ಬುಧವಾರ, ಡಿಸೆಂಬರ್ 11, 2019
25 °C
ವೆಸ್ಟ್‌ ಇಂಡೀಸ್‌ ವಿರುದ್ಧದ ನಾಲ್ಕನೇ ಏಕದಿನ ಪಂದ್ಯ

ಜೇಸನ್ ಹೋಲ್ಡರ್‌ ದಾಳಿಗೆ ಕಂಗೆಟ್ಟ ಭಾರತ

Published:
Updated:
ಜೇಸನ್ ಹೋಲ್ಡರ್‌ ದಾಳಿಗೆ ಕಂಗೆಟ್ಟ ಭಾರತ

ನಾರ್ತ್‌ ಸೌಂಡ್‌, ಆ್ಯಂಟಿಗ (ಪಿಟಿಐ): ವೇಗಿ ಜೇಸನ್‌ ಹೋಲ್ಡರ್‌ ಅವರ ವೇಗದ ದಾಳಿಗೆ ಭಾನುವಾರ ಸರ್‌ ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ತರಗೆಲೆಗಳ ಹಾಗೆ ಉದುರಿದರು.

ಹೋಲ್ಡರ್‌ (27ಕ್ಕೆ5) ಅವರ ವೃತ್ತಿ ಬದುಕಿನ ಶ್ರೇಷ್ಠ ಬೌಲಿಂಗ್‌ ಬಲದಿಂದ ವೆಸ್ಟ್‌ ಇಂಡೀಸ್‌ ತಂಡ ಭಾರತದ ವಿರು ದ್ಧದ ಏಕದಿನ ಸರಣಿಯಲ್ಲಿ ಜಯದ ಖಾತೆ ತೆರೆಯಿತು. ನಾಲ್ಕನೇ ಪಂದ್ಯದಲ್ಲಿ ಕೆರಿಬಿ ಯನ್‌ ನಾಡಿನ ಪಡೆ  11ರನ್‌ಗಳಿಂದ ವಿರಾಟ್‌ ಕೊಹ್ಲಿ ಬಳಗವನ್ನು ಸೋಲಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಹಿನ್ನಡೆಯನ್ನು  1–2ಕ್ಕೆ ತಗ್ಗಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 189ರನ್‌ ಪೇರಿಸಿತು. ಈ ಗುರಿ ವಿರಾಟ್‌ ಬಳಗಕ್ಕೆ ಬೆಟ್ಟದ ಹಾಗೆ ಕಂಡಿತು.  ಪ್ರವಾಸಿ ತಂಡ 49.4 ಓವರ್‌ಗಳಲ್ಲಿ 178ರನ್‌ಗಳಿಗೆ ಹೋರಾಟ ಮುಗಿಸಿತು.

ಬೌಲಿಂಗ್‌ನಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದ ಉಮೇಶ್‌ ಯಾದವ್‌ (36ಕ್ಕೆ3) ಮತ್ತು ಹಾರ್ದಿಕ್‌ ಪಾಂಡ್ಯ (40ಕ್ಕೆ3) ಎದುರಾಳಿಗಳನ್ನು ಅಲ್ಪ ಮೊತ್ತಕ್ಕೆ ನಿಯಂ ತ್ರಿಸಿ ಭಾರತದ ಸರಣಿ ಗೆಲುವಿಗೆ ವೇದಿಕೆ ಸಿದ್ಧಗೊಳಿಸಿದ್ದರು. ಆದರೆ ಬ್ಯಾಟ್ಸ್‌ ಮನ್‌ಗಳ ವೈಫಲ್ಯದಿಂದಾಗಿ ತಂಡ ಸೋಲಿನ ಆಳಕ್ಕೆ ಕುಸಿಯಿತು.

ಆರಂಭಿಕ ಸಂಕಷ್ಟ:  ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕ ಸಂಕಷ್ಟ ಎದುರಾಯಿತು. ಶಿಖರ್‌ ಧವನ್‌ (5), ನಾಯಕ ಕೊಹ್ಲಿ   (3) ಮತ್ತು  ದಿನೇಶ್‌ ಕಾರ್ತಿಕ್‌ (2)  ಔಟಾಗಲು ಅವಸರ ಮಾಡಿದರು !

ರಹಾನೆ–ದೋನಿ ಮೋಡಿ: 12.4 ಓವರ್‌ಗಳಲ್ಲಿ 47ರನ್‌ ಗಳಿಗೆ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದು ಕೊಂಡು ಸಂಕಷ್ಟಕ್ಕೆ ಒಳಗಾಗಿದ್ದ ಭಾರತಕ್ಕೆ ಆರಂಭಿಕ ಆಟಗಾರ ಅಜಿಂಕ್ಯ ರಹಾನೆ (60; 91ಎ, 7ಬೌಂ) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಮಹೇಂದ್ರ ಸಿಂಗ್‌ ದೋನಿ (54; 114ಎ, 1ಬೌಂ)  ಆಸರೆಯಾದರು.  ಈ ಜೋಡಿ ನಾಲ್ಕನೇ ವಿಕೆಟ್‌ ಪಾಲುದಾರಿಕೆಯಲ್ಲಿ 54 ರನ್‌ ಗಳನ್ನು ಹೆಕ್ಕಿ, ತಂಡದ ಮೊತ್ತ 100ರ ಗಡಿ ದಾಟುವಂತೆ ನೋಡಿಕೊಂಡಿತು.

ಸರಣಿಯಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕ ಸೇರಿದಂತೆ 237ರನ್‌ ಗಳಿಸಿದ್ದ ರಹಾನೆ ನಾಲ್ಕನೇ ಪಂದ್ಯದಲ್ಲೂ ಮೋಡಿ ಮಾಡಿದರು.

ತಾವು ಎದುರಿಸಿದ ಮೂರನೇ ಎಸೆತದಲ್ಲಿ ಎರಡು ರನ್‌ ಗಳಿಸಿ ಖಾತೆ ತೆರೆದ ಮುಂಬೈನ ಅಜಿಂಕ್ಯ, ಜೇಸನ್‌ ಹೋಲ್ಡರ್‌ ಹಾಕಿದ ನಾಲ್ಕನೇ ಓವರ್‌ನ ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿ ಭರವಸೆ ಮೂಡಿಸಿದರು.

ಅಲಜಾರಿ ಜೋಸೆಫ್‌ ಬೌಲ್‌ ಮಾಡಿದ ಐದನೇ ಓವರ್‌ನಲ್ಲಿ ರಹಾನೆ, ಸತತ ಎರಡು ಬೌಂಡರಿ ಸಿಡಿಸಿದಾಗ ಅಂಗಳದಲ್ಲಿ ಮೆಕ್ಸಿಕನ್‌ ಅಲೆ ಎದ್ದಿತು. ಜೋಸೆಫ್‌ ಹಾಕಿದ ಏಳನೇ ಓವರ್‌ನಲ್ಲಿ ರಹಾನೆಗೆ ಜೀವದಾನ ಲಭಿಸಿತು. ನಾಲ್ಕನೇ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ಅಜಿಂಕ್ಯ ಮರು ಎಸೆತ ವನ್ನು ಸ್ಕ್ವೇರ್‌ ಲೆಗ್‌ನತ್ತ ಬಾರಿಸಿದರು. ಅಲ್ಲಿದ್ದ ಜೇಸನ್‌ ಮಹಮ್ಮದ್‌, ಕ್ಯಾಚ್‌ ಕೈಚೆಲ್ಲಿದರು.

ಇಷ್ಟಾದರೂ ರಹಾನೆ ಅಬ್ಬರ ತಗ್ಗಲಿಲ್ಲ. ಜೋಸೆಫ್‌ ಬೌಲ್‌ ಮಾಡಿದ 11 ಮತ್ತು 13ನೇ ಓವರ್‌ಗಳಲ್ಲಿ ತಲಾ ಒಂದು ಬೌಂಡರಿ ಗಳಿಸಿದ ಅವರು  ಆ್ಯಷ್ಲೆ ನರ್ಸ್‌ ಹಾಕಿದ 26ನೇ ಓವರ್‌ನ ಮೂರನೇ ಎಸೆತದಲ್ಲಿ ಒಂದು ರನ್‌ ಗಳಿಸಿ ಅರ್ಧಶತಕದ ಸಂಭ್ರಮ ಆಚರಿಸಿದರು. ರಹಾನೆ ಈ ಸರಣಿಯಲ್ಲಿ ದಾಖಲಿಸಿದ ಮೂರನೇ ಅರ್ಧಶತಕ ಇದಾಗಿದೆ.ಅರ್ಧಶತಕದ ನಂತರ ಬಿರುಸಿನ ಆಟಕ್ಕೆ ಅಣಿಯಾದ  ಅಜಿಂಕ್ಯ 60ರನ್‌ ಗಳಿಸಿದ್ದ ವೇಳೆ ದೇವೇಂದ್ರ ಬಿಷೂಗೆ ವಿಕೆಟ್‌ ಒಪ್ಪಿಸಿದರು.

ದೋನಿ ಜವಾಬ್ದಾರಿಯುತ ಆಟ: ರಹಾನೆ ಔಟಾದ ನಂತರ ಅನುಭವಿ ಆಟಗಾರ ದೋನಿ ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು. ಹಿಂದಿನ ಪಂದ್ಯದಲ್ಲಿ ಮಿಂಚಿದ್ದ ಬಲಗೈ ಬ್ಯಾಟ್ಸ್‌ಮನ್‌ ಕೇದಾರ್‌ ಜಾಧವ್‌ (10; 14ಎ) ತೋಳರಳಿಸಿ ಆಡಲು ವಿಫಲರಾದರು. ಆ್ಯಷ್ಲೆ ನರ್ಸ್‌ ಬೌಲ್‌ ಮಾಡಿದ 36ನೇ ಓವರ್‌ನಲ್ಲಿ ಜಾಧವ್‌ ಔಟಾದಾಗ ಭಾರತದ ಜಯಕ್ಕೆ 86 ಎಸೆತಗಳಲ್ಲಿ 74 ರನ್‌ಗಳ ಅಗತ್ಯವಿತ್ತು. ದೋನಿ ಮತ್ತು ಹಾರ್ದಿಕ್‌ ಪಾಂಡ್ಯ (20; 21ಎ, 1ಬೌಂ, 1ಸಿ) ಕ್ರೀಸ್‌ನಲ್ಲಿ ಇದ್ದುದರಿಂದ ಗೆಲುವು ಸುಲಭ ಎಂದೇ ಭಾವಿಸಲಾಗಿತ್ತು. 46ನೇ ಓವರ್‌ನಲ್ಲಿ ದಾಳಿಗಿಳಿದ ವಿಂಡೀಸ್‌ ನಾಯಕ ಹೋಲ್ಡರ್‌, ವಿರಾಟ್‌ ಪಡೆಗೆ ಬಲವಾದ ಪೆಟ್ಟು ನೀಡಿದರು.

ಮೊದಲ ಎಸೆತದಲ್ಲಿ ಹಾರ್ದಿಕ್‌ ವಿಕೆಟ್‌ ಉರುಳಿಸಿ 43ರನ್‌ಗಳ ಆರನೇ ವಿಕೆಟ್‌ ಜೊತೆಯಾಟ ಮುರಿದ ಅವರು, ಇದರ ಬೆನ್ನಲ್ಲೇ ರವೀಂದ್ರ ಜಡೇಜ (11; 11ಎ, 1ಬೌಂ) ವಿಕೆಟ್‌ ಕೆಡವಿ ಆತಿಥೇಯರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದರು. ಪಾಂಡ್ಯ ಮತ್ತು ಜಡೇಜ ಔಟಾಗಿದ್ದರಿಂದ ದೋನಿ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಹೀಗಾಗಿ ಸಾಕಷ್ಟು ಕುತೂಹಲ ಗರಿಗೆದರಿತ್ತು. 49ನೇ ಓವರ್‌ ನಲ್ಲಿ  ದಾಳಿಗಿಳಿದ ಕೇಸ್ರಿಕ್‌ ವಿಲಿಯಮ್ಸ್‌  , ಕೊನೆಯ ಎಸೆತದಲ್ಲಿ ಮಹಿ ವಿಕೆಟ್‌ ಉರುಳಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು.

108 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ದೋನಿ, ದೊಡ್ಡ ಹೊಡೆತಕ್ಕೆ ಮುಂದಾಗಿ ಕೈ ಸುಟ್ಟುಕೊಂಡರು. ಅವರು ಲಾಂಗ್‌ ಆನ್‌ನತ್ತ ಬಾರಿಸಿದ ಚೆಂಡನ್ನು ಅಲಜಾರಿ ಜೋಸೆಫ್‌ ಹಿಡಿತಕ್ಕೆ ಪಡೆಯುತ್ತಿದ್ದಂತೆ ಭಾರತದ ಜಯದ ಆಸೆ ಕಮರಿತು.  ಅಂತಿಮ ಓವರ್‌ನಲ್ಲಿ ವಿರಾಟ್‌ ಪಡೆಯ ಜಯಕ್ಕೆ 14ರನ್‌ಗಳು ಬೇಕಿ ದ್ದವು. ಉಮೇಶ್‌ ಯಾದವ್‌ (0) ಮತ್ತು ಮೊಹಮ್ಮದ್‌ ಶಮಿ (1) ಅವರ ವಿಕೆಟ್‌ ಉರುಳಿಸಿದ ಹೋಲ್ಡರ್‌ ಕೆರಿಬಿಯನ್‌ ನಾಡಿನ ಕ್ರಿಕೆಟ್್ ಪ್ರೇಮಿಗಳ ಖುಷಿಗೆ ಕಾರಣರಾದರು.

ವೆಸ್ಟ್  ಇಂಡೀಸ್   9ಕ್ಕೆ 189  (50  ಓವರ್‌ಗಳಲ್ಲಿ)

ಭಾರತ   178  (49.4  ಓವರ್‌ಗಳಲ್ಲಿ)

ಅಜಿಂಕ್ಯ ರಹಾನೆ ಸಿ ಶಾಯ್‌ ಹೋಪ್‌ ಬಿ ದೇವೇಂದ್ರ ಬಿಷೂ  60

ಶಿಖರ್‌ ಧವನ್‌ ಸಿ ಜೇಸನ್‌ ಹೋಲ್ಡರ್‌ ಬಿ ಅಲಜಾರಿ ಜೋಸೆಫ್‌  05

ವಿರಾಟ್‌ ಕೊಹ್ಲಿ ಸಿ ಶಾಯ್‌ ಹೋಪ್‌ ಬಿ ಜೇಸನ್‌ ಹೋಲ್ಡರ್‌  03

ದಿನೇಶ್‌ ಕಾರ್ತಿಕ್‌ ಸಿ ಶಾಯ್‌ ಹೋಪ್‌ ಬಿ ಅಲಜಾರಿ ಜೋಸೆನ್‌  02

ಮಹೇಂದ್ರ ಸಿಂಗ್‌ ದೋನಿ ಸಿ ಅಲಜಾರಿ ಜೋಸೆಫ್‌ ಬಿ ಕೇಸ್ರಿಕ್‌ ವಿಲಿಯಮ್ಸ್‌ 54

ಕೇದಾರ್‌ ಜಾಧವ್‌ ಸಿ ಶಾಯ್‌ ಹೋಪ್‌ ಬಿ ಆ್ಯಷ್ಲೆ ನರ್ಸ್‌  10

ಹಾರ್ದಿಕ್‌ ಪಾಂಡ್ಯ ಬಿ ಜೇಸನ್‌ ಹೋಲ್ಡರ್‌  20

ರವೀಂದ್ರ ಜಡೇಜ ಸಿ ಕೀರನ್‌ ಪೊವೆಲ್‌ ಬಿ ಜೇಸನ್‌ ಹೋಲ್ಡರ್‌  11

ಕುಲದೀಪ್‌ ಯಾದವ್‌ ಔಟಾಗದೆ  02

ಉಮೇಶ್‌ ಯಾದವ್‌ ಬಿ ಜೇಸನ್‌ ಹೋಲ್ಡರ್‌  00

ಮೊಹಮ್ಮದ್ ಶಮಿ ಸಿ ರಾಸ್ಟನ್‌ ಚೇಸ್‌ ಬಿ ಜೇಸನ್‌ ಹೋಲ್ಡರ್‌  01

ಇತರೆ: (ವೈಡ್‌ 10)  10

ವಿಕೆಟ್‌ ಪತನ:  1–10 (ಧವನ್‌; 2.1), 2–25 (ಕೊಹ್ಲಿ; 5.6), 3–47 (ಕಾರ್ತಿಕ್‌; 12.4), 4–101 (ರಹಾನೆ; 30.5), 5–116 (ಜಾಧವ್‌; 35.4), 6–159 (ಪಾಂಡ್ಯ; 45.1), 7–173 (ಜಡೇಜ; 47.3), 8–176 (ದೋನಿ; 48.6), 9–176 (ಉಮೇಶ್‌; 49.1), 10–178 (ಶಮಿ; 49.4).

ಬೌಲಿಂಗ್‌:  ಅಲಜಾರಿ ಜೋಸೆಫ್‌ 9–2–46–2, ಜೇಸನ್‌ ಹೋಲ್ಡರ್‌ 9.4–2–27–5,ಕೇಸ್ರಿಕ್ ವಿಲಿಯಮ್ಸ್‌ 10–0–29–1, ದೇವೇಂದ್ರ ಬಿಷೂ10–1–31–1, ಆ್ಯಷ್ಲೆ ನರ್ಸ್‌ 10–0–29–1, ರಾಸ್ಟನ್‌ ಚೇಸ್‌ 1–0–16–0.

 ಫಲಿತಾಂಶ: ವೆಸ್ಟ್‌ ಇಂಡೀಸ್‌ಗೆ 11ರನ್‌ಗಳ ಗೆಲುವು.

5 ಪಂದ್ಯಗಳ ಸರಣಿಯಲ್ಲಿ 1–2ರಲ್ಲಿ ಹಿನ್ನಡೆ.

ಪಂದ್ಯ ಶ್ರೇಷ್ಠ: ಜೇಸನ್‌ ಹೋಲ್ಡರ್‌.

ಪ್ರತಿಕ್ರಿಯಿಸಿ (+)