ಭಾನುವಾರ, ಡಿಸೆಂಬರ್ 15, 2019
18 °C

ತಮಿಳುನಾಡಿಗೆ ನೀರು ಕೊಡಬೇಡಿ: ಎಚ್‌ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಮಿಳುನಾಡಿಗೆ ನೀರು ಕೊಡಬೇಡಿ: ಎಚ್‌ಡಿಕೆ

ಬೆಂಗಳೂರು: ತಮಿಳುನಾಡಿಗೆ ಬಿಟ್ಟಿರುವ ಕಾವೇರಿ ನೀರನ್ನು ತಕ್ಷಣವೇ ನಿಲ್ಲಿಸದಿದ್ದರೆ ಹೋರಾಟ ನಡೆಸುವುದಾಗಿ ಜನತಾದಳದ (ಜಾತ್ಯತೀತ) ರಾಜ್ಯ  ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಜಲಾಶಯಗಳಲ್ಲಿ ಸಂಗ್ರಹವಾಗುತ್ತಿರುವ ಅಲ್ಪಸ್ವಲ್ಪ ನೀರನ್ನು ಕೆರೆಗಳನ್ನು ತುಂಬಿಸುವುದಕ್ಕೆ ಬಳಕೆ ಮಾಡಬೇಕು ಎಂದು ಒತ್ತಾಯಿಸಿದರು.

ಕೆಆರ್‍ಎಸ್, ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳಿಗೆ ಅಲ್ಪಸ್ವಲ್ಪ ನೀರು ಹರಿದು ಬರುತ್ತಿದ್ದು, ಈ ನೀರನ್ನು  ತಮಿಳುನಾಡಿಗೆ ಬಿಡಲಾಗುತ್ತಿದೆ. ಈ ಸಲವೂ ಮುಂಗಾರು ವಿಫಲ ಆಗುವ  ಸೂಚನೆಗಳಿದ್ದು ಇರುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳದೆ  ತಮಿಳುನಾಡಿಗೆ ಬಿಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

‘ನಾವು ತಮಿಳುನಾಡಿಗೆ ನೀರು ಬಿಟ್ಟರೂ ಅವರ ಧೋರಣೆ ಬದಲಾವಣೆ ಆಗುವುದಿಲ್ಲ. ಬೇಕಾದರೆ ಸುಪ್ರೀಂಕೋರ್ಟ್‌ನಿಂದ ಅವರು ಆದೇಶ ತರಲಿ. ಆಮೇಲೆ ಮಾಡಬೇಕು ಎನ್ನುವುದನ್ನು  ನೋಡೋಣ. ಅಲ್ಲಿ ತನಕ ನಮ್ಮ ಕೆರೆಗಳನ್ನು ತುಂಬಿಸಿಕೊಳ್ಳೋಣ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರಿಗೆ  ಪತ್ರ ಬರೆಯುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಕಳೆದ ವರ್ಷ ರೈತರು ಭತ್ತ ನಾಟಿ ಮಾಡಿದ್ದರು. ನೀರಿಲ್ಲದೆ ಬೆಳೆ ಒಣಗಿತು. ಆಗ ಸರ್ಕಾರ  ನಾಟಿ ಮಾಡಿ ಕೈ ಸುಟ್ಟುಕೊಂಡ ರೈತರಿಗೆ ₹ 25 ಸಾವಿರ ಪರಿಹಾರ ನೀಡುವುದಾಗಿ ಪ್ರಕಟಿಸಿತ್ತು. ಈವರೆಗೂ ಪರಿಹಾರ ನೀಡಿಲ್ಲ.

ಸರ್ಕಾರ ಈ ರೀತಿ ಹುಡುಗಾಟ ಆಡಿಕೊಂಡಿರಲು ಸಾಧ್ಯವಿಲ್ಲ’ ಎಂದು ಹೇಳಿದರು. ರಾಜ್ಯ ಸರ್ಕಾರ  ಸಾಲ ಮನ್ನಾ ಮಾಡಿದ್ದರೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಇದೇ 21 ರಂದು ಹುಬ್ಬಳ್ಳಿಯಲ್ಲಿ ಹುತಾತ್ಮ ದಿನ ಆಚರಿಸಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

***

ಶ್ರಾವಣ ಮಾಸದಲ್ಲಿ ಮೊದಲ ಪಟ್ಟಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶ್ರಾವಣ ಮಾಸದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.

150 ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಬಳಿ ಇದೆ ಎಂದೂ ಅವರು ತಿಳಿಸಿದರು.

***

ನೀವು ನೀರು ಬಿಟ್ಟಿದ್ದೀರಿ ಎಂದು  ತಮಿಳುನಾಡಿನವರು ನಿಮಗೆ  ಕಿರೀಟ ತೊಡಿಸುವುದಿಲ್ಲ

ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ  ಅಧ್ಯಕ್ಷ

ಪ್ರತಿಕ್ರಿಯಿಸಿ (+)