ಶುಕ್ರವಾರ, ಡಿಸೆಂಬರ್ 13, 2019
20 °C

ತೆರಿಗೆ ಏರಿಕೆ: ಚಿನ್ನಾಭರಣ ಪ್ರಿಯರಿಗೆ ನಿರಾಸೆ

ಸುಭಾಸ ಎಸ್. ಮಂಗಳೂರ Updated:

ಅಕ್ಷರ ಗಾತ್ರ : | |

ತೆರಿಗೆ ಏರಿಕೆ: ಚಿನ್ನಾಭರಣ ಪ್ರಿಯರಿಗೆ ನಿರಾಸೆ

ಕಲಬುರ್ಗಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ಚಿನ್ನಾಭರಣಗಳ ಮೇಲಿನ ತೆರಿಗೆ ಶೇ 2ರಷ್ಟು ಏರಿಕೆಯಾಗಿದ್ದು, ಇದರಿಂದಾಗಿ ಚಿನ್ನಾಭರಣ ಪ್ರಿಯರು ನಿರಾಸೆ ಅನುಭವಿಸುವಂತಾಗಿದೆ.

ಚಿನ್ನಾಭರಣಗಳ ಮೇಲೆ ಈ ಹಿಂದೆ ಶೇ 1ರಷ್ಟು ತೆರಿಗೆ ನಿಗದಿಪಡಿಸಲಾಗಿತ್ತು. ಈಗ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಶೇ 1.5 ಮತ್ತು ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ಶೇ 1.5 ಸೇರಿ ಒಟ್ಟು ಶೇ 3ರಷ್ಟು ತೆರಿಗೆ ನಿಗದಿಪಡಿಸಲಾಗಿದೆ.

ಹೆಚ್ಚುವರಿ ಶೇ 2ರಷ್ಟು ತೆರಿಗೆ ಗ್ರಾಹಕರ ಮೇಲೆ ಬೀಳಲಿದ್ದು, ಇದರಿಂದ ಚಿನ್ನಾಭರಣ ಮಾರುಕಟ್ಟೆಯ ವ್ಯಾಪಾರ, ವಹಿವಾಟಿಗೆ ಹಿನ್ನಡೆಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಜಿಎಸ್‌ಟಿ ಜಾರಿಯಿಂದ ಚಿನ್ನಾಭರಣ ಮಾರುಕಟ್ಟೆಯಲ್ಲಿ ಶೇ 20ರಿಂದ 30ರಷ್ಟು ವಹಿವಾಟು ಕುಸಿದಿರುವುದು ವ್ಯಾಪಾರಿಗಳ ಚಿಂತೆ ಹೆಚ್ಚಿಸಿದೆ. ಶೇ 1ರಷ್ಟಿದ್ದ ತೆರಿಗೆ ಶೇ 3ಕ್ಕೆ ಏರಿಕೆ ಆಗಿರುವುದರಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುವಂತಾಗಿದೆ.

‘ಜಿಎಸ್‌ಟಿ ಜಾರಿ ನಂತರ ಚಿನ್ನದ ದರದಲ್ಲಿ 10 ಗ್ರಾಂ (ಒಂದು ತೊಲ)ಗೆ ₹500 ರಿಂದ ₹600 ಇಳಿಕೆಯಾಗಿದೆ. ಇನ್ನೊಂದೆಡೆ 10 ಗ್ರಾಂ ಚಿನ್ನಕ್ಕೆ ಸರಾಸರಿ ₹300 ತೆರಿಗೆ ಪಾವತಿಸಬೇಕಿದ್ದ ಗ್ರಾಹಕರು ಇದೀಗ ₹900 ಪಾವತಿಸುವಂತಾಗಿದೆ. ಇಲ್ಲಿ ಹೆಚ್ಚಳವಾಗಿರುವ ₹600 ತೆರಿಗೆಯು, ಚಿನ್ನದ ದರ ಇಳಿಕೆಗೆ ಹೊಂದಾಣಿಕೆ ಆಗುತ್ತಿರುವುದರಿಂದ ಅಂತಹ ವ್ಯತ್ಯಾಸ ಕಂಡು ಬರುತ್ತಿಲ್ಲ. ಆದರೆ ಚಿನ್ನದ ದರ ಏರಿಕೆಯಾದರೆ ಗ್ರಾಹಕರಿಗೆ ತೆರಿಗೆ ಹೊರೆ ಬೀಳಲಿದೆ’ ಎಂದು ಮಹಾಲಕ್ಷ್ಮಿ ಜ್ಯುವೆಲ್ಲರ್ಸ್‌ ಮಳಿಗೆ ಮಾಲೀಕ ಮಲ್ಲಿಕಾರ್ಜುನ ಮೈಲಾಪುರ ಹೇಳುತ್ತಾರೆ.

‘ನಮ್ಮಲ್ಲಿ ಬಹುತೇಕರು ಕಷ್ಟ ಕಾಲಕ್ಕೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಚಿನ್ನಾಭರಣ ಖರೀದಿಸುವುದು ಹೆಚ್ಚು. ಅಂತಹವರಿಗೆ ಜಿಎಸ್‌ಟಿಯಿಂದ ತೊಂದರೆಯಾಗಲಿದೆ. ಖರೀದಿ ಸಮಯದಲ್ಲಿ ಪಾವತಿಸಿದ ಸುಮಾರು ₹900 ತೆರಿಗೆ ಹಾಗೂ ಮಾರಾಟ ಸಮಯದಲ್ಲಿ ಮೇಕಿಂಗ್ ಚಾರ್ಜ್‌ ಅನ್ನು ಕಡಿತಗೊಳಿಸುವುದರಿಂದ ಸುಮಾರು ₹1000 ರಿಂದ ₹1,500 ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ಅವರು ಹೇಳುತ್ತಾರೆ.

‘ಮದುವೆ ಸೀಸನ್ ಮುಗಿದಿದೆ. ಆಷಾಢ ಮಾಸ ಆರಂಭವಾದ್ದರಿಂದ ಸಹಜವಾಗಿ ವ್ಯಾಪಾರ, ವಹಿವಾಟು ಮಂಕಾಗಿದೆ. ಆಷಾಢ ಬಳಿಕ ಮತ್ತೆ ಮಾರುಕಟ್ಟೆಯಲ್ಲಿ ಸುಧಾರಣೆ ಕಂಡು ಬರಲಿದೆ. ಭಾರತೀಯರು ಚಿನ್ನಾಭರಣ ಪ್ರಿಯರಾದ್ದರಿಂದ ಚಿನ್ನದ ಬೆಲೆ ಎಷ್ಟೇ ಏರಿಕೆಯಾದರೂ ಖರೀದಿಗೆ ಹಿಂದೇಟು ಹಾಕುವುದಿಲ್ಲ. ನಮ್ಮಲ್ಲಿ ಆಯ್ದ ಗ್ರಾಹಕರು ಮಾತ್ರ ಬರುವುದರಿಂದ ಬೆಲೆ ಬಗ್ಗೆ ಅವರು ಅಷ್ಟಾಗಿ ಯೋಚಿಸುವುದಿಲ್ಲ’ ಎಂದು ತನಿಷ್ಕ್ ಆಭರಣ ಮಳಿಗೆಯ ವ್ಯವಸ್ಥಾಪಕ ಅಭಿಷೇಕ್ ಹೇಳುತ್ತಾರೆ.

* * 

ಜಿಎಸ್‌ಟಿ ಜಾರಿಯಿಂದ ಚಿನ್ನಾಭರಣಗಳ ಮೇಲಿನ ತೆರಿಗೆ ಹೆಚ್ಚಳವಾಗಿದೆ. ಜಿಎಸ್‌ಟಿ ಪರಿಣಾಮದ ಬಗ್ಗೆ 15 ದಿನಗಳ ಬಳಿಕ ಸ್ಪಷ್ಟ ಚಿತ್ರಣ ಲಭಿಸಲಿದೆ

ಮಲ್ಲಿಕಾರ್ಜುನ ಮೈಲಾಪುರ

ಚಿನ್ನಾಭರಣ ವ್ಯಾಪಾರಿ

ಪ್ರತಿಕ್ರಿಯಿಸಿ (+)