ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಳಂಬ ಕಾಮಗಾರಿಯನ್ನೂ ಗಮನಿಸಿ

Last Updated 4 ಜುಲೈ 2017, 11:58 IST
ಅಕ್ಷರ ಗಾತ್ರ

ಚಾಮರಾಜನಗರ: ‘ಸಂಸದ ಆರ್‌. ಧ್ರುವನಾರಾಯಣ ಅವರೇ, ಚೆನ್ನಾಗಿ ನಡೆದಿರುವ ಕಾಮಗಾರಿಗಳನ್ನು ಮಾತ್ರ ವೀಕ್ಷಣೆ ಮಾಡುವುದನ್ನು ಬಿಟ್ಟು ವಿಳಂಬವಾಗಿರುವ ಯುಜಿಡಿ ಕಾಮಗಾರಿಗಳತ್ತಲೂ ಗಮನಹರಿಸಿ’ ಎಂದು  ಮಾಜಿ ಶಾಸಕ ಸಿ.ಗುರುಸ್ವಾಮಿ ವ್ಯಂಗ್ಯವಾಡಿದರು.

‘ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಚಾಮುಲ್‌ ಕಟ್ಟಡ ನಿರ್ಮಾಣ ಕಾಮಗಾರಿ ಉತ್ತಮವಾಗಿದೆ. ಸಂಸದರು ಅವುಗಳ ಪರಿಶೀಲನೆ ಮಾಡುತ್ತಿರುವುದು ಸಂತಸದ ವಿಷಯ. ಅದರಂತೆ ಜಿಲ್ಲಾ ಕೇಂದ್ರದಲ್ಲಿ 6 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಯುಜಿಡಿ ಕಾಮಗಾರಿಯನ್ನೂ ಪರಿಶೀಲನೆ ಮಾಡಬೇಕು’ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ₹ 50 ಕೋಟಿ ವಿಶೇಷ ಅನುದಾನ ನೀಡಿದ್ದಾರೆ. ಅದನ್ನು ಯಾಕೆ ಬಳಸುತ್ತಿಲ್ಲ. ಯುಜಿಡಿ ಕಾಮಗಾರಿ ವಿಳಂಬವಾಗುತ್ತಿದೆ. ವ್ಯವಸ್ಥಿತವಾಗಿ ಕಾಮಗಾರಿ ನಡೆಯುತ್ತಿಲ್ಲ. ಈ ಬಗ್ಗೆ ವಿಚಾರಿಸಲು ಗುತ್ತಿಗೆದಾರರನ್ನು ಕರೆಯಿಸಲು ನಿಮಗೆ ಶಕ್ತಿಯಿಲ್ಲವೇ ಎಂದು ಪ್ರಶ್ನಿಸಿದರು.

ಮಾಹಿತಿ ನೀಡಿ: ನಗರೋತ್ಥಾನ ಯೋಜನೆಯಡಿ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ. 2012ರಿಂದ ಪ್ರತಿವರ್ಷ ಬಿಡುಗಡೆಯಾದ ಅನುದಾನ ಎಷ್ಟು ಅದನ್ನು ಯಾವ ಕಾಮಗಾರಿ ವೆಚ್ಚ ಮಾಡಲಾಗಿದೆ ಎಂಬುದರ ಬಗ್ಗೆ ಶಾಸಕರು ಹಾಗೂ ಸಂಸದರು ಸಂಪೂರ್ಣ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ರಾಜೀನಾಮೆ ಹಿಂಪಡೆಯಲು ಮನವಿ: ‘ಕೊಳ್ಳೇಗಾಲ ನಗರಸಭೆ ಸದಸ್ಯೆ ಆರ್. ಲಕ್ಷ್ಮಿ ಅವರು ತಮ್ಮ ವಾರ್ಡ್‌ನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸದ ಕಾರಣ ಏಕಾಂಗಿ    ಪ್ರತಿಭಟನೆ ನಡೆಸಿದ್ದರು. ಅವರ ಧೈರ್ಯವನ್ನು ನಾನು ಗೌರವಿಸುತ್ತೇನೆ. ಲಕ್ಷ್ಮಿ ಅವರು ರಾಜೀನಾಮೆ ಹಿಂಪಡೆಯಬೇಕು’ ಎಂದು ಮನವಿ ಮಾಡಿದರು.ಜಿಲ್ಲಾಧಿಕಾರಿ ಅವರು ಈ ಸಂಬಂಧ ನಗರಸಭೆ ಪೌರಾಯುಕ್ತರು ಹಾಗೂ ಸದಸ್ಯರ ಸಭೆ ನಡೆಸಿ ಪರಿಶೀಲಿಸಿ ಲಕ್ಷ್ಮಿ ಅವರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

ಚಾಮುಲ್‌ ಚುನಾವಣೆ: ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ತನ್ನ ಧ್ಯೇಯ ಎಂದು ಘೋಷಿಸಿಕೊಂಡಿರುವ ಕಾಂಗ್ರೆಸ್‌, ಚಾಮುಲ್‌ ಚುನಾವಣೆಯಲ್ಲಿ ಒಂದು ಸ್ಥಾನವನ್ನಾದರೂ ಹಿಂದುಳಿದ ವರ್ಗದವರಿಗೆ ಆಗಲಿ ಅಥವಾ ಎಸ್‌.ಸಿ, ಎಸ್‌.ಟಿ ಸಮುದಾಯಕ್ಕಾಗಲಿ ನೀಡಿಲ್ಲ. ಅವರಿಗೆ ಹಿಂದುಳಿದ ವರ್ಗದವರ ಮೇಲೆ ಕಾಳಜಿಯಿಲ್ಲ ಎಂದು ದೂರಿದರು.

ಹಣ ಬಲದಿಂದ ಚಾಮುಲ್‌ ಚುನಾವಣೆಯಲ್ಲಿ ಕಾಂಗ್ರೆಸ್‌ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಿವಕುಮಾರ್, ಪ್ರಸಾದ್, ಪ್ರಸನ್ನ, ಮಹೇಶ್‌ ಹಾಜರಿದ್ದರು.

ರಸ್ತೆ ವಿಸ್ತರಣೆಗೆ ಹಿಂದೇಟು..!
ಚಾಮರಾಜನಗರ: ಮಾಜಿ ಸಚಿವ ಎಚ್.ಎಸ್‌. ಮಹದೇವಪ್ರಸಾದ್‌ ಅವರು ನಗರದ ನ್ಯಾಯಾಲಯದ ರಸ್ತೆಯನ್ನು 60 ಅಡಿ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದ್ದರು. ಆದರೆ, ಶಾಸಕರು 50 ಅಡಿ ವಿಸ್ತರಿಸಲಾಗುವುದು ಎಂದು ರಸ್ತೆಗೆ ಭೂಮಿಪೂಜೆ ನೆರವೇರಿಸಿದ್ದಾರೆ ಎಂದು ಗುರುಸ್ವಾಮಿ ದೂರಿದರು.

ಭವಿಷ್ಯದ ಅನುಕೂಲತೆಗಾಗಿ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ, ಏಕಾಏಕಿ ರಸ್ತೆ ವಿಸ್ತರಣೆಯನ್ನು ಕಡಿತಗೊಳಿಸಲು ಕಾರಣವೇನು? ಯಾವುದಾದರೂ ಒತ್ತಡವಿದೆಯೇ? ಈ ಬಗ್ಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಜನರಿಗೆ ತಿಳಿಸಬೇಕು. ಯಾವುದೇ ಒತ್ತಡವಿದ್ದರೂ ಸಾರ್ವಜನಿಕರ ಹಿತಕ್ಕಾಗಿ ರಸ್ತೆಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ನ್ಯಾಯಾಲಯದ ರಸ್ತೆ ಅಭಿವೃದ್ಧಿಗೆ ₹ 8 ಕೋಟಿ ಅನುದಾನ ಮೀಸಲಿಡಲಾಗಿದೆ. ಆದರೆ, ಶಾಸಕರು ಇನ್ನೂ ₹ 4 ಕೋಟಿ ಹೆಚ್ಚುವರಿಯಾಗಿ ನೀಡುತ್ತೇನೆ ಎಂದು ಮಾಧ್ಯಮದ ಮೂಲಕ ತಿಳಿಸಿದ್ದಾರೆ. ಹೆಚ್ಚುವರಿ ಅನುದಾನ ಏಕೆ ನೀಡಬೇಕು ಎಂದು ವಿವರಣೆ ನೀಡಿ ಎಂದು ಆಗ್ರಹಿಸಿದರು.

ಅನುದಾನ ದುರುಪಯೋಗ– ದೂರು: ಪೌರಾಯುಕ್ತರು ನಗರದ ಸ್ವಚ್ಛತೆ ಹಾಗೂ ಅಭಿವೃದ್ಧಿ ಕಾಮಗಾರಿಯ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಕೆಲವು ಭಾಗದಲ್ಲಿ 300 ಅಡಿ ಕೊಳವೆಬಾವಿ ಕೊರೆಯಿಸಿ 600 ಅಡಿಯ ಲೆಕ್ಕ ನೀಡಿ ಹಣ ತೆಗೆದುಕೊಳ್ಳಲಾಗುತ್ತಿದ್ದು,  ಅನುದಾನ ದುರುಪಯೋಗವಾಗಿದೆ. ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT