ಶುಕ್ರವಾರ, ಡಿಸೆಂಬರ್ 6, 2019
17 °C
ಶೇ 12–14ರಿಂದ ಶೇ 23.50ಕ್ಕೆ ಏರಿದ ಜಿಎಸ್‌ಟಿ; ನೇಕಾರರು ಕಂಗಾಲು

ಶಹಾಪುರ ಸೀರೆಗೆ ‘ಬರಸಿಡಿಲು’

Published:
Updated:
ಶಹಾಪುರ ಸೀರೆಗೆ ‘ಬರಸಿಡಿಲು’

ಬೆಳಗಾವಿ: ಹೊಸದಾಗಿ ಜಾರಿಯಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ಜಿಲ್ಲೆಯ ಸಾವಿರಾರು ನೇಕಾರರಿಗೆ ಹೊರೆಯಾಗಿ ಪರಿಣಮಿಸಿದೆ.ಇಲ್ಲಿನ ಶಹಾಪುರದ ವಡಗಾವಿಯ ಮಗ್ಗಗಳಲ್ಲಿ ಸಿದ್ಧಗೊಳ್ಳುವ ‘ಶಹಾಪುರ ಸೀರೆ’ ಎಂದೇ ಖ್ಯಾತಿ ಗಳಿಸಿರುವ ಸೀರೆಗಳಿಗೆ ಈ ಹಿಂದೆ ಶೇ 12ರಿಂದ 14ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಜಿಎಸ್‌ಟಿ ಜಾರಿಯಾದ ನಂತರ ಶೇ 23.50ಕ್ಕೆ ಏರಿಕೆ ಮಾಡಲಾಗಿದೆ. ತೆರಿಗೆಯ ಪ್ರಮಾಣ ಒಮ್ಮೆಲೇ ದ್ವಿಗುಣಗೊಂಡಿರುವುದು ನೇಕಾರರು ಮತ್ತು ಕುಟುಂಬದವರಿಗೆ ಬರಸಿಡಿಲು ಬಡಿದಂತಾಗಿದೆ. ವಹಿವಾಟು ಕುಸಿಯುವ ಹಾಗೂ ನಷ್ಟ ಎದುರಾಗುವ ಆತಂಕ ಅವರನ್ನು ಕಾಡುತ್ತಿದೆ.‘ಶಹಾಪುರ ಸೀರೆಗಳ ಕಚ್ಚಾ ಪದಾರ್ಥಗಳ (ಪಾಲಿಸ್ಟರ್‌ ಯಾರ್ನ್‌) ಖರೀದಿ ಮೇಲೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಸೀರೆ ಖರೀದಿಸುವಾಗ ‘ಶೇ 5.50ರಷ್ಟು ಜಿಎಸ್‌ಟಿಯನ್ನು ನೀವೇ ತುಂಬಬೇಕು’ ಎಂದು ಮಧ್ಯವರ್ತಿಗಳು ಹೇಳುತ್ತಿದ್ದಾರೆ.ಇದರಿಂದಾಗಿ ಸೀರೆಯೊಂದಕ್ಕೆ ಒಟ್ಟಾರೆ ಶೇ 23.50ರಷ್ಟು ತೆರಿಗೆಯನ್ನು ನಾವೇ ಕಟ್ಟಬೇಕಾಗಿದೆ. ಹಿಂದೆ ಕನಿಷ್ಠ ಶೇ 12ರಿಂದ ಗರಿಷ್ಠ ಶೇ 14ರವರೆಗೆ ಪಾವತಿಸುತ್ತಿದ್ದೆವು. ಹೊಸ ವ್ಯವಸ್ಥೆಯಿಂದ ನೇಕಾರರಿಗೆ ಬಹಳಷ್ಟು ತೊಂದರೆಯಾಗಿದೆ’ ಎಂದು ಜಿಲ್ಲಾ ನೇಕಾರರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಗಜಾನನ ಗುಂಜೇರಿ ‘ಪ್ರಜಾವಾಣಿ’ಗೆ ತಿಳಿಸಿದರು.ಅವರೇಕೆ ಹೊರುತ್ತಾರೆ?: ‘ಸತತ ಬರಗಾಲದಿಂದಾಗಿ ವಹಿವಾಟು ಕುಸಿದು ಸಂಕಷ್ಟ ಅನುಭವಿಸುತ್ತಿದ್ದೇವೆ. ನೋಟುಗಳ ರದ್ದತಿಯ ನಂತರವೂ ತೊಂದರೆಗೆ ಸಿಲುಕಿದ್ದೆವು. ಇದೀಗ, ಜಿಎಸ್‌ಟಿಯೂ ಹೊರೆಯಾಗಿದೆ. ನಮಗೆ ನಮ್ಮದೇ ಆದ ಮಾರುಕಟ್ಟೆ ಇಲ್ಲ. ಹೀಗಾಗಿ, ಮಧ್ಯವರ್ತಿಗಳ ಅವಲಂಬನೆ ಅನಿವಾರ್ಯ. ಅವರು ಜಿಎಸ್‌ಟಿ ಹೊರೆ ಹೊರಲು ಸಿದ್ಧ ಇಲ್ಲ’ ಎನ್ನುತ್ತಾರೆ ಅವರು.‘ಜಿಎಸ್‌ಟಿಯಡಿ ನೋಂದಣಿ ಮಾಡಿಕೊಳ್ಳದ್ದರಿಂದ ಮಧ್ಯವರ್ತಿಗಳು ನಮ್ಮಲ್ಲಿ ಸೀರೆ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ನೋಂದಣಿ ಮಾಡಿಸಿದರೆ ಕಂಪ್ಯೂಟರ್‌ನಲ್ಲಿ ದಾಖಲಿಸುವುದು, ಕಾಲ, ಕಾಲಕ್ಕೆ ಲೆಕ್ಕಪತ್ರ ಸಲ್ಲಿಸುವ ಮಾಹಿತಿ ಗೊತ್ತಾಗುವುದಿಲ್ಲ. ನೋಂದಣಿ ಮಾಡಿಸದಿದ್ದರೆ ಮಾರಾಟ ಸಾಧ್ಯವಾಗುವುದಿಲ್ಲ. ಹೀಗಾಗಿ, ಜಿಎಸ್‌ಟಿಯು ನಮ್ಮ ಪಾಲಿಗೆ ಅಡಕತ್ತರಿಯಂತಾಗಿದೆ’ ಎಂದು ನೇಕಾರರು ಅಳಲು ತೋಡಿಕೊಳ್ಳುತ್ತಾರೆ.ಲಕ್ಷಕ್ಕೂ ಹೆಚ್ಚಿನ ಅವಲಂಬಿತರು: ‘ಜಿಲ್ಲೆಯಲ್ಲಿ ಅಂದಾಜು 30 ಸಾವಿರ ಮಗ್ಗಗಳಿವೆ. ತಿಂಗಳಿಗೆ 10 ಲಕ್ಷಕ್ಕೂ ಹೆಚ್ಚಿನ ಸೀರೆಗಳನ್ನು ನೇಯಲಾಗುತ್ತಿದೆ. ಮಗ್ಗದ ಪೂರ್ವ ಹಾಗೂ ಮಗ್ಗದ ನಂತರದ ಚಟುವಟಿಕೆ ಆಧರಿಸಿ ಲಕ್ಷಕ್ಕೂ ಹೆಚ್ಚು ಮಂದಿ ನೇಕಾರಿಕೆಯ ಮೇಲೆ ಅವಲಂಬಿತರಾಗಿದ್ದಾರೆ. ಜಿಎಸ್‌ಟಿಯ ನೇರ ಪರಿಣಾಮ ಇವರೆಲ್ಲರ ಮೇಲೆ ’ ಎಂದು ಗುಂಜೇರಿ ಹೇಳುತ್ತಾರೆ.

*

ಕಚ್ಚಾ ವಸ್ತುಗಳ ಖರೀದಿ ಮೇಲಿನ ಶೇ 18ರಷ್ಟು ತೆರಿಗೆ ಕಟ್ಟಲು ಸಿದ್ಧವಿದ್ದೇವೆ. ಆದರೆ, ಸೀರೆ ಮಾರುವಾಗಿನ ಶೇ 5.50 ಜಿಎಸ್‌ಟಿ ಹೊರೆಯನ್ನು ಮಧ್ಯವರ್ತಿಗಳು ಹೊರಬೇಕು.

ಗಜಾನನ ಗುಂಜೇರಿ,

ಅಧ್ಯಕ್ಷರು

ಜಿಲ್ಲಾ ನೇಕಾರರ ಸಂಘಟನೆಗಳ ಒಕ್ಕೂಟ

ಪ್ರತಿಕ್ರಿಯಿಸಿ (+)