ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷ್ಯ: ಹೂಳು ತುಂಬಿದ ನಾಗಾವಿ ಚೆಕ್‌ ಡ್ಯಾಂ

Last Updated 4 ಜುಲೈ 2017, 7:46 IST
ಅಕ್ಷರ ಗಾತ್ರ

ಚಿತ್ತಾಪುರ: ಇಲ್ಲಿನ ಐತಿಹಾಸಿಕ ಪ್ರಸಿದ್ಧ ಕ್ಷೇತ್ರ ನಾಗಾವಿಯ ಕುರಿತು ಸ್ಥಳೀಯ, ತಾಲ್ಲೂಕು, ಜಿಲ್ಲಾ ಆಡಳಿತಕ್ಕೆ ಎಷ್ಟೊಂದು ನಿರ್ಲಕ್ಷ್ಯವಿದೆ ಎನ್ನುವುದಕ್ಕೆ ಇಲ್ಲಿಗೆ ಬಂದು ನೋಡಿದರೆ ಇಲ್ಲಿನ ವಾಸ್ತವ ಸ್ಥಿತಿಯೆ ತನ್ನ ಅನಾಥ ಕಥೆ ಬಿಚ್ಚಿಡುತ್ತದೆ.

ಈ ಹಿಂದೆ ನಂದಿ ಬಾವಿಯ ಪಕ್ಕದಲ್ಲೇ ನಿರ್ಮಾಣ ಮಾಡಿದ್ದ ಚೆಕ್‌ ಡ್ಯಾಂ ಸಂಪೂರ್ಣ ಹೂಳಿನಿಂದ ತುಂಬಿ ಮುಚ್ಚಿ ಹೋಗಿದೆ. ಜನರಿಗೆ ಇಲ್ಲೊಂದು ಚೆಕ್‌ ಡ್ಯಾಂ ಇದೆ ಎಂದು ಗುರುತು ಹಿಡಿಯಲಾಗದಷ್ಟು ಅಲ್ಲಿ ಮಣ್ಣು ತುಂಬಿ ಅಪಾರ ಗಿಡಗಂಟಿ ಬೆಳೆದಿವೆ. ಅದಕ್ಕೆ ಮರುಜೀವ ನೀಡಬೇಕಾದ ಅಧಿಕಾರಿಗಳಿಂದ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ.

‘ನಾಗಾವಿ ಪರಿಸರದಲ್ಲಿ  ಲಭ್ಯವಿರುವ ಜಲಸಂಪನ್ಮೂಲ ಬಳಿಸಿಕೊಂಡು ಹಳೆಯ ಈ ಚೆಕ್‌ ಡ್ಯಾಂ ಅನ್ನು ಚಿಕ್ಕ ಕೆರೆಯಾಗಿ ಅಭಿವೃದ್ಧಿಮಾಡಲು ಅವಕಾಶವಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ, ಭಕ್ತರಿಗೆ ಅನುಕೂಲ ಮಾಡಿಕೊಡಲು ಸಣ್ಣದಾದ ಉದ್ಯಾನ ನಿರ್ಮಾಣಕ್ಕೆ ಅವಕಾಶವಿದೆ’ ಎನ್ನುತ್ತಾರೆ ಸ್ಥಳೀಯರು.

‘ಈಗಿರುವ ಚೆಕ್‌ ಡ್ಯಾಂ ಹಿಂದೆ ಅಪಾರ ಪ್ರಮಾಣದ ಖಾಲಿ ಜಾಗವಿದೆ. ಸಿದ್ಧೇಶ್ವರ ಮಠದ ಬಳಿಯ ಈಶ್ವರ ಮಂದಿರ, ಜೈನ ಬಸದಿ, ನಂದಿಬಾವಿ, ಕರಿ ಮಸೀದಿ, ಈರಪ್ಪಯ್ಯ ಗುಡಿವರೆಗೆ ನೀರು ನಿಲ್ಲಿಸುವ ವ್ಯವಸ್ಥೆ ಮಾಡಲು ಅವಕಾಶವಿದೆ. ಅದನ್ನು ಪರಿಶೀಲನೆ ಮಾಡಿ ಭೂಮಾಪನಾ ಇಲಾಖೆಯಿಂದ ಭೂ ಅಳತೆ ಮಾಡಿಸಿ ಚಿಕ್ಕ ಕೆರೆಯಾಗಿ ಅಭಿವೃದ್ಧಿ ಮಾಡಲು ಆಡಳಿತ ಕ್ರಮ ಕೈಗೊಳ್ಳಬೇಕು’ ಎಂಬುದು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಮನವಿಯಾಗಿದೆ.

‘ಶೈಕ್ಷಣಿಕ ಪ್ರವಾಸಕ್ಕೆಂದು ಇಲ್ಲಿಗೆ ಭೇಟಿ ನೀಡುವ, ರಾಜ್ಯದ ಬೇರೆ ಬೇರೆ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ, ಶಿಕ್ಷಕರಿಗೆ, ಇತಿಹಾಸ ಅಧ್ಯಯನಕ್ಕೆಂದು ಬರುವ ಇತಿಹಾಸ ಸಂಶೋಧಕರಿಗೆ ನಿಸರ್ಗದ ಮಡಿಲಲ್ಲಿ ಒಂದು ಕಡೆಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಡೀ ನಾಗಾವಿಯಲ್ಲಿ ಇಲ್ಲ. ಈ ಕೊರತೆಯನ್ನು ನೀಗಿಸಲು ಚೆಕ್‌ ಡ್ಯಾಂ ಬಳಿ ಪರಿಸರ ಸೂಕ್ತ ಸ್ಥಳವಾಗಿದೆ’ ಎನ್ನುತ್ತಾರೆ ಶರಣಪ್ಪ ಮರತೂರು.

‘ಹೂಳು ತುಂಬಿದ ಚೆಕ್‌ ಡ್ಯಾಂ ಸ್ವಚ್ಛತೆ ಮಾಡಿಸಿ ನೀರು ನಿಲ್ಲುವಂತೆ ಮಾಡಿದರೆ ಇಲ್ಲಿಗೆ ಬರುವ ಸಾವಿರಾರು ಜನರಿಗೆ ತುಂಬಾ ಉಪಯುಕ್ತವಾಗಲಿದೆ. ಚೆಕ್‌ ಡ್ಯಾಂ ಪಕ್ಕದಲ್ಲಿ ಅರಣ್ಯ ಇಲಾಖೆಯ ನೆರವಿನಿಂದ ಗಿಡ, ಮರಗಳನ್ನು ಬೆಳೆಸಿದರೆ ಜನರಿಗೆ ಕುಳಿತುಕೊಳ್ಳಲು, ದಣಿವಾರಿಸಿಕೊಳ್ಳಲು, ಅನುಕೂಲ ಆಗಲಿದೆ ಎಂಬುದು ಸ್ಥಳೀಯರ
ಅಭಿಮತ.

‘ನಾಗಾವಿ ಕ್ಷೇತ್ರದ ಬಗ್ಗೆ ರಾಜ್ಯ ಪುರಾತತ್ವ ಇಲಾಖೆಯು ನಿರ್ಲಕ್ಷ್ಯ ವಹಿಸಿದ್ದರಿಂದ ಸರ್ಕಾರಿ ಭೂಮಿ ಅಕ್ರಮವಾಗಿ ಕಬಳಿಸುವ, ಒತ್ತುವರಿ ಮಾಡುವ ಕೆಲಸ ನಡೆಯುತ್ತಿದೆ. ಸರ್ಕಾರದ ಅಧೀನಕ್ಕೆ ಒಳ್ಳಪಟ್ಟಿರುವ ನಾಗಾವಿ ಕ್ಷೇತ್ರದ ಅಧಿಕೃತ ಜಾಗದ ಕುರಿತು ಸಮಗ್ರವಾಗಿ ಭೂ ಅಳತೆ ಮಾಡಿಸಬೇಕು. ಇಡೀ ನಾಗಾವಿ ಕ್ಷೇತ್ರದ ಭೂಪಟ ಸಿದ್ಧ ಮಾಡಿ ಸಾರ್ವಜನಿಕರ ಅವಗಾಹನೆಗೆ ಅಳವಡಿಸಬೇಕು. ಭೂ ಒತ್ತುವರಿ ಮಾಡದಂತೆ ಅಲ್ಲಲ್ಲಿ ಎಚ್ಚರಿಕೆಯ ನಾಮಫಲಕ ಹಾಕಬೇಕು’ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಮಲ್ಲಿಕಾರ್ಜುನ ಎಚ್‌.ಮುಡಬೂಳಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT