ಭಾನುವಾರ, ಡಿಸೆಂಬರ್ 8, 2019
21 °C

ಮತ್ತೆ ಒಂದಾಗಲಿದ್ದಾರೆ ಪ್ರಭಾಸ್, ಪ್ರಭುದೇವ

Published:
Updated:
ಮತ್ತೆ ಒಂದಾಗಲಿದ್ದಾರೆ ಪ್ರಭಾಸ್, ಪ್ರಭುದೇವ

ಬಾಹುಬಲಿ ಚಿತ್ರದಿಂದಾಗಿ ನಟ ಪ್ರಭಾಸ್ ಅವರ ಬೇಡಿಕೆಯ ಗ್ರಾಫ್ ದಿಢೀರ್ ಏರಿಕೆ ಕಂಡಿದ್ದು, ಪ್ರತಿನಿತ್ಯ ನಿರ್ಮಾಪಕರು ಪ್ರಭಾಸ್ ಅವರ ಮನೆಗೆ ಎಡತಾಕುತ್ತಿದ್ದಾರಂತೆ. ಆದರೆ ಸಾವಧಾನಿ ಪ್ರಭಾಸ್ ಅಳೆದು ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದು, ಪ್ರಸ್ತುತ ಅವರು ನೃತ್ಯ ನಿರ್ದೇಶಕ ಪ್ರಭುದೇವ ಅವರ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಸ್ವತಃ ಪ್ರಭುದೇವ ಅವರೇ ಇದನ್ನು ದೃಢಪಡಿಸಿದ್ದಾರೆ.

ಈ ಹಿಂದೆ ಪ್ರಭಾಸ್ ನಾಯಕರಾಗಿ ನಟಿಸಿ ಪ್ರಭುದೇವ ನಿರ್ದೇಶಿಸಿದ್ದ ‘ಪೌರ್ಣಮಿ’ ಚಿತ್ರ ಹಿಟ್ ಎನಿಸಿಕೊಂಡಿತ್ತು. ಈಗ ಮತ್ತೊಮ್ಮೆ ಈ ಜೋಡಿ ಒಂದಾಗುತ್ತಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಬಾಹುಬಲಿ ಸಿನಿಮಾದಿಂದಾಗಿ ಬಾಲಿವುಡ್‌ಗೂ ಹತ್ತಿರವಾಗಿರುವ ಪ್ರಭಾಸ್‌ ಅವರಿಗೆ ಈ ಚಿತ್ರ ಮೊದಲ ಬಾಲಿವುಡ್ ಚಿತ್ರ ಆಗಲಿದೆ ಎಂಬ ಊಹಾಪೋಹಗಳೂ ತೆಲುಗು ಸಿನಿವಲಯದಲ್ಲಿ ಕೇಳಿ ಬರುತ್ತಿವೆ.

ಬಾಲಿವುಡ್‌ನಲ್ಲಿ ಈಗಾಗಲೇ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಪ್ರಭುದೇವ ಅವರು ಈ ಚಿತ್ರವನ್ನು ಹಿಂದಿಯಲ್ಲಿ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಬಾಹುಬಲಿ ವಿತರಕ ಕರಣ್‌ಜೋಹರ್‌ ಅವರಿಂದಾಗಿ ಬಾಲಿವುಡ್‌ ಗೆಳೆತನ ಹೆಚ್ಚಿಸಿಕೊಂಡಿರುವ ಪ್ರಭಾಸ್ ಇತ್ತೀಚೆಗೆ ರಣಬೀರ್ ಕಪೂರ್, ಅರ್ಜುನ್ ಕಪೂರ್, ವರುಣ್ ಧವನ್ ಅವರೊಂದಿಗೆ ಪಾರ್ಟಿ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದ್ದವು. ಇದು ಕೂಡ ಪ್ರಭಾಸ್ ಅವರ ಬಾಲಿವುಡ್ ಪ್ರವೇಶದ ಗಾಳಿಸುದ್ದಿಗೆ ಇಂಬು ನೀಡಿದೆ.

ಆದರೆ ‘ಸಾಹೊ’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಪ್ರಭಾಸ್ ಈ ಬಗ್ಗೆ ಏನೂ ಪ್ರತಿಕ್ರಿಯೆ ನೀಡಿಲ್ಲ. ₹150 ಕೋಟಿ ಬಜೆಟ್‌ನ ‘ಸಾಹೋ’ ಚಿತ್ರ ಮುಂದಿನ ವರ್ಷ ಬಿಡುಗಡೆ ಆಗಲಿದೆ.

ಪ್ರತಿಕ್ರಿಯಿಸಿ (+)