ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಕಿಂ ಗಡಿ: ವಾಕ್ಸಮರ ತೀವ್ರ

Last Updated 3 ಜುಲೈ 2017, 20:10 IST
ಅಕ್ಷರ ಗಾತ್ರ

ನವದೆಹಲಿ / ಬೀಜಿಂಗ್‌: ಭಾರತ ಮತ್ತು ಚೀನಾ ನಡುವೆ ಗಡಿ ವಿವಾದಕ್ಕೆ ಸಂಬಂಧಿಸಿದ ವಾಕ್ಸಮರ ಇನ್ನಷ್ಟು ತೀವ್ರಗೊಂಡಿದೆ.

ಸಿಕ್ಕಿಂ ವಲಯದಲ್ಲಿ ರಸ್ತೆ ನಿರ್ಮಿಸುವ ತನ್ನ ಸೇನೆಯ ಪ್ರಯತ್ನಕ್ಕೆ ಭಾರತ ಸೇನೆ ತಡೆ ಒಡ್ಡಿರುವುದು ‘ವಿಶ್ವಾಸದ್ರೋಹ’ ಎಂದು ಚೀನಾ ಹೇಳಿದೆ.

ಭಾರತದ ಹಿಂದಿನ ಸರ್ಕಾರಗಳ ನಿಲುವಿನಿಂದ ಈಗಿನ ಸರ್ಕಾರ ಹಿಂದೆ ಸರಿದಿದೆ. ತಕ್ಷಣವೇ ಸಿಕ್ಕಿಂ ವಲಯದಲ್ಲಿ ತನ್ನ ಭೂ ಪ್ರದೇಶದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಚೀನಾ ಆಗ್ರಹಿಸಿದೆ.

ಸಿಕ್ಕಿಂ ವಲಯದಲ್ಲಿ ಚೀನಾ–ಭಾರತ ಗಡಿಯನ್ನು ಗುರುತಿಸಲಾಗಿದೆ. ಅಲ್ಲಿ ಯಾವುದೇ ವಿವಾದ ಇಲ್ಲ ಎಂದು ಚೀನಾದ ವಿದೇಶಾಂಗ ವಕ್ತಾರ ಗೆಂಗ್‌ ಶುಆನ್‌ ಹೇಳಿದ್ದಾರೆ.

ಸಿಕ್ಕಿಂ ವಲಯದಲ್ಲಿ ಗಡಿ ವಿವಾದ ಸಂಪೂರ್ಣವಾಗಿ ಬಗೆಹರಿದಿಲ್ಲ ಎಂದು ಭಾರತ ಹೇಳಿದೆ. ಗಡಿ ವಿವಾದಗಳನ್ನು ಪರಿಹರಿಸುವುದಕ್ಕಾಗಿಯೇ ವಿಶೇಷ ಪ್ರತಿನಿಧಿಗಳನ್ನು ನೇಮಿಸಿಕೊಳ್ಳಲಾಗಿದೆ ಎಂಬುದನ್ನು ಭಾರತ ನೆನಪಿಸಿದೆ.

ಸಿಕ್ಕಿಂ ವಲಯದ ದೋಕ ಲಾ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ಭಾರತ ಮತ್ತು ಚೀನಾ ನಡುವೆ ಸಂಘರ್ಷ ನಡೆಯುತ್ತಿದೆ.

ಭಾರತ, ಅಮೆರಿಕ, ಜಪಾನ್‌ ಸಮರಾಭ್ಯಾಸ
ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅದರ ನಡುವೆಯೇ ಭಾರತ, ಅಮೆರಿಕ ಮತ್ತು ಜಪಾನ್‌ ದೇಶಗಳು ಮುಂದಿನ ವಾರ ಬಂಗಾಳ ಕೊಲ್ಲಿಯಲ್ಲಿ ಜಂಟಿ ಸಮರಾಭ್ಯಾಸ ನಡೆಸಲಿವೆ.

ಅಣುಶಕ್ತಿ ಚಾಲಿತ ಜಲಾಂತರ್ಗಾಮಿಗಳು ಮತ್ತು ವಿಮಾನ ವಾಹಕ ನೌಕೆಗಳು ಈ ಅಭ್ಯಾಸದಲ್ಲಿ ಭಾಗವಹಿಸಲಿವೆ. ವಿಮಾನ ವಾಹಕ ನೌಕೆಗಳ ಕಾರ್ಯಾಚರಣೆ, ಜಲ ಗಸ್ತು, ಶೋಧ ಕಾರ್ಯಾಚರಣೆ, ಮೇಲ್ಮೈ ಮತ್ತು ಜಲಾಂತರ್ಗಾಮಿ ಯುದ್ಧ, ಸ್ಫೋಟಕ ಪತ್ತೆ, ಹೆಲಿಕಾಪ್ಟರ್‌ ಕಾರ್ಯಾಚರಣೆ, ನೌಕೆ ವಶಪಡಿಸಿಕೊಳ್ಳುವ ಕಾರ್ಯಾಚರಣೆಗಳು  ಅಭ್ಯಾಸದ ಭಾಗವಾಗಿರಲಿವೆ.

ಆಡೆನ್‌ ಕೊಲ್ಲಿಯಲ್ಲಿ ಕಡಲು ಕಳ್ಳರ ಹಾವಳಿ ತಪ್ಪಿಸುವ ಉದ್ದೇಶದಿಂದ ಚೀನಾದ ಅಣುಶಕ್ತಿ ಚಾಲಿತ ಮತ್ತು ಸಾಂಪ್ರದಾಯಿಕ ಜಲಾಂತರ್ಗಾಮಿಗಳು ಹಿಂದೂ ಮಹಾಸಾಗರದಲ್ಲಿ ಸದಾ ಸಂಚರಿಸುತ್ತಿರುತ್ತವೆ. ಇದು ಭಾರತದ ಆತಂಕಕ್ಕೂ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT