ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ, ಕಂದಾಯ ಇಲಾಖೆ ಆಸ್ತಿ ರಕ್ಷಣೆ ಕಷ್ಟ

ಅಧಿಕಾರಿಗಳಿಂದ ಆಯಾ ಇಲಾಖೆಗಳಿಗೆ ಗೋಪ್ಯ ವರದಿ ಸಲ್ಲಿಕೆ
Last Updated 3 ಜುಲೈ 2017, 19:54 IST
ಅಕ್ಷರ ಗಾತ್ರ

ಹಾವೇರಿ: ‘ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಹೇಳಿಕೆ ಬಳಿಕ ಅರಣ್ಯ ಮತ್ತು ಕಂದಾಯ ಇಲಾಖೆಗಳ ಆಸ್ತಿಗಳ ರಕ್ಷಣೆಯು ಕಗ್ಗಂಟಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗೆ ಅಡ್ಡಿಯಾಗುತ್ತಿದೆ’ ಎಂದು ಜಿಲ್ಲೆಯ ಕಂದಾಯ, ಪೊಲೀಸ್‌ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಪ್ರತ್ಯೇಕವಾಗಿ ಗೋಪ್ಯ ವರದಿಗಳನ್ನು ಸಲ್ಲಿಸಿದ್ದಾರೆ.

‘ಮೇ 8ರಂದು ಇಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾಗೋಡು ಅವರು, ‘ಇಲಾಖೆ ನೆಟ್ಟ ಗಿಡಗಳನ್ನೆಲ್ಲ ಕಡಿದು ಹಾಕಿ’ ಎಂದು ಹೇಳಿದ್ದರು. ಆ ಬಳಿಕ  ಹಲವೆಡೆ ಅತಿಕ್ರಮಣ ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ’  ಎಂದು ನಂಬಲರ್ಹ ಅಧಿಕಾರಿಯೊಬ್ಬರು  ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಿಂದೆ ಕಂದಾಯ, ಅರಣ್ಯ, ಪೊಲೀಸ್  ಇಲಾಖೆಗಳು ಒಟ್ಟಾಗಿ ರಕ್ಷಣೆ ಮಾಡಿದ್ದ ಜಮೀನನ್ನೂ ಅತಿಕ್ರಮಣ ಮಾಡಲಾಗುತ್ತಿದೆ. ಈ ಜಾಗವನ್ನು ರಕ್ಷಿಸುವುದು ಕಷ್ಟವಾಗುತ್ತಿದೆ ’ ಎಂದು ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಹೇಳಿದರು.

‘ಹಿರೇಕೆರೂರ ತಾಲ್ಲೂಕಿನ ಕಮಲಾಪುರದ ಮೀಸಲು ಅರಣ್ಯದಲ್ಲಿನ 4,200 ಮರಗಳನ್ನು ಕಡಿದು ಸಾಗುವಳಿ ಮಾಡುತ್ತಿರುವುದನ್ನು ತಡೆಯಲು ಹೋದ ಅಧಿಕಾರಿಗಳಿಗೆ, ‘ಅರಣ್ಯ, ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದವರಿಗೆ ಕೊಡಿ ಎಂದು ಸಚಿವರೇ ಹೇಳಿದ್ದಾರೆ. ಇನ್ನು ನಿಮ್ಮದೇನು? ಸಚಿವರ ಆದೇಶ ಪಾಲಿಸಿ. ಇಲ್ಲವೇ, ಹೊರಟು ಹೋಗಿ ಎಂದು ಒತ್ತುವರಿದಾರರು ನೇರವಾಗಿಯೇ ಹೇಳುತ್ತಾರೆ’ ಎಂದು ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಅವರು ಹೇಳಿದರು.

‘ಸಚಿವರ ಹೇಳಿಕೆ ಬಳಿಕ ಜಿಲ್ಲೆಯ ಹಾವೇರಿ ತಾಲ್ಲೂಕಿನ ಬರಡಿ, ಹಿರೇಕೆರೂರ ತಾಲ್ಲೂಕಿನ ತಡಸನಹಳ್ಳಿ, ದೂದಿಹಳ್ಳಿ, ಕಮಲಾಪುರ, ರಟ್ಟೀಹಳ್ಳಿಯ ಬೀಜೋತ್ಪಾದನಾ ಕೇಂದ್ರ ಮತ್ತಿತರ ಕಡೆಗಳಲ್ಲಿ ಒತ್ತುವರಿ ಪ್ರಯತ್ನಗಳು ನಡೆದಿವೆ’ ಎಂದು ಅವರು ತಿಳಿಸಿದರು.

‘ಅಲ್ಲದೇ, ಅರಣ್ಯ ಮತ್ತು ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿಯ ‘ಹಕ್ಕು ಪತ್ರ’ ನೀಡಬೇಕು ಎಂದು ಆಗಾಗ್ಗೆ ಪ್ರತಿಭಟನೆ, ಧರಣಿಗಳು ಹೆಚ್ಚಾಗಿವೆ. ಜೂನ್ 12ರಂದು ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರೈತನೊಬ್ಬ ಬೆತ್ತಲೆಯಾಗಿ ಪ್ರತಿಭಟಿಸಿದ್ದರೆ, ಇನ್ನಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇಂತಹ ಕೃತ್ಯಗಳಿಗೆ ಕೆಲವು ಸಂಘಟನೆಗಳು ಕುಮ್ಮಕ್ಕು ನೀಡುತ್ತಿದ್ದು, ರಾಜಕಾರಣಿಗಳೂ ಕರೆ ಮಾಡಿ ಒತ್ತಡ ಹೇರುತ್ತಿದ್ದಾರೆ’ ಎಂದು ಹೇಳಿದರು. 

ಗೋಪ್ಯ ವರದಿಯ ಕುರಿತು ಜಿಲ್ಲೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದು, ‘ಆಡಳಿತಾತ್ಮಕ ಗೋಪ್ಯ ವಿಚಾರಗಳ ಕುರಿತು ಯಾವುದೇ ವಿವರ ನೀಡಲಾಗುವುದಿಲ್ಲ’ ಎಂದರು.

ಮೀಸಲು ಅರಣ್ಯ: ಮೊಕ್ಕಾಂ ಹೂಡಿದ ಸಿಬ್ಬಂದಿ
ರಟ್ಟೀಹಳ್ಳಿ (ಹಾವೇರಿ ಜಿಲ್ಲೆ):
ಮರಗಳನ್ನು ಕಡಿದು ಸಾಗುವಳಿ ಮಾಡಿದ್ದ ಇಲ್ಲಿಗೆ ಸಮೀಪದ ಕಮಲಾಪುರದ ಮೀಸಲು ಅರಣ್ಯದಲ್ಲಿ ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ ಮೊಕ್ಕಾಂ (ಕ್ಯಾಂಪ್) ಹೂಡಿದ್ದು, ಪೊಲೀಸರು ಗಸ್ತು ಆರಂಭಿಸಿದ್ದಾರೆ.

‘ಅಕ್ರಮವಾಗಿ ಸಾಗುವಳಿ ಮಾಡಿದ ಈ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಟೆಂಟ್ ಹಾಕಿಕೊಂಡು ಕಾವಲು ಕಾಯುತ್ತಿದ್ದಾರೆ’ ಎಂದು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಓ) ಸೋನಾಲ್ ವೃಷ್ಣಿ ತಿಳಿಸಿದರು.

‘ಭಾನುವಾರ ಬಂಧಿಸಲಾದ 30 ಮಂದಿಯನ್ನು ಚಿತ್ರದುರ್ಗದ ಜೈಲಿಗೆ ಕಳುಹಿಸಿಕೊಡಲಾಗಿದೆ. ಹಿರೇಕೆರೂರ ತಾಲ್ಲೂಕಿನ ತಡಸನಹಳ್ಳಿಯಲ್ಲಿ ಅಕ್ರಮವಾಗಿ ಸಾಗುವಳಿ ಮಾಡಲಾಗಿದ್ದು, ಆರು ಜನರ ವಿರುದ್ಧ ದೂರು ದಾಖಲಿಸಲಾಗಿದೆ’ ಎಂದು ಅವರು ತಿಳಿಸಿದರು.

ದೂರು ದಾಖಲು
ಹಿರೇಕೆರೂರ ತಾಲ್ಲೂಕಿನ ತಡಸನಹಳ್ಳಿಯಲ್ಲಿ ಮೀಸಲು ಅರಣ್ಯ ಒತ್ತುವರಿಗೆ ಪ್ರಯತ್ನ ನಡೆದಿದ್ದು, ಆರು ಮಂದಿಯ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ದೂರು ದಾಖಲಿಸಿಕೊಂಡಿದ್ದಾರೆ.

ಜಾಗ ರಕ್ಷಿಸಿದ್ದ ಜಿಲ್ಲಾಡಳಿತ
ಹಾವೇರಿ ಜಿಲ್ಲಾಡಳಿತವು ಈ ಹಿಂದೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ರೈತರ ಮನವೊಲಿಸುವ ಮೂಲಕ ಸಂಘರ್ಷ ರಹಿತವಾಗಿ ಸುಮಾರು 15,730 ಎಕರೆಗೂ ಅಧಿಕ ಒತ್ತುವರಿ ಜಾಗವನ್ನು ತೆರವುಗೊಳಿಸಿತ್ತು. ಕೆರೆ, ಗೋಮಾಳ, ರಾಜಕಾಲುವೆ, ಮತ್ತಿತರ ಸರ್ಕಾರಿ ಆಸ್ತಿಯನ್ನು ರಕ್ಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT