ಶುಕ್ರವಾರ, ಡಿಸೆಂಬರ್ 6, 2019
17 °C

ಚರಂಡಿ ಪಾಲಾಗಲಿದೆ ಲಕ್ಷಕ್ಕೂ ಹೆಚ್ಚು ಲೀಟರ್‌ ಡ್ರಾಟ್‌ ಬಿಯರ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚರಂಡಿ ಪಾಲಾಗಲಿದೆ ಲಕ್ಷಕ್ಕೂ ಹೆಚ್ಚು ಲೀಟರ್‌ ಡ್ರಾಟ್‌ ಬಿಯರ್‌!

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳ 500 ಮೀಟರ್‌ ವ್ಯಾಪ್ತಿಯಲ್ಲಿರುವ  ನಗರದ ಮದ್ಯದಂಗಡಿಗಳಿಗೆ ಬೀಗ ಬಿದ್ದ ಪರಿಣಾಮ, ದಾಸ್ತಾನು ಇಟ್ಟುಕೊಂಡಿದ್ದ ಸುಮಾರು 1,40,000ಕ್ಕೂ ಹೆಚ್ಚು ಲೀಟರ್‌ ‘ಡ್ರಾಟ್‌ ಬಿಯರ್‌’ ಈಗ ಚರಂಡಿ ಪಾಲಾಗಬೇಕಿದೆ.

ಜೂನ್‌ 30ರ ಮಧ್ಯ ರಾತ್ರಿಯೇ ಅಬಕಾರಿ ಇಲಾಖೆ ಸುಪ್ರೀಂಕೋರ್ಟ್‌ ಆದೇಶದಂತೆ 736 ಮದ್ಯದಂಗಡಿಗಳಿಗೆ ಬೀಗಮುದ್ರೆ ಹಾಕಿತ್ತು. ಮದ್ಯದಂಗಡಿ, ಬಾರ್‌, ಪಬ್‌, ಕ್ಲಬ್‌ಗಳಲ್ಲಿ ದಾಸ್ತಾನಿದ್ದ ಎಲ್ಲ ಬಗೆಯ ಮದ್ಯವನ್ನು ಸೀಜ್‌ ಮಾಡಿಡಲಾಗಿದೆ.

ಪಬ್‌, ಕ್ಲಬ್‌ಗಳಲ್ಲಿ ವಾರದ ಅಂತ್ಯದ ದಿನಗಳಲ್ಲಿ ಹೆಚ್ಚು ವಹಿವಾಟು ನಡೆಗ್ರಾಹಕರನ್ನು ತಣಿಸಲು ದಾಸ್ತಾನು ಇಟ್ಟುಕೊಂಡಿದ್ದ ಡ್ರಾಟ್‌ ಬಿಯರ್‌ ಕೆಗ್‌ (50 ಲೀಟರ್‌ ಬ್ಯಾರೆಲ್‌) ಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸೀಜ್‌ ಮಾಡಿಟ್ಟಿದ್ದಾರೆ. ಮೂರು ದಿನಗಳೊಳಗೆ ಬಳಸಬೇಕಾದ ಡ್ರಾಟ್‌ ಬಿಯರ್‌ ಈಗ ಅನಿವಾರ್ಯವಾಗಿ ಚರಂಡಿ ಪಾಲಾಗಬೇಕಾಗಿದೆ.

ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್‌ ಸ್ಟ್ರೀಟ್‌, ರೆಸ್ಟ್‌ ಹೌಸ್‌ ರಸ್ತೆ , ಇಂದಿರಾನಗರ, ಕೋರಮಂಗಲ ವ್ಯಾಪ್ತಿಯಲ್ಲಿರುವ ಒಂದೊಂದು ಪಬ್‌ಗಳು ಕನಿಷ್ಠ 8ರಿಂದ 10 ಕೆಗ್‌ ಡ್ರಾಟ್‌ ಬಿಯರ್‌ ದಾಸ್ತಾನು ಇಟ್ಟುಕೊಂಡಿದ್ದವು.

ಸುಪ್ರೀಂಕೋರ್ಟ್‌ ಆದೇಶ ಗಂಭೀರವಾಗಿ ತೆಗೆದುಕೊಳ್ಳದೆ, ರಾಜ್ಯ ಸರ್ಕಾರ  ಪರ್ಯಾಯ ದಾರಿ ತೋರಬಹುದೆಂಬ ನಿರೀಕ್ಷೆಯಲ್ಲಿ ಕೆಲ ಪಬ್‌, ಕ್ಲಬ್‌ಗಳು ವಾರದ ಅಂತ್ಯದ ದಿನಗಳಲ್ಲಿ ಭರ್ಜರಿ ವಹಿವಾಟು ನಡೆಸಲು ತುಸು ಹೆಚ್ಚಿನ ಪ್ರಮಾಣದಲ್ಲೆ ಡ್ರಾಟ್‌ ಬಿಯರ್‌  ಖರೀದಿಸಿದ್ದವು.  ಮೂರು ದಿನಗಳಿಂದ ಮದ್ಯದಂಗಡಿಗಳಿಗೆ ಬೀಗಮುದ್ರೆ ಬಿದ್ದಿರುವುದರಿಂದ ಡ್ರಾಟ್‌ ಬಿಯರ್‌ ಮತ್ತು ಬಾಟಲ್‌ ಬಿಯರ್‌ನಿಂದ ಉಂಟಾಗುವ ನಷ್ಟಕ್ಕೂ ತಲೆ ಕೊಡಬೇಕಾಗಿದೆ ಎಂದು ಚರ್ಚ್‌ ಸ್ಟ್ರೀಟ್‌ನಲ್ಲಿರುವ ಪಬ್‌ವೊಂದರ ಮಾಲೀಕರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದ ಹೃದಯ ಭಾಗದಲ್ಲಿರುವ ಸುಮಾರು 48 ಪಬ್‌ಗಳು ಪ್ರತಿ ದಿನ ಸರಾಸರಿ ಡ್ರಾಟ್‌ ಬಿಯರ್‌ನ 12 ಕೆಗ್‌ಗಳನ್ನು ಖರೀದಿಸುತ್ತಿದ್ದವು. ವಾರದ ಅಂತ್ಯದ ದಿನಗಳಲ್ಲಿ ಕೆಲವು ಪಬ್‌, ಕ್ಲಬ್‌ಗಳು 20 ಕೆಗ್‌ವರೆಗೂ ಡ್ರಾಟ್‌ ಬಿಯರ್‌ ಖರೀದಿಸುತ್ತಿದ್ದವು. ಪಬ್‌, ಕ್ಲಬ್‌ಗಳಿಗೆ ಬೀಗ ಬಿದ್ದಿರುವುದರಿಂದ ಡ್ರಾಟ್‌ ಬಿಯರ್‌ ಉತ್ಪಾದನೆ ಶೇ 50ರಷ್ಟು ಕುಸಿದಿದೆ’ ಎಂದು ನೆಲಮಂಗಲದಲ್ಲಿರುವ ಕಿಂಗ್‌ಫಿಷರ್‌ ಮದ್ಯ ತಯಾರಿಕೆ ಘಟಕದ ಮಾರಾಟ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕೋಟಿ ಕೋಟಿ ನಷ್ಟ: ಬೀಗಮುದ್ರೆ ಹಾಕುವುದಕ್ಕೂ ಮೊದಲು ಮದ್ಯದಂಗಡಿಗಳು ₹60,000ದಿಂದ ₹1.50 ಲಕ್ಷದವರೆಗೆ ವಹಿವಾಟು ನಡೆಸುತ್ತಿದ್ದವು. ವಾರದ ಅಂತ್ಯದ ದಿನಗಳಲ್ಲಿ ಪಬ್‌ ಮತ್ತು ಕ್ಲಬ್‌ಗಳು ₹3 ಲಕ್ಷದಿಂದ ₹4 ಲಕ್ಷದವರೆಗೆ ವಹಿವಾಟು ನಡೆಸುತ್ತಿದ್ದವು.

ಬೇರೆಡೆಗೆ ಸ್ಥಳಾಂತರ ಮಾಡದೆ, ಸರ್ಕಾರದ ನಿರ್ಧಾರ ಕಾದು ನೋಡುವ ತಂತ್ರ ಅನುಸರಿಸಲು ಹೋಗಿ ಮದ್ಯದಂಗಡಿ ಮಾಲೀಕರು ಭಾರಿ ನಷ್ಟ ಅನುಭವಿಸುವಂತಾಗಿದೆ.  ಪ್ರತಿ ದಿನ ಕೋಟ್ಯಂತರ ರೂಪಾಯಿ ವಹಿವಾಟು ಸ್ಥಗಿತಗೊಂಡಿದೆ. ಇದರಿಂದ ಸರ್ಕಾರದ ಆದಾಯಕ್ಕೂ ಕತ್ತರಿ ಬಿದ್ದಿದೆ ಎನ್ನುತ್ತಾರೆ ಬ್ರಿಗೇಡ್‌ ರಸ್ತೆಯ ಪಬ್‌ ಮಾಲೀಕರೊಬ್ಬರು.

53 ಮದ್ಯದಂಗಡಿ ಸ್ಥಳಾಂತರ: ‘ನಗರದಲ್ಲಿ 736 ಮದ್ಯದಂಗಡಿಗಳಿಗೆ ಬೀಗ ಮುದ್ರೆ ಹಾಕಲಾಗಿತ್ತು. ಇದರಲ್ಲಿ 56 ಮದ್ಯದಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ, ಪರವಾನಗಿ ನವೀಕರಿಸಿಕೊಂಡಿದ್ದಾರೆ. 683 ಮದ್ಯದಂಗಡಿಗಳನ್ನು ಇನ್ನೂ ಸ್ಥಳಾಂತರಿಸಿಲ್ಲ. ಪರವಾನಗಿ ನವೀಕರಿಸಿಕೊಂಡಿಲ್ಲ’ ಎಂದು ಅಬಕಾರಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)