ಶುಕ್ರವಾರ, ಡಿಸೆಂಬರ್ 6, 2019
19 °C

ಕೊಳ್ಳೂರ: ಕುಡಿಯುವ ನೀರಿಗೆ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೂರ: ಕುಡಿಯುವ ನೀರಿಗೆ ಪರದಾಟ

ಔರಾದ್: ತಾಲ್ಲೂಕಿನ ಕೊಳ್ಳೂರ ಗ್ರಾಮದಲ್ಲಿ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊರೆಯಲಾದ ತೆರೆದ ಬಾವಿ ಖಾಸಗಿ ವ್ಯಕ್ತಿಗಳ ಪಾಲಾಗಿ ಜನರು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

‘ಈ ಗ್ರಾಮದಲ್ಲಿ ಜಲನಿರ್ಮಲ ಮತ್ತು ವಿಶ್ವ ಬ್ಯಾಂಕ್ ಯೋಜನೆಯಡಿ ತೆರೆದ ಬಾವಿ ಕೊರೆಯಲಾಗಿದೆ. ಆದರೆ, ಕೆಲ ಖಾಸಗಿ ವ್ಯಕ್ತಿಗಳು ಈ ಬಾವಿ ನಮ್ಮ  ಸರ್ವೆ ನಂಬರ್‌ನಲ್ಲಿ ಬರುತ್ತದೆ ಎಂದು ವಶಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಕೊಳ್ಳೂರ ಗ್ರಾಮಸ್ಥರು ಮೇ ತಿಂಗಳಿನಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ತಿಳಿಸಿದ್ದಾರೆ.

‘ಎರಡು ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಯಾವುದೇ ಶಾಶ್ವತ ಯೋಜನೆ ಇಲ್ಲ. ವರ್ಷದ 12 ತಿಂಗಳು ಪರದಾಡಬೇಕಿದೆ. ಕಾಲೊನಿಗೆ ಪೂರೈಕೆಯಾಗುವ ನೀರಿನ ಮೂಲ ಕೂಡ ಈಗ ಖಾಸಗಿಯವರ ಪಾಲಾಗಿದೆ. ತೆರೆದ ಬಾವಿಗೆ ಪಂಚಾಯಿತಿಯಿಂದ ಹಾಕಿದ ಮೋಟಾರ್‌ ಸಹ ಕಿತ್ತುಕೊಂಡು ಹೋಗಲಾಗಿದೆ. ಎರಡು ತಿಂಗಳಿನಿಂದ ನೀರಿಗಾಗಿ ಪರದಾಡುತ್ತಿದ್ದೇವೆ’ ಎನ್ನುತ್ತಾರೆ ಅಲ್ಲಿನ ಮಹಿಳೆಯರು.

‘ಗ್ರಾಮದಲ್ಲಿ ಹಳೆ ತೆರೆದ ಬಾವಿ ಇದೆ, ಇಡೀ ಊರಿನ ಜನ ಅದೇ ನೀರು ಕುಡಿಯುತ್ತಿದ್ದಾರೆ. ಆದರೆ, ಈ ಬಾವಿಗೆ ಕಲುಷಿತ ನೀರು ಸಹ ಸೇರುತ್ತಿದೆ. ಬಾವಿ ಅಕ್ಕ–ಪಕ್ಕದಲ್ಲಿ ತಿಪ್ಪೆಗುಂಡಿಗಳಿವೆ. ಈ ಹಿಂದೆ ಬಾವಿ ನೀರು ಕುಡಿದ ಪರಿಣಾಮ ನೂರಾರು ಜನ ವಾಂತಿಮಾಡಿಕೊಂಡು ಹಾಸಿಗೆ ಹಿಡಿದಿದ್ದರು. ಈಗ ಮತ್ತೆ ಅದೇ ಬಾವಿ ನೀರು ಕುಡಿಯುವುದು ಅನಿವಾರ್ಯವಾಗಿರುವುದರಿಂದ ಭಯವಾಗುತ್ತಿದೆ’ ಎಂದು ಗ್ರಾಮದ ಮಹಿಳೆ ನಿರ್ಮಲಾ ಖಂಡೆ ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಎಲ್ಲ ಊರಿಗೆ ಶುದ್ಧ  ನೀರು ಪೂರೈಕೆ ಘಟಕವನ್ನು ಸ್ಥಾಪಿಸಿದ್ದಾರೆ. ಆದರೆ, ನಮ್ಮ ಊರಿಗೆ ಮಾತ್ರ ಇಲ್ಲ ಎನ್ನುತ್ತಾರೆ ಗ್ರಾಮಸ್ಥರು. ಖಾಸಗಿಯವರು ವಶಪಡಿಸಿಕೊಂಡ ಬಾವಿ ಜಾಗ ಯಾರಿಗೆ ಸೇರಿದೆ ಎಂಬುದನ್ನು ಸರ್ವೆ ಮಾಡಿಸುವಂತೆ ತಹಶೀಲ್ದಾರ್ ಅವರಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ. ಆದರೆ,  ಸಮಸ್ಯೆ ಪರಿಹಾರವಾಗಿಲ್ಲ ಎನ್ನುತ್ತಾರೆ ಸುಧಾಕರ ಕೊಳ್ಳೂರ.

ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ರಸ್ತೆ ಅಕ್ಕ–ಪಕ್ಕ ತಿಪ್ಪೆಗುಂಡಿಗಳು ಅತಿಕ್ರಮಿಸಿವೆ. ಗ್ರಾಮದಲ್ಲಿ ಸ್ವಚ್ಛತೆ ಇಲ್ಲ ಎಂದು ಜನ ಗ್ರಾಮ ಪಂಚಾಯಿತಿ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

* * M

ಸರ್ಕಾರ ಖರ್ಚು ಮಾಡಿ ಕೊರೆದ ತೆರೆದ ಬಾವಿ ಈಗ ಖಾಸಗಿ ವ್ಯಕ್ತಿಗಳ ಪಾಲಾಗಿದೆ. ಈ ಕುರಿತು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ

ಮಲ್ಲಿಕಾರ್ಜುನ

ಪಿಡಿಒ ಎಕಲಾರ

 

ಪ್ರತಿಕ್ರಿಯಿಸಿ (+)