ಬುಧವಾರ, ಡಿಸೆಂಬರ್ 11, 2019
20 °C

ಆಪ್ತಸಮಾಲೋಚಕ ‘ಯುವರ್‌ ದೋಸ್ತ್‌’

Published:
Updated:
ಆಪ್ತಸಮಾಲೋಚಕ ‘ಯುವರ್‌ ದೋಸ್ತ್‌’

ವಿದ್ಯಾರ್ಥಿ ದೆಸೆಯಿಂದ ಹಿಡಿದು ಬದುಕಿನ ವಿವಿಧ ಹಂತಗಳಲ್ಲಿ ಪ್ರತಿಯೊಬ್ಬರೂ ಹಲವು ಬಗೆಯ ಮಾನಸಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾರೆ. ಖಿನ್ನತೆಯನ್ನು ಯಾರ ಬಳಿಯೂ ಹೇಳಿಕೊಳ್ಳದೆ ಒಳಗೊಳಗೆ ಸಂಕಟ ಪಡುತ್ತಾರೆ. ಇದಕ್ಕೆ ಸಿನಿಮಾ, ಕ್ರೀಡಾ ಜಗತ್ತಿನ ಖ್ಯಾತನಾಮರೂ ಹೊರತಲ್ಲ. ದೀಪಿಕಾ ಪಡುಕೋಣೆ, ಕರಣ್‌ ಜೋಹರ್‌ ಅಂತಹವರೂ ತಾವು ಕೂಡ ಖಿನ್ನತೆಗೆ ಒಳಗಾಗಿರುವುದನ್ನು ಹೇಳಿಕೊಂಡಿದ್ದಾರೆ.

ಮಾನಸಿಕ ತಜ್ಞರ ಬಳಿ ಹೋದರೆ ಸಮಾಜ ಏನೆಂದುಕೊಳ್ಳುವುದೋ ಎಂದು ಇನ್ನಷ್ಟು ಘಾಸಿಗೊಳ್ಳುತ್ತಾರೆ. ಆಪ್ತ ಸಮಾಲೋಚಕರ ಬಳಿ ಎಡತಾಕಿದರೆ, ಜನರು ತನಗೆ ಹುಚ್ಚನ ಪಟ್ಟ ಕಟ್ಟಿಬಿಟ್ಟಾರು ಎಂದು ತಾವೇ ತೀರ್ಮಾನಕ್ಕೂ ಬರುತ್ತಾರೆ. ಜನಸಾಮಾನ್ಯರಿಂದ ಹಿಡಿದು, ಖ್ಯಾತನಾಮರೂ ಇಂತಹ ಮಾನಸಿಕ ತುಮುಲದಿಂದ ಬಳಲುತ್ತಾರೆ.

ತಂತ್ರಜ್ಞಾನ ಇಷ್ಟೆಲ್ಲ ಬೆಳೆದಿರುವಾಗ ಮನೆ, ಕಚೇರಿಯಲ್ಲಿ ಇದ್ದುಕೊಂಡೇ ಯಾರೊಬ್ಬರಿಗೂ ಗೊತ್ತಾಗದಂತೆ ಮನದ ತೊಳಲಾಟವನ್ನು ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಲು ಖಿನ್ನತೆಯಿಂದ ಹೊರಬರಲು ಸಾಧ್ಯವೇ ಎನ್ಮುವ ಪ್ರಶ್ನೆಗಳಿಗೆ ಆನ್‌ಲೈನ್‌ನಲ್ಲಿ ಇರುವ ‘ಯುವರ್‌ ದೋಸ್ತ್‌’ ತಾಣವು ಸಮರ್ಪಕ ಉತ್ತರ ನೀಡುತ್ತಿದೆ.

ಆಪ್ತ ಸಮಾಲೋಚಕರ ಬಳಿ ಹೋಗುವುದೇ ಅನೇಕರಿಗೆ ಮುಜುಗರದ ಸಂಗತಿ. ಅವರನ್ನು ಸಮಾಜ ನೋಡುವ ಬಗೆಯೇ ಬೇರೆ ಎನ್ನುವುದಕ್ಕೂ ಇಲ್ಲಿ ಪರಿಹಾರ ಇದೆ. ಸಂಸ್ಥೆಯ ಸಹ ಸ್ಥಾಪಕಿಯಾಗಿರುವ ರೀಚಾ ಸಿಂಗ್ ಅವರು 2008ರಲ್ಲಿ ಗುವಾಹಟಿಯ ಐಐಟಿಯಲ್ಲಿ ಓದುವಾಗ ಅವರ ಸಹಪಾಠಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ತನ್ನ ನಿರೀಕ್ಷೆಗೆ ತಕ್ಕಂತೆ ಗರಿಷ್ಠ ಸಂಬಳದ ವೇತನ ಸಿಗದಿರುವುದೇ ಆತನ ಆತ್ಮಹತ್ಯೆಗೆ ಕಾರಣವಾಗಿರುತ್ತದೆ. ಉನ್ನತ ಶಿಕ್ಷಣ ಓದುವವರಲ್ಲಿಯೂ ಕಾಡುವ ಅಭದ್ರತೆ ಭಾವನೆಯ ಹಿಂದಿನ ಕಾರಣಗಳನ್ನು ತಿಳಿಯಲು ರಿಚಾ ಸಿಂಗ್‌ ಅವರು ನಡೆಸಿದ ಪ್ರಯತ್ನ ಮತ್ತು ಸಂಶೋಧನೆಗಳ ಫಲವಾಗಿ ಈ ಆನ್‌ಲೈನ್‌ ಆಪ್ತ ಸಮಾಲೋಚನಾ ತಾಣ ರೂಪುಗೊಂಡಿದೆ.

ರೀಚಾ ಸಿಂಗ್‌ ಮತ್ತು ಅವರ ಪತಿ ಪುನೀತ್‌ ಮನುಜ ಜತೆಯಾಗಿ ಈ ವಹಿವಾಟನ್ನು ಬೆಂಗಳೂರಿನಿಂದ ನಿರ್ವಹಿಸುತ್ತಿದ್ದಾರೆ. ಈ ವಹಿವಾಟಿನ ಮೂಲಕ ಅಸಂಖ್ಯ ಜನರ ಬಾಳಿಗೆ ಬೆಳಕು ನೀಡಲು ಶ್ರಮಿಸುತ್ತಿದ್ದಾರೆ. ಐಐಟಿಯಲ್ಲಿಯೇ ಮನಶಾಸ್ತ್ರಜ್ಞರು ಇದ್ದರೂ, ಅನೇಕರು ಅಲ್ಲಿಗೆ ತೆರಳಿ ತಮ್ಮನ್ನು ಕಾಡುವ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿರಲಿಲ್ಲ. ಸಹಪಾಠಿಗಳು ಏನೆಂದುಕೊಂಡಾರು ಎನ್ನುವ ಆತಂಕದಿಂದಾಗಿಯೇ ಅಲ್ಲಿಗೆ ಹೋಗುತ್ತಿರಲಿಲ್ಲ. ಇದು ಬರೀ ಐಐಟಿ ವಿದ್ಯಾರ್ಥಿಗಳ ಸಮಸ್ಯೆಯಲ್ಲ. ಇದಕ್ಕೆ ಬೇರೆಯೇ ಆದ ಸಾಮಾಜಿಕ ಆಯಾಮಗಳು ಇವೆ ಎಂದು ಈ ದಂಪತಿ ಕಂಡುಕೊಂಡರು.

ಆಪ್ತ ಸಮಾಲೋಚಕರ ಸೇವೆಯನ್ನು ಅಂತರ್ಜಾಲದ ಮೂಲಕ ನೀಡಿದರೆ, ಅಸಂಖ್ಯ ಜನರ ಹತ್ತಾರು ಬಗೆಯ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಭಾವಿಸಿ ಆ ನಿಟ್ಟಿನಲ್ಲಿ ಪರಿಶ್ರಮ ಪಟ್ಟಿದ್ದರಿಂದ ಈ ತಾಣ ರೂಪುಗೊಂಡಿದೆ.ವಿದ್ಯಾರ್ಥಿ ಬದುಕು, ವೃತ್ತಿ ಆಯ್ಕೆ, ನಿರುದ್ಯೋಗ ಭೀತಿ, ಬದುಕಿನ ಅನಿಶ್ಚಿತತೆ, ವೈವಾಹಿಕ ಸಂಬಂಧದಲ್ಲಿನ ಬಿರುಕು, ಅನ್ಯರ ಖಾಸಗಿ ಬದುಕಿನಲ್ಲಿ ಇಣುಕಿ ನೋಡುವ ಚಪಲ... ಹೀಗೆ ಪ್ರತಿಯೊಬ್ಬರೂ ಬದುಕಿನ ಒಂದಲ್ಲ ಒಂದು ಹಂತದಲ್ಲಿ ಎದುರಿಸುವ ಮಾನಸಿಕ ಸಮಸ್ಯೆಗಳಿಗೆ ಈ ತಾಣ ಪರಿಹಾರ ಸೂಚಿಸುತ್ತದೆ.

ಮನಶಾಸ್ತ್ರಜ್ಞರು, ವೃತ್ತಿ ಸಲಹೆಗಾರರು ಮತ್ತು ಆಪ್ತ ಸಮಾಲೋಚಕರು ಇಲ್ಲಿ ದಿನದ 24 ಗಂಟೆಗಳ ಕಾಲ ಲಭ್ಯ ಇರಲಿದ್ದಾರೆ. 20 ಭಾಷೆಗಳಲ್ಲಿ ಸಲಹೆ ನೀಡುವ ಪರಿಣತರ ದೊಡ್ಡ ಪಡೆಯೇ ಇಲ್ಲಿದೆ. ಹದಿಹರೆಯದವರ, ಮಧ್ಯವಯಸ್ಕರ ಲೈಂಗಿಕ ಸಮಸ್ಯೆಗಳಿಗೂ ಇಲ್ಲಿ ಪರಿಹಾರ ಸೂಚಿಸುವ ಸಲಹೆ ನೀಡುವ ಪರಿಣತರೂ ಇದ್ದಾರೆ.

‘ನಗರೀಕರಣ, ವಿಭಕ್ತ ಕುಟುಂಬ, ಒಂಟಿ ಬದುಕು, ಒತ್ತಡದ ಜೀವನ, ಬದುಕಿನ ಬಗೆಗಿನ ಅತಿಯಾದ ನಿರೀಕ್ಷೆಗಳು ಇತ್ತೀಚಿನ ದಿನಗಳಲ್ಲಿ ಜನರ ಮಾನಸಿಕ ಸಂಕಟ ಹೆಚ್ಚಿಸಿದೆ’ ಸಂಸ್ಥೆಯ ಸಹ ಸ್ಥಾಪಕ ಎಂದು ಪುನೀತ್‌ ಮನುಜ ಅವರು ಹೇಳುತ್ತಾರೆ. ಪರಿಚಿತರ ಜತೆ ಮಾನಸಿಕ ತೊಳಲಾಟ ತೋಡಿಕೊಳ್ಳದ ಸಂಕಟ, ಎಲ್ಲದಕ್ಕೂ ಇಲ್ಲಿ ಪರಿಹಾರ ಇದೆ. ದಿನದ 24 ಗಂಟೆಗಳ ಕಾಲ ಇಲ್ಲಿ ಆಪ್ತ ಸಮಾಲೋಚಕರು ಲಭ್ಯ ಇರಲಿದ್ದಾರೆ. ವ್ಯಕ್ತಿಗಳು ತಾವು ಎದುರಿಸುವ ಸಮಸ್ಯೆಗಳ ತೀವ್ರತೆ ಆಧರಿಸಿ ಸಮಾಲೋಚನಾ ಸಭೆಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ನಿಗದಿ ಮಾಡಬಹುದು.

ಒತ್ತಡದ ಕಾರಣಗಳೇನು? ಜನರು ಸಮಾಲೋಚಕರ ಬಳಿ ಏಕೆ ಹೋಗುವುದಿಲ್ಲ. ಇದಕ್ಕೇನು ಪರಿಹಾರ ಎನ್ನುವ ಸಮಸ್ಯೆಗಳಿಗೆ ಕಂಡುಕೊಂಡ ಉತ್ತರವೇ ‘ಯುವರ್‌ ದೋಸ್ತ್’ ಅಂತರ್ಜಾಲ ತಾಣ. ಬದುಕಿನ ಹತ್ತಾರು ಬೇಕುಗಳು ಈಡೇರದೆ ಹೋದಾಗ ಅನೇಕರು ಕುಸಿದು ಹೋಗುತ್ತಾರೆ. ಸಂಕೀರ್ಣ ಬದುಕಿನ ಸಿಕ್ಕುಗಳಿಂದ ಹೊರಬರಲಾಗದೆ ಒದ್ದಾಡುತ್ತಾರೆ. ಅಂತಹವರಿಗೆಲ್ಲ ಈ ತಾಣ ಭರವಸೆಯ ಬೆಳಕು ನೀಡುತ್ತಿದೆ.

‘ನಾನು ನಿನ್ನ ಸ್ನೇಹಿತ. ನನ್ನೆದರು ಯಾವುದೇ ಮುಚ್ಚುಮರೆ ಇಲ್ಲದೆ ಎಲ್ಲವನ್ನೂ ಹೇಳಿಕೊಳ್ಳು. ನಿನಗೆ ಅನುಕೂಲಕರ ಸಮಯ ನೋಡಿಕೊಂಡು ನೋವು ತೋಡಿಕೊ. ನಾನು ನಿನ್ನ ಸಮಸ್ಯೆಗೆ ಪರಿಹಾರ ನೀಡುವೆ’ ಎಂದು ಯುವರ್‌ ದೋಸ್ತ್‌ ಆಶಾವಾದ ಮೂಡಿಸುತ್ತದೆ.

ಇಲ್ಲಿ ವ್ಯಕ್ತಿಗಳು ತಮ್ಮ ಗುರುತು – ಪರಿಚಯ ಬಹಿರಂಗಪಡಿಸದೆ ತಮ್ಮೆಲ್ಲ ಮಾನಸಿಕ ಅನುಮಾನಗಳಿಗೆ ಪರಿಹಾರ ಕಂಡುಕೊಳ್ಳಬಹುದು.

‘ಇಲ್ಲಿ ಹಂಚಿಕೊಂಡ ಮಾಹಿತಿಯನ್ನೆಲ್ಲವನ್ನು ಗೋಪ್ಯವಾಗಿ ಇರಿಸಲಾಗುವುದು. ಯಾರ ಕೈಗೂ ಎಟುಕಲಾರವು. ಯಾರೊಂದಿಗೂ ಹಂಚಿಕೊಳ್ಳುವ ಸಾಧ್ಯತೆಯೇ ಇಲ್ಲಿ ಇಲ್ಲ’ ಎಂದು ಪುನೀತ್‌ ಮನುಜ ಅವರು ಭರವಸೆ ನೀಡುತ್ತಾರೆ. ಮನಶಾಸ್ತ್ರಜ್ಞರು, ವೃತ್ತಿ ಮಾರ್ಗದರ್ಶಕರು ಮತ್ತು ಸಮಾಲೋಚಕರು– ಹೀಗೆ ಮೂರು ಬಗೆಯ ಪರಿಣತರು ಇಲ್ಲಿ ಮಾರ್ಗದರ್ಶನ ನೀಡುತ್ತಾರೆ. ಪ್ರಾಥಮಿಕ ಹಂತದ ಸಲಹೆ ಉಚಿತವಾಗಿರುತ್ತದೆ. ದೂರವಾಣಿ, ವಿಡಿಯೊ ಮೂಲಕ ಸಲಹೆ ಪಡೆಯಬಹುದು. ಮೊಬೈಲ್‌, ಕಂಪ್ಯೂಟರ್‌ ಮೂಲಕ ಆರಾಮವಾಗಿ, ಮುಜುಗರ, ಹಿಂಜರಿಕೆ ಇಲ್ಲದೆ ಸಲಹೆ ಪಡೆಯಬಹುದು. ಅಗತ್ಯ ಬಿದ್ದರೆ ಆಪ್ತ ಸಮಾಲೋಚಕರ ಜತೆ ಮುಖಾಮುಖಿ ಭೇಟಿಗೂ ಅವಕಾಶ ಇದೆ. ನಿರ್ದಿಷ್ಟ ವ್ಯಕ್ತಿ,ಪ್ರಕರಣಗಳು ಮುಖಾಮುಖಿಗೆ ಸಲಹೆ ನೀಡಲಾಗುವುದು.

ಸಮಾಲೋಚನೆ ಸಂದರ್ಭದಲ್ಲಿ ಇಬ್ಬರ ಮಧ್ಯೆ ಮಾತ್ರ ಮಾಹಿತಿ ವಿನಿಮಯ ಆಗಿರುತ್ತದೆ. ಬದುಕಿನಲ್ಲಿ ಯಾರೊಬ್ಬರ ಜತೆಗೂ ಹಂಚಿಕೊಳ್ಳಲಾಗದ ರಹಸ್ಯ ಮಾಹಿತಿಗಳನ್ನೆಲ್ಲ ಇಲ್ಲಿ ಸಮಾಲೋಚಕರ ಜತೆ ಹಂಚಿಕೊಂಡು ನಿರಾಳವಾಗಬಹುದು. ಅಂತಹ ಮಾಹಿತಿಯನ್ನೆಲ್ಲವನ್ನು ಗೋಪ್ಯವಾಗಿ ಇಡಲಾಗುವುದು.

"ಎರಡು ಮತ್ತು ಮೂರನೇ ಹಂತದಲ್ಲಿನ ಜನರನ್ನೂ ತಲುಪುವುದು. ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಸೇವಾ ಶುಲ್ಕದಲ್ಲಿ ರಿಯಾಯ್ತಿ ಇದೆ' ಎಂದು ಪುನೀತ್‌ ಮನುಜ ಹೇಳುತ್ತಾರೆ. ಸಂಸ್ಥೆಯ ಅಂತರ್ಜಾಲ ತಾಣದ ವಿಳಾಸ – https://yourdost.com/

ಪ್ರತಿಕ್ರಿಯಿಸಿ (+)