ ವೃತ್ತಿಯಿಂದಲೇ ನಾನು ಎಲ್ಲವನ್ನೂ ಗಳಿಸಿದ್ದೇನೆ. ಗೌರವ, ಸಂಪತ್ತು ಮತ್ತು ಜನರ ಪ್ರೀತಿ ಎಲ್ಲವೂ ಸಿಕ್ಕಿದ್ದು ಇದರಿಂದಲೇ ಎನ್ನುತ್ತಾರೆ ಘಟ್ಪಾಂಡೆ .

ಘಟ್ಪಾಂಡೆ ಕುಟುಂಬದಲ್ಲಿ ಹೆಚ್ಚಿನವರು ವೈದ್ಯರೇ ಆಗಿದ್ದಾರೆ. ಅವರ ವೃತ್ತಿ ಬಿಟ್ಟರೆ ಅವರಿಗೆ ಬೇರೆ ಯಾವುದರಲ್ಲಿಯೂ ಆಸಕ್ತಿ ಇಲ್ಲ. ಅದು ಅವರ ಹವ್ಯಾಸವೂ ಹೌದು ಅಂತಾರೆ ಘಟ್ಪಾಂಡೆ ಅವರ ಪುತ್ರ ಸವಾನಂದ್ ಘಟ್ಪಾಂಡೆ.

ಘಟ್ಪಾಂಡೆ ಅವರ ಮೊಮ್ಮಗ ಡಾ.ಚೈತನ್ಯ ಘಟ್ಪಾಂಡೆ ನನ್ನಜ್ಜ ವೃತ್ತಿ ನಿಷ್ಠರು ಎಂದು ಹೇಳಿದಾಗ, ಹೌದು ನಾನು ವೃತ್ತಿ ನಿಷ್ಠ, ಆ ಬಗ್ಗೆ ಹೆಮ್ಮೆಯಿದೆ,  ನಾನು ವಾರ ಪೂರ್ತಿ ಕೆಲಸ ಮಾಡುತ್ತೇನೆ. ದಿನದ 10 ಗಂಟೆ ಕೆಲಸಕ್ಕೇ ಮೀಸಲು. ನನಗೆ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ ಎಂದು ಹೇಳುವ ಇವರು ಬಿಡುವು ಸಮಯದಲ್ಲಿ ವೃತ್ತಿ ಸಂಬಂಧಿತ ಪತ್ರಿಕೆಗಳನ್ನು ಓದುತ್ತಿರುತ್ತಾರಂತೆ.

ಮುಂಜಾನೆ ಎದ್ದು ಸ್ವಲ್ಪ ಹೊತ್ತು ವ್ಯಾಯಾಮ ಮಾಡಿದ ನಂತರ ಪತ್ರಿಕೆ ಓದುತ್ತಾರೆ. ದಿನಾ ತಣ್ಣೀರಲ್ಲೇ ಸ್ನಾನ ಮಾಡಿ ಕೆಲಸದಲ್ಲಿ ತೊಡಗುವ ಇವರು ಉತ್ತಮ ಆರೋಗ್ಯ ಹೊಂದಿದ್ದಾರೆ.

1995ರಲ್ಲಿ ಮೂಳೆ ಮುರಿದು ವೈದ್ಯರನ್ನು ಭೇಟಿ ಮಾಡಿದ್ದು  ಬಿಟ್ಟರೆ, ಬೇರೆ ಯಾವ ಕಾಯಿಲೆಯೂ ಇವರತ್ತ ಸುಳಿದಿಲ್ಲ. ಹಿತ ಮಿತವಾದ ಆಹಾರ ಸೇವನೆ ಮತ್ತು ವ್ಯಾಯಾಮವೇ ನನ್ನ ಆರೋಗ್ಯದ ಗುಟ್ಟು ಎಂದು ನಗುತ್ತಾರೆ ಡಾ. ಘಟ್ಪಾಂಡೆ.

ಪ್ರತಿಕ್ರಿಯಿಸಿ (+)