ಭಾನುವಾರ, ಡಿಸೆಂಬರ್ 8, 2019
21 °C

ಕಣ್ಣೀರಿಟ್ಟು ಸುದ್ದಿಗೋಷ್ಠಿಯಿಂದ ಹೊರನಡೆದ ವೀನಸ್ ವಿಲಿಯಮ್ಸ್

Published:
Updated:
ಕಣ್ಣೀರಿಟ್ಟು ಸುದ್ದಿಗೋಷ್ಠಿಯಿಂದ ಹೊರನಡೆದ ವೀನಸ್ ವಿಲಿಯಮ್ಸ್

ಲಂಡನ್‌: ಅಮೆರಿಕದ ಅನುಭವಿ ಟೆನಿಸ್‌ ಆಟಗಾರ್ತಿ ವೀನಸ್‌ ವಿಲಿಯಮ್ಸ್‌ ಅವರು ಸುದ್ದಿಗೋಷ್ಠಿಯ ನಡುವೆ ಕಣ್ಣೀರು ಹಾಕಿ ಹೊರನಡೆದ ಪ್ರಸಂಗ ನಡೆದಿದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 10ನೇ ಕ್ರಮಾಂಕದಲ್ಲಿರುವ ವೀನಸ್‌ ಅವರು ವಿಂಬಲ್ಡನ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಬೆಲ್ಜಿಯಂನ ಎಲಿಸೆ ಮರ್ಟೆನ್ಸ್‌ ವಿರುದ್ಧ 7–6, 6–4 ಅಂತರದಲ್ಲಿ ಜಯ ಗಳಿಸಿದ್ದರು.

ಬಳಿಕ ನಡೆದ ಸುದ್ದಿಗೋಷ್ಠಿಯ ವೇಳೆ ಭಾವುಕರಾದ ಅವರು ಕಾರ್ಯಕ್ರಮದ ನಡುವೆ ಕಣ್ಣೀರು ಹಾಕಿ ಹೊರನಡೆದರು. ಕೆಲ ಸಮಯದ ಬಳಿಕ ಮತ್ತೆ ಹಾಜರಾಗಿ ಟೆನಿಸ್‌ಗೆ ಸಂಬಂಧಿಸಿದ ಸೀಮಿತ ಪ್ರಶ್ನೆಗಳಿಗಷ್ಟೆ ಉತ್ತರಿಸಿ ತೆರಳಿದರು.

ಕೆಲದಿನಗಳ ಹಿಂದೆ ಅಮೆರಿಕದ ಫ್ಲೋರಿಡಾದಲ್ಲಿರುವ ಪಾಮ್‌ ಬೀಚ್‌ ಗಾರ್ಡನ್‌ ಪ್ರದೇಶದಲ್ಲಿ ವೀನಸ್‌ ಅವರ ಕಾರು ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿತ್ತು. ಈ ವೇಳೆ ಜೆರೋಮ್‌ ಬಾರ್ಸನ್‌(78) ಎನ್ನುವವರ ತಲೆಗೆ ತೀವ್ರವಾಗಿ ಗಾಯವಾಗಿತ್ತು.

ಅಪಘಾತದ ಬಳಿಕ ಬಾರ್ಸನ್‌ ಅವರ ಪತ್ನಿ ಲಿಸಾ ಬಾರ್ಸನ್‌ ಅವರು, ‘ತಾವು ಸಂಚಾರ ನಿಯಮಕ್ಕನುಸಾರವಾಗಿ ಸರಿಯಾದ ಮಾರ್ಗದಲ್ಲಿಯೇ ತೆರಳುತ್ತಿದ್ದೆವು. ಆದರೆ, ರಸ್ತೆಯ ಮತ್ತೊಂದು ಬದಿಯಿಂದ ಅಡ್ಡಲಾಗಿ ನುಗ್ಗಿದ ವಿಲಿಯಮ್ಸ್‌ ಅವರ ಕಾರು ತಮ್ಮ ಕಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತು’ ಎಂದು ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ನಡೆಸಿದ ಪೋಲೀಸರು ಸಹ ಅಪಘಾತಕ್ಕೆ ವಿಲಿಯಮ್ಸ್‌ ಅವರು ಕಾರಣ ಎಂಬುದನ್ನು ಉಲ್ಲೇಖಿಸಿದ್ದರು. ಎರಡು ವಾರಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಬಾರ್ಸನ್‌ ಅವರು ಮೃತಪಟ್ಟಿದ್ದರು.

ಇದರಿಂದಾಗಿ ಆಘಾತಕ್ಕೊಳಗಾಗಿದ್ದ ವಿಲಿಯಮ್ಸ್‌ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿಯೂ ದುರಂತದ ಬಗ್ಗೆ ಮರುಕ ವ್ಯಕ್ತಪಡಿಸಿದ್ದರು.

ಟೆನಿಸ್‌ ಪಂದ್ಯಾವಳಿ ಆರಂಭಕ್ಕೆ ಕೆಲದಿನಗಳಿದ್ದಾಗ ನಡೆದಿದ್ದ ಈ ದುರಂತದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ‘ಈ ಬಗ್ಗೆ ನನ್ನಿಂದ ಉತ್ತರಿಸಲು ಸಾಧ್ಯವಿಲ್ಲ. ಆಘಾತಗೊಂಡಿದ್ದೇನೆ’ ಎಂದು ಹೇಳಿ ಕಣ್ಣೀರು ಹಾಕಿ ಸುದ್ದಿಗೋಷ್ಠಿಯಿಂದ ಹೊರನಡೆದಿದ್ದರು.

ಪ್ರತಿಕ್ರಿಯಿಸಿ (+)