ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನತೆಗಾಗಿ ಪುಸ್ತಕ ಬರೆಯಲಿದ್ದಾರೆ ಪ್ರಧಾನಿ

ಒತ್ತಡ ನಿವಾರಣೆ ಮತ್ತು ಪರೀಕ್ಷೆ ಬರೆದ ನಂತರ ಮುಂದೇನು ಎಂಬುದಕ್ಕೆ ಸಲಹೆ
Last Updated 3 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ವಿದ್ಯಾರ್ಥಿಗಳು ಎದುರಿಸುತ್ತಿರುವ ಪರೀಕ್ಷಾಪೂರ್ವ ಒತ್ತಡ ನಿವಾರಣೆ ಮತ್ತು ಪರೀಕ್ಷೆ ಬರೆದ ನಂತರ ಮುಂದೇನು ಎಂಬ  ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪುಸ್ತಕ ಬರೆಯಲಿದ್ದಾರೆ.

ಈ ಪುಸ್ತಕ ಬಹುಭಾಷೆಗಳಲ್ಲಿ  ವರ್ಷಾಂತ್ಯದ  ವೇಳೆಗೆ  ಪ್ರಕಟಗೊಳ್ಳಲಿದೆ ಎಂದು ಪೆಂಗ್ವಿನ್‌ ರಾಂಡಮ್‌ ಹೌಸ್‌ ಪ್ರಕಾಶನ ಸಂಸ್ಥೆ ತಿಳಿಸಿವೆ. ಪ್ರಮುಖವಾಗಿ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳು ಪರೀಕ್ಷಾ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಸೇರಿದಂತೆ ಅನೇಕ ವಿಷಯಗಳನ್ನು ಪುಸ್ತಕ ಒಳಗೊಳ್ಳಲಿದೆ.

ವಿದ್ಯಾರ್ಥಿಗಳ ಪಾಲಿಗೆ ಈ ಪುಸ್ತಕ ಗೆಳೆಯನಂತಿರುತ್ತದೆ ಮತ್ತು ಪರೀಕ್ಷಾ ತಯಾರಿಗೆ ನೆರವಾಗುತ್ತದೆ ಎಂದು ಪ್ರಧಾನಿಯವರು ನಂಬಿದ್ದಾರೆ ಎಂದು ಪ್ರಕಾಶಕರು ಹೇಳಿದ್ದಾರೆ.
ಪುಸ್ತಕವು ಅನೌಪಚಾರಿಕ ಸ್ವರೂಪದಲ್ಲಿರುತ್ತದೆ ಮತ್ತು ಸಂವಾದಾತ್ಮಕ ವಾಗಿರುತ್ತದೆ. ಅಂಕಗಳಿಗಿಂತ ಜ್ಞಾನ ಮೇಲು ಎಂಬ ದಾಟಿಯಲ್ಲಿ ಇರುತ್ತದೆ. ಭವಿಷ್ಯದಲ್ಲಿ ಹೇಗೆ ಜವಾಬ್ದಾರಿಯಿಂದ ಇರಬೇಕು ಎಂಬುದನ್ನು ತಿಳಿಸಲಿದೆ.

ಪುಸ್ತಕ ಬರೆಯುವ ಯೋಚನೆ ಸ್ವತಃ ಮೋದಿಯವರದು. ‘ಮನ್‌ ಕಿ ಬಾತ್‌’ ಬಾನುಲಿ ಭಾಷಣಕ್ಕೆ ಬಂದ ಅತ್ಯುತ್ತಮ ಪ್ರತಿಕ್ರಿಯೆಯಿಂದಾಗಿ  ತಮ್ಮ ಯೋಚನೆಗಳನ್ನು  ಪುಸ್ತಕದಲ್ಲಿ ದಾಖಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಹೊಸ ಒಳನೋಟಗಳು ಮತ್ತು ಉಪ ವ್ಯಾಖ್ಯಾನಗಳೊಂದಿಗೆ ಪುಸ್ತಕ ಬರೆಯಲಿದ್ದಾರೆ ಎಂದು ಪ್ರಕಾಶಕರು ತಿಳಿಸಿದ್ದಾರೆ.

‘ಯುವ ನಾಯಕತ್ವದ ನಾಳೆಗಳ ಬಗ್ಗೆ  ನನ್ನ ಪರಿಕಲ್ಪನೆ ಮತ್ತು ನನ್ನ ಹೃದಯಕ್ಕೆ ಹತ್ತಿರವಿರುವ ವಿಷಯದ ಬಗ್ಗೆ ಬರೆಯಲಿದ್ದೇನೆ’ ಎಂದು ಮೋದಿ ತಿಳಿಸಿದ್ದಾರೆ.

ಬ್ಲೂಕ್ರಾಫ್ಟ್‌ ಡಿಜಿಟಲ್‌ ಫೌಂಡೇಷನ್‌ ಸ್ವಯಂಸೇವಾ ಸಂಸ್ಥೆ ಈ ಪುಸ್ತಕದ ತಾಂತ್ರಿಕ ಪಾಲುದಾರಿಕೆ ಹೊಂದಿರಲಿದೆ.

ಮೋದಿ ಟೀ ಮಾರುತ್ತಿದ್ದ ಅಂಗಡಿ ಪ್ರವಾಸಿತಾಣವಾಗಿ ಅಭಿವೃದ್ಧಿ
ಅಹಮದಾಬಾದ್‌:
ಪ್ರಧಾನಿ ನರೇಂದ್ರ ಮೋದಿ ಅವರು  ಬಾಲ್ಯದಲ್ಲಿ  ಟೀ ಮಾರುತ್ತಿದ್ದ ಗುಜರಾತಿನ ವದನಗರ್‌ನ ಟೀ ಅಂಗಡಿಯನ್ನು  ಪ್ರವಾಸಿ ಸ್ಥಳವನ್ನಾಗಿ ಮಾರ್ಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಅಂಗಡಿ ವದನಗರ್‌ನ ರೈಲ್ವೆ ನಿಲ್ದಾಣದಲ್ಲಿದೆ. ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ಪ್ರಧಾನಿಯವರ ಜನ್ಮಸ್ಥಳವಾದ ಗುಜರಾತಿನ ವದ್ನಗರ್‌ ಗ್ರಾಮವನ್ನು ತೋರಿಸುವ   ಯೋಜನೆಯ ಭಾಗವಾಗಿ ಟೀ ಅಂಗಡಿಯನ್ನು  ಪ್ರವಾಸಿತಾಣ ಮಾಡಲಾಗುತ್ತಿದೆ.

ಭಾರತದ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಪುರಾತತ್ವ ಇಲಾಖೆಯ ಅಧಿಕಾರಿಗಳು  ಭಾನುವಾರ ಈ ಸ್ಥಳದ ಪರಿಶೀಲನೆ ನಡೆಸಿದ್ದಾರೆ.

‘ಟೀ ಅಂಗಡಿಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ನೂತನ ಸ್ಪರ್ಶ ನೀಡಲಾಗುವುದು’ ಎಂದು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್‌ ಶರ್ಮ ಹೇಳಿದ್ದಾರೆ

ಮೋದಿ ಜನ್ಮಸ್ಥಳವಲ್ಲದೇ ವದನಗರ್‌ನ ಪ್ರಸಿದ್ಧ ಶರ್ಮಿಷ್ಠ ಲೇಕ್‌ ಕೂಡಾ ಇತಿಹಾಸ ಪ್ರಸಿದ್ಧಿ ಹೊಂದಿದೆ. ಪುರಾತತ್ವ ಇಲಾಖೆ ಇತ್ತೀಚೆಗೆ ನಡೆಸಿದ ಉತ್ಖನನದ ಸಂದರ್ಭದಲ್ಲಿ ಬೌದ್ಧ ದೇವಾಲಯದ ಅವಶೇಷಗಳನ್ನು ಪತ್ತೆ ಹಚ್ಚಿದೆ. ಉತ್ಖನನ ಇನ್ನೂ ನಡೆಯುತ್ತಿದೆ ಎಂದು ಶರ್ಮ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT