ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಮರಳಿಸಲು ಮುಂದಾದ ಅಲ್ಲಂ!

ನಕಲಿ ಪ್ರಯಾಣ ಬಿಲ್‌ ನೀಡಿ ಭತ್ಯೆ ಪಡೆದಿರುವ ಆರೋಪ
Last Updated 3 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಪ್ರಯಾಣ ಬಿಲ್‌ ನೀಡಿ ಭತ್ಯೆ ಪಡೆದ ಆರೋಪ ಎದುರಿಸುತ್ತಿರುವ ವಿಧಾನ ಪರಿಷತ್‌ನ ಎಂಟು ಸದಸ್ಯರಲ್ಲಿ ಒಬ್ಬರಾಗಿರುವ ಕಾಂಗ್ರೆಸ್‌ನ ಅಲ್ಲಂ ವೀರಭದ್ರಪ್ಪ ಭತ್ಯೆ ಹಿಂತಿರುಗಿಸಲು ಮುಂದಾಗಿದ್ದಾರೆ.

‘ಪ್ರಯಾಣ ಭತ್ಯೆ ಪಡೆದ ಪ್ರಕ್ರಿಯೆ ಕ್ರಮಬದ್ಧವಾಗಿಲ್ಲದೆ ಇದ್ದರೆ ಆ ಮೊತ್ತವನ್ನು ಮರು ಪಾವತಿಸಲು ಸಿದ್ಧ’ ಎಂದು ಅಲ್ಲಂ ವೀರಭದ್ರಪ್ಪ  ಇತ್ತೀಚೆಗೆ ವಿಧಾನ ಪರಿಷತ್‌ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ, ಮರು ಪಾವತಿಸಬೇಕಾದ ಒಟ್ಟು ಮೊತ್ತ ಎಷ್ಟು ಎಂದು ತಿಳಿಸುವಂತೆಯೂ ಅವರು ಕೇಳಿದ್ದಾರೆ.

ಆದರೆ, ಈ ವಿಷಯವನ್ನು ರಹಸ್ಯವಾಗಿ ಇಟ್ಟಿರುವ ವಿಧಾನ ಪರಿಷತ್‌ ಸಚಿವಾಲಯ, ಪತ್ರವನ್ನು ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅವರಿಗೆ ಕಳುಹಿಸಿದೆ.ಅಲ್ಲಂ ಸೇರಿದಂತೆ ಎಂಟು ಮಂದಿ ನಕಲಿ ಬಿಲ್‌ ಸಲ್ಲಿಸಿ ಪರಿಷತ್‌ ಸಚಿವಾಲಯದಿಂದ ಲಕ್ಷಾಂತರ ರೂಪಾಯಿ ಪ್ರಯಾಣ ಭತ್ಯೆ ಪಡೆದಿದ್ದು, ಅವರ ಸದಸ್ಯತ್ವ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯ (ಬಿಬಿಎಂಪಿ) ಬಿಜೆಪಿ ನಾಯಕ ಪದ್ಮನಾಭ ರೆಡ್ಡಿ ಅವರು ಶಂಕರಮೂರ್ತಿ ಅವರಿಗೆ ದೂರು ನೀಡಿದ್ದರು.

ರಘು ಆಚಾರ್‌, ಎನ್‌.ಎಸ್‌. ಬೋಸರಾಜು, ಎಸ್‌. ರವಿ, ಆರ್‌.ಬಿ. ತಿಮ್ಮಾಪುರ (ಕಾಂಗ್ರೆಸ್‌), ಸಿ.ಆರ್‌. ಮನೋಹರ್, ಅಪ್ಪಾಜಿ ಗೌಡ (ಜೆಡಿಎಸ್‌) ಮತ್ತು ಎಂ.ಡಿ. ಲಕ್ಷ್ಮಿನಾರಾಯಣ (ಪಕ್ಷೇತರ) ಆರೋಪ ಹೊತ್ತಿರುವ ಇತರ ಸದಸ್ಯರು.

ಬೆಂಗಳೂರು ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದ ಈ ಸದಸ್ಯರು, 2016ರಲ್ಲಿ ನಡೆದ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಮತ ಚಲಾಯಿಸಿದ್ದರು. ‌

ಆದರೆ, ಈ ಸದಸ್ಯರು ರಾಜ್ಯದ ವಿವಿಧ ನಗರ ಮತ್ತು ಪಟ್ಟಣಗಳಲ್ಲಿ ಕಳೆದ ಅಕ್ಟೋಬರ್‌ನಿಂದ ಏಪ್ರಿಲ್‌ ಮಧ್ಯೆ ನೆಲೆಸಿದ್ದ ಕುರಿತು ನಕಲಿ ಬಿಲ್‌ಗಳನ್ನು ಸಲ್ಲಿಸಿ, ಸುಮಾರು ₹ 37 ಲಕ್ಷ ಪ್ರಯಾಣ ಭತ್ಯೆ ಪಡೆದಿದ್ದಾರೆ ಎಂದು ರೆಡ್ಡಿ ದೂರಿನಲ್ಲಿ ಆರೋಪಿಸಿದ್ದರು.  ಅಲ್ಲಂ ಅವರು ಬಳ್ಳಾರಿಯಲ್ಲಿ ನೆಲೆಸಿರುವ ಬಿಲ್‌ ನೀಡಿ ₹ 3.20 ಲಕ್ಷ ಭತ್ಯೆ ಪಡೆದಿದ್ದರು ಎಂದೂ ದೂರಿನಲ್ಲಿ ವಿವರಿಸಿದ್ದರು.

ಈ ದೂರು ಆಧರಿಸಿ, ಜೂನ್‌ 3ರ ಒಳಗೆ ಸ್ಪಷ್ಟನೆ ನೀಡುವಂತೆ ಎಲ್ಲ ಎಂಟು ಸದಸ್ಯರಿಗೆ ಶಂಕರಮೂರ್ತಿ ನೋಟಿಸ್‌ ನೀಡಿದ್ದರು. ಆದರೆ, ಸದಸ್ಯರು ಮತ್ತೂ ಒಂದು ತಿಂಗಳ ಕಾಲಾವಕಾಶ ಕೇಳಿದ್ದರು. ಆದರೆ, ನೋಟಿಸ್‌ ನೀಡುವ ಮೊದಲೇ ಮೊತ್ತ ಮರುಪಾವತಿಸುವ ಕುರಿತು ಸಚಿವಾಲಯಕ್ಕೆ  ಅಲ್ಲಂ ಪತ್ರ ಬರೆದಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಅಲ್ಲಂ, ‘ಎಲ್ಲ ಬಿಲ್‌ಗಳನ್ನು ಸಚಿವಾಲಯದ ಲೆಕ್ಕಪರಿಶೋಧನಾ ವಿಭಾಗ ತಯಾರಿಸಿದೆ. ಈ ವಿಷಯದಲ್ಲಿ ನನ್ನ ಪಾತ್ರವೇನೂ ಇಲ್ಲ. ಹೀಗಾಗಿ, ಏನಾದರೂ ಲೋಪಗಳಾಗಿದೆಯೇ ಎಂದು ತಿಳಿಸುವಂತೆ ಸಚಿವಾಲಯಕ್ಕೆ ಮನವಿ ಮಾಡಿದ್ದೇನೆ.

ಅಗತ್ಯಬಿದ್ದರೆ, ಹಣ ಮರು ಪಾವತಿಸಲು ಸಿದ್ಧ ಎಂದೂ ತಿಳಿಸಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ನಿಯಮ ಮೀರಿ ನಾನು ಯಾವುದನ್ನೂ ಮಾಡಿಲ್ಲ. ಬಿಲ್‌ ಮೊತ್ತ ಕ್ಲೈಮ್‌ ಮಾಡುವ ಸಂದರ್ಭದಲ್ಲಿ  ನಿಯಮಗಳನ್ನು ಪಾಲಿಸಲಾಗಿದೆಯೇ ಎಂದು ಗಮನಿಸಬೇಕಾದುದು ಪರಿಷತ್‌ ಸಚಿವಾಲಯದ ಕೆಲಸ’ ಎಂದರು.

ಎರಡೂ ಕಡೆ ಮತದಾನ:‘ಬಿಬಿಎಂಪಿ ಮತ್ತು ಬಳ್ಳಾರಿ ಮೇಯರ್‌ ಚುನಾವಣೆಯಲ್ಲಿ ಅಲ್ಲಂ ಮತ ಚಲಾಯಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ   ಮೇಯರ್‌  ಚುನಾವಣೆಯ ಬಳಿಕ ಬೆಂಗಳೂರು ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ಅವರು ತೆಗೆದು ಹಾಕಿದ್ದಾರೆ. ಬಳಿಕ ಬಳ್ಳಾರಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ, ಇದೇ ಏಪ್ರಿಲ್‌ನಲ್ಲಿ ಅಲ್ಲಿನ ಮೇಯರ್‌ ಚುನಾವಣೆಯಲ್ಲೂ ಮತ ಚಲಾಯಿಸಿದ್ದಾರೆ’ ಎಂದು ಪದ್ಮನಾಭ ರೆಡ್ಡಿ  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT