ಭಾನುವಾರ, ಡಿಸೆಂಬರ್ 8, 2019
21 °C

ಶಮಿತಾ ಇತಿವೃತ್ತಾಂತ..

Published:
Updated:
ಶಮಿತಾ ಇತಿವೃತ್ತಾಂತ..

-ಸುರುಪಶ್ರೀ

**

‘ಮೊಹಬ್ಬತೆ’ ಸಿನಿಮಾದ ಮೂಲಕ ‘ಬಿ ಟೌನ್‌’ ಪ್ರವೇಶಿಸಿದವರು ನಟಿ ಶಮಿತಾ ಶೆಟ್ಟಿ. ಅಕ್ಕನಂತೆ ಸಿನಿಮಾರಂಗ ಇವರಿಗೆ ಅದೃಷ್ಟ ತರಲಿಲ್ಲ. ಆದರೆ ನಟನೆ ಅವರ ಇಷ್ಟದ ಕ್ಷೇತ್ರ. ಒಳಾಂಗಣ ವಿನ್ಯಾಸದಲ್ಲಿ ಎತ್ತಿದ ಕೈ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಶಮಿತಾ ಸುರುಪಶ್ರೀ ಜತೆ ಕುಶಲೋಪರಿ ನಡೆಸಿದ್ದಾರೆ.

* ನಿಮಗೆ ಓದುವ ಹವ್ಯಾಸವಿದೆಯೇ?

ಒಂದು ಕಡೆ ಕುಳಿತು ಪುಸ್ತಕ ಓದು ಎಂದರೆ ನನ್ನಿಂದ ಸಾಧ್ಯವಿಲ್ಲ. ಆರೋಗ್ಯ. ಆಧ್ಯಾತ್ಮಿಕ ಹಾಗೂ ಫಿಟ್‌ನೆಸ್‌ಗಳ ಬಗ್ಗೆ ಪುಸ್ತಕ ಕೊಟ್ಟರೆ ಓದುತ್ತೇನೆ.

* ಎಂತಹ ಪಾದರಕ್ಷೆ ನಿಮಗೆ ಇಷ್ಟ?

ಹೀಲ್ಸ್ ನನ್ನ ಫೇವರಿಟ್‌. ಹೊರಗೆ ಹೋಗುವಾಗ ಹೈ ಹೀಲ್ಸ್‌ ಧರಿಸಲು ಇಷ್ಟಪಡುತ್ತೇನೆ.

* ನಿಮ್ಮ ಪ್ಲೇಲಿಸ್ಟ್‌ನಲ್ಲಿರುವ ಹಾಡುಗಳು ಯಾವುವು?

ಕೇನಿ ಪೆರಿಯ ‘ಬಾನ್ ಅಪ್ಪೀಟ್‌‘, ಜಾನ್ಸನ್ ಡ್ಯಾರೆಲೋ ಅವರ ‘ಸ್ವಾಲಾ‘, ಹಾಗೂ ಚೇನ್ ಸ್ಮೋಕರ್ ಅವರ ‘ಸಮ್‌ಥಿಂಗ್ ಜಸ್ಟ್ ಲೈಕ್‌ ದಿಸ್’.

* ನಿಮ್ಮ ಮನೆ ಸಮುದ್ರ ದಡದಲ್ಲಿರಬೇಕಾ? ಪೆಂಟ್‌ಹೌಸ್ ಇಷ್ಟವೇ?

ಸಮುದ್ರ ದಡದಲ್ಲಿರೋ ಮನೆ ನನಗೆ ತುಂಬಾ... ತುಂಬಾ ಇಷ್ಟ. ಶಾಂತವಾಗಿರುವ ಅಲೆಗಳ ಸದ್ದು ಮನಸ್ಸಿಗೆ ಉಲ್ಲಾಸ ನೀಡುತ್ತದೆ.

* ನೀವು ಯಾವ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತೀರಿ?

ನನಗೆ ಬಾಹ್ಯ ಸೌಂದರ್ಯ ಮಾತ್ರ ಮುಖ್ಯವಲ್ಲ. ಆಂತರಿಕ ಸೌಂದರ್ಯವೂ ಮುಖ್ಯ. ಹೆಚ್ಚು ಮೇಕಪ್ ಮಾಡಿಕೊಳ್ಳುವುದಿಲ್ಲ. ವಿವಿಧ ರೀತಿಯ ಕೇಶವಿನ್ಯಾಸ ಮಾಡಿಕೊಳ್ಳುವುದನ್ನು ಇಷ್ಟಪಡುತ್ತೇನೆ.

* ರಿಯಾಲಿಟಿ ಷೋಗಳಲ್ಲಿ ಭಾಗವಹಿಸಿದ ಅನುಭವ ತಿಳಿಸಿ?

ನನ್ನ ಜೀವನದಲ್ಲಿ ನಾನು ಯಾವುದಕ್ಕೂ ಯೋಜನೆ ಹಾಕಿಕೊಳ್ಳುವುದಿಲ್ಲ. ‘ಜಲಕ್ ದಿಕ್ ಲಾಜಾ’ ಹಾಗೂ ‘ಬಿಗ್‌ಬಾಸ್’ ರಿಯಾಲಿಟಿ ಷೋಗಳಲ್ಲಿ ಭಾಗವಹಿಸಿದ್ದೇನೆ. ಈಗ ನನ್ನನ್ನು ಸೆಳೆಯುವ ಯಾವುದೇ ರಿಯಾಲಿಟಿ ಷೋಗಳಿಲ್ಲ ಅಂದುಕೊಂಡಿದ್ದೇನೆ.

* ನೃತ್ಯ ಹಾಗೂ ನಟನೆಯಲ್ಲಿ ನಿಮ್ಮ ಆಯ್ಕೆ?

ನೃತ್ಯ ನನಗೆ ಇಷ್ಟ. ಈ ಎರಡರಲ್ಲಿ ನನ್ನ ಆಯ್ಕೆ ನಟನೆ. ಯಾಕೆಂದರೆ ಅಲ್ಲಿ ನಾನಿನ್ನೂ ಪಳಗಿಲ್ಲ.

* ಒಳಾಂಗಣ ವಿನ್ಯಾಸದಲ್ಲಿ ಹೆಸರು ಮಾಡಿದ್ದೀರಿ...

ಸಿನಿಮಾದಲ್ಲಿ ಹಲವು ಅವಕಾಶಗಳು ಬಂದವು. ಆದರೆ ಕಥೆ ನನಗೆ ಇಷ್ಟವಾಗಲಿಲ್ಲ. ಹೇಗೂ ಬಿಡುವಾಗಿದ್ದೇನೆ ಎಂದು ಭಾವನ (ಶಿಲ್ಪಾ ಶೆಟ್ಟಿ ಅವರ ಗಂಡ ರಾಜ್‌ ಕುಂದ್ರಾ) ಕ್ಲಬ್‌ಗೆ ಒಳಾಂಗಣ ವಿನ್ಯಾಸ ಮಾಡಿದೆ. ನಂತರ ಈ ಕ್ಷೇತ್ರದಲ್ಲಿ ಆಸಕ್ತಿ ಮೂಡಿತು. ಈ ಕೆಲಸ ನನ್ನನ್ನು ಒಳಾಂಗಣ ವಿನ್ಯಾಸ ಕಲಿಕೆಗೆ ಲಂಡನ್‌ಗೆ ಹೋಗುವಂತೆ ಮಾಡಿತು.

* ವೆಬ್‌ ಸಿರೀಸ್‌ನಲ್ಲಿ ನಟಿಸುತ್ತಿದ್ದಿರಿ. ಅದೇನಾಯ್ತು?

ನಾನು ಈಗ ವೆಬ್ ಸಿರೀಸ್‌ವೊಂದರಲ್ಲಿ ನಟಿಸುತ್ತಿದ್ದೇನೆ. ಮುಂದಿನ ತಿಂಗಳಲ್ಲಿ ತೆರೆಗೆ ಬರಲಿದೆ. ಬೇರೆ ಪ್ರಕಾರಗಳಿಗಿಂತ ವೆಬ್ ಸಿರೀಸ್ ಭಿನ್ನವಾಗಿದೆ. ಇವುಗಳಿಗೆ ಯಾವುದೇ ನಿರ್ಬಂಧಗಳಿಲ್ಲ. ನಿರ್ದೇಶಕರು ಬಹಳಷ್ಟು ಪ್ರಯೋಗಗಳನ್ನು ಮಾಡಬಹುದು.

ಪ್ರತಿಕ್ರಿಯಿಸಿ (+)