ಶುಕ್ರವಾರ, ಡಿಸೆಂಬರ್ 6, 2019
19 °C
₹1.25 ಲಕ್ಷ ವೇತನ ನೀಡಿದರೂ ವೈದ್ಯರು ಸಿಗುತ್ತಿಲ್ಲ: ಸಚಿವರ ಅಸಹಾಯಕತೆ

ವೈದ್ಯರಿಗೆ ಆನ್‌ಲೈನ್‌ ಬಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈದ್ಯರಿಗೆ ಆನ್‌ಲೈನ್‌ ಬಿಡ್‌

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಿಗೆ ‘ಆನ್‌ಲೈನ್‌ ಬಿಡ್‌’ ಮೂಲಕ ತಜ್ಞ ವೈದ್ಯರನ್ನು ನೇಮಿಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.‘ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳು ತಜ್ಞ ವೈದ್ಯರ ಕೊರತೆ ಎದುರಿಸುತ್ತಿವೆ. ತಿಂಗಳಿಗೆ ₹ 1.25 ಲಕ್ಷ ವೇತನ ನೀಡಿದರೂ  ವೈದ್ಯರು ಸಿಗುತ್ತಿಲ್ಲ. ಕರೆ ಆಧಾರದಲ್ಲಿ ಬರುವಂತೆ ಹೇಳಿದರೂ ಆಸಕ್ತಿ ತೋರುವುದಿಲ್ಲ. ಹೀಗಾಗಿ ಬಿಡ್‌ ಮೂಲಕ ನೇಮಕ ಮಾಡಲು ತೀರ್ಮಾನಿಸಲಾಗಿದೆ’ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಸೋಮವಾರ  ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.‘ಸರ್ಕಾರ ನಿಗದಿಪಡಿಸಿದ ಮಾಸಿಕ ವೇತನ ಪಡೆದು ಕೆಲಸ ಮಾಡಲು ತಜ್ಞ ವೈದ್ಯರು ಮುಂದಾಗುತ್ತಿಲ್ಲ. ಈ ಕಾರಣಕ್ಕೆ, ವೈದ್ಯರು ತಮಗೆ ಎಷ್ಟು ವೇತನ ಬೇಕು ಎಂದು ಮುಂಚಿತವಾಗಿ ತಿಳಿಸಿದರೆ ಮತ್ತು ಆ ವೇತನ ಸರ್ಕಾರಕ್ಕೆ ಒಪ್ಪಿಗೆಯಾದರೆ ಅಂಥವರನ್ನು ನೇಮಿಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದೂ ಆರೋಗ್ಯ ಇಲಾಖೆ ಆಯುಕ್ತ ಸುಬೋಧ್‌ ಯಾದವ್‌ ತಿಳಿಸಿದರು.‘ರಾಜ್ಯದಲ್ಲಿ 1,200ಕ್ಕೂ ಹೆಚ್ಚು ತಜ್ಞ ವೈದ್ಯ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ, ಕರ್ತವ್ಯ ನಿರ್ವಹಿಸಲು ವೈದ್ಯರು ಮುಂದೆ ಬರುತ್ತಿಲ್ಲ. ಹೀಗಾಗಿ, ಹೊಸ ವಿಧಾನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ವೈದ್ಯರ ಅಪೇಕ್ಷೆಗಳನ್ನು ಮೊದಲೇ ಅರಿತುಕೊಂಡು ಈ ನಿಟ್ಟಿನಲ್ಲಿ ಮುಂದುವರಿಯಲು ತೀರ್ಮಾನಿಸಲಾಗಿದೆ. ಈ ಕುರಿತು ಮಂಗಳವಾರ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ’ ಎಂದು ಅವರು ವಿವರಿಸಿದರು.‘ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ಸಲ್ಲಿಸಲು ಬಯಸುವ ತಜ್ಞ ವೈದ್ಯರು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಈ ಸಂದರ್ಭದಲ್ಲಿ ವೇತನದ ಜೊತೆಗೆ ಕೆಲಸ ಮಾಡಲು ಬಯಸುವ ಸ್ಥಳವನ್ನೂ ನಮೂದಿಸಬೇಕು. ಅದನ್ನು ಪರಿಗಣಿಸಿ,  ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದೂ ಅವರು ವಿವರಿಸಿದರು.ಮೊದಲ ಸಭೆ ಜುಲೈ 6ಕ್ಕೆ: ‘ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣಕ್ಕೆ ಕಾಯ್ದೆ ತರುವ ಕುರಿತು ಚರ್ಚಿಸಲು ರಚಿಸಲಾದ ಜಂಟಿ ಸದನ ಸಮಿತಿಯ ಮೊದಲ ಸಭೆ ಜುಲೈ 6 ರಂದು ನಡೆಯಲಿದೆ. ವರದಿ ನೀಡಲು ಸಮಿತಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ’ ಎಂದು ಸಚಿವ ರಮೇಶ್‌ ಕುಮಾರ್‌ ತಿಳಿಸಿದರು.ಸಂಪುಟ ಸಭೆಯಲ್ಲಿ ಯೋಜನೆಗೆ ಒಪ್ಪಿಗೆ: ‘ಎಲ್ಲರಿಗೂ ಅನ್ವಯವಾಗುವಂತೆ ಯುನಿವರ್ಸಲ್ ಹೆಲ್ತ್ ಕಾರ್ಡ್ ಯೋಜನೆ ಜಾರಿಗೆ ತರಲಾಗುತ್ತಿದೆ. ಎಪಿಎಲ್ ಮತ್ತು ಬಿಪಿಎಲ್ ಕುಟುಂಬಗಳೆಂದು ಪ್ರತ್ಯೇಕಿಸದೆ, ಎಲ್ಲ 1.30 ಕೋಟಿ ಕುಟುಂಬಗಳಿಗೆ ಈ ಸೌಲಭ್ಯ ದೊರೆಯಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಒಪ್ಪಿಗೆ ಪಡೆಯಲಾಗುವುದು’ ಎಂದರು.‘ಎಲ್ಲ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಸಿಟಿ ಸ್ಕ್ಯಾನ್, ಎಕ್ಸ್‌ರೇ, ಎಂ.ಐ.ಆರ್ ಸ್ಕ್ಯಾನ್ ಸೇರಿದಂತೆ ಎಲ್ಲ ಉಪಕರಣಗಳನ್ನು ಶೀಘ್ರ ಅಳವಡಿಸಿ ರೋಗಿಗಳಿಗೆ ಉಚಿತವಾಗಿ ಸೌಲಭ್ಯ ನೀಡಲಾಗುವುದು. 146 ತಾಲ್ಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್‌ ಘಟಕ ಆರಂಭಿಸಲಾಗುವುದು’ ಎಂದರು.‘ಸರ್ಕಾರಿ ವೈದ್ಯಕೀಯ ಕಾಲೇಜುಗಳು ಇಲ್ಲದ ವಿಜಯಪುರ, ರಾಮನಗರ, ಕೋಲಾರ, ದಾವಣಗೆರೆ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆದು, ಉಚಿತ ಚಿಕಿತ್ಸೆ ನೀಡಲಾಗುವುದು’ ಎಂದೂ ಸಚಿವರು ಹೇಳಿದರು.ಕೇರಳದ ಮಾದರಿಯಲ್ಲಿ ಪರಿಹಾರ

‘ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ ಗಡಿಭಾಗಗಳಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ತರ ನೆರವಿಗೆ ಕೇರಳದ ಮಾದರಿಯಲ್ಲಿ ಪರಿಹಾರ, ಚಿಕಿತ್ಸಾ ವೆಚ್ಚ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗುವುದು’ ಎಂದರು.

‘ವಿಧಾನಮಂಡಲದಲ್ಲಿ ಈ ವಿಷಯದ ಕುರಿತು ಚರ್ಚೆಯಾಗಿದ್ದು, ಕೇರಳ ಮಾದರಿಯಲ್ಲಿ ಪರಿಹಾರ ನೀಡಬೇಕು ಎಂದು ಸಲಹೆಗಳು ಬಂದಿವೆ. ಹೀಗಾಗಿ ಕೇರಳ ಮಾದರಿಯಲ್ಲಿಯೇ ಉನ್ನತ ಮಟ್ಟದ ಸಮಿತಿ ರಚಿಸುವ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು. ಸಮಿತಿಯಲ್ಲಿ ಕೃಷಿ, ಸಮಾಜ ಕಲ್ಯಾಣ, ಆರೋಗ್ಯ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಸಚಿವರು ಸದಸ್ಯರಾಗಿರುತ್ತಾರೆ. ಮುಖ್ಯಮಂತ್ರಿ ಅದರ ಅಧ್ಯಕ್ಷರಾಗಿರುತ್ತಾರೆ’ ಎಂದರು.‘ಸುಮಾರು 6,500 ಮಂದಿ ಎಂಡೋಸಲ್ಫಾನ್ ಸಂತ್ರಸ್ತರಿದ್ದಾರೆ. ಎಂಡೋಸಲ್ಫಾನ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಹಾಗೂ ಸಂಪೂರ್ಣ ಹಾಸಿಗೆ ಹಿಡಿದವರಿಗೆ ₹ 3 ಲಕ್ಷ ಪರಿಹಾರ ಮತ್ತು ವಿವಿಧ ರೀತಿಯಲ್ಲಿ ಅಂಗವಿಕಲರಾದವರಿಗೆ ಸೂಕ್ತ ಪರಿಹಾರ ನೀಡಲಾಗುವುದು. ಪರಿಹಾರದ ಪ್ಯಾಕೇಜ್ ₹ 100 ಕೋಟಿ ಆಗಬಹುದು’ ಎಂದೂ ಸಚಿವರು ಹೇಳಿದರು.

ಪ್ರತಿಕ್ರಿಯಿಸಿ (+)