ಭಾನುವಾರ, ಡಿಸೆಂಬರ್ 8, 2019
25 °C

ಜಿ.ಪಂ ಸಭೆಯಲ್ಲಿ ತೆರಿಗೆ ಸಂಗ್ರಹ ಗಂಭೀರ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿ.ಪಂ ಸಭೆಯಲ್ಲಿ ತೆರಿಗೆ ಸಂಗ್ರಹ ಗಂಭೀರ ಚರ್ಚೆ

ಚಿತ್ರದುರ್ಗ: ಜಿಲ್ಲೆಯಲ್ಲಿ ಸೌರಶಕ್ತಿ ಉತ್ಪಾದನಾ ಘಟಕ, ಪವನ ವಿದ್ಯುತ್ ಯಂತ್ರ ಹಾಗೂ ಮೊಬೈಲ್ ಟವರ್‌ ಅಳವಡಿಸಿರುವ ಕಂಪೆನಿಗಳಿಂದ ಸ್ಥಳೀಯ ಗ್ರಾಮ ಪಂಚಾಯ್ತಿಗಳಿಗೆ ಕಂದಾಯ ಸಲ್ಲಿಕೆಯಾಗುತ್ತಿಲ್ಲ ಎಂಬ ವಿಚಾರ ಸೋಮವಾರ ಜಿಲ್ಲಾ ಪಂಚಾಯ್ತಿಯಲ್ಲಿ ನಡೆದ 3ನೇ ಸಾಮಾನ್ಯ ಸಭೆಯ ಮುಂದುವರಿದ ಸಭೆಯಲ್ಲಿ ತೀವ್ರ ಚರ್ಚೆಯಾಯಿತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷ, ವಿರೋಧ ಪಕ್ಷಗಳ ಸದಸ್ಯರು ಒಟ್ಟಾರೆ ಧ್ವನಿ ಎತ್ತಿದ್ದಲ್ಲದೇ, ಕೂಲಂಕುಷವಾಗಿ ಚರ್ಚಿಸಲು ಪ್ರತ್ಯೇಕ ಸಭೆ ಕರೆಯಬೇಕು ಎಂದು ಸಲಹೆ ನೀಡಿದರು.

ಸಭೆಯ ಆರಂಭದಲ್ಲೇ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ‘ಜಿಲ್ಲೆಯ ವಿವಿಧೆಡೆ ಕಂದಾಯ ಜಾಗದಲ್ಲಿ ಅಳವಡಿಸಿರುವ ವಿಂಡ್‌ಮಿಲ್‌ ಫ್ಯಾನ್, ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕ ಹಾಗೂ ಮೊಬೈಲ್‌ ಟವರ್‌ಗಳ ಬಹುತೇಕ ಕಂಪೆನಿಗಳು, ಘಟಕಗಳನ್ನು ಅಳವಡಿಸಿರುವ ಜಮೀನಿಗೆ ಕಂದಾಯ ಪಾವತಿಸುತ್ತಿಲ್ಲ. ಕೃಷಿ ಭೂಮಿಯನ್ನು ಕೃಷಿಯೇತರವಾಗಿ ಪರಿವರ್ತಿಸಿಕೊಂಡಿಲ್ಲ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳಿಗೆ ಲಕ್ಷಾಂತರ ರೂಪಾಯಿ ತೆರಿಗೆ ನಷ್ಟವಾಗುತ್ತಿದೆ. ಈ ಬಗ್ಗೆ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ದನಿಗೂಡಿಸಿದ ಸದಸ್ಯ ಗುರುಮೂರ್ತಿ, ‘ನಮ್ಮ ಕ್ಷೇತ್ರದಲ್ಲೂ ಹೀಗೆ ಆಗಿದೆ. ಆ ಕಂಪೆನಿಯವರನ್ನು ಕೇಳಿದರೆ, ಸಮರ್ಪಕ ಉತ್ತರ ನೀಡುವುದಿಲ್ಲ. ಇಂಥ ಘಟಕಗಳ ಅಳವಡಿಕೆ  ಪಂಚಾಯತ್ ರಾಜ್ ಕಾಯ್ದೆಯಲ್ಲಿ ಏನೆಲ್ಲ ನಿಯಮಗಳಿವೆ ಎಂಬುದರ ಕುರಿತು ಚರ್ಚೆಯಾಗಬೇಕು. ಇದಕ್ಕಾಗಿ ಪ್ರತ್ಯೇಕ ಸಭೆ ಕರೆಯಬೇಕು’ ಎಂದು ಅಧ್ಯಕ್ಷರಿಗೆ ಸಲಹೆ ನೀಡಿದರು.

‘ಘಟಕಗಳ ಸ್ಥಾಪನೆಯ ಅನುಮತಿ ಕುರಿತು ಸ್ಥಳೀಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಕೇಳಿದರೆ ಅವರು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗಳ ಕಡೆ ಕೈತೋರಿಸುತ್ತಾರೆ.  ಮೇಲಧಿಕಾರಿ ಗಳಿಂದ ಒತ್ತಡವಿದೆ ಎನ್ನುತ್ತಾರೆ. ಹೀಗಾಗಿ, ಯಾವ ಕಂಪೆನಿಗಳು ಕೃಷಿ ಭೂಮಿ ಪರಿವರ್ತಿಸಿಕೊಂಡಿದೆ, ನಿರಾಪೇಕ್ಷಣಾ ಪತ್ರ ಪಡೆದಿದೆ, ಜನರಲ್ ಪರವಾನಗಿ ಪಡೆದಿವೆಯಾ ಎಂಬ ವಿಚಾರಗಳನ್ನು ಯಾರು ಪರಿಶೀಲಿಸಿದ್ದಾರೆ’ ಎಂಬುದು ಸ್ಪಷ್ಟವಾಗಬೇಕು ಎಂದು ಕೆಲವು ಸದಸ್ಯರು ಆಗ್ರಹಿಸಿದರು.

ಸದಸ್ಯರಾದ ಶಶಿಕಲಾ, ನರಸಿಂಹರಾಜು, ಪಾಪಯ್ಯ, ಮುಂಡರಗಿ ನಾಗರಾಜ್ ಸೇರಿದಂತೆ  ಹಲವು ಸದಸ್ಯರು ಈ ವಿಚಾರಕ್ಕೆ ದನಿಗೂಡಿಸಿದರು. ಸದಸ್ಯ ಗುರುಮೂರ್ತಿ, ‘ಚಿತ್ರದುರ್ಗ ತಾಲ್ಲೂಕಿನಲ್ಲಿ 246 ವಿಂಡ್ ಮಿಲ್‌ಗಳಿಗೆ. 93 ಮೊಬೈಲ್‌ ಟವರ್‌ಗಳಿವೆ. ನನ್ನ ಕ್ಷೇತ್ರವೊಂದರಲ್ಲೇ 82 ಫ್ಯಾನ್‌ಗಳಿವೆ. ಇವುಗಳಿಗೆ ಪರವಾನಗಿ ಪಡೆದಿದ್ದಾರೊ ಇಲ್ಲವೊ ಗೊತ್ತಿಲ್ಲ. ತೆರಿಗೆ ಪಾವತಿಸುತ್ತಿದ್ದಾರೊ  ಇಲ್ಲವೊ ತಿಳಿದಿಲ್ಲ. ಈ ಕುರಿತು ಸಂಬಂಧಪಟ್ಟ ಸಂಸ್ಥೆಗಳಿಗೆ ಪತ್ರ ಬರೆದಿದ್ದೇನೆ. ಯಾವುದೇ ಉತ್ತರ ಬಂದಿಲ್ಲ’ ಎಂದು ಸಭೆಗೆ ವಿವರಿಸಿದರು.

‘ಒಂದು ಫ್ಯಾನ್ ಅಳವಡಿಕೆಗೆ ₹50 ಸಾವಿರ ಪಾವತಿಸಬೇಕು ಎಂಬ ನಿಯಮ ಆರ್‌ಡಿಪಿಆರ್‌ನಲ್ಲಿದೆ’ ಎಂದು ಗುರುಮೂರ್ತಿ ಉಲ್ಲೇಖಿಸಿದಾಗ, ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ‘ಈ ವಿಚಾರಗಳ ಬಗ್ಗೆ ಪೂರ್ಣ ಮಾಹಿತಿ ಪಡೆದು ಪರಿಶೀಲಿಸಬೇಕು’ ಎಂದು ಸಲಹೆ ನೀಡಿದರು.

‘ಜಿ.ಆರ್‌.ಹಳ್ಳಿ ವ್ಯಾಪ್ತಿಯಲ್ಲಿ 12 ಎಕರೆಯಲ್ಲಿ 23 ಫ್ಯಾನ್‌ಗಳನ್ನು ಹಾಕಲಾಗಿದೆ. ಎಷ್ಟು ಜಾಗದಲ್ಲಿ ಎಷ್ಟು ಫ್ಯಾನ್ ಅಳವಡಿಸಬೇಕು. ಎಷ್ಟು ತೆರಿಗೆ ಪಾವತಿಸಬೇಕು. ಇವುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ, ಸ್ಥಳೀಯ ಸಂಸ್ಥೆಗಳು ತೆರಿಗೆಯಿಂದ ವಂಚಿತ ವಾಗುತ್ತಿವೆ’ ಎಂದು ಸದಸ್ಯ ಗುರುಮೂರ್ತಿ ಆಕ್ಷೇಪಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಸುಶೀಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರಕಾಶಮೂರ್ತಿ, ನಾಗೇಂದ್ರನಾಯ್ಕ್, ಸದಸ್ಯರು, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಬಸವರಾಜ್, ಯೋಜನಾಧಿಕಾರಿ ಓಂಕಾರಪ್ಪ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಖಾಸಗಿ ಘಟಕಗಳ ವಿವರ ಸಂಗ್ರಹಿಸಿ

ಜಿಲ್ಲೆಯಾದ್ಯಂತ ಅಳವಿಡಿಸಿರುವ ವಿಂಡ್‌ಮಿಲ್, ಸೋಲಾರ್ ಘಟಕ, ಗಾರ್ಮೆಂಟ್‌ ಕಾರ್ಖಾನೆ, ಮೊಬೈಲ್ ಟವರ್, ಡಾಬಾ, ಕೈಗಾರಿಕೆಗಳ ಕುರಿತು ಮಾಹಿತಿ ಸಂಗ್ರಹಿಸಿ 15 ದಿನದೊಳಗೆ ಜಿಲ್ಲಾ ಪಂಚಾಯಿತಿಗೆ ಸಲ್ಲಿಸುವಂತೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ  ಸೌಭಾಗ್ಯ ಬಸವರಾಜನ್ ಅಧಿಕಾರಿಗಳಿಗೆ ಸೂಚಿಸಿದರು.

‘ಪಂಚಾಯ್ತಿ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದ ಅನುದಾನದ ಮೇಲೆ ಅವಲಂಬಿತವಾಗುವ ಬದಲು, ಪಂಚಾಯ್ತಿ ವ್ಯಾಪ್ತಿಯಲ್ಲಿ ರುವ  ಲಾಭದಾಯಕ ಉದ್ದಿಮೆಗಳಿಗೆ ಎನ್‌ಒಸಿ, ಹೊಸ ಪರವಾನಗಿ ನೀಡುವುದು, ಪರವಾನಗಿ ನವೀಕರಣದ ಮೂಲಕ ಕರವಸೂಲಿ ಮಾಡಿ ಪಂಚಾಯ್ತಿ ಆದಾಯ ಹೆಚ್ಚಿಸಬೇಕು. ಹಾಗಾಗಿ ನಿಮ್ಮ ವ್ಯಾಪ್ತಿಯ ಖಾಸಗಿ ಘಟಕಗಳ ಮಾಹಿತಿ ಸಂಗ್ರಹಿಸಿ, ವರದಿ ಕೊಡಿ’ ಎಂದು ಸೂಚಿಸಿದರು.

ಪ್ರತಿಕ್ರಿಯಿಸಿ (+)