ಶನಿವಾರ, ಡಿಸೆಂಬರ್ 7, 2019
16 °C

‘ರಾಯಲ್ ಬ್ರದರ್ಸ್’ ಬಾಡಿಗೆ ಬೈಕ್ ಕಂಪೆನಿ ಯಶೋಗಾಥೆ

Published:
Updated:
‘ರಾಯಲ್ ಬ್ರದರ್ಸ್’ ಬಾಡಿಗೆ ಬೈಕ್ ಕಂಪೆನಿ ಯಶೋಗಾಥೆ

ಅವರಿಬ್ಬರೂ ಗುರು–ಶಿಷ್ಯರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಬೋಧಿಸುತ್ತಿದ್ದ ಗುರು, ಸ್ಟಾರ್ಟ್‌ಅಪ್ ಆರಂಭಿಸುವ ಕನಸು ಹೊಂದಿದವರು. ಗುರುವಿನ ಮೆಚ್ಚಿನ ಶಿಷ್ಯನಿಗೂ ಓದು ಮುಗಿಸಿ, ಯಾವುದೋ ಕಂಪೆನಿಯಲ್ಲಿ ಚಾಕರಿ ಮಾಡುವ ಬದಲು ಸ್ವಂತ ಕಂಪೆನಿ ಆರಂಭಿಸುವ ಬಯಕೆ. ಸ್ವಂತ ಉದ್ಯಮದ ಕನಸು ಕಾಣುತ್ತಿದ್ದ ಗುರು–ಶಿಷ್ಯರೊಂದಿಗೆ ಮತ್ತೊಬ್ಬ ಸ್ನೇಹಿತ ಜತೆಯಾದ. ಕಡೆಗೆ ಮೂವರೂ ತಮ್ಮಲ್ಲಿದ್ದ ಅಲ್ಪಸ್ವಲ್ಪ ಹಣ ಹೊಂದಿಸಿ ₹10 ಲಕ್ಷದ ವಹಿವಾಟಿನ ಯೋಜನೆ ರೂಪಿಸಿದರು.

ಯೋಜನೆಯೇನೊ ತಯಾರಾಯ್ತು. ಆದರೆ, ಬಂಡವಾಳ ಹೊಂದಿಸುವುದು ಹೇಗೆ? ಕೈಯಲ್ಲಿ ಇದ್ದದ್ದು ಅಲ್ಪಸ್ವಲ್ಪ ಹಣವಷ್ಟೆ. ಆಗ ಅವರ ಮಹಾತ್ವಕಾಂಕ್ಷಿ ಯೋಜನೆಯ ನೆರವಿಗೆ ಬಂದವರು ಸ್ನೇಹಿತರು ಮತ್ತು ಸಂಬಂಧಿಕರು. ಅಂದುಕೊಂಡಂತೆ, ಈ ಕಾಲಕ್ಕೆ ಟ್ರೆಂಡಿ ಎನಿಸಿರುವ, ‘ರಾಯಲ್ ಬ್ರದರ್ಸ್‌- ಸೆಲ್ಫ್‌ ರೈಡ್ ಬೈಕ್ ರೆಂಟಲ್ಸ್‌’ ಎಂಬ ಬಾಡಿಗೆ ಬೈಕ್ ಕಂಪೆನಿ ಆರಂಭಿಸಿದರು. ಎರಡು ವರ್ಷಗಳ ಹಿಂದೆ ಆರಂಭಗೊಂಡ ಕಂಪೆನಿ, ಈಗ ದಕ್ಷಿಣ ಭಾರತದಾದ್ಯಂತ 18 ಶಾಖೆಗಳನ್ನು ಹೊಂದಿದೆ. ಅನೇಕ ಮಂದಿಗೆ ಉದ್ಯೋಗ ನೀಡಿರುವ ಕಂಪೆನಿಯ ವಾರ್ಷಿಕ ವಹಿವಾಟು ಸುಮಾರು 26 ಕೋಟಿ!

ಅಂದಹಾಗೆ ಇದು ಟಿ.ಎನ್. ಮಂಜುನಾಥ್, ಅಭಿಷೇಕ್ ಚಂದ್ರಶೇಖರ್ ಹಾಗೂ ಕೃಷ್ಣ ಅವರ ನವೋದ್ಯಮದ ಯಶೋಗಾಥೆ. ಈ ಪೈಕಿ, ಮಂಜುನಾಥ್ ಮತ್ತು ಅಭಿಷೇಕ್ ಗುರು– ಶಿಷ್ಯರಾದರೆ, ಕೃಷ್ಣ ಅವರು ಐ.ಟಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದಾರೆ.

ಮೊದಲು ಲೈಸನ್ಸ್ ಪಡೆದ ಕಂಪೆನಿ

‘ರಾಯಲ್‌ ಬ್ರದರ್ಸ್‌’ ಆರಂಭಕ್ಕೂ ಮುನ್ನ ಬೆಂಗಳೂರಿನಲ್ಲಿ ಎರಡು ಕಡೆಯಷ್ಟೆ, ಬಾಡಿಗೆ ಬೈಕ್‌ಗಳು ಸಿಗುತ್ತಿದ್ದವು. ದೆಹಲಿ ಮೂಲದವರು ಎರಡು ಗ್ಯಾರೇಜ್‌ಗಳಲ್ಲಿ ಕೆಲ ಬೈಕ್‌ಗಳನ್ನು ಇಟ್ಟುಕೊಂಡು ಬಾಡಿಗೆ ಕೊಡುತ್ತಿದ್ದರು. ಆದರೆ, ಅವರ್‍ಯಾರೂ ಪರವಾನಗಿ ಪಡೆದಿರಲಿಲ್ಲ. ಇತ್ತ ಬೈಕ್‌ ಟ್ಯಾಕ್ಸಿ ಓಡಾಟಕ್ಕೂ ನಿರ್ಬಂಧ ವಿಧಿಸಿದ್ದ ಸಾರಿಗೆ ಇಲಾಖೆ, ಅನಧಿಕೃತ ಬೈಕ್‌ ಟ್ಯಾಕ್ಸಿಗಳನ್ನು ಜಪ್ತಿ ಮಾಡುತ್ತಿತ್ತು.

‘ಕೆಲಸ ನಿಮಿತ್ತ ಯಾವುದಾದರೂ ಊರಿಗೆ ಹೋದರೆ, ಸ್ಥಳೀಯ ಓಡಾಟಕ್ಕೆ ಅಲ್ಲಿನ ಸಾರ್ವಜನಿಕ ಸಾರಿಗೆ ಬಳಸಬೇಕು. ಇಲ್ಲವಾದರೆ, ಆಟೊ ಅಥವಾ ಕಾರು ಬಾಡಿಗೆ ಮಾಡಿಕೊಂಡು ಓಡಾಡಬೇಕು. ಬಸ್‌ ಓಡಾಟ ನಿಧಾನವೆನಿಸಿದರೆ, ಬಾಡಿಗೆ ವಾಹನ ದುಬಾರಿ. ಹಾಗಾಗಿ, ಕಡಿಮೆ ವೆಚ್ಚ ಮತ್ತು ಶೀಘ್ರ ಓಡಾಟಕ್ಕೆ ಪರಿಹಾರವಾಗಿ ಬಾಡಿಗೆ ಬೈಕ್‌ ಕಂಪೆನಿಯನ್ನು ಆರಂಭಿಸುವ ಯೋಚನೆ ಮಾಡಿದೆವು. ಅದಕ್ಕೂ ಮುಂಚೆ ಗೋವಾದಲ್ಲಿ ಚಾಲ್ತಿಯಲ್ಲಿರುವ ಬಾಡಿಗೆ ಬೈಕ್ ಕುರಿತು ಅಧ್ಯಯನ ನಡೆಸಿದ್ದೆವು’ ಎನ್ನುತ್ತಾರೆ ಕಂಪೆನಿಯ ಸಹ ಸಂಸ್ಥಾಪಕರಲ್ಲೊಬ್ಬರಾದ ಟಿ.ಎನ್. ಮಂಜುನಾಥ್.

‘ಬಾಡಿಗೆ ಬೈಕ್‌ ಪರವಾನಗಿ ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ, ಇಂತಹದ್ದೊಂದು ಪ್ರಸ್ತಾವನೆಯನ್ನು ಸಾರಿಗೆ ಇಲಾಖೆಗೆ ಮೊದಲು ತೆಗೆದುಕೊಂಡು ಹೋಗಿದ್ದು ನಾವೇ. ಹಾಗಾಗಿ, ನಮ್ಮ ಅರ್ಜಿ ಅನೇಕ ಹಂತಗಳನ್ನು ದಾಟಬೇಕಿತ್ತು. ಹಲವು ತಿಂಗಳು ಅಲೆದ ಪರಿಣಾಮವಾಗಿ, ಕಡೆಗೂ ನಮ್ಮ ಅರ್ಜಿಯನ್ನು ಸಾರಿಗೆ ಆಯುಕ್ತರು, 2015 ಜುಲೈ 10ರಂದು ಬಾಡಿಗೆ ಬೈಕ್ ಆರಂಭಿಸಲು ಪರವಾನಗಿ ಕೊಟ್ಟರು. ಆ ಮೂಲಕ ರಾಜ್ಯವಷ್ಟೆ ಅಲ್ಲ, ದಕ್ಷಿಣ ಭಾರತದಲ್ಲೇ ಮೊದಲ ಸಲ ಪರವಾನಗಿ ಪಡೆದ ಹೆಗ್ಗಳಿಕೆ ನಮ್ಮದಾಯಿತು. ಆನಂತರ, ಸುಮಾರು 28 ಮಂದಿ ಬಾಡಿಗೆ ಬೈಕ್ ಆರಂಭಿಸಲು ಪರವಾನಗಿ ಪಡೆದರು’ ಎನ್ನತ್ತಾರೆ ಅವರು.

‘ರಾಯಲ್ ಎನ್‌ಫೀಲ್ಡ್‌’ನಿಂದ ಆರಂಭ

ಪರವಾನಗಿ ಸಿಕ್ಕ ಬಳಿಕ ಬೆಂಗಳೂರಿನ ಇಂದಿರಾನಗರದಲ್ಲಿ ಕಚೇರಿ ತೆರೆದು www.royalbrothers.in ಎಂಬ ವೆಬ್‌ಸೈಟ್ ರೂಪಿಸಿದ ಮೂವರು, ಕೇವಲ ಐದು ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳನ್ನಿಟ್ಟುಕೊಂಡು ಬಾಡಿಗೆ ಬೈಕ್ ಸೇವೆ ಆರಂಭಿಸಿದರು. ವೆಬ್‌ಸೈಟ್‌ ಮೂಲಕವೇ ಬೈಕ್ ಬುಕ್ಕಿಂಗ್, ಹಣ ಸ್ವೀಕಾರ, ಬೈಕ್ ಡೆಲಿವರಿ ಎಲ್ಲವನ್ನೂ ನಿರ್ವಹಿಸುವುದು ‘ರಾಯಲ್ ಬ್ರದರ್ಸ್‌’ ವಿಶೇಷ.

‘ಬೆಂಗಳೂರಿನಲ್ಲೀಗ ಹೊರನಗಿವರ ಸಂಖ್ಯೆ ಹೆಚ್ಚಾಗಿದೆ. ಸುತ್ತಮುತ್ತ ನೋಡಬಹುದಾದ ಹಲವು ಸ್ಥಳಗಳಿವೆ. ಅಲ್ಲದೆ, ಬುಲೆಟ್ ಬೈಕ್ ಈ ಕಾಲದ ಟ್ರೆಂಡ್. ಹಾಗಾಗಿ, ಅವುಗಳ ಮೂಲಕವೇ ಸೇವೆ ಆರಂಭಿಸಿದೆವು. ಬೇಡಿಕೆ ಹೆಚ್ಚಾದಾಗ, ಶಾಖೆಗಳನ್ನು ವಿಸ್ತರಿಸತೊಡಗಿದೆವು. ಸದ್ಯ ಬೆಂಗಳೂರಿನಲ್ಲೇ 14 ಶಾಖೆಗಳಿವೆ. ಅಲ್ಲದೆ, ರಾಜ್ಯದ ಪ್ರವಾಸಿ ಸ್ಥಳಗಳಾದ ಮೈಸೂರು, ಮಣಿಪಾಲ್, ಉಡುಪಿ, ಮಂಗಳೂರು, ಮಡಿಕೇರಿ, ಸಕಲೇಶಪುರ ಹಾಗೂ ಹುಬ್ಬಳ್ಳಿ–ಧಾರವಾಡ ಹಾಗೂ ಹೊರ ರಾಜ್ಯಗಳಲ್ಲೂ ಶಾಖೆಗಳನ್ನು ತೆರೆಯಲಾಗಿದೆ. ಒಟ್ಟು 65 ಮಂದಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎನ್ನುತ್ತಾರೆ ಕಂಪೆನಿ ಮತ್ತೊಬ್ಬ ಸಹ ಸಂಸ್ಥಾಪಕ ಅಭಿಷೇಕ್ ಚಂದ್ರಶೇಖರ್.

ಕಂಪೆನಿ ಬೆಳೆದಂತೆ ಬೈಕ್‌ ಬ್ರ್ಯಾಂಡ್‌ಗಳ ಸಂಖ್ಯೆಯೂ ಹೆಚ್ಚಿತು. ಐದು ಬೈಕ್‌ಗಳಿಂದ ಆರಂಭಗೊಂಡ ಬೈಕ್‌ಗಳ ಸಂಖ್ಯೆ 650ಕ್ಕೆ ಏರಿಕೆಯಾಗಿದೆ. ಇದೀಗ ಐಷಾರಾಮಿ ಹಾರ್ಲೆ ಡೇವಿಡ್‌ಸನ್ 750, ಡೆಟೊನಾ, ರಾಯಲ್‌ ಎನ್‌ಫೀಲ್ಡ್‌ (ಬುಲೆಟ್‌ನ ಇನ್ನಿತರ ಬಗೆಯ ಬೈಕ್‌ಗಳು ಲಭ್ಯ), ಯಮಹಾ ಎಫ್‌ಜೆಡ್, ಅವೆಂಜರ್, ಪಲ್ಸರ್, ಮೊಜೊ, ಹಿಮಾಲಯನ್, ಡ್ಯೂಕ್, ಡೊಮಿನರ್, ಬುಲೆಟ್, ಹೋಂಡಾ ಆ್ಯಕ್ಟಿವಾ ಸ್ಕೂಟರ್ ಸೇರಿದಂತೆ ವಿವಿಧ ಬಗೆಯ ಬೈಕ್‌ಗಳು ಬಾಡಿಗೆಗೆ ಲಭ್ಯ ಇವೆ.

ಬುಕ್ಕಿಂಗ್ ಹೇಗೆ?

ಕಂಪೆನಿಯ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿದಾಗ ತೆರೆದುಕೊಳ್ಳುವ ಬುಕ್ಕಿಂಗ್ ಪುಟದಲ್ಲಿ ಯಾವ ದಿನ, ಎಷ್ಟೊತ್ತಿಗೆ, ಎಲ್ಲಿ, ಯಾವ ಬೈಕ್ ಬೇಕು ಎಂದು ದಾಖಲಿಸಬೇಕು. ಆಯ್ಕೆ ಮಾಡಿಕೊಳ್ಳುವ ಬೈಕ್‌ನ ಆಧಾರದ ಮೇಲೆ ಬಾಡಿಗೆ ನಿಗದಿ ಮಾಡಲಾಗಿರುತ್ತದೆ. ಅಲ್ಲದೆ, ಇಂತಿಷ್ಟು ಹಣವನ್ನು ಮುಂಗಡವಾಗಿ ಪಾವತಿಸಬೇಕು. ಈ ಹಣವನ್ನು ಬೈಕ್ ಹಿಂದಿರುಗಿಸುವಾಗಿ ವಾಪಸ್ ನೀಡಲಾಗುತ್ತದೆ. ಚಾಲನಾ ಪರವಾನಗಿಯನ್ನು ಕಡ್ಡಾಯವಾಗಿ ಅಟ್ಯಾಚ್ ಮಾಡಿದ ಬಳಿಕ, ಮೊಬೈಲ್ ಸಂಖ್ಯೆ ಪರಿಶೀಲನೆ ನಡೆದು ಬುಕ್ಕಿಂಗ್ ಖಚಿತವಾಗುತ್ತದೆ. ಇವಿಷ್ಟು ಪ್ರಕ್ರಿಯೆಗಳು ಆನ್‌ಲೈನ್‌ ಮೂಲಕವೇ ನಡೆಯಲಿದೆ.

ನಂತರ ಕಂಪೆನಿಯವರು, ಕೇಳಿದ ಸಮಯ ಮತ್ತು ಸ್ಥಳಕ್ಕೆ ಬೈಕ್ ತಂದು ಕೊಡುತ್ತಾರೆ. ಈ ವೇಳೆ ಏನಾದರೂ ಗೊಂದಲ ಉಂಟಾದರೆ, ವೆಬ್‌ಸೈಟ್‌ನಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಪರಿಹರಿಸಿಕೊಳ್ಳಬಹುದು. ಅಲ್ಲದೆ, ನಿಗದಿತ ಅವಧಿಯೊಳಗೆ ಬೈಕ್ ಹಿಂದಿರುಗಿಸದಿದ್ದರೆ, ಹೆಚ್ಚುವರಿಯಾಗಿ ಹಣ ಪಾವತಿಸಬೇಕಾಗುತ್ತದೆ.

‘ಕನಿಷ್ಠ 12 ಗಂಟೆಯಿಂದ ಹಿಡಿದು ಗರಿಷ್ಠ 6 ತಿಂಗಳವರೆಗೆ ನಮ್ಮಲ್ಲಿ ಬೈಕ್‌ ಬಾಡಿಗೆ ಪಡೆಯುತ್ತಾರೆ. ಈ ಪೈಕಿ ವಿದೇಶಿಗರು, ಟೆಕ್ಕಿಗಳು, ವಿದ್ಯಾರ್ಥಿಗಳು, ಪ್ರವಾಸಿಗರು, ಖಾಸಗಿ ಉದ್ಯೋಗಿಗಳೇ ಹೆಚ್ಚು. ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಹೆಚ್ಚಿನ ಸಂಖ್ಯೆ ವಿದೇಶಿಗರು ಬೈಕ್‌ಗಳನ್ನು ಬಾಡಿಗೆ ಪಡೆಯುತ್ತಾರೆ. ಬೇಡಿಕೆಯ ಆಧಾರದ ಮೇಲೆ ವಾರಾಂತ್ಯದಂದು ಬಾಡಿಗೆ ದರದಲ್ಲಿ ಏರುಪೇರಾಗುತ್ತದೆ. ಇತರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲೇ ಹೆಚ್ಚು ಬಿಸಿನೆಸ್ ಆಗುತ್ತಿದೆ’ ಎಂದು ಕಂಪೆನಿಯ ಮತ್ತೊಬ್ಬ ಸಹ ಸಂಸ್ಥಾಪಕ ಶ್ರೀಕೃಷ್ಣ ಎನ್. ಗೌಡ ಮಾಹಿತಿ ನೀಡುತ್ತಾರೆ.

ದೇಶದಾದ್ಯಂತ ವಿಸ್ತರಣೆ

‘ರಾಯಲ್ ಬ್ರದರ್ಸ್’ ಹೊರ ರಾಜ್ಯಗಳಲ್ಲಷ್ಟೆ ಅಲ್ಲದೆ, ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪುದುಚೇರಿ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೂ ಚಾಚಿಕೊಂಡಿದೆ.

‘ಕೇವಲ ₹ 25 ಸಾವಿರ ಇಟ್ಟುಕೊಂಡು ಕಂಪೆನಿ ಆರಂಭಿಸಿದೆವು. ಇದೀಗ, ಕಂಪೆನಿಯ ವಾರ್ಷಿಕ ವಹಿವಾಟು ₹ 26 ಕೋಟಿ ತಲುಪಿದೆ. ನಾವೇ ₹ 2 ಕೋಟಿ ಹೂಡಿದ್ದೇವೆ. ಏಳು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪೆನಿಯನ್ನು ಇನ್ನು 12 ತಿಂಗಳಲ್ಲಿ ದೇಶದಾದ್ಯಂತ ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದೇವೆ. ಅದಕ್ಕೆ ಪೂರಕವಾಗಿ ಸದ್ಯದಲ್ಲೇ ಗುಜರಾತ್, ರಾಜಸ್ಥಾನ, ಚಂಡೀಗಡ, ಹರಿಯಾಣ ಹಾಗೂ ಅಸ್ಸಾಂನಲ್ಲಿ ಶಾಖೆಗಳನ್ನು ಆರಂಭಿಸಲಿದ್ದೇವೆ. ನಾವೂ ಬೆಳೆದು, ಬೇರೆಯವರನ್ನು ಬೆಳೆಸಬೇಕು ಎಂಬ ಉದ್ದೇಶದಿಂದ ಕಂಪೆನಿಯ ಫ್ರಾಂಚೈಸಿ ಕೊಡುತ್ತಿದ್ದೇವೆ’ ಎಂದು ಟಿ.ಎನ್. ಮಂಜುನಾಥ್ ಹೇಳುತ್ತಾರೆ.

ಫ್ರಾಂಚೈಸಿ ಪಡೆಯುವುದು ಹೇಗೆ?

ಪ್ರಾಂಚೈಸಿ ಪಡೆಯಲು ಇಚ್ಛಿಸುವವರು ಕನಿಷ್ಠ 7ರಿಂದ 10 ಬೈಕ್‌ಗಳನ್ನು ಹೊಂದಿರಬೇಕು. ಕಚೇರಿ ಜತೆಗೆ, ಬೈಕ್‌ಗಳ ನಿಲುಗಡೆಗೆ ಸ್ಥಳಾವಕಾಶ ಹೊಂದಿರಬೇಕು. ಅಂತಹವರಿಗೆ ಕಂಪೆನಿ ಅಗತ್ಯದ ಮೇರೆಗೆ ಬೈಕ್‌ಗಳನ್ನು ಒದಗಿಸುತ್ತದೆ. ಬುಕ್ಕಿಂಗ್‌ ಮಾಹಿತಿ ಜತೆಗೆ, ತಾಂತ್ರಿಕ ನೆರವು ಕೂಡ ಸಿಗಲಿದೆ.

ಆಸಕ್ತರು ಕಂಪೆನಿಯ ವೆಬ್‌ಸೈಟ್‌ www.royalbrothers.inಗೆ ಭೇಟಿ ನೀಡಬೇಕು. ಮೆನು ಕ್ಲಿಕ್‌ ಮಾಡಿದ ನಂತರ, Partner with us ಮೇಲೆ ಕ್ಲಿಕ್ಕಿಸಿದಾಗ, ಫ್ರಾಂಚೈಸಿ ಫಾರ್ಮ್ ತೆರೆದುಕೊಳ್ಳಲಿದೆ. ಅದನ್ನು ತುಂಬಿ Submit ಒತ್ತಬೇಕು. ಬಳಿಕ ಕಂಪೆನಿಯವರು ನಿಮ್ಮನ್ನು ಸಂಪರ್ಕಿಸಿ ಮಾತನಾಡುತ್ತಾರೆ. ಮಾಹಿತಿಗೆ ಮೊಬೈಲ್‌ ಸಂಖ್ಯೆ: 88842444700 ಮತ್ತು 9902424244.

**

ಶಾಖೆಗಳು ಎಲ್ಲೆಲ್ಲಿವೆ?

ಕರ್ನಾಟಕ:
ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ–ಮಣಿಪಾಲ್, ಕೊಡಗು, ಚಿಕ್ಕಮಗಳೂರು, ಸಕಲೇಶಪುರ, ಹುಬ್ಬಳ್ಳಿ– ಧಾರವಾಡ

ಆಂಧ್ರಪ್ರದೇಶ: ವಿಜಯವಾಡ, ವಿಶಾಖಪಟ್ಟಣ

ತೆಲಂಗಾಣ: ಹೈದರಾಬಾದ್

ಕೇರಳ: ತಿರುವನಂತಪುರ, ಕೊಚ್ಚಿ, ಅಲೆಪ್ಪಿ

ತಮಿಳುನಾಡು: ಚೆನ್ನೈ, ಕೊಯಮತ್ತೂರು, ಊಟಿ

ಅಂಡಮಾನ್ ಮತ್ತು ನಿಕೊಬಾರ್ ದ್ವೀಪ: ಪೋರ್ಟ್‌ಬ್ಲೇರ್ ಪುದುಚೇರಿ

**

ಎಂಜಿನ್ ಇಮ್ಮೊಬೈಲೈಸರ್

ಬಾಡಿಗೆದಾರರು ಜಿಪಿಎಸ್‌ ಕಣ್ತಪ್ಪಿಸಿ, ಬೈಕ್‌ನೊಂದಿಗೆ ಪರಾರಿಯಾಗಲು ಸಾಧ್ಯವಿಲ್ಲ. ಏಕೆಂದರೆ, ಪ್ರತಿ ಬೈಕ್‌ಗಳಿಗೆ ಎಂಜಿನ್ ಇಮ್ಮೊಬೈಲೈಸರ್ ಅಳವಡಿಸಿರಲಾಗುತ್ತದೆ. ಬಾಡಿಗೆದಾರ ಅಂತಹ ಯತ್ನ ನಡೆಸಿದ್ದು ಕಂಡುಬಂದರೆ, ಇಮ್ಮೊಬೈಲೈಸರ್‌ಗೆ ಕೇಂದ್ರ ಕಚೇರಿಯಿಂದ ಸಂದೇಶ ಹೋಗುತ್ತದೆ. ಆಗ, ಬೈಕ್‌ ಲಾಕ್‌ ಆಗುತ್ತದೆಯಲ್ಲದೆ, ಮುಂದಕ್ಕೆ ಸಾಗುವುದಿಲ್ಲ. ಹೀಗೆ, ಜಿಪಿಎಸ್‌ ಮತ್ತು ಎಂಜಿನ್‌ ಇಮ್ಮೊಬೈಲೈಸರ್ ಮೂಲಕ ಬೈಕ್‌ಗಳ ಮೇಲೆ, ಕಂಪೆನಿ ದಿನದ ಇಪ್ಪತ್ತನಾಲ್ಕು ತಾಸು ನಿಗಾ ಇಟ್ಟಿರುತ್ತದೆ.

**

ಜಿಪಿಎಸ್ ವ್ಯವಸ್ಥೆ

ಕದಿಯುವುದು ಅಸಾಧ್ಯ ಬಾಡಿಗೆ ಬೈಕ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿರುತ್ತದೆ. ಬಾಡಿಗೆದಾರ ಎಲ್ಲಿ, ಯಾವ ವೇಗದಲ್ಲಿ ಹೋಗುತ್ತಿದ್ದಾನೆ, ಎಲ್ಲೆಲ್ಲಿ ನಿಲ್ಲಿಸಿದ್ದಾನೆ ಎಂಬ ಮಾಹಿತಿ ಕೇಂದ್ರ ಕಚೇರಿಯಲ್ಲಿರುವವರಿಗೆ ಗೊತ್ತಾಗುತ್ತಿರುತ್ತದೆ. ಬೈಕ್ ಏನಾದರೂ ಕೆಟ್ಟರೆ ಸಮೀಪದ ಶಾಖೆಗೆ ಮಾಹಿತಿ ರವಾನಿಸಲಾಗುತ್ತದೆ. ಆಗ ಸಿಬ್ಬಂದಿ ಬಂದು ದುರಸ್ತಿ ಮಾಡಿ ಕೊಡಲಿದ್ದಾರೆ. ಶಾಖೆ ಇಲ್ಲದಿದ್ದರೆ, ಸಮೀಪದ ಗ್ಯಾರೇಜ್‌ನವರಿಗೆ ಕನೆಕ್ಟ್ ಮಾಡಿ ಕೊಡಲಾಗುವುದು. ಒಂದು ವೇಳೆ, ಅಪಘಾತದಂತಹ ಅನಾಹುತಗಳು ಸಂಭವಿಸಿದರೆ, ಸಮೀಪದ ಆಸ್ಪತ್ರೆ ಮತ್ತು ಪೊಲೀಸ್‌ ಠಾಣೆಗೆ ಕೂಡಲೇ ಮಾಹಿತಿ ನೀಡಲಾಗುವುದು.

ಪ್ರತಿಕ್ರಿಯಿಸಿ (+)