ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ ಅಭಿವೃದ್ಧಿಗೆ ಮಾರ್ಗದರ್ಶನ

Last Updated 4 ಜುಲೈ 2017, 8:53 IST
ಅಕ್ಷರ ಗಾತ್ರ

ರಾಯಚೂರು: ಕೃಷಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ವಿವಿಧ ತಂತ್ರಜ್ಞಾನ ಅಭಿವೃದ್ಧಿ ಮಾಡುವುದಕ್ಕೆ ಅಗತ್ಯ ಮಾರ್ಗದರ್ಶನ ಹಾಗೂ ಹಣಕಾಸಿನ ನೆರವು ಒದಗಿಸಲು ಮಹಾವಿದ್ಯಾಲಯ ಸಿದ್ಧವಿದೆ ಎಂದು ಕೃಷಿ ಎಂಜಿನಿಯರಿಂಗ್ ಮಹಾವಿದ್ಯಾಲಯದ ಡೀನ್‌ ಡಾ. ಎಂ. ಅನಂತಾಚಾರ್ ಹೇಳಿದರು.

ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಬೆಂಗಳೂರಿನಲ್ಲಿ ಈಚೆಗೆ ಏರ್ಪಡಿಸಿದ್ದ ‘ಮಂಥನ್- 2017 ಬ್ಯುಸಿನೆಸ್ ಪ್ಲ್ಯಾನ್ ಪ್ರೆಜಂಟೇಷನ್ ಸ್ಪರ್ಧೆ’ಯಲ್ಲಿ ರಾಯಚೂರು ಕೃಷಿ ಎಂಜಿನಿಯರಿಂಗ್ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ನಿಮಿತ್ತ ವಿಶ್ವವಿದ್ಯಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ವಿದ್ಯಾರ್ಥಿಗಳು  ವಿದ್ಯಾಭ್ಯಾಸದ ಸಮಯದಲ್ಲಿ ವಿವಿಧ ಯಂತ್ರ ಮತ್ತು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಮಹಾವಿದ್ಯಾಲಯಕ್ಕೆ ಗರಿಮೆಯನ್ನು ತಂದಿರುವುದು ಅಭಿನಂದನೀಯ ಸಂಗತಿ. ಇನ್ನುಳಿದ ವಿದ್ಯಾರ್ಥಿಗಳು ಕೂಡ ಇವರನ್ನು ಮಾದರಿಯಾಗಿಟ್ಟುಕೊಂಡು ವಿವಿಧ ತಂತ್ರಜ್ಞಾನ ಅಭಿವೃದ್ಧಿಗೆ ಸಿದ್ಧರಾಗಬೇಕು’ ಎಂದು ತಿಳಿಸಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಂ. ಸಾಲಿಮಠ ಮಾತನಾಡಿ, ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಕೀರ್ತಿಯನ್ನು ಹೆಚ್ಚಿಸಬೇಕು. ಎಫ್‌ಕೆಸಿಸಿಐ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮತ್ತು ಅವರಿಗೆ ಮಾರ್ಗದರ್ಶನ ನೀಡಿದ ಪ್ರಾಧ್ಯಾಪಕರು ಅಭಿನಂದನೀಯ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ವಿಶ್ವವಿದ್ಯಾಲಯದ ಸ್ನಾತಕೋತ್ತರ ಡೀನ್‌ ಡಾ.ಎಂ.ಜಿ.ಪಾಟೀಲ, ಸಂಶೋಧನಾ ನಿರ್ದೇಶಕ ಡಾ. ಐ. ಶಂಕರೆಗೌಡ ಮತ್ತು ವಿಸ್ತರಣಾ ನಿರ್ದೇಶಕ ಡಾ.ಎಸ್.ಕೆ. ಮೇಟಿ  ಮಾತನಾಡಿದರು.

ಪಶಸ್ತಿ ವಿಜೇತರು: ಪಿ.ಎಚ್.ಡಿ. ಪದವಿ ಪಡೆದ ವಿದ್ಯಾರ್ಥಿ ವೇಣು ಅವರು ಶೂನ್ಯ ಶಕ್ತಿಯಿಂದ ತರಕಾರಿಗಳನ್ನು ಶೇಖರಿಸುವ ಶೀಥಲ ಘಟಕವನ್ನು ಅಭಿವೃದ್ಧಿ ಪಡಿಸಿದ್ದಕ್ಕಾಗಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇದಕ್ಕಾಗಿ ₹1.5 ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.

ಬಿ.ಟೆಕ್. (ಕೃಷಿ ತಾಂತ್ರಿಕ) ಸ್ನಾತಕ ವಿದ್ಯಾರ್ಥಿಗಳಾದ ವಿವೇಕ ಕಾಮತ, ಶಿವಯೋಗೇಶ್ ಕುಡಚಿ ಮತ್ತು ಶ್ರೀಕಾಂತ್ ಅವರು ಸಾಮೂಹಿಕ ಪ್ರಯತ್ನದಿಂದ ‘ಸೋಲಾರ್ ಚಾಲಿತ ಹೈಡ್ರೋಫೋನಿಕ್ ಮೇವು ಬೆಳೆಯುವ ಯಂತ್ರ’ವನ್ನು ಅಭಿವೃದ್ಧಿಪಡಿಸಿರುವುದು ದ್ವಿತೀಯ ಬಹುಮಾನಕ್ಕೆ ಪಾತ್ರವಾಗಿದೆ. ಇದಕ್ಕಾಗಿ ₹1 ಲಕ್ಷ ನಗದು ಹಾಗೂ ಪ್ರಶಸ್ತಿಪತ್ರ ನೀಡಿ ಗೌರವಿಸಲಾಗಿದೆ.

ಎಂ.ಟೆಕ್. (ಕೃಷಿ ತಾಂತ್ರಿಕ) ಸ್ನಾತಕೋತ್ತರ ವಿದ್ಯಾರ್ಥಿ ಯಲ್ಲಪ್ಪ ಅವರು ಡ್ರೋಣ್ ಚಾಲಿತ ಸಿಂಪರಣಾ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ₹10 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರದ ಸಮಾಧಾನಕರ ಬಹಮಾನವನ್ನು ಪಡೆದಿದ್ದಾರೆ.

* * 

ತಂತ್ರಜ್ಞಾನ ಅಭಿವೃದ್ಧಿಗೆ ವಿಶ್ವವಿದ್ಯಾಲಯದಿಂದ ಪ್ರೋತ್ಸಾಹ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಅನುಕೂಲ ಪಡೆದುಕೊಂಡು ಸಾಧನೆ ಮಾಡಬೇಕು.
ಡಾ.ಪಿ.ಎಂ. ಸಾಲಿಮಠ
ರಾಯಚೂರು ಕೃಷಿ ವಿವಿ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT