ಶುಕ್ರವಾರ, ಡಿಸೆಂಬರ್ 6, 2019
17 °C

ಉತ್ತಮ ಮಳೆ: ಕೃಷಿ ಕಾರ್ಯ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತಮ ಮಳೆ: ಕೃಷಿ ಕಾರ್ಯ ಚುರುಕು

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಭಾನುವಾರ ರಾತ್ರಿಯಿಂದ ಉತ್ತಮ ಮಳೆಯಾಗುತ್ತಿದೆ. ತಲಕಾವೇರಿ, ಭಾಗಮಂಡಲ, ನಾಪೋಕ್ಲು, ಮಡಿಕೇರಿಯಲ್ಲಿ ಸೋಮವಾರವೂ ದಿನವಿಡೀ ಬಿಡುವು ಕೊಟ್ಟು ಧಾರಾಕಾರ ಮಳೆ ಸುರಿಯಿತು.

ಸೋಮವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 15.09 ಮಿ.ಮೀ ಮಳೆಯ ಪ್ರಮಾಣ ದಾಖಲಾಗಿದೆ. ಕಳೆದ ವರ್ಷ ಇದೇ ದಿನ 21.66 ಮಿ.ಮೀ ಮಳೆ ಸುರಿದಿತ್ತು. ಜನವರಿಯಿಂದ ಇಲ್ಲಿಯವರೆಗೆ 743.48 ಮೀ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 756.62 ಮಿ.ಮೀ ಮಳೆಯಾಗಿತ್ತು.  ಮಡಿಕೇರಿ ತಾಲ್ಲೂಕಿನಲ್ಲಿ 26.05, ವಿರಾಜಪೇಟೆ ತಾಲ್ಲೂಕಿನಲ್ಲಿ 12.4 ಮಿ.ಮೀ, ಸೋಮವಾರಪೇಟೆ ತಾಲ್ಲೂಕಿನಲ್ಲಿ 6.83 ಮಿ.ಮೀ ಮಳೆಯಾಗಿದೆ. 

ಹೋಬಳಿವಾರು ಮಳೆ: ಮಡಿಕೇರಿ ಕಸಬಾ 14.2, ನಾಪೋಕ್ಲು 18, ಸಂಪಾಜೆ 29, ಭಾಗಮಂಡಲ 43, ವಿರಾಜಪೇಟೆ ಕಸಬಾ 11.2, ಹುದಿಕೇರಿ 28, ಶ್ರೀಮಂಗಲ 9.8, ಪೊನ್ನಂಪೇಟೆ 9.4, ಅಮ್ಮತ್ತಿ 12, ಬಾಳೆಲೆ 4, ಸೋಮವಾರಪೇಟೆ ಕಸಬಾ 6.8, ಶನಿವಾರಸಂತೆ 4, ಶಾಂತಳ್ಳಿ 15.2, ಕೊಡ್ಲಿಪೇಟೆ 11.4, ಕುಶಾಲನಗರ 1.6, ಸುಂಟಿಕೊಪ್ಪ 2 ಮಿ.ಮೀ ಮಳೆ ಪ್ರಮಾಣ ದಾಖಲಾಗಿದೆ.

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಸೋಮವಾರ 2,825.16 ಅಡಿ ನೀರು ಸಂಗ್ರಹಗೊಂಡಿದೆ. ಕಳೆದ ವರ್ಷ ಇದೇ ಅವಧಿಗೆ 2,842.35 ಅಡಿ ನೀರು ಸಂಗ್ರಹಗೊಂಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 17.19 ಅಡಿ ನೀರಿನ ಸಂಗ್ರಹ ಕಡಿಮೆಯಿದೆ. ಸೋಮವಾರಪೇಟೆ ಸೇರಿದಂತೆ ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಒಳಹರಿವು 467 ಕ್ಯುಸೆಕ್‌ಗೆ ಕುಸಿದಿದೆ.

ಬಿರುಸಿನ ಮಳೆ 

ನಾಪೋಕ್ಲು: ಹೋಬಳಿ ವ್ಯಾಪ್ತಿಯ ವಿವಿಧೆಡೆ ಸೋಮವಾರ ಮಧ್ಯಾಹ್ನ ಮಳೆ ರಭಸದಿಂದ ಸುರಿಯಿತು. ಸಮೀಪದ ನೆಲಜಿ, ಬಲ್ಲಮಾವಟಿ, ಭಾಗಮಂಡಲ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಬಲ್ಲಮಾವಟಿ ಗ್ರಾಮದಲ್ಲಿ ಮುಖ್ಯರಸ್ತೆಗೆ ಅಡ್ಡಲಾಗಿ ಮರವೊಂದು ಮುರಿದು ಬಿದ್ದ ಪರಿಣಾಮವಾಗಿ ಕೆಲ ಕಾಲ ಭಾಗಮಂಡಲ–ನಾಪೋಕ್ಲು ನಡುವಿನ ಸಂಪರ್ಕ ಕಡಿತಗೊಂಡಿತು. ಪಟ್ಟಣದ ಸಂತೆ ಮುಗಿಸಿ ವಿವಿಧ ಗ್ರಾಮಗಳಿಗೆ ತೆರಳಬೇಕಿದ್ದ ಗ್ರಾಮಸ್ಥರು ಪರದಾಡುವಂತಾಯಿತು.

ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ವಿವಿಧೆಡೆ ಭತ್ತದ ಸಸಿ ಮಡಿಗಳು ಸಿದ್ಧಗೊಳ್ಳುತ್ತಿವೆ. ಪಟ್ಟಣದ ಹೊರವಲಯದ ಭತ್ತದ ಗದ್ದೆಯೊಂದರಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಗದ್ದೆಗಳಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಗೊಳ್ಳದ ಕಾರಣ ಬಿತ್ತನೆ ಈ ಬಾರಿ ತಡವಾಗಿದೆ. ತುಂಗ ಹಾಗೂ ಹೇಮಾವತಿ ತಳಿಯ ಭತ್ತವನ್ನು ಬಿತ್ತನೆ ಮಾಡುತ್ತಿದ್ದು ನಾಟಿ ಕಾರ್ಯವನ್ನು ತಡವಾಗಿ ಆರಂಭಿಸುವುದಾಗಿ ರೈತರು ತಿಳಿಸಿದರು. ನೆಲಜಿ ಕಕ್ಕಬ್ಬೆ ಭಾಗಗಳಲ್ಲಿ ಯಂತ್ರಗಳನ್ನು ಬಳಸಿ ಉಳುಮೆ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಅಲ್ಲಲ್ಲಿ ವಿದ್ಯುತ್‌ ತಂತಿಗಳ ಮೇಲೆ ಮರ ಮುರಿದು ಬಿದ್ದ ಪರಿಣಾಮ ವಿದ್ಯುತ್‌ ವ್ಯತ್ಯಯವಾಗಿದೆ.

ಸೆಸ್ಕ್‌ ಕಚೇರಿಗೆ ಮುತ್ತಿಗೆ

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿರುವ ಕಾರಣ ಈ ವಿಭಾಗದ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಸೆಸ್ಕ್‌ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಇಲಾಖೆ ವಿರುದ್ಧ ದಿಕ್ಕಾರ ಕೂಗಿದ ಪ್ರತಿಭಟನಾಕಾರರು ಸೆಸ್ಕ್‌ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ಅವರ ಪ್ರತಿನಿಧಿಯಾಗಿ ಬಂದ ಎಂಜಿನಿಯರ್ ದೊಡ್ಡಮನಿ ಅವರೊಂದಿಗೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ , ‘ಈ ವಿಭಾಗದಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗಿದೆ.

ಇದನ್ನು ಪರಿಹರಿಸಲು ಇಲಾಖೆ ವಿಫಲವಾಗಿದೆ. ಬೆಟ್ಟ–ಗುಡ್ಡ ಪ್ರದೇಶದಲ್ಲಿ ಪುರುಷ ಎಂಜಿನಿಯರ್‌ ಬದಲಿಗೆ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಲೈನ್‌ಮನ್‌ಗಳು ಇಲಾಖೆಯ ಕೆಲಸವನ್ನು ಬಿಟ್ಟು ಖಾಸಗಿ ಕೆಲಸ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ’ ಎಂದು ಆರೋಪಿಸಿದರು.

ದೊಡ್ಡಮನಿ ಪ್ರತಿಕ್ರಿಯಿಸಿ, ‘ಎಂಜಿನಿಯರ್‌ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ. ಒಂದೂವರೆ ತಿಂಗಳ ಒಳಗೆ ಇಲ್ಲಿಗೆ ನೂತನ ಎಂಜಿನಿಯರ್ ನೇಮಿಸಲು ಕ್ರಮ ಕೈಗೊಳ್ಳಲಾಗುವುದು. ಇಲಾಖೆಯ ಲೈನ್‌ಮನ್‌ಗಳು ಖಾಸಗಿ ಕಾಮಗಾರಿಯಲ್ಲಿ ತೊಡಗಿಕೊಂಡರೆ ಅವರ ಬಗ್ಗೆ ಲಿಖಿತವಾಗಿ ದೂರು ನೀಡಿ. ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ವಿಭಾಗದ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸಲಾಗುವುದು’ ಎಂದರು.  

ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಶಿವಚಾಳಿಯಂಡ ಜಗದೀಶ್, ಪಾಡಿಯಮ್ಮಂಡ ಮನು ಮಹೇಶ್, ಅರೆಯಡ ವಿಠಲ್ ಮೊಣ್ಣಪ್ಪ, ಕಂಗಾಂಡ ಜಾಲಿ ಪೂವಪ್ಪ, ಬಿ.ಎಂ.ಪ್ರತೀಪ, ತಿರೋಡಿರ ರಾಜ, ಚೀಯಕಪೂವಂಡ ಸುರಿ, ಮಣವಟ್ಟಿರ ಪೊನ್ನು ಪೊನ್ನಪ್ಪ, ಮಣವಟ್ಟಿರ ಡಿಕ್ಕ ಮುತ್ತಣ್ಣ, ಅಜ್ಜೆಟ್ಟಿರ ಬೋಪಣ್ಣ, ಅಪ್ಪನೆರವಂಡ ಕಿರಣ್, ಶಿವಚಾಳಿಯಂಡ ಕಿಶೋರ್, ಮಂಡೀರ ರಾಜಪ್ಪ ಇದ್ದರು.

ಪ್ರತಿಕ್ರಿಯಿಸಿ (+)