ಶನಿವಾರ, ಡಿಸೆಂಬರ್ 7, 2019
16 °C

ಬಾಲಕ ಹೂಳಿನಲ್ಲಿ ಸಿಲುಕಿಕೊಂಡಿರುವ ಶಂಕೆ

ಮನೋಜಕುಮಾರ ಗುದ್ದಿ Updated:

ಅಕ್ಷರ ಗಾತ್ರ : | |

ಬಾಲಕ ಹೂಳಿನಲ್ಲಿ ಸಿಲುಕಿಕೊಂಡಿರುವ ಶಂಕೆ

ಹುಬ್ಬಳ್ಳಿ: ಬಾಲಕ ವಿದ್ಯಾಸಾಗರ್‌ ಹನುಮಕ್ಕನವರ್‌ ಕ್ವಾರಿಯ ನೀರಲ್ಲಿ ಮುಳುಗಿದ್ದರಿಂದ ಆತನ ಪೋಷಕರು ಹಾಗೂ ಊರಿನ ಹಿರಿಯರು ತಮ್ಮನ್ನು ಬೈಯಬಹುದು  ಎಂಬ ಆತಂಕದಿಂದ ಆತನೊಂದಿಗೆ ತೆರಳಿದ್ದ ಬಾಲಕರೇ ಸೈಕಲ್‌ ಹಾಗೂ ಆತನ ಬಟ್ಟೆಗಳನ್ನೂ ಕ್ವಾರಿಯ ನೀರಲ್ಲಿ ಮುಳುಗಿಸಿದರೇ? ಇಂಥದೊಂದು ಸಂದೇಹ ತಾಲ್ಲೂಕಿನ ಪಾಳೆ ಗ್ರಾಮದ ಕ್ವಾರಿಯ ಸುತ್ತ ರಕ್ಷಣಾ ಕಾರ್ಯಾಚರಣೆ ವೀಕ್ಷಿಸಲು ಸೇರಿದ್ದ ಜನರ ಮನದಲ್ಲಿ ಮೂಡಿತ್ತು.

ಭಾನುವಾರ ಮಧ್ಯಾಹ್ನ ಕ್ರಿಕೆಟ್‌ ಆಡುವುದಾಗಿ ಹೇಳಿ ಗ್ರಾಮದ ಹೊರವಲಯದಲ್ಲಿರುವ ಕ್ವಾರಿಯ ನೀರಲ್ಲಿ ಈಜಲು ಬಂದಿದ್ದ ಛಬ್ಬಿ ಗ್ರಾಮದ ವಿದ್ಯಾಸಾಗರ್‌ ಜೊತೆಗೆ ಸುಮಾರು ಏಳೆಂಟು ಜನ ಗೆಳೆಯರು ಇದ್ದರು.

ಸೈಕಲ್ ತುಳಿಯುತ್ತಲೇ ಇಲ್ಲಿಗೆ ಬಂದಿದ್ದ ಬಾಲಕರು ನೀರಿನಲ್ಲಿ ಸಾಕಷ್ಟು ಈಜಾಡಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ವಿದ್ಯಾಸಾಗರ್‌ ನಾಲ್ಕು ಅಡಿ ಎತ್ತರದ ಕಟ್ಟೆಯಿಂದ ಡೈವ್ ಹೊಡೆದ. ನಂತರ ಮುಳುಗುವುದು ಖಾತ್ರಿಯಾಗುತ್ತಿದ್ದಂತೆಯೇ ಕೈ ಮೇಲೆತ್ತಿ ಸಹಾಯಕ್ಕಾಗಿ ಕೂಗಿಕೊಳ್ಳುವ ಯತ್ನ ಮಾಡಿದ್ದಾನೆ. ಆದರೆ, ನೀರಿಗೆ ಜಿಗಿದು ರಕ್ಷಿಸಲು ಧೈರ್ಯ ಸಾಲದ ಬಾಲಕರು ದೂರದಲ್ಲಿ ನಿಂತೇ ತಮ್ಮ ಪ್ರೀತಿಯ ಗೆಳೆಯ ಮುಳುಗುವುದನ್ನು ಅಸಹಾಯಕ ರಾಗಿ ನೋಡಿದ್ದಾರೆ.

‘ಗೆಳೆಯ ಮುಳುಗಿದ್ದು ಎಲ್ಲಿ ತಮ್ಮನ್ನು ಸುತ್ತಿಕೊಳ್ಳುತ್ತದೋ ಎಂಬ ಆತಂಕ ದಿಂದ ಬಾಲಕರು ವಿದ್ಯಾಸಾಗರನ ಸೈಕಲ್ ಹಾಗೂ ಈಜಲು ತೆರಳುವ ಮುನ್ನ ಕಳೆದು ಇಟ್ಟಿದ್ದ ಚಪ್ಪಲಿ ಹಾಗೂ ಟೀ ಶರ್ಟ್‌ಗಳನ್ನು ನೀರಿಗೆ ಎಸೆದಿರುವುದಾಗಿ ತಿಳಿಸಿದ್ದಾರೆ’ ಎಂದು ಬಾಲಕನ ಸಂಬಂಧಿ ಸೋಮರಾಯಪ್ಪ ಹನುಮಕ್ಕನವರ್‌ ತಿಳಿಸಿದರು.

ಹಲವು ದಿನಗಳಿಂದ ಬರುತ್ತಿದ್ದರು: ಹುಬ್ಬಳ್ಳಿಯ ಜನತಾ ಬಜಾರ್‌ನಲ್ಲಿರುವ ದುರ್ಗಾದೇವಿ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಯಲ್ಲಿ ಓದುತ್ತಿದ್ದ ವಿದ್ಯಾ ಸಾಗರ್‌ ಈಜು ತರಬೇತಿ ಪಡೆಯುತ್ತಿದ್ದ. ‘ಮೂಲತಃ ಛಬ್ಬಿಯವನಾದ ವಿದ್ಯಾಸಾಗರ್‌ ತನ್ನ ಗೆಳೆಯರೊಂದಿಗೆ ಇಲ್ಲಿನ ಕ್ವಾರಿಯಲ್ಲಿ ಈಜಲು ಬರುತ್ತಿದ್ದ’ ಎಂದು ಪಾಳೆ ಗ್ರಾಮದ ಹಿರಿಯರೂ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಬಸನಗೌಡ ಶಿವನಗೌಡ್ರ ಹೇಳಿದರು.

ನೌಕಾನೆಲೆ ತಜ್ಞರಿಂದ ಕಾರ್ಯಾಚರಣೆ

ಭಾನುವಾರ ಹಾಗೂ ಸೋಮವಾರ ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕನನ್ನು ಹೊರಗೆ ತರಲು ಮಾಡಿದ ಪ್ರಯತ್ನ ವಿಫಲವಾದ ಬಳಿಕ ಜಿಲ್ಲಾಡಳಿತವು ಕಾರವಾರದ ಸೀ ಬರ್ಡ್‌ ನೌಕಾನೆಲೆಯ ಸಿಬ್ಬಂದಿಯನ್ನು ಕರೆಸಿದೆ.

ರಾತ್ರಿ ಸ್ಥಳಕ್ಕೆ ಬಂದರಾದರೂ ಕ್ವಾರಿಯ ನೀರು ಸ್ವಚ್ಛವಾಗಿಲ್ಲದಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುವ ಸಂಭವವಿತ್ತು. ಹಾಗಾಗಿ ಇಂದು (ಮಂಗಳವಾರ) ಬೆಳಿಗ್ಗೆ 7.30ಕ್ಕೆ ಕಾರ್ಯಾಚರಣೆ ಆರಂಭಿಸಲಿದ್ದಾರೆ ಎಂದು ಹುಬ್ಬಳ್ಳಿಯ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಕ್ರಿಕೆಟ್‌ ಆಡುವುದಾಗಿ ಹೇಳಿ ಗೆಳೆಯರೊಂದಿಗೆ ಈಜಲು ಬಂದಿದ್ದ. ಈಜಲು ಹೋಗುತ್ತೇನೆ ಎಂದಿದ್ದರೆ ಮನೆಯಲ್ಲಿ ಹೋಗದಂತೆ ತಡೆಯುತ್ತಿದ್ದರು

ಸಂದೀಪ ಹನುಮಕ್ಕನವರ

ಬಾಲಕನ ಸೋದರ ಸಂಬಂಧಿ

ಪ್ರತಿಕ್ರಿಯಿಸಿ (+)