ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿ ಉದ್ಯಮಿಯಾಗಿದ್ದ ಸಂತೋಖ್ ಬೂಮ್ರಾ ಈಗ ಆಟೋ ಚಾಲಕ; ಇವರು ಕ್ರಿಕೆಟಿಗ ಬೂಮ್ರಾ ಅವರ ತಾತ!

Last Updated 4 ಜುಲೈ 2017, 9:57 IST
ಅಕ್ಷರ ಗಾತ್ರ

ಡೆಹ್ರಾಡೂನ್: ಸಂತೋಖ್ ಸಿಂಗ್ ಬೂಮ್ರಾ ಅವರಿಗೀಗ ವಯಸ್ಸು 84. ಉತ್ತರಾಖಂಡ್‍ನ ಕಿಚ್ಚಾ ಎಂಬಲ್ಲಿ ವಾಸಿಸುತ್ತಿರುವ ಇವರು ಭಾರತೀಯ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರ ತಾತ. ಒಂದು ಕಾಲದಲ್ಲಿ ಯಶಸ್ವಿ ಉದ್ಯಮಿಯಾಗಿದ್ದ ಸಂತೋಖ್ ಈಗ ದೈನಂದಿನ ಬದುಕು ಸಾಗಿಸುವುದಕ್ಕಾಗಿ ಆಟೋ ಚಾಲಕರಾಗಿ ದುಡಿಯುತ್ತಿದ್ದಾರೆ.

80-90ರ ದಶಕದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ಸಂತೋಖ್ ಅವರಿಗೆ ಗುಜರಾತ್‍ನಲ್ಲಿ ಮೂರು ಫ್ಯಾಕ್ಟರಿಗಳಿತ್ತು. ಕ್ರಿಕೆಟಿಗ ಜಸ್‍ಪ್ರೀತ್ ಬೂಮ್ರಾ ಅವರ ಅಪ್ಪ ಜಸ್ಬೀರ್ ಬೂಮ್ರಾ ಸಂತೋಖ್ ಅವರಿಗೆ ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದರು. 2001ರಲ್ಲಿ ಜಸ್ಬೀರ್ ಬೂಮ್ರಾ ಅವರು ಹಠಾತ್ ನಿಧನರಾದಾಗ ಅಲ್ಲಿಯವರಿಗೆ ಉತ್ತಮ ರೀತಿಯಲ್ಲಿ ನಡೆದು ಬರುತ್ತಿದ್ದ ಆ ಉದ್ಯಮ ವ್ಯವಹಾರ ಮಂಕಾಯಿತು. ಕಂಪನಿ ನಷ್ಟದತ್ತ ಹೊರಳಿದಾಗ ಅದನ್ನು ಮಾರಿ ನಾನು ನನ್ನ ಸಹೋದರರೊಂದಿಗೆ ಕಿಚ್ಚಾ ಎಂಬಲ್ಲಿಗೆ ಬಂದು ನೆಲೆಸಿದೆ ಅಂತಾರೆ ಸಂತೋಖ್.

ಕಿಚ್ಚಾದಲ್ಲಿ ಬಂದು ನೆಲೆಸಿದ ನಂತರ ಆಟೋವೊಂದನ್ನು ಖರೀದಿಸಿ, ಅದು ಓಡಿಸಿ ದೈನಂದಿನ ಬದುಕು ಸಾಗಿಸುತ್ತಿದ್ದಾರೆ ಇವರು.

ಕಳೆದ 17 ವರ್ಷಗಳಿಂದ ಸಂತೋಖ್, ಮೊಮ್ಮಗ ಬೂಮ್ರಾನನ್ನು ಭೇಟಿಯಾಗಲೇ ಇಲ್ಲ. ಆತನನ್ನು ಭೇಟಿಯಾಗದೇ ಇದ್ದರೂ ಆತ ಆಡಿದ ಎಲ್ಲ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಸಂತೋಖ್, ಬೂಮ್ರಾ ಅವರ ದೊಡ್ಡ ಅಭಿಮಾನಿಯೂ ಹೌದು.

ಯಾಕೆ ನೀವು ಮೊಮ್ಮಗನನ್ನು ಭೇಟಿಯಾಗಿಲ್ಲ ಎಂದು ಕೇಳಿದರೆ ತಾತ ಹೆಚ್ಚೇನೂ ಹೇಳಲಿಲ್ಲ. ಆದರೆ ತನಗೆ ಮೊಮ್ಮಗನನ್ನು ಆಲಿಂಗನ ಮಾಡಬೇಕೆಂಬ ಆಸೆಯಿದೆ ಎಂದಷ್ಟೇ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಜಸ್‍ಪ್ರೀತ್ ಬೂಮ್ರಾ ಅವರು ಅಮ್ಮನ ಆಶ್ರಯದಲ್ಲೇ ಬೆಳೆದವರು. ಗುಜರಾತಿನಲ್ಲಿ ಕ್ರಿಕೆಟ್ ವೃತ್ತಿ ಆರಂಭಿಸಿದ ಬೂಮ್ರಾ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡಿದ್ದರು. ಅಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು 2015- 2016ರಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡು ಯಶಸ್ಸಿನ ಮೆಟ್ಟಲುಗಳನ್ನೇರಿದ್ದಾರೆ.

ಸಂತೋಖ್ ಅವರಿಗೆ ಮೊಮ್ಮಗ ಬೂಮ್ರಾ ಅವರ ಕುಟುಂಬವನ್ನು ಭೇಟಿಯಾಗಬೇಕೆಂಬ ಆಸೆಯಿದೆ. ನಾವೆಲ್ಲ ಕುಟುಂಬದವರು ಒಂದು ದಿನ ಭೇಟಿಯಾಗಲಿದ್ದೇವೆ ಎಂದು ಬೂಮ್ರಾ ಅವರ ಸಂಬಂಧಿ ಜಸ್ವಿಂದರ್ ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT