ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ

Last Updated 4 ಜುಲೈ 2017, 10:39 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ದೇವರತೋಪು ಗ್ರಾಮದ ಇತಿಹಾಸ ಪ್ರಸಿದ್ಧ ಲಕ್ಷ್ಮಿನರಸಿಂಹಸ್ವಾಮಿಯ ಬ್ರಹ್ಮ ರಥೋತ್ಸವ ಬುಧವಾರ (ಜುಲೈ 5ರಂದು) ನಡೆಯಲಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅಹೋಬಲಂ ಮೂಲದವರಾದ ಕಾಪು, ರೆಡ್ಡಿ, ತೋಟ, ತಳವಾರ, ಆಯಾಗಾರರು ಮತ್ತು ರೈತರು ಅಲ್ಲಿನ ಕೆಲ ನವಾಬರ ಕಿರುಕುಳದಿಂದ ರಾತ್ರೋ ರಾತ್ರಿ ತಮ್ಮ ಮೂಲ ದೇವರಾದ ಲಕ್ಷ್ಮಿನರಸಿಂಹಸ್ವಾಮಿ ವಿಗ್ರಹದೊಂದಿಗೆ ಕುಟುಂಬ ಸಮೇತರಾಗಿ ದೇವರತೋಪು, ದೊಡ್ಡದಾಳವಟ್ಟ ಹಾಗೂ ರೆಡ್ಡಿಹಳ್ಳಿ ಭಾಗಕ್ಕೆ ಬಂದರು ಎಂದು ದೇವಸ್ಥಾನದ ಇತಿಹಾಸದ ಮೂಲಗಳು ತಿಳಿಸುತ್ತವೆ.

ಕಾಪುಗಳು ನದಿದಾಟಿ ಬರುವಾಗ ಉಕ್ಕಿ ಹರಿಯುತ್ತಿದ್ದ ಚಿತ್ರಾವತಿ ನದಿ ದಾರಿ ಬಿಟ್ಟಿತು. ನವಾಬರು ಇವರನ್ನು ಹಿಂಬಾಲಿಸಿ ನದಿ ಹತ್ತಿರ ಬಂದ ತಕ್ಷಣ ಉಕ್ಕಿ ಹರಿಯುತು. ಆಗ ನವಾಬರು ವಾಪಸ್ಸಾದರು. ಇದನ್ನು ಲಕ್ಷ್ಮಿನರಸಿಂಹಸ್ವಾಮಿಯ ಮಹಿಮೆ ಎನ್ನುತ್ತಾರೆ.

ಅಲ್ಲಿಂದ ಕಾಪುಗಳು ಕಟ್ಟುಬಂಡಿಗಳೊಂದಿಗೆ ಕಡಪ ಜಿಲ್ಲೆಯ ಕೆಲ ಗ್ರಾಮಗಳನ್ನು ಕ್ರಮಿಸಿ ಕದಿರಿ ಮಾರ್ಗವಾಗಿ ಪಿನಾಕಿನಿ ಮತ್ತು ಜಯಮಂಗಳಿ ನದಿ ದಾಟಿ ಮುಂದೆ ಸಾಗಿದರು. ಮೊದಲನೆಯದು ದೊಡ್ಡದಾಳವಟ್ಟದಲ್ಲಿ ನಿಂತಿತು. ಅಲ್ಲಿ ಕೆಲ ಕಾಪುಗಳು ನೆಲೆ ನಿಂತರು. ಎರಡನೇ ಕಟ್ಟುಬಂಡಿ ದೇವರತೋಪಲ್ಲಿ ಬಂದು ನಿಂತಾಗ ಬಿಳಿ ಮತ್ತು ಕಪ್ಪು ಬಣ್ಣದ ಎತ್ತುಗಳು ಸಾವನ್ನಾಪ್ಪಿದವು. ಕಾಪುಗಳು ಹೀಗಾಗಿ ಕೆಲವರು ಅಲ್ಲಿಯೇ ನೆಲೆಯೂರಿದರು.

ಮೂರನೇ ಕಟ್ಟುಬಂಡಿ ಜಯಮಂಗಳಿ ನದಿ ದಡದಲ್ಲಿರುವ ರೆಡ್ಡಿಹಳ್ಳಿ ಗ್ರಾಮದಲ್ಲಿ ಕಂಬ ಇಳೆ ಬಿದ್ದಿದ್ದರಿಂದ ಅಲ್ಲಿಯೇ ಉಳಿದವರೆಲ್ಲ ನೆಲೆ ನಿಂತು, ಕಂಬದ ನರಸಿಂಹಸ್ವಾಮಿ ಎಂದು ಕ್ಯಾತಿ ಪಡೆದಿದೆ. ಅಲ್ಲಿನ ಪೂಜಾರಿಗೆ ಸ್ವಾಮಿ ಕನಸಲ್ಲಿ ಬಂದು ಎಳನಿರಿನಲ್ಲಿ ದೇವಸ್ಥಾನ ನಿರ್ಮಾಣ ಮಾಡಬೇಕು ಎಂದು ಹೇಳಿದ್ದರಿಂದ ಇಂದಿಗೂ ದೇವಸ್ಥಾನ ಅಪೂರ್ಣವಾಗಿದ್ದು, ಅಲ್ಲಿನ  ಕಲ್ಲಿನ ಕಂಬಕ್ಕೆ ಮಾತ್ರ ಪೂಜೆ ಸಲ್ಲಿಸುತ್ತಾರೆ.

ದೊಡ್ಡದಾಳವಟ್ಟ ಮತ್ತು ದೇವರತೋಪು ದೇವಸ್ಥಾನಗಳು ಮುಜರಾಯಿ ಇಲಾಖೆಗೆ ಸೇರಿವೆ. ಆಷಾಡ ಮಾಸದಲ್ಲಿ ಬ್ರಹ್ಮರಥೋತ್ಸವ ನಡೆದಾಗ ಸಂಪ್ರದಾಯದಂತೆ ಈಗಲೂ ಅಹೋಬಲಂನಿಂದ ಬಂದಂತಹ ಕಟ್ಟು ಬಂಡಿಗಳನ್ನು ಜಾತ್ರೆ ದಿನ ಸಿಂಗರಿಸಿ ಮೆರವಣಿಗೆ ಮೂಲಕ ದೇವರತೋಪು ಹಾಗೂ ರೆಡ್ಡಿಹಳ್ಳಿ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನಗಳನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕುವುದು ಈಗಲೂ ಕಾಣಬಹುದು.

ನವ ದಂಪತಿಗೆ ವಿಶೇಷ
ಪ್ರತಿ ವರ್ಷ ಆಷಾಡ ಮಾಸದಲ್ಲಿ ಹೂವಿನ ಬ್ರಹ್ಮರಥೋತ್ಸವ ನಡೆಯುವುದರಿಂದ ಜೇಷ್ಠ ಮಾಸದಲ್ಲಿ ಹಾಗೂ ಹೊಸದಾಗಿ ಮದುವೆಯಾದವರು ಬಿಳಿ ವಸ್ತ್ರ ಧರಿಸಿ ಬಾಳೆಹಣ್ಣು, ಧವನ, ಕಡಲೆಕಾಯಿ ಹಾಗೂ ಬೆಲ್ಲವನ್ನು ರಥಕ್ಕೆ ಎಸೆಯುವುದರಿಂದ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ಹೀಗಾಗಿ ಸುತ್ತಮುತ್ತಲಿನ ಹಾಗೂ ಆಂಧ್ರ ಗಡಿ ಭಾಗದ ಗ್ರಾಮಸ್ಥರು ಈ ಜಾತ್ರೆಗೆ ಬರುವುದು ವಿಶೇಷವಾಗಿದೆ.

* * 

ಈ ದೇವಸ್ಥಾನ ಹಲವು ದಶಕಗಳಿಂದ ಅಭಿವೃದ್ಧಿ ಆಗದೆ ಹಾಗೇ ಉಳಿದಿದೆ.ಶಾಸಕ ಕೆ.ಎನ್.ರಾಜಣ್ಣ ₹ 50 ಲಕ್ಷ ವೆಚ್ಚದ ಯಾತ್ರಿ ನಿವಾಸ ಮಂಜೂರು ಮಾಡಿಸಿರುವುದರಿಂದ ಭಕ್ತರಿಗೆ ಖುಷಿ ತಂದಿದೆ.
ಜಿ.ರಾಮರೆಡ್ಡಿ ಕಾಪು, ದೇವರತೋಪು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT