ಬುಧವಾರ, ಡಿಸೆಂಬರ್ 11, 2019
20 °C
ಮಿನಿ ವಿಧಾನಸೌಧ ಕಟ್ಟಡ ನಿವೇಶನ ಬದಲು ಪ್ರಶ್ನಿಸಿದ್ದ ಪಿಐಎಲ್‌

ಅಬ್ರಹಾಂಗೆ ₹ 25 ಲಕ್ಷ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಬ್ರಹಾಂಗೆ  ₹ 25 ಲಕ್ಷ ದಂಡ

ನವದೆಹಲಿ: ಕಲಬುರ್ಗಿ ಜಿಲ್ಲೆಯ ಆಳಂದದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ನಿವೇಶನ ಆಯ್ಕೆ ಮಾಡಿರುವ ನಿರ್ಧಾರವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌)ಯನ್ನು ಸೋಮವಾರ ವಜಾಗೊಳಿಸಿರುವ ಸುಪ್ರೀಂ ಕೋರ್ಟ್‌, ಅವರಿಗೆ ₹ 25 ಲಕ್ಷ ದಂಡ ವಿಧಿಸಿದೆ.‘ಪಟ್ಟಣದಿಂದ ಆರು ಕಿಲೋ ಮೀಟರ್‌ ದೂರದಲ್ಲಿನ ಲಭ್ಯ ನಿವೇಶನದಲ್ಲಿ ಮಿನಿ ವಿಧಾನಸೌಧ ನಿರ್ಮಿಸುವುದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗಲಾರದು. ಈ ರೀತಿ ಅರ್ಜಿ ಸಲ್ಲಿಸಿರುವ ಹಿಂದೆ ಯಾವುದೇ ರೀತಿಯ  ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ’ ಎಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಹಾಗೂ ಎ.ಎಂ. ಖನ್ವಿಲ್ಕರ್‌ ಅವರನ್ನು ಒಳಗೊಂಡ ಪೀಠ ಅಭಿಪ್ರಾಯಪಟ್ಟಿತು.ಪಟ್ಟಣದ ಹೊರಗೆ ಮಿನಿ ವಿಧಾನಸೌಧ ನಿರ್ಮಿಸುವುದರಿಂದ ಜನರಿಗೆ ಯಾವುದೇ ರೀತಿಯ ಉಪಯೋಗವಿಲ್ಲ. ಅಲ್ಲದೆ, ಕೃಷಿ ಇಲಾಖೆಗೆ ಸೇರಿರುವ ಜಮೀನಿನಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರದಿಂದಾಗಿ ಕೃಷಿ ಕ್ಷೇತ್ರಕ್ಕೆ ಧಕ್ಕೆಯಾಗಲಿದೆ ಎಂದು ಅರ್ಜಿದಾರರ ಪರ ವಕೀಲ ಸಲ್ಮಾನ್‌ ಖುರ್ಷಿದ್‌ ತಿಳಿಸಿದರು.‘₹ 25 ಲಕ್ಷದಷ್ಟು ದೊಡ್ಡ ಮೊತ್ತದ ದಂಡವನ್ನು ಅಬ್ರಹಾಂ ಭರಿಸಲಾರರು. ದಯವಿಟ್ಟು ದಂಡ ವಿಧಿಸಬೇಡಿ’ ಎಂದು ಅವರು ಮಾಡಿಕೊಂಡ ಮನವಿಯನ್ನು ಪುರಸ್ಕರಿಸದ ಪೀಠ, ಕೂಡಲೇ ದಂಡ ಪಾವತಿಸಬೇಕು ಎಂದು ನಿರ್ದೇಶಿಸಿತು.‘ಅರ್ಜಿದಾರರ ಉದ್ಯೋಗ ಯಾವುದು’ ಎಂದು ಕೇಳಿದ ನ್ಯಾಯಪೀಠ, ‘ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತ, ಸಾಮಾಜಿಕ ಕಾರ್ಯಕರ್ತ ಎಂದು ತಿಳಿಸಿರುವ ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಲಾಭ ಮಾಡಿಕೊಳ್ಳಲು ನೋಡುತ್ತಿದ್ದಾರೆಯೇ’ ಎಂದು ಪ್ರಶ್ನಿಸಿತು.ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಯಾವುದೇ ಸಂಬಂಧವಿಲ್ಲ. ಆದರೂ ಅವರು ಅನಗತ್ಯವಾಗಿ ಈ ವಿಷಯದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಅಡ್ವೋಕೇಟ್‌ ಜನರಲ್‌ ಮಧುಸೂದನ ನಾಯ್ಕ ರಾಜ್ಯ ಸರ್ಕಾರದ ಪರ ವಿವರಿಸಿದರು. ಆಳಂದ ಶಾಸಕ ಬಿ.ಆರ್‌. ಪಾಟೀಲ ಅವರ ಪರ ಹಿರಿಯ ವಕೀಲ ಬಸವಪ್ರಭು ಪಾಟೀಲ ವಾದ ಮಂಡಿಸಿದರು.

ಪಟ್ಟಣದ ಇಬ್ಬರು ಮಹಿಳೆಯರು ಮಿನಿ ವಿಧಾನಸೌಧ ನಿರ್ಮಿಸಲು ತಮ್ಮ ಐದು ಎಕರೆ ಜಮೀನನ್ನು ಷರತ್ತಿನಡಿ ದಾನ ನೀಡಿದ್ದರು. ಆದರೆ, ಸರ್ಕಾರ ಆ ಜಾಗದಲ್ಲಿ ಕಟ್ಟಡ ನಿರ್ಮಿಸದೇ ಕೃಷಿ ಇಲಾಖೆಗೆ ಸೇರಿದ ಜಮೀನಿನಲ್ಲಿ ನಿರ್ಮಿಸಲು ತೀರ್ಮಾನಿಸಿದೆ.ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ನಿರಾಕರಿಸಿ, ಕಳೆದ ಏಪ್ರಿಲ್‌ 3ರಂದು ಅಬ್ರಹಾಂ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ್ದ ರಾಜ್ಯ ಹೈಕೋರ್ಟ್‌, ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತ್ತು.

ಪ್ರತಿಕ್ರಿಯಿಸಿ (+)