ಶುಕ್ರವಾರ, ಡಿಸೆಂಬರ್ 13, 2019
20 °C
ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸದ ಭೂಸಾರಿಗೆ ಸಚಿವಾಲಯ

ನಗರದ ಮದ್ಯದಂಗಡಿಗಳಿಗೆ ವಿನಾಯಿತಿ: ಕೇಂದ್ರ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದ ಮದ್ಯದಂಗಡಿಗಳಿಗೆ ವಿನಾಯಿತಿ: ಕೇಂದ್ರ ನಕಾರ

ಬೆಂಗಳೂರು: ಪಟ್ಟಣ ಹಾಗೂ ನಗರದೊಳಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಡಿನೋಟಿಫೈ ಮಾಡುವಂತೆ ರಾಜ್ಯ ಸರ್ಕಾರ ಮಾಡಿದ ಮನವಿಗೆ ಕೇಂದ್ರ ಸರ್ಕಾರ ಕಿವಿಗೊಟ್ಟಿಲ್ಲ.  ಹೀಗಾಗಿ ಮುಚ್ಚಿರುವ  ಮದ್ಯದಂಗಡಿಗಳು  ತೆರೆಯುವ ಸಾಧ್ಯತೆ ಕಾಣುತ್ತಿಲ್ಲ.858 ಕಿ.ಮೀ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಅಧಿಸೂಚನೆ ವ್ಯಾಪ್ತಿಯಿಂದ  ಕೈಬಿಡುವಂತೆ ಕೇಂದ್ರ ಭೂಸಾರಿಗೆ ಸಚಿವಾಲಯದ ಮೇಲೆ ಒತ್ತಡ ಹೇರಲು ದೆಹಲಿಗೆ ಹೋಗಿದ್ದ ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  ಎಂ. ಲಕ್ಷ್ಮೀನಾರಾಯಣ ಹಾಗೂ ಕಾರ್ಯದರ್ಶಿ ಸಿದ್ದಗಂಗಪ್ಪ ಬರಿಗೈಯಲ್ಲಿ ಬೆಂಗಳೂರಿಗೆ ಹಿಂತಿರುಗಿದೆ.

 

‘ಸುಪ್ರೀಂ ಕೋರ್ಟ್‌ ಆದೇಶದಿಂದ ರಾಷ್ಟ್ರೀಯ ಹೆದ್ದಾರಿ ಬದಿ ಇರುವ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿದೆ. ಇದರಿಂದ ರಾಜ್ಯದ ವರಮಾನಕ್ಕೆ ದೊಡ್ಡ ಹೊಡೆತ ಬೀಳಲಿದೆ. ನಗರ ಮತ್ತು ಪಟ್ಟಣ ವ್ಯಾಪ್ತಿಯ 858 ಕಿ.ಮೀ ಡಿನೋಟಿಫೈ ಮಾಡಿದರೆ ಸಾವಿರಾರು ಅಂಗಡಿ ಉಳಿಯಲಿವೆ’ ಎಂದು ಕೇಂದ್ರ ಭೂಸಾರಿಗೆ ಸಚಿವಾಲಯದ ಕಾರ್ಯದರ್ಶಿ ವೈ.ಎಸ್‌. ಮಲ್ಲಿಕ್‌ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರು.‘ಆದರೆ, ಇದಕ್ಕೆ ಒಪ್ಪದ ಕೇಂದ್ರ ಸರ್ಕಾರದ ಅಧಿಕಾರಿ, ಹೆದ್ದಾರಿ ಬದಿಯ ಮದ್ಯದಂಗಡಿಗಳನ್ನು ಮುಚ್ಚುವ ಸಂಬಂಧ ಇಡೀ ದೇಶಕ್ಕೆ ಅನ್ವಯ ಆಗುವಂತೆ ಕೋರ್ಟ್‌ ಆದೇಶ ನೀಡಿದೆ.  ಈ ಸಂದರ್ಭದಲ್ಲಿ ಡಿನೋಟಿಫೈ ಮಾಡುವುದು ಕಷ್ಟ. ಎಲ್ಲ ರಾಜ್ಯ ಸರ್ಕಾರಗಳೂ ಮನವಿ ಸಲ್ಲಿಸಿದರೆ ಪರಿಶೀಲಿಸಬಹುದು ಎಂದಷ್ಟೇ ಹೇಳಿದರು’ ಎಂದು ಮೂಲಗಳು ತಿಳಿಸಿವೆ.ಕೋರ್ಟ್‌ ಆದೇಶದಿಂದ ಹೆದ್ದಾರಿ ಬದಿಯ 3,515 ಮದ್ಯದ ಅಂಗಡಿಗಳು ಬಂದ್‌ ಆಗಿವೆ. ಮದ್ಯದ ಅಂಗಡಿಗಳನ್ನು ಉಳಿಸುವ ಸಂಬಂಧ ನಗರ ಮತ್ತು ಪಟ್ಟಣದೊಳಗೆ ಹಾದು ಹೋಗುವ  ರಾಜ್ಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಿ  ಆದೇಶ ಹೊರಡಿಸಿದೆ.ಮದ್ಯ ಮಾರಾಟ ಕಡಿಮೆ: ಬಿಯರ್‌ ಮಾರಾಟ ಹೆಚ್ಚಳ: ಕಳೆದ ನಾಲ್ಕು ದಿನಗಳಲ್ಲಿ 4 ಲಕ್ಷ ಬಾಕ್ಸ್‌ ಕಡಿಮೆ ಮದ್ಯ ಮಾರಾಟವಾಗಿದ್ದರೆ, 2 ಲಕ್ಷ ಬಾಕ್ಸ್‌ ಬಿಯರ್‌ ಹೆಚ್ಚು ಮಾರಾಟವಾಗಿದೆ.‘ಜುಲೈ ಮೊದಲ ವಾರದಲ್ಲಿ ಮದ್ಯ ಮಾರಾಟ ಕಡಿಮೆ ಆಗುವುದು ಸಾಮಾನ್ಯ. ಆದರೆ, ಬಿಯರ್‌ ಮಾರಾಟ ಹೆಚ್ಚಳ ಆಗಿರುವುದು ಗೊಂದಲಕ್ಕೆ ಕಾರಣವಾಗಿದೆ’ ಎಂದು ಪಾನೀಯ ನಿಗಮದ ಮೂಲಗಳು ಹೇಳಿವೆ.ಸಿ.ಎಂ ಸಭೆ ಇಂದು

ಹೆದ್ದಾರಿ ಬದಿಯ ಮದ್ಯದಂಗಡಿಗಳನ್ನು ಮುಚ್ಚಿರುವುದರಿಂದ ಉಂಟಾಗಲಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸಭೆ ಕರೆದಿದ್ದಾರೆ.ಈ ವರ್ಷ ರಾಜ್ಯ ಸರ್ಕಾರ ಅಬಕಾರಿ ಮೂಲದಿಂದ ₹ 18,050 ಕೋಟಿ ಸಂಪನ್ಮೂಲ ಸಂಗ್ರಹ ಗುರಿ ಇಟ್ಟುಕೊಂಡಿದೆ. ಮದ್ಯದಂಗಡಿಗಳು ಬಾಗಿಲು ಹಾಕಿದ್ದರಿಂದಾಗಿ ಸಂಪನ್ಮೂಲ ಸಂಗ್ರಹದ ಮೇಲೆ ದೊಡ್ಡ ಹೊಡೆತ ಬೀಳುವ ಅಂದಾಜಿದೆ. ಈ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಹಣಕಾಸು ಮತ್ತು ಅಬಕಾರಿ ಖಾತೆಯನ್ನೂ ಹೊಂದಿರುವ ಸಿದ್ದರಾಮಯ್ಯ, ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

*

ರಾಷ್ಟ್ರೀಯ ಹೆದ್ದಾರಿ ಡಿನೋಟಿಫೈ ಸಂಬಂಧ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಎಂ. ಲಕ್ಷ್ಮೀನಾರಾಯಣ

ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

*ಕ್ಲಬ್‌ ಪರವಾನಗಿ ನವೀಕರಣಕ್ಕೆ  ಮೀನಮೇಷ

ಬೆಂಗಳೂರು:
ರಾಷ್ಟ್ರೀಯ ಹೆದ್ದಾರಿಯಿಂದ 500 ಮೀ. ವ್ಯಾಪ್ತಿಯಲ್ಲಿರುವ ಅನೇಕ ಕ್ಲಬ್‌ಗಳ ಪರವಾನಗಿಯನ್ನು ಅಬಕಾರಿ ಇಲಾಖೆ ಇನ್ನೂ ನವೀಕರಿಸಿಲ್ಲ. ಹಾಗಾಗಿ ಈ ಕ್ಲಬ್‌ಗಳಲ್ಲಿ ಸೋಮವಾರವೂ ಮದ್ಯ ಸರಬರಾಜು ಮಾಡಿಲ್ಲ.

ರಾಷ್ಟ್ರೀಯ ಹೆದ್ದಾರಿಯಿಂದ 500 ಮೀಟರ್‌ ವ್ಯಾಪ್ತಿಯಲ್ಲಿ ಮದ್ಯ ಸರಬರಾಜು ಮಾಡಬಾರದು ಎಂಬ ಸುಪ್ರೀಂಕೋರ್ಟ್‌ ಆದೇಶ ಕ್ಲಬ್‌ಗಳಿಗೆ ಅನ್ವಯವಾಗುವುದಿಲ್ಲ. ಹಾಗಾಗಿ ಇಂತಹ ಕ್ಲಬ್‌ಗಳ ಮದ್ಯ ಸರಬರಾಜು ಪರವಾನಗಿಯನ್ನು ನವೀಕರಿಸಬಹುದು ಎಂದು  ಅಬಕಾರಿ ಆಯುಕ್ತರು ಈ ಹಿಂದೆ ತಿಳಿಸಿದ್ದರು.‘ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಕ್ಲಬ್‌ ಹೌಸ್‌ನಲ್ಲಿ ಶನಿವಾರದಿಂದ ಮದ್ಯ ಸರಬರಾಜು ಸ್ಥಗಿತಗೊಳಿಸಿದ್ದೇವೆ.  ಮದ್ಯ ಸರಬರಾಜು ಪರವಾನಗಿ ನವೀಕರಣ ಮಾಡುವಂತೆ ಕೋರಿ ಈಗಾಗಲೇ ಅಬಕಾರಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದೇವೆ. ಪರವಾನಗಿ ನವೀಕರಣಕ್ಕೆ  ಯಾವುದೇ ತೊಡಕಿಲ್ಲ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಬಾಯಿ ಮಾತಿನಲ್ಲಿ ಹೇಳುತ್ತಿದ್ದಾರೆ. ಆದರೆ, ಪರವಾನಗಿಯನ್ನು ಇನ್ನೂ ನವೀಕರಿಸಿಲ್ಲ’ ಎಂದು ಕೆಎಸ್‌ಸಿಎ ಕ್ಲಬ್‌ ಹೌಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.ಶೀಘ್ರ ನವೀಕರಣ: ‘ನಗರದಲ್ಲಿ 20 ಕ್ಲಬ್‌ಗಳು ಹೆದ್ದಾರಿಯಿಂದ 500 ಮೀಟರ್‌ ಒಳಗೆ ಇವೆ. ಈ ಕ್ಲಬ್‌ಗಳು ಸಿಎಲ್‌–4 ವ್ಯಾಪ್ತಿಗೆ ಬರುತ್ತವೆ. ಇಲ್ಲಿ ಮದ್ಯ ಮಾರಾಟಕ್ಕೆ ತೊಂದರೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಪಪಡಿಸಿದೆ.  ಒಂದೆರಡು ದಿನಗಳಲ್ಲಿ ಪರವಾನಗಿ ನವೀಕರಣ ಮಾಡುತ್ತೇವೆ’ ಎಂದು ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)