ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ. 9ಕ್ಕೆ ದೇಶದೆಲ್ಲೆಡೆ ಜೈಲ್‌ ಭರೋ

Last Updated 4 ಜುಲೈ 2017, 10:47 IST
ಅಕ್ಷರ ಗಾತ್ರ

ಕೋಲಾರ: ‘ಮಹಿಳಾ ದೌರ್ಜನ್ಯ ತಡೆ ಹಾಗೂ ಉದ್ಯೋಗ ಖಾತ್ರಿಯಡಿ ಸೇವಾ ಭದ್ರತೆ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಘಟನೆ ವತಿಯಿಂದ ದೇಶದಾದ್ಯಂತ ಆ.9ರಂದು ಜೈಲ್‌ ಭರೋ ಚಳವಳಿಗೆ ಕರೆ ನೀಡಲಾಗಿದೆ‘ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್‌) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮರಿಯಾ ದವಳೆ ತಿಳಿಸಿದರು.

ತಾಲ್ಲೂಕಿನ ಮಂಗಸಂದ್ರ ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರ ಜತೆ ಸೋಮವಾರ ಸಂವಾದ ನಡೆಸಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಜಪಿಸುತ್ತಿರುವಂತೆ ದೇಶ ಅಭಿವೃದ್ಧಿಯಾಗುತ್ತಿಲ್ಲ. ರಾಜ್ಯ ಸರ್ಕಾರ ಜನಪರ ಎಂದು ಹೇಳುತ್ತಿದ್ದರೂ ಬಡ ಮತ್ತು ಮಧ್ಯಮ ವರ್ಗದವರ ಜೀವನ ಮಟ್ಟ ಸುಧಾರಿಸುತ್ತಿಲ್ಲ. ಬದಲಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮತ್ತಷ್ಟು ಹಿಂದಕ್ಕೆ ಹೋಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸರ್ಕಾರಗಳು ಬಡವರ ಪರ ಕೆಲಸ ಮಾಡುತ್ತಿಲ್ಲ. ನ್ಯಾಯಬೆಲೆ ಅಂಗಡಿಗಳಲ್ಲಿ ಗುಣಮಟ್ಟದ ಅಗತ್ಯ ವಸ್ತುಗಳು  ಸಿಗುತ್ತಿಲ್ಲ. ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ವಾಣಿಜ್ಯ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು.

ನರೇಗಾದಲ್ಲಿ ಕಾಯಂ ಕೆಲಸ ನೀಡುವುದು ಮತ್ತು ಕೂಲಿ ಹಣ ಹೆಚ್ಚಿಸುವುದು ಸೇರಿದಂತೆ ದೇಶದಾದ್ಯಂತ ಸ್ಥಳೀಯ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೈಲ್‌ ಭರೋ ಚಳವಳಿ ನಡೆಸಲಾಗುತ್ತಿದೆ’ ಎಂದರು.

‘ಜಾತ್ಯತೀತ ಸಂಘಟನೆಗಳು ಚಳವಳಿಗೆ ಬೆಂಬಲ ಸೂಚಿಸಿವೆ. ಜುಲೈ 23ರಂದು ಲಕ್ಷ್ಮೀ ಸೇಗಲ್ ನೆನಪಿನಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಿಳೆಯರ ಚಿತ್ರ ಪ್ರದರ್ಶನ ಆಯೋಜಿಸಿ ಅರಿವು ಮೂಡಿಸಲಾಗುತ್ತದೆ’ ಎಂದು ವಿವರಿಸಿದರು.

ಬಹುತ್ವಕ್ಕೆ ಧಕ್ಕೆ: ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ವಿಮಲಾ ಮಾತನಾಡಿ, ‘ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನರನ್ನು ಭಾವನಾತ್ಮಕವಾಗಿ ಪ್ರಚೋದನೆಗೆ ಒಳಪಡಿಸುತ್ತಾ ಹಿಂದುತ್ವಕ್ಕೆ ಮೊರೆ ಹೋಗಿ ಬಹುತ್ವಕ್ಕೆ ಧಕ್ಕೆ ತರುತ್ತಿದೆ. ರಾಷ್ಟ್ರೀಯತೆ ಹೆಸರಿನಲ್ಲಿ ನಡೆಯುತ್ತಿರುವ ಕುಕೃತ್ಯಗಳು ಹಾಗೂ ನಿಜವಾದ ರಾಷ್ಟ್ರೀಯತೆ ಮತ್ತು ರಾಷ್ಟ್ರವಾದದ ನಡುವಿನ ವ್ಯತ್ಯಾಸವನ್ನು ಸಂಘಟನೆಯು ಜನರಿಗೆ ತಿಳಿಸುತ್ತಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ಉದ್ಯಮಿಗಳ ಕೋಟ್ಯಂತರ ಸಾಲ ಮನ್ನಾ ಮಾಡುತ್ತದೆ. ಆದರೆ, ರೈತರ ₹ 75 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಮುಂದಾಗುತ್ತಿಲ್ಲ. ರೈತರ ಸಾಲ ಮನ್ನಾ ಮಾಡಬೇಕೆಂಬ ಬೇಡಿಕೆ ಆಧರಿಸಿ ಕರೆ ನೀಡಿರುವ ಜೈಲ್ ಭರೋ ಚಳವಳಿಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ಸಂಘಟನೆಯ ಕೇಂದ್ರ ಸಮಿತಿ ಸಭೆ ತೀರ್ಮಾನದಂತೆ ಕೆರೆ ಕಟ್ಟೆಗಳನ್ನು ಉಳಿಸಿ ಘೋಷಣೆಯಡಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಕೆರೆ, ಕಾಲುವೆಗಳ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಇದರಿಂದ ಕೂಲಿಕಾರರಿಗೆ ಕೆಲಸ ಸಿಗುತ್ತದೆ. ಜತೆಗೆ ಕುಸಿದಿರುವ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿಯ ಸಹಯೋಗದಲ್ಲಿ ಹಲವು ಕೆರೆಗಳ ಹೂಳು ತೆಗೆಯಲಾಗಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ ತಿಳಿಸಿದರು.

ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಕವಿತಾ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರಿ, ಬಂಗಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷೆ ಸರಸ್ವತಮ್ಮ, ಭಾರತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ವಾಸುದೇವರೆಡ್ಡಿ ಪಾಲ್ಗೊಂಡಿದ್ದರು.

ಪಾತಾಳಗಂಗೆ ಬೇಡ ಆಕಾಶ ಗಂಗೆ ಸಾಕು
‘ಪಾತಾಳಗಂಗೆ ಯೋಜನೆಯಡಿ ಆಯ್ಧ ಸ್ಥಳಗಳಲ್ಲಿ ನೀರು ಮೇಲೆೆತ್ತಲು ಸರ್ಕಾರ ತಲಾ ₹ 12 ಕೋಟಿ ಖರ್ಚು ಮಾಡುವ ಹರಸಾಹಸ ಬೇಡ. ಬದಲಿಗೆ ಆ ಹಣದಲ್ಲಿ ಎಲ್ಲಾ ಜಿಲ್ಲೆಗಳ ಕೆರೆಗಳನ್ನು ಪುನಶ್ಚೇತನಗೊಳಿಸಿ ಆಕಾಶ ಗಂಗೆಯಿಂದ ಬೀಳುವ ನೀರು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆ ಮಾಡಿದರೆ ಸಾಕು’ ಎಂದು ಮರಿಯಾ ದವಳೆ ಸಲಹೆ ನೀಡಿದರು.

‘ಸಂಘಟನೆಯು ಜಿಲ್ಲೆಯ 2,086 ಕೆರೆಗಳ ಪೈಕಿ ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ 20 ಕೆರೆಗಳಲ್ಲಾದರೂ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳೆತ್ತುವ ಕಾರ್ಯವನ್ನು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆರಂಭಿಸಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿ ಭವಿಷ್ಯದಲ್ಲಿ ಅನುಕೂಲವಾಗುತ್ತದೆ. ಹೂಳೆತ್ತಿದ ಕೆರೆಗಳ ಏರಿ ಭಾಗದಲ್ಲಿ ಪರಿಸರಸ್ನೇಹಿ ಗಿಡಗಳನ್ನು ನೆಡಬೇಕು. ಸರ್ಕಾರದ ಆದೇಶದಂತೆ ನೀಲಗಿರಿ ಮರಗಳನ್ನು ಶೀಘ್ರವೇ ತೆರವುಗೊಳಿಸಬೇಕು’ ಎಂದು ಒತ್ತಾಯಿಸಿದರು

* *

ಜಾತಿ, ಧರ್ಮ, ವರ್ಗದ ಹೆಸರಿನಲ್ಲಿ ಹಾದಿ ಬೀದಿಯಲ್ಲಿ ದಬ್ಬಾಳಿಕೆ, ಕೊಲೆಗಳು ನಡೆಯುತ್ತಿವೆ. ಜನ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ
ಮರಿಯಾ ದವಳೆ. ಪ್ರಧಾನ ಕಾರ್ಯದರ್ಶಿ,
ಜನವಾದಿ ಮಹಿಳಾ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT