ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೂಪದರ್ಶಿ ಅಂದ್ರೆ ಸೌಂದರ್ಯವಷ್ಟೇ ಅಲ್ಲ’

Last Updated 4 ಜುಲೈ 2017, 19:30 IST
ಅಕ್ಷರ ಗಾತ್ರ

* ಮಾಡೆಲಿಂಗ್ ಕ್ಷೇತ್ರಕ್ಕೆ ಹೇಗೆ ಬಂದಿರಿ?
ನಾನು ಕಾಲೇಜು ದಿನಗಳಲ್ಲಿ ಪುಣೆ, ಮಂಗಳೂರಿನಲ್ಲಿ ನಡೆಯುವ ಹಲವು ಫ್ಯಾಷನ್ ಷೋಗಳಲ್ಲಿ ಭಾಗವಹಿಸುತ್ತಿದ್ದೆ. ಫ್ಯಾಷನ್ ಲೋಕದಲ್ಲಿ ವಿಶೇಷ ಆಸಕ್ತಿ ಇತ್ತು. ಮಾಡೆಲಿಂಗ್ ನನ್ನ ಪ್ಯಾಶನ್. ವಿದ್ಯಾಭ್ಯಾಸ ಮುಗಿದ ಮೇಲೆ ರೂಪದರ್ಶಿಯಾಗು ಎಂದು ಮನೆಯವರು ಹೇಳಿದರು. ನನಗೂ ಹಾಗೇ ಎನಿಸಿತು. ವಿದ್ಯಾಭ್ಯಾಸ ಮುಗಿದ ನಂತರ, ಮಾಡೆಲಿಂಗ್‌ ಕ್ಷೇತ್ರಕ್ಕೆ ಬಂದೆ.

* ನಿಮ್ಮ ಊರು, ಉದ್ಯೋಗ...
ನಾನು ಮಂಗಳೂರಿನವಳು, ಬೆಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿಕೊಂಡು, ಪಿಎಚ್‌ಡಿ ಕೂಡ ಮಾಡುತ್ತಿದ್ದೇನೆ.

* ಮಿಸೆಸ್ ಇಂಡಿಯಾ ಕರ್ನಾಟಕ ವಿಭಾಗದ ಮೊದಲ ರನ್ನರ್‌ ಅಪ್ ಆಗಿದ್ದೀರಿ, ಅದರ ಅನುಭವ?
ಸ್ಪರ್ಧೆಯಲ್ಲಿ ನಾವು 27 ಮಹಿಳೆಯರು ಅಂತಿಮ ಪಟ್ಟಿಯಲ್ಲಿದ್ದೆವು. ಇದು ಕೇವಲ ಸೌಂದರ್ಯಕ್ಕಷ್ಟೆ ಸೀಮಿತವಾದ ಸ್ಪರ್ಧೆಯಲ್ಲ. ಅಲ್ಲಿ ವಿವಿಧ ಹಂತದ ಸ್ಪರ್ಧೆಗಳಿದ್ದವು. ಪ್ರತಿಭಾ ಪ್ರದರ್ಶನದ ಸುತ್ತು, ಗೌನ್ ಸುತ್ತು, ಕ್ರೀಡಾ ಸುತ್ತು. ಸಾಂಪ್ರದಾಯಿಕ ಉಡುಗೆ ಸುತ್ತು, ರಸಪ್ರಶ್ನೆ ಸುತ್ತು ಹೀಗೆ ವಿವಿಧ ಹಂತದಲ್ಲಿ ನಮ್ಮ ವ್ಯಕ್ತಿತ್ವ ಅವಾವರಣಗೊಂಡಿತು. ಅಂತಿಮವಾಗಿ ಕ್ರೌನ್‌ ವಿನ್ನರ್ ಒಬ್ಬರು ಆಯ್ಕೆಯಾದರು, ನಾನು ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದೆ.

* ಹಲವು ವರ್ಷಗಳ ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ವಾಪಸ್ ಬಂದಿದ್ದೀರಿ...
ಓದುವ ವಯಸ್ಸಿನಲ್ಲಿ ಮನೆಯವರು ವಿದ್ಯಾಭ್ಯಾಸದ ಮೇಲೆ ಹೆಚ್ಚು ಗಮನಹರಿಸುವಂತೆ ಒತ್ತಾಯಿಸಿದ್ದರು. ಹಾಗಾಗಿ ಮಾಡೆಲಿಂಗ್‌ನಲ್ಲಿ ಸಂ ಪೂರ್ಣ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ಉದ್ಯೋಗ, ಸಂಸಾರದ ನಡುವೆ ಮಾಡೆಲಿಂಗ್‌ ಕ್ಷೇತ್ರವನ್ನು ಸಂಪೂರ್ಣ ಮರೆತುಬಿಟ್ಟಿದ್ದೆ. ಕೊನೆಗೂ ನನ್ನಿಷ್ಟದ ಮಾಡೆಲಿಂಗ್ ಕ್ಷೇತ್ರಕ್ಕೆ ವಾಪಸ್ಸು ಬಂದೆ. ಈಗ ಖುಷಿಯಾಗುತ್ತಿದೆ.

* ಮಾಡೆಲಿಂಗ್ ಕ್ಷೇತ್ರದಲ್ಲಿ ನೀವು ಗಮನಿಸಿರುವ ಬದಲಾವಣೆ...
ಹಲವು ವಿಚಾರಗಳಲ್ಲಿ ಫ್ಯಾಷನ್ ಲೋಕ ಬದಲಾಗಿದೆ. ನಾನು ವಸ್ತ್ರ ವಿನ್ಯಾಸದಲ್ಲಿ ಬದಲಾಗುವ ಟ್ರೆಂಡ್‌ಗೆ ತಕ್ಕಂತೆ ಬಟ್ಟೆಗಳನ್ನೇ ಧರಿಸುತ್ತಿದ್ದೆ. ಆದರೆ ಪ್ರಸಾಧನ ವಿಚಾರದಲ್ಲಿ ಸ್ವಲ್ಪ ಹಿಂದುಳಿದಿದ್ದೆ. ಮಾರುಕಟ್ಟೆಗೆ ಹೊಸ ಹೊಸ ಬ್ರಾಂಡ್‌ಗಳ ಉತ್ಪನ್ನಗಳು ಬರುತ್ತಲೇ ಇರುತ್ತವೆ. ಅದರ ಬಗ್ಗೆ ನನಗೆ ಅಷ್ಟಾಗಿ ಮಾಹಿತಿ ಇರಲಿಲ್ಲ. ಈಗ ಕಲಿತುಕೊಳ್ಳುತ್ತಿದ್ದೇನೆ. ಮೇಕಪ್ ಹಚ್ಚಿಕೊಳ್ಳುವ ವಿಧಾನವೂ ಬದಲಾಗಿದೆ.

* ಮಧ್ಯವಯಸ್ಕ ಮಹಿಳೆಯರೂ ಮಾಡೆಲಿಂಗ್ ಕ್ಷೇತ್ರಕ್ಕೆ ಬರುವುದು ಈಗ ಟ್ರೆಂಡ್‌ ಆಗುತ್ತಿದೆ...
ಹೌದು, ಈ ಮೊದಲು 16 ವರ್ಷದ ಯುವತಿಯರಿಗೆ ಮಾಡೆಲಿಂಗ್‌ ಕ್ಷೇತ್ರ ಮೀಸಲು ಎನ್ನುತ್ತಿದ್ದರು. ಈಗ ಫ್ಯಾಷನ್ ಕ್ಷೇತ್ರದ ವ್ಯಾಖ್ಯಾನ ಬದಲಾಗುತ್ತಿದೆ. ಸುಂದರವಾಗಿರುವುದು, ಎತ್ತರವಿರುವುದು, ಬಳುಕುವ ಬಳ್ಳಿಯಂಥ ಯುವತಿಯರಷ್ಟೇ ಮಾಡೆಲಿಂಗ್‌ ಕ್ಷೇತ್ರಕ್ಕೆ ಬರಬೇಕು ಎಂಬುದೇನಿಲ್ಲ. ಸೌಂದರ್ಯಕ್ಕಷ್ಟೇ ಫ್ಯಾಷನ್ ಷೋಗಳು ಸೀಮಿತವಾಗಿಲ್ಲ. ನಮ್ಮೊಳಗಿನ ಆತ್ಮವಿಶ್ವಾಸ, ವ್ಯಕ್ತಿತ್ವ, ಪ್ರತಿಭೆಯನ್ನೂ ಈ ವೇದಿಕೆಯಲ್ಲಿ ಗುರುತಿಸುತ್ತಾರೆ.

* ಮಹಿಳೆಯರಿಗೆ ನಿಮ್ಮ ಸಂದೇಶ...
ಮಲ್ಟಿ ಟಾಸ್ಕ್‌ ಮಾಡಿ. ನನಗೆ 9 ವರ್ಷದ ಮಗನಿದ್ದಾನೆ. ಉದ್ಯೋಗವಿದೆ, ಖಾಸಗಿ ಶಾಲೆ, ಸ್ವಯಂಸೇವಾ ಸಂಸ್ಥೆಗಳಲ್ಲಿ ಆಪ್ತ ಸಲಹೆಗಾರ್ತಿಯಾಗಿ ಕೆಲಸ ಮಾಡುತ್ತಿದ್ದೇನೆ. ಈಗ ಮಾಡೆಲಿಂಗ್‌ ಅವಕಾಶಗಳೂ ಸಿಗುತ್ತಿವೆ. ಎಲ್ಲರಿಗೂ ಒಂದು ಹವ್ಯಾಸವಿರುತ್ತದೆ. ವೃತ್ತಿಗೂ ಮೀರಿ ಹಲವು ಆಸಕ್ತಿಗಳಿರುತ್ತವೆ. ಸಂಸಾರ, ಮನೆ, ಮಕ್ಕಳು ಎನ್ನುತ್ತಾ ಅದನ್ನೆಲ್ಲಾ ಮರೆಯಬಾರದು. ನಿಮಗಾಗಿಯೇ ಒಂದಿಷ್ಟು ಸಮಯವನ್ನು ಎತ್ತಿಟ್ಟುಕೊಳ್ಳಿ. ನಿಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಿ.

* ನಿಮ್ಮ ಹವ್ಯಾಸಗಳು...
ಸಾಹಸ ಯಾತ್ರೆಗಳು ಇಷ್ಟ. ಪರ್ವತಾರೋಹಣ ಮಾಡುತ್ತಿರುತ್ತೇನೆ. ಇದರೊಂದಿಗೆ ಆಪ್ತ ಸಲಹೆಗಾರ್ತಿಯಾಗಿ ನೊಂದವರಿಗೆ, ವೈಯಕ್ತಿಕ ಸಮಸ್ಯೆ ಇರುವವರಿಗೆ ಸಮಾಧಾನ ಮಾಡುತ್ತೇನೆ. ಅದು ಬಿಟ್ಟರೆ ಮಾಡೆಲಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT