ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜಲಾಪುರ: ಅಭಿವೃದ್ಧಿ ಕಾಮಗಾರಿಗೆ ಬರ

Last Updated 4 ಜುಲೈ 2017, 9:07 IST
ಅಕ್ಷರ ಗಾತ್ರ

ಕಕ್ಕೇರಾ: ಇಲ್ಲಿನ ಪುರಸಭೆಯ 21 ವಾರ್ಡಿನಲ್ಲಿ ಮೂಲಸೌಕರ್ಯಗಳಿಗೆ ಬರವಿದೆ. ನೈರ್ಮಲ್ಯ ಮರೀಚಿಕೆ ಯಾಗಿದೆ. ರಸ್ತೆಯಲ್ಲೇ ಚರಂಡಿ ನೀರು ಹರಿಯುತ್ತಿದ್ದು, ಸೊಳ್ಳೆಗಳ ಕಾಟ ವೀಪರಿತವಾಗಿದೆ.

21, 23ನೇ ವಾರ್ಡ್‌ ವ್ಯಾಪ್ತಿಯಲ್ಲಿ ಬರುವ ಅಸ್ಕೇರದೊಡ್ಡಿ, ಅಬ್ಲೇರ ದೊಡ್ಡಿ, ಜಂಗಣ್ಣರದೊಡ್ಡಿ, ರಾಯಗೇರ ದೊಡ್ಡಿ, ಲಾಠೇರದೊಡ್ಡಿ, ಗುಡ್ಡಕಾಯಿರ ದೊಡ್ಡಿಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸರಿಯಾದ ರಸ್ತೆ ಇಲ್ಲಿಲ್ಲ. ಡಾಂಬರು ಕಾಣದ ರಸ್ತೆಗಳೇ ಈ ದೊಡ್ಡಿಗಳಲ್ಲಿವೆ. ಇಲ್ಲಿ ದೊಡ್ಡ ಗುಂಡಿಗಳು ಬಿದ್ದಿದ್ದು, ಸವಾರರನ್ನು ಅಪಾಯಕ್ಕೆ ಸಿಲುಕಿಸುತ್ತಿವೆ.

ಮಂಜಲಾಪುರದ ಹಳ್ಳದ ಸಮೀಪದ ಕಿರುದಾರಿಯಲ್ಲಿ 5ರಿಂದ 6 ಗುಂಡಿಗಳು ಬಿದ್ದಿವೆ. ‘ಇವು ನಮ್ಮ ಜನ್ಮ ತೊಗಳಂಗ್ ಆಗ್ಯಾವ್ರೀ, ಏನ ಮಾಡಕ್ ಆಗತ್ತರೀ. ಎಲ್ಲಾ ನಮ್ಮ ಕರ್ಮ. ಈ ದಾರಿಯಲ್ಲೆ ಅಡ್ಯಾಡಬೇಕ್ರೀ’ ಎಂದು ವಾಹನ ಸವಾರ ಪರಮಣ್ಣ ಮಂಜಲಾ ಪುರ ಅಸಹಾಯಕತೆ ವ್ಯಕ್ತಪಡಿಸಿದರು.

ಮಂಜಲಾಪುರ ಗ್ರಾಮದಲ್ಲಿ ಮಹಿಳೆಯರಿಗೆ ಹಾಗೂ ಪುರಷರಿಗೆ ಬಯಲು ಶೌಚಾಲಯವೇ ಗತಿಯಾಗಿದೆ. ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಬಯಲು ಶೌಚ ತಪ್ಪಿಲ್ಲ. ಬಸ್ ನಿಲ್ದಾಣ 30 ವರ್ಷಗಳಿಂದ ಸೌಕರ್ಯ ಕಂಡಿಲ್ಲ. ಕಟ್ಟಡ ಬಹುತೇಕ ಶಿಥಿಲಾವಸ್ಥೆಗೆ ತಲುಪಿದೆ. ಬಸ್ ನಿಲ್ದಾಣ ದಲ್ಲಿ ತ್ಯಾಜ್ಯದ ರಾಶಿಯೇ ತುಂಬಿದೆ. ಮೇಲ್ಚಾವಣಿ ಕುಸಿಯುವ ಹಂತದಲ್ಲಿದೆ.

‘ಹಳೆಯ ಕಟ್ಟಡ ನೆಲಸಮಗೊಳಿಸಿ ನೂತನ ಬಸ್ ನಿಲ್ದಾಣ ನಿರ್ಮಿಸಬೇಕು’ ಎಂದು ಸೋಮನಾಥ, ಮಲ್ಲಿಕಾರ್ಜುನ ಅಸ್ಕಿ ನಿವಾಸಿಗಳು ಮನವಿ ಮಾಡಿದರು. ‘ನಮ್ಮೂರಿಗೆ ಬರುವುದೇ ಒಂದು ಬಸ್. ಅದು ಬೆಳಿಗ್ಗೆಯೇ ಬಂದು ಹೋಗುತ್ತದೆ. ಶಾಲೆ, ಕಾಲೇಜಿಗೆ ಹೋಗಲು ತೊಂದರೆಯಾಗಿದೆ. ಆಟೊ, ಟಂಟಂಗಳೇ ಆಸರೆವಾಗಿವೆ. ಇವು ಸಿಗದಿದ್ದರೆ ನಡೆದುಕೊಂಡೇ ಶಾಲೆಗೆ ಹೋಗಬೇಕಾದ ಸ್ಥಿತಿ ಇದೆ’ ಎಂದು ವಿದ್ಯಾರ್ಥಿ ಹಣಮಂತ್ರಾಯ ಅಸ್ಕಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉದ್ಘಾಟನೆಗೆ ಸಿದ್ಧವಾಗಿದ್ದ ಅಂಗನ ವಾಡಿ ಕೇಂದ್ರದ ಪತ್ರಾಸ್‌ಗಳು ಗಾಳಿಯಲ್ಲಿ ಹಾರಿಹೋಗಿವೆ. ಸರ್ಕಾರಿ ಕಟ್ಟಡಗಳಿಗೆ ಪತ್ರಾಸ್ ಇರುವುದಿಲ್ಲ. ಗುತ್ತಿಗೆದಾರರು, ಅಧಿಕಾರಿಗಳು ಶಾಮೀಲಾಗಿ ಕಳಪೆ ಕಟ್ಟಡ ಹಾಗೂ ಪತ್ರಾಸ್ ಬಳಸಿ ಹಣ ಕಬಳಿಸಿದ್ದಾರೆ’ ಎಂದು ಮುಖಂಡ  ಪರಮಣ್ಣ ಪೂಜಾರಿ ಆರೋಪಿಸಿದರು.

* * 

ನೀರಿನ ಪೈಪ್‌ಲೈನ್‌ ಅಲ್ಲಲ್ಲಿ ಒಡೆದಿದೆ. ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ನೀರುಗಂಟೆ ಕೈಗೆ ಸಿಗುವುದಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ.
ಬಸಪ್ಪ ಬಂಡಿಮನಿ,
ಮಂಜಲಾಪುರ ನಿವಾಸಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT