ಸೋಮವಾರ, ಡಿಸೆಂಬರ್ 9, 2019
26 °C

ಕೃಷಿಕರನ್ನು ‘ಜಿಎಸ್‌ಟಿ’ ವ್ಯಾಪ್ತಿಗೆ ತರುವ ಹುನ್ನಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿಕರನ್ನು ‘ಜಿಎಸ್‌ಟಿ’ ವ್ಯಾಪ್ತಿಗೆ ತರುವ ಹುನ್ನಾರ

ಬೆಳಗಾವಿ: ಸಂಸ್ಕರಿತ ಕೃಷಿ ಪದಾರ್ಥಗಳನ್ನು ಜಿಎಸ್‌ಟಿ ಅಡಿ ತರುವ ಮೂಲಕ ಪರೋಕ್ಷವಾಗಿ ರೈತರನ್ನು ತೆರಿಗೆ ವ್ಯಾಪ್ತಿಯಲ್ಲಿ ತರುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಆರೋಪಿಸಿದರು.

ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ಮಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೃಷಿ ಹಾಗೂ ಸಂಸ್ಕರಿತ ಕೃಷಿ ಉತ್ಪನ್ನಗಳನ್ನು ಈ ಮೊದಲು ತೆರಿಗೆ ವ್ಯಾಪ್ತಿಯಿಂದ ಹೊರಗೆ ಇಡಲಾಗಿತ್ತು. ಹೈನುಗಾರಿಕೆ ಮಾಡುವ ರೈತರು ತಯಾರಿಸುವ ಮೊಸರು, ತುಪ್ಪದ ಮೇಲೆ ಶೇ 5ರಷ್ಟು ತೆರಿಗೆ ಹೇರಲಾಗಿದೆ. ಯಾವುದಾದರೂ ಒಬ್ಬ ರೈತ ತಾನು ಬೆಳೆದ ಅಕ್ಕಿಯನ್ನು ಪ್ಯಾಕ್‌ ಮಾಡಿ ಮಾರಾಟ ಮಾಡಲು ಹೋದರೆ ಅದರ ಮೇಲೂ ತೆರಿಗೆ ಹಾಕಲಾಗಿದೆ. ಅಡಿಕೆ ಮೇಲೂ ತೆರಿಗೆ ಹಾಕಲಾಗಿದೆ ಎಂದು ಅವರು ಟೀಕಿಸಿದರು.

ಗದ್ದೆ– ಹೊಲದಲ್ಲಿ ದುಡಿಯುವವರು ಮಾತ್ರ ರೈತರು. ಮೊಸರು, ತುಪ್ಪ ತಯಾರಿಸುವವರು, ಬೆಲ್ಲ ತಯಾರಿಸುವವರು, ಅಡಿಕೆ ಬೆಳೆಯುವವರು ರೈತರಲ್ಲ ಎಂದು ಕೇಂದ್ರ ಸರ್ಕಾರ ತೀರ್ಮಾನ ಮಾಡಿದಂತಿದೆ. ಈ ನಿಯಮವನ್ನು ಬದಲಾಯಿಸಿ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದಂತೆ ಎಲ್ಲ ವಹಿವಾಟುಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಒತ್ತಾಯಿಸಿದರು.

ಪಕ್ಕದ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕೇಂದ್ರದಲ್ಲೂ ಬಿಜೆಪಿ ನೇತೃತ್ವದ ಸರ್ಕಾರವಿದೆ. ರಾಜ್ಯದ ಬಿಜೆಪಿ ಸಂಸದರು ಹಾಗೂ ಮುಖಂಡರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಕಳಸಾ– ಬಂಡೂರಿ ನಾಲಾ ಜೋಡಣೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಇತ್ತೀಚೆಗೆ ರೂಪಿಸಿರುವ ಗೋ ಹತ್ಯೆ ನಿಷೇಧ ಕಾಯ್ದೆಯು ರೈತರ ಆರ್ಥಿಕ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹದ್ದು. ಇಂತಹ ಕಾನೂನುಗಳನ್ನು ರೂಪಿಸುವ ಮೊದಲು ರೈತರ ಜೊತೆ ಚರ್ಚಿಸಬೇಕಾಗಿತ್ತು. ಮನಸ್ಸಿಗೆ ಬಂದಂತೆ ಕಾನೂನುಗಳನ್ನು ರೂಪಿಸಲು ಮುಂದಾದರೆ,  ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

ಬೇಡಿಕೆ: ಕಬ್ಬಿನ ಬಾಕಿ ಬಿಲ್‌ ಪಾವತಿಸಬೇಕು. ಮುಂಗಾರು– ಹಿಂಗಾರು ಬೆಳೆ ಪರಿಹಾರವನ್ನು ನೀಡಬೇಕು. ಫಸಲ್‌ ಬಿಮಾ ಯೋಜನೆಯ ಹಣ ನೀಡಬೇಕು. ರಾಷ್ಟ್ರೀಯ ಬ್ಯಾಂಕುಗಳು ಸೇರಿದಂತೆ ಎಲ್ಲ ಬ್ಯಾಂಕುಗಳಲ್ಲಿರುವ ರೈತರ  ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಂಸದ ಸುರೇಶ ಅಂಗಡಿ ಮಾತನಾಡಿ, ‘ಕಳಸಾ– ಬಂಡೂರಿ ನಾಲಾ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ ರೈತರ ನಿಯೋಗವನ್ನು ಕೇಂದ್ರ ಸರ್ಕಾರದ ಬಳಿ ಕರೆದೊಯ್ಯಲು ಸಿದ್ಧನಿದ್ದೇನೆ. ಯೋಜನೆ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಎನ್‌.ಜಯರಾಮ್‌ ಮಾತನಾಡಿ, ‘ಮುಂಗಾರು ಬೆಳೆ ನಷ್ಟದ ಪರಿಹಾರವನ್ನು ಬಹುತೇಕ ಎಲ್ಲ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಹಿಂಗಾರು ಪರಿಹಾರವನ್ನು ನೀಡಲು ಕ್ರಮಕೈಗೊಳ್ಳಲಾಗುತ್ತಿದೆ’ ಎಂದರು.

‘ಕಬ್ಬಿನ ಬಿಲ್‌ ಬಾಕಿ ಇರುವ ರೈತರು ವೈಯಕ್ತಿಕವಾಗಿ ನಮಗೆ ದೂರು ನೀಡಿದರೆ, ಇದರ ಆಧಾರದ ಮೇಲೆ ಸಕ್ಕರೆ ಕಾರ್ಖಾನೆ ವಿರುದ್ಧ ಪ್ರಕರಣ ದಾಖಲಿಸುತ್ತೇವೆ’ ಎಂದು ಆಶ್ವಾಸನೆ ನೀಡಿದರು.

ಕ್ರಿಮಿನಾಶಕ ಪ್ರದರ್ಶನ

ಸಂಪೂರ್ಣ ಕೃಷಿ ಸಾಲ ಮನ್ನಾ ಸೇರಿದಂತೆ ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೆಲವು ರೈತರು ಬೆದರಿಕೆ ಹಾಕಿದ ಪ್ರಸಂಗ ನಡೆಯಿತು.  ಕ್ರಿಮಿನಾಶಕ ಡಬ್ಬಿ ಹೊರತೆಗೆಯುತ್ತಿದ್ದಂತೆ ಅಕ್ಕಪಕ್ಕದ ರೈತರು ತಡೆದರು. ಕ್ರಿಮಿನಾಶಕ ಡಬ್ಬಿಯನ್ನು ಕಸಿದುಕೊಂಡರು.

ಪ್ರತಿಕ್ರಿಯಿಸಿ (+)