ಶುಕ್ರವಾರ, ಡಿಸೆಂಬರ್ 13, 2019
17 °C

ಬೈಪಾಸ್‌ ರಸ್ತೆ 2018 ಜುಲೈಗೆ ಪೂರ್ಣಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೈಪಾಸ್‌ ರಸ್ತೆ 2018 ಜುಲೈಗೆ ಪೂರ್ಣಗೊಳಿಸಿ

ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ನಿರ್ಮಿಸುತ್ತಿರುವ ಹುಬ್ಬಳ್ಳಿ ಬೈಪಾಸ್‌ ಚತುಷ್ಪಥ ರಸ್ತೆ (ಅಂಚಟಗೇರಿ –ಗಬ್ಬೂರು ಕ್ರಾಸ್‌– ಗದಗ ರಸ್ತೆ– ಕುಸುಗಲ್‌) ಕಾಮಗಾರಿಯನ್ನು 2018 ಜುಲೈ ಒಳಗೆ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗುತ್ತಿಗೆದಾರ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಗದಗ ರಸ್ತೆ ಬಳಿ ನಡೆಯುತ್ತಿರುವ ಬೈಪಾಸ್‌ ರಸ್ತೆ ಮತ್ತು ಮೇಲ್ಸೇತುವೆ ಕಾಮಗಾರಿಯನ್ನು ಸೋಮವಾರ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ₹ 251ಕೋಟಿ ಅನುದಾನದಲ್ಲಿ ಕುಸುಗಲ್‌ (ಎನ್‌.ಎಚ್‌. 218)ನಿಂದ ಗದಗ ರಸ್ತೆ (ಎನ್‌.ಎಚ್‌ 63) ವರೆಗೆ ಹಾಗೂ ಗದಗ ರಸ್ತೆಯಿಂದ ಗಬ್ಬೂರು ಕ್ರಾಸ್‌(ಎನ್‌.ಎಚ್‌.4) ವರೆಗೆ ಹಾಗೂ ಗಬ್ಬೂರು ಕ್ರಾಸ್‌ನಿಂದ ಕಾರವಾರ ರಸ್ತೆಯ ಅಂಚಟಗೇರಿ(ಎನ್‌.ಎಚ್‌.63) ವರೆಗೆ ಒಟ್ಟು 18 ಕಿ.ಮೀ. ಚತುಷ್ಪಥ ಬೈಪಾಸ್‌ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಸ್ತೆ ಕಾಮಗಾರಿ ಭರದಿಂದ ನಡೆದಿದೆ. ಸದ್ಯ ಗದಗ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ನಡೆದಿದೆ. ಶೀಘ್ರದಲ್ಲೇ ಎರಡು ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಮಾತನಾಡಿ, ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಹುಬ್ಬಳ್ಳಿಗೆ ಬಂದಿದ್ದ ಸಂದರ್ಭದಲ್ಲಿ ಮಾಡಿಕೊಂಡಿದ್ದ ಮನವಿ ಮೇರೆಗೆ ಬೈಪಾಸ್‌ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಎಇದ್ದಾರೆ. ಈ ರಸ್ತೆ ನಿರ್ಮಾಣದಿಂದ ಹುಬ್ಬಳ್ಳಿಯಲ್ಲಿನ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಬಿ.ಬಿ.ಸಿಂಗ್‌, ಅನುದೀಪ್‌ ರೆಡ್ಡಿ, ರಾಜೇಶ್‌ ತೊರವಿ, ಮನೋಹರ ವಡ್ಡರ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾಹುಕಾರ, ಹುನಮಂತಪ್ಪ ದೊಡ್ಡಮನಿ ಇದ್ದರು.

* * 

ಚತುಷ್ಪಥ ಬೈಪಾಸ್‌ ರಸ್ತೆಯಿಂದ ರಾಣಿ ಚನ್ನಮ್ಮ ವೃತ್ತದಲ್ಲಿ ಶೇ 50ರಷ್ಟು ವಾಹನ ಸಂಚಾರ ದಟ್ಟಣೆ ತಗ್ಗಲಿದೆ. ಇದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ

ಪ್ರಹ್ಲಾದ ಜೋಶಿ

ಸಂಸದ

ಪ್ರತಿಕ್ರಿಯಿಸಿ (+)