ಸೋಮವಾರ, ಡಿಸೆಂಬರ್ 16, 2019
18 °C
ಎಂಆರ್‌ಪಿ ಮುದ್ರಿಸದ ತಯಾರಕರ ವಿರುದ್ಧ ಕಠಿಣ ಕ್ರಮ: ಪಾಸ್ವಾನ್‌

ಪರಿಷ್ಕೃತ ದರ ಮುದ್ರಿಸಲು ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಷ್ಕೃತ ದರ ಮುದ್ರಿಸಲು ಅವಕಾಶ

ನವದೆಹಲಿ: ಮೊದಲೇ ಪ್ಯಾಕ್‌ ಮಾಡಿದ ಸರಕುಗಳ ಮೇಲೆ ಗರಿಷ್ಠ ಮಾರಾಟ ದರ (ಎಂಆರ್‌ಪಿ) ಒಳಗೊಂಡ ಪರಿಷ್ಕೃತ ದರ ಮುದ್ರಿಸಲು  ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಇದರಿಂದಾಗಿ ಜಿಎಸ್‌ಟಿ ಜಾರಿಗೆ ಮುನ್ನ ಮಾರಾಟವಾಗದೆ ಉಳಿದಿರುವ ದಾಸ್ತಾನಿಗೆ ಸಂಬಂಧಿಸಿದ ಅನುಮಾನಗಳು ದೂರವಾಗಲಿವೆ. ಬದಲಾದ ಎಂಆರ್‌ಪಿಯನ್ನು ಮುದ್ರೆ  ಹಾಕಿ ಇಲ್ಲವೆ ಸ್ಟಿಕ್ಕರ್‌ ಅಂಟಿಸಿ ಪ್ರದರ್ಶಿಸಬೇಕು ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಮೂಲ ಎಂಆರ್‌ಪಿ ಮುಂದುವರೆಸಬೇಕು. ಜತೆಗೆ, ಪರಿಷ್ಕೃತ ದರವನ್ನೂ ಮುದ್ರಿಸಬೇಕು. ಮೂಲ ಎಂಆರ್‌ಪಿ ಮೇಲೆ ಹೊಸ ದರ ಮುದ್ರಿಸಬಾರದು. ಎರಡನ್ನೂ ಪ್ರತ್ಯೇಕವಾಗಿ ಗುರುತಿಸುವಂತಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಸರಕಿನ ಮಾರಾಟ ದರದಲ್ಲಿನ ಬದಲಾವಣೆ ಪ್ರದರ್ಶಿಸಲು ಮೂರು ತಿಂಗಳವರೆಗೆ ಅವಕಾಶ ಮಾಡಿಕೊಟ್ಟಿದೆ.

ಮಾರಾಟವಾಗದ ಸರಕುಗಳು ಎಲ್ಲ ಬಗೆಯ ತೆರಿಗೆ ಒಳಗೊಂಡ ಎಂಆರ್‌ಪಿ ಹೊಂದಿದ್ದವು. ಜಿಎಸ್‌ಟಿ ಜಾರಿಯಿಂದಾಗಿ ಕೆಲ ಸರಕುಗಳ ಮಾರಾಟ ಬೆಲೆ ಬದಲಾಗಿದೆ.  ವಿವಿಧ ಹಂತದ ತೆರಿಗೆ ದರದ ಕಾರಣಕ್ಕೆ ಸರಕುಗಳ ಬೆಲೆಗಳು ಏರಿಳಿತ ಕಂಡಿವೆ. 

‘ಹಳೆಯ ಎಂಆರ್‌ಪಿಯನ್ನು ಉಳಿಸಿಕೊಂಡೇ, ಹೊಸ ದರ ಪ್ರತ್ಯೇಕವಾಗಿ ಅಂಟಿಸಬೇಕು’ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಅವಿನಾಶ್‌ ಶ್ರೀವಾಸ್ತವ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಾರಾಟವಾಗದೆ ಉಳಿದಿರುವ ಸರಕುಗಳ ಬೆಲೆ ಹೆಚ್ಚಳಗೊಂಡಿದ್ದರೆ ತಯಾರಕರು, ಪ್ಯಾಕ್‌ ಮಾಡಿದವರು ಅಥವಾ ಆಮದುದಾರರು ಬೆಲೆ ಬದಲಾವಣೆ ಬಗ್ಗೆ ಕನಿಷ್ಠ  ಎರಡು ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು.

ಸೆಪ್ಟೆಂಬರ್‌ 30ರ ನಂತರ, ಮೊದಲೇ ಪ್ಯಾಕ್‌ ಆಗಿರುವ ಸರಕುಗಳ ಮೇಲಿನ ಮುದ್ರಿತ ಎಂಆರ್‌ಪಿ ಬೆಲೆಯು ಜಿಎಸ್‌ಟಿಯನ್ನೂ ಒಳಗೊಂಡಿರಬೇಕು. ಅದಕ್ಕೆ ಹೆಚ್ಚುವರಿ ಸ್ಟಿಕ್ಕರ್ಸ್‌ ಅಂಟಿಸಿರಬಾರದು ಎಂದೂ ಸರ್ಕಾರ ನಿಬಂಧನೆ ವಿಧಿಸಿದೆ.

ಕಾನೂನು ಕ್ರಮದ ಎಚ್ಚರಿಕೆ: ಪರಿಷ್ಕೃತ ಎಂಆರ್‌ಪಿ ಮುದ್ರಿಸದ ತಯಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಎಚ್ಚರಿಸಿದ್ದಾರೆ.

‘ಜಿಎಸ್‌ಟಿ ಫಲವಾಗಿ ಬೆಲೆ ಕುಸಿತದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸದ, ಪರಿಷ್ಕೃತ ಎಂಆರ್‌ಪಿ ಘೋಷಿಸದ ಮಾರಾಟಗಾರರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ’ ಎಂದು ಪಾಸ್ವಾನ್‌ ಸರಣಿ ಟ್ವೀಟ್‌ ಮಾಡಿದ್ದಾರೆ. ಸರಕುಗಳ ಮೇಲೆ ಪರಿಷ್ಕೃತ ದರ ಮುದ್ರಿಸುವುದರಿಂದ, ಜಿಎಸ್‌ಟಿ ಜಾರಿ ನಂತರ ಪ್ರತಿ ಸರಕಿನ ಎಂಆರ್‌ಪಿ ಎಷ್ಟು ಎನ್ನುವುದು ಗ್ರಾಹಕರ ಗಮನಕ್ಕೆ ಬರಬೇಕಾದ ಅಗತ್ಯ ಇದೆ’ ಎಂದು ಹೇಳಿದ್ದಾರೆ.

***

ಬೆಲೆ, ಪೂರೈಕೆ ಮೇಲೆ ನಿಗಾ: ಹಸ್ಮುಖ್ ಆಧಿಯಾ

‘ರಾಷ್ಟ್ರೀಯ ಮಾರಾಟ ತೆರಿಗೆ ಜಿಎಸ್‌ಟಿ ಜಾರಿಗೆ ಬಂದ ನಂತರದ ದಿನಗಳಲ್ಲಿ ದಿನಬಳಕೆಯ ಅವಶ್ಯಕ ಸರಕುಗಳ ಪೂರೈಕೆ ಮತ್ತು ಬೆಲೆ ಮಟ್ಟದ ಮೇಲೆ ಕೇಂದ್ರ ಸರ್ಕಾರ ತೀವ್ರ ನಿಗಾ ಇರಿಸಿದೆ’ ಎಂದು ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್ ಆಧಿಯಾ ಹೇಳಿದ್ದಾರೆ.

‘ಕಂಪೋಸಿಷನ್‌ ಯೋಜನೆಯಡಿ ಬರುವ ಸಣ್ಣ – ಪುಟ್ಟ ವರ್ತಕರು ನಿರ್ದಿಷ್ಟ  ತೆರಿಗೆ ಪಾವತಿಸುವುದರಿಂದ ಬಿಲ್‌ ನೀಡುವ ಅಗತ್ಯ ಇಲ್ಲ.

‘₹ 75 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವಾರ್ಷಿಕ ವಹಿವಾಟು ನಡೆಸುವವರು ಬಿಲ್‌ ನೀಡಬೇಕು. ಕಂಪ್ಯೂಟರ್‌ನಿಂದಲೇ   ಪಡೆದ ಬಿಲ್‌ ನೀಡಬೇಕೆಂಬ ನಿಬಂಧನೆ ಇಲ್ಲ.  ಸೂಕ್ತ ಸರಕುಪಟ್ಟಿ ಸಂಖ್ಯೆ ಒಳಗೊಂಡ ಬರಹ ರೂಪದ ಬಿಲ್‌ ನೀಡಬಹುದು. ರಿಟರ್ನ್ಸ್‌ನಲ್ಲಿ ಈ ಮಾಹಿತಿ ಭರ್ತಿ ಮಾಡಬೇಕು.

‘ಟೋಲ್‌, ಮಾರುಕಟ್ಟೆ ಶುಲ್ಕ ಮತ್ತು  ರಾಜ್ಯದ ಒಳಗೆ ವಾಹನಗಳ ಪ್ರವೇಶ ಶುಲ್ಕಗಳನ್ನು ಜಿಎಸ್‌ಟಿಯಲ್ಲಿ ಸೇರಿಸಲಾಗಿಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆಗಳು ಅಥವಾ ರಾಜ್ಯ ಸರ್ಕಾರಗಳು ಈ ತೆರಿಗೆಗಳನ್ನು ವಸೂಲಿ ಮಾಡಬಹುದಾಗಿದೆ.

‘ಸರಕುಗಳ ಮೇಲಿನ ಎಲ್ಲ ಬಗೆಯ ತೆರಿಗೆಗಳು ಜಿಎಸ್‌ಟಿಯಲ್ಲಿ ಅಂತರ್ಗತಗೊಂಡಿವೆ. ಹೀಗಾಗಿ 22 ರಾಜ್ಯಗಳಲ್ಲಿ  ಪ್ರವೇಶ ಅಡೆತಡೆಗಳನ್ನು ನಿವಾರಿಸಲಾಗಿದೆ.

ಜಿಎಸ್‌ಟಿ ಜಾರಿಗೆ ಬಂದ ನಂತರ, ಎಲ್ಲಿಯೂ ಯಾವುದೇ ಬಗೆಯ ಅಡಚಣೆ   ವರದಿಯಾಗಿಲ್ಲ. ಉನ್ನತ 15 ಮಂದಿ ಕಾರ್ಯದರ್ಶಿಗಳನ್ನು ಒಳಗೊಂಡ ಕೇಂದ್ರೀಯ ನಿಗಾ ಸಮಿತಿಯು ಪ್ರತಿ ಮಂಗಳವಾರ ಸಭೆ ಸೇರಿ ಪರಾಮರ್ಶೆ ನಡೆಸಲಿದೆ.

‘ಜಂಟಿ ಕಾರ್ಯದರ್ಶಿ ಮತ್ತು ಹೆಚ್ಚುವರಿ ಕಾರ್ಯದರ್ಶಿ ಮಟ್ಟದ 175 ಅಧಿಕಾರಿಗಳಿಗೆ ನಾಲ್ಕರಿಂದ ಐದು ಜಿಲ್ಲೆಗಳಲ್ಲಿನ ಜಿಎಸ್‌ಟಿ ಜಾರಿ ಹೊಣೆಗಾರಿಕೆ ನೀಡಲಾಗಿದೆ’ ಎಂದು ಆಧಿಯಾ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)