ಸೋಮವಾರ, ಡಿಸೆಂಬರ್ 9, 2019
23 °C
ಮತ್ತೊಂದು ನಿಗೂಢ ಸಾವು

ಜಯಲಲಿತಾ ಕೊಡನಾಡ್‌ ಎಸ್ಟೇಟ್‌ನ ಅಕೌಂಟಂಟ್‌ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಜಯಲಲಿತಾ ಕೊಡನಾಡ್‌ ಎಸ್ಟೇಟ್‌ನ ಅಕೌಂಟಂಟ್‌ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಊಟಿ, ತಮಿಳುನಾಡು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಸೇರಿದ ಕೊಡನಾಡ್‌ ಎಸ್ಟೇಟ್‌ನ ಅಕೌಂಟಂಟ್‌ ದಿನೇಶ್‌ ಕುಮಾರ್‌ (28) ಎಂಬುವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ. ಕೊಡನಾಡ್‌ ಎಸ್ಟೇಟ್‌ಗೆ ಸಂಬಂಧಿಸಿದ ಮತ್ತೊಂದು ನಿಗೂಢ ಸಾವು ಇದಾಗಿದೆ.

ಕೊಡನಾಡ್‌ ಎಸ್ಟೇಟ್‌ನ ಮೂರು ಮಂದಿ ಅಕೌಂಟಂಟ್‌ಗಳ ಪೈಕಿ ದಿನೇಶ್‌ ಕೂಡಾ ಒಬ್ಬರಾಗಿದ್ದರು. ಅವರ ಶವ ಕೊಥಗಿರಿಯ ಅವರ ನಿವಾಸದಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 24ರಂದು ಜಯಲಲಿತಾ ಅವರ ಕೊಡನಾಡ್‌ ಎಸ್ಟೇಟ್‌ ಬಂಗಲೆಗೆ ನುಗ್ಗಿದ್ದ ದುಷ್ಕರ್ಮಿಗಳು ಕಾವಲುಗಾರರಾದ ಓಂ ಬಹದ್ದೂರ್‌ (51) ಮತ್ತು ಕೃಷ್ಣ ಬಹದ್ದೂರ್‌ (37) ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಓಂ ಬಹದ್ದೂರ್‌ ಮೃತಪಟ್ಟಿದ್ದರು. ಕೃಷ್ಣ ಬಹದ್ದೂರ್ ಗಂಭೀರವಾಗಿ ಗಾಯಗೊಂಡಿದ್ದರು.

ಈ ಪ್ರಕರಣದ ಶಂಕಿತ ಆರೋಪಿಗಳಾಗಿದ್ದ ಸಿ. ಕನಕರಾಜು (36) ಮತ್ತು ಕೆ.ವಿ. ಸಾಯನ್‌ (35) ಎಂಬುವರು ಎರಡು ತಿಂಗಳ ಹಿಂದೆ ರಸ್ತೆ ಅಪಘಾತಕ್ಕೀಡಾಗಿದ್ದರು.ಕನಕರಾಜು ಏಪ್ರಿಲ್‌ 28ರಂದು ಸೇಲಂ ಜಿಲ್ಲೆಯ ಅತ್ತೂರ್‌ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದ. ಸಾಯನ್‌ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಕಾರು ಏಪ್ರಿಲ್‌ 29ರ ಬೆಳಗಿನ ಜಾವ ಕನ್ನಾಡಿ ಜಂಕ್ಷನ್‌ ಸಮೀಪ ಅಪಘಾತಕ್ಕೀಡಾಗಿತ್ತು. ಸಾಯನ್‌ ಕುಟುಂಬ ಸಮೇತ ತ್ರಿಶೂರ್‌ ಕಡೆಗೆ ಹೊರಟಿದ್ದ ವೇಳೆ ಕಾರಿಗೆ ಲಾರಿ ಡಿಕ್ಕಿ ಹೊಡೆದು ಸಾಯನ್‌ ಪತ್ನಿ ಮತ್ತು ಐದು ವರ್ಷದ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದರು. ಸಾಯನ್‌ ಗಂಭೀರವಾಗಿ ಗಾಯಗೊಂಡಿದ್ದ.

ಕನಕರಾಜು 2008ರಿಂದ ಜಯಲಲಿತಾ ಅವರ ಖಾಸಗಿ ಕಾರಿನ ಚಾಲಕನಾಗಿದ್ದ. ಜಯಲಲಿತಾ ಅವರ ಹೆಸರನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಆತನನ್ನು 2013ರಲ್ಲಿ ಕೆಲಸದಿಂದ ತೆಗೆದು ಹಾಕಲಾಗಿತ್ತು.

ಪ್ರತಿಕ್ರಿಯಿಸಿ (+)