ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಮಾಧ್ಯಮದ ಸುದ್ದಿಗಳ ವಿಶ್ವಾಸಾರ್ಹತೆ

Last Updated 4 ಜುಲೈ 2017, 19:30 IST
ಅಕ್ಷರ ಗಾತ್ರ

ಸಾಮಾಜಿಕ ಮಾಧ್ಯಮಗಳು ಹೆಚ್ಚಾದಂತೆಲ್ಲಾ ಸುಳ್ಳು ಸುದ್ದಿ ಹಬ್ಬುವುದೂ ಹೆಚ್ಚಾಗುತ್ತಿದೆ. ಇದರಿಂದ ಜನ ಸಾಮಾನ್ಯರು ಈಗ ಮುಖ್ಯವಾಹಿನಿಯ ಸುದ್ದಿಗಳನ್ನು ನಂಬಲು ಕೂಡಾ ಹಿಂದೇಟು ಹಾಕುವಂತಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಸುದ್ದಿಗಳ ಬಗ್ಗೆ ಸಾಕಷ್ಟು ಜನರಿಗೆ ಅನುಮಾನವೇ ಹೆಚ್ಚು ಎಂಬ ಅಂಶ ಅಧ್ಯಯನಗಳಿಂದ ಬೆಳಕಿಗೆ ಬಂದಿದೆ.

ಅದರಲ್ಲೂ ವಲಸೆ ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಸುದ್ದಿಗಳನ್ನು ಜನ ಅಳೆದೂ ತೂಗಿ ನೋಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತದೆ ರಾಯಿಟರ್ಸ್‌ ಇನ್‌ಸ್ಟಿಟ್ಯೂಟ್‌ ಇತ್ತೀಚೆಗೆ ನಡೆಸಿದ ಅಧ್ಯಯನವೊಂದು.

ಈ ಅಧ್ಯಯನ ವರದಿಯ ಪ್ರಕಾರ, ಜಗತ್ತಿನ ಬಹುತೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನು ಅನುಮಾನದಿಂದಲೇ ನೋಡುತ್ತಾರೆ. ಈ ಅಧ್ಯಯನಕ್ಕಾಗಿ ಜಗತ್ತಿನ 36 ದೇಶಗಳ ಸುಮಾರು 70 ಸಾವಿರ ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇವರಲ್ಲಿ ಶೇಕಡ 33ರಷ್ಟು ಜನ ತಾವು ಸಾಮಾಜಿಕ ಮಾಧ್ಯಮಗಳ ಸುದ್ದಿಗಳನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಶೇಕಡ 24ರಷ್ಟು ಜನ ಸಾಮಾಜಿಕ ಮಾಧ್ಯಮಗಳ ಸುದ್ದಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಿಂದ ಒಳ್ಳೆಯ ಪರಿಣಾಮಗಳೂ ಇವೆ ಎನ್ನುತ್ತಾರೆ ಈ ವರ್ಗದ ಜನ.

ಅಮೆರಿಕ ಮತ್ತು ಬ್ರಿಟನ್‌ಗಳಲ್ಲಿ ಸುಳ್ಳು ಸುದ್ದಿಗಳಿಂದ ಜನ ಬೇಸತ್ತಿದ್ದಾರೆ. ಇಲ್ಲಿ ಸುಳ್ಳು ಸುದ್ದಿಗಳ ಪರಿಣಾಮ ಎಷ್ಟರಮಟ್ಟಿಗೆ ಇದೆ ಎಂದರೆ ಮುಖ್ಯ ವಾಹಿನಿಯ ಮಾಧ್ಯಮಗಳ ಸುದ್ದಿಯನ್ನೇ ಜನ ಅನುಮಾನದಿಂದ ನೋಡುವುದು ಹೆಚ್ಚಾಗಿದೆ ಎನ್ನುತ್ತದೆ ಈ ಅಧ್ಯಯನ ವರದಿ. ಈ ದೇಶಗಳಿಗೆ ಹೋಲಿಸಿದರೆ ಸಾಮಾಜಿಕ ಮಾಧ್ಯಮಗಳ ಸುದ್ದಿಗಳನ್ನು ತಕ್ಕಮಟ್ಟಿಗೆ ನಂಬುವ ದೇಶ ಎಂದರೆ ಗ್ರೀಸ್‌ ಎನ್ನುತ್ತದೆ ಈ ಅಧ್ಯಯನ.

‘ಹೆಚ್ಚಿನ ಜನ ಸಾಮಾಜಿಕ ಮಾಧ್ಯಮಗಳ ಸುದ್ದಿಗಳಿಗಿಂತ ಹೆಚ್ಚು ನಂಬುವುದು ಮುಖ್ಯವಾಹಿನಿಯ ಸುದ್ದಿಗಳನ್ನೇ. ಸಾಮಾಜಿಕ ಮಾಧ್ಯಮಗಳ ಸುದ್ದಿಗಳ ಮೇಲಿನ ನಂಬಿಕೆಗಿಂತ ಎರಡು ಪಟ್ಟು ವಿಶ್ವಾಸ ಮುಖ್ಯವಾಹಿನಿಯ ಸುದ್ದಿಗಳ ಮೇಲಿದೆ’ ಎನ್ನುತ್ತಾರೆ ಈ ಅಧ್ಯಯನ ವರದಿಯ ಮುಖ್ಯ ಲೇಖಕ ನಿಕ್‌ ನ್ಯೂಮನ್‌.

‘ಪತ್ರಿಕೋದ್ಯಮದ ದೀರ್ಘಾವಧಿ ಪರಿಣಾಮಗಳನ್ನು ನೋಡುವುದಾದರೆ ಸುಳ್ಳು ಸುದ್ದಿಗಳಿಂದ ಮುಖ್ಯವಾಹಿನಿಯ ಮಾಧ್ಯಮಗಳಿಗೆ ಒಳಿತೇ ಆಗಬಹುದು. ಮಾಧ್ಯಮಗಳು ತಮ್ಮ ಗುಣಮಟ್ಟ ಹಾಗೂ ಮೌಲ್ಯಗಳ ಕುರಿತಂತೆ ಆತ್ಮಾವಲೋಕನ ಮಾಡಿಕೊಳ್ಳಲು ಇದು ಅವಕಾಶ ಒದಗಿಸುತ್ತದೆ’ ಎನ್ನುತ್ತಾರೆ ನ್ಯೂಮನ್‌.

ಬಹುತೇಕ ಸಂದರ್ಭಗಳಲ್ಲಿ ಸಾಮಾಜಿಕ ಮಾಧ್ಯಮಗಳ ಸುದ್ದಿಗಳನ್ನು ಆಧರಿಸಿ ಮುಖ್ಯವಾಹಿನಿ ಮಾಧ್ಯಮಗಳು ಸುದ್ದಿ ಪ್ರಕಟಿಸುವುದರಿಂದ ಇಂತಹ ಸುದ್ದಿಗಳು ಹೆಚ್ಚಿನ ಜನರನ್ನು ತಲುಪುತ್ತವೆ. ಇದರಿಂದ ಸುದ್ದಿಯೊಂದು ಸುಳ್ಳು ಎಂದು ಗೊತ್ತಾಗುವ ಹೊತ್ತಿಗೆ ಅದು ಸಾಕಷ್ಟು ನಕಾರಾತ್ಮಕ ಪರಿಣಾಮಗಳನ್ನು ಬೀರಿರುವ ಸಾಧ್ಯತೆ ಇರುತ್ತದೆ. ಆದರೆ, ಸಾಮಾಜಿಕ ಮಾಧ್ಯಮಗಳ ಮೂಲಕ ಬರುವ ಸುದ್ದಿಗಳೆಲ್ಲವೂ ಸುಳ್ಳು ಸುದ್ದಿಗಳಲ್ಲ ಎನ್ನುತ್ತಾರೆ ನ್ಯೂಮನ್‌.

‘ಜನರು ಸಾಮಾಜಿಕ ಮಾಧ್ಯಮಗಳನ್ನು ದೂಷಿಸುವುದು ಸಾಮಾನ್ಯ. ಆದರೆ, ಯಾವ ರಾಷ್ಟ್ರಗಳಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ಸರ್ಕಾರದ ಹಿಡಿತದಲ್ಲಿರುತ್ತವೆಯೋ ಅಂತಹ ಕಡೆಗಳಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ ಬಹಳ ಮುಖ್ಯವಾಗುತ್ತದೆ’ ಎನ್ನುತ್ತಾರೆ ಅವರು.

ಮುಖ್ಯವಾಹಿನಿಯ ಮಾಧ್ಯಮಗಳು ಸರ್ಕಾರದ ಹಿಡಿತದಲ್ಲಿರುವ ರಾಷ್ಟ್ರಗಳಲ್ಲಿ ಸಾಮಾಜಿಕ ಮಾಧ್ಯಮಗಳೇ ಮುಖ್ಯವಾದ ಸುದ್ದಿ ವಾಹಕಗಳಂತೆ ಕಾರ್ಯನಿರ್ವಹಿಸುತ್ತವೆ. ಇಂತಲ್ಲಿ ಸಾಮಾಜಿಕ ಮಾಧ್ಯಮಗಳ ಪರಿಣಾಮ ಸಕಾರಾತ್ಮಕವಾಗಿದೆ. ಹೀಗಾಗಿ ಸುಳ್ಳು ಸುದ್ದಿಗಳ ವಿಚಾರದಿಂದಷ್ಟೇ ಸಾಮಾಜಿಕ ಮಾಧ್ಯಮಗಳ ಬಗ್ಗೆ ತೀರ್ಪು ಕೊಡುವುದು ಸರಿಯಲ್ಲ.

-ಬೆಲಿಂದಾ ಗೋಲ್ಡ್‌ಸ್ಮಿತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT