ಶನಿವಾರ, ಡಿಸೆಂಬರ್ 7, 2019
25 °C

ಇಸ್ರೇಲ್‌ಗೆ ಭಾರತದ ಪ್ರಧಾನಿಯ ಮೊದಲ ಭೇಟಿ : ವಿದೇಶಾಂಗ ನೀತಿಯ ಹಗ್ಗದ ಮೇಲಿನ ನಡಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ರೇಲ್‌ಗೆ ಭಾರತದ ಪ್ರಧಾನಿಯ ಮೊದಲ ಭೇಟಿ : ವಿದೇಶಾಂಗ ನೀತಿಯ ಹಗ್ಗದ ಮೇಲಿನ ನಡಿಗೆ

2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಸ್ರೇಲ್‌ ಜತೆಗಿನ ಸಂಬಂಧ ಎದ್ದು ಕಾಣುತ್ತಿದೆ. ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಗೃಹ ಸಚಿವ ರಾಜನಾಥ್‌ ಸಿಂಗ್‌, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಈಗಾಗಲೇ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ. ಪ್ರಣವ್‌ ಮತ್ತು ಸುಷ್ಮಾ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದಾಗಲೇ ಪ್ಯಾಲೆಸ್ಟೀನ್‌ಗೂ ಭೇಟಿ ಕೊಟ್ಟಿದ್ದರು. ಆದರೆ ರಾಜನಾಥ್‌ ಪ್ಯಾಲೆಸ್ಟೀನ್‌ಗೆ ಹೋಗಿರಲಿಲ್ಲ.  ಕಾಂಗ್ರೆಸ್‌ ಆಡಳಿತವಿದ್ದಾಗಲೂ ದ್ವಿಪಕ್ಷೀಯ ಭೇಟಿಗಳು ನಡೆದಿವೆ. ಆದರೆ ಇಸ್ರೇಲ್‌ಗೆ ಭೇಟಿ ನೀಡಿದ ಭಾರತದ ಹಿರಿಯ ರಾಜಕಾರಣಿ ಎಲ್‌.ಕೆ. ಅಡ್ವಾಣಿ.  2000ದಲ್ಲಿ ಅವರು ಭೇಟಿ ನೀಡಿದ್ದರು.

ಅಭೂತಪೂರ್ವ ಆತಿಥ್ಯ

l ಭಾರತ ಮೂಲದ ಯೆಹೂದಿ ಸಮುದಾಯದ 4,000 ಜನರೊಂದಿಗೆ ಮೋದಿ ಸಂವಹನ ನಡೆಸಲಿದ್ದಾರೆ

l ಇಸ್ರೇಲ್‌ಗೆ ಭೇಟಿ ನೀಡಿದ್ದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಂಗಿದ್ದ ಕಿಂಗ್‌ ಡೇವಿಡ್‌ ಹೋಟೆಲ್‌ನಲ್ಲಿ ಮೋದಿ ತಂಗಿದ್ದಾರೆ

l ಟ್ರಂಪ್‌ ತಂಗಿದ್ದಾಗ ಅಧ್ಯಕ್ಷರ  ಜತೆಗಿದ್ದವರನ್ನು ಬಿಟ್ಟು ಬೇರೆ ಯಾರಿಗೂ ಪ್ರವೇಶ ಇರಲಿಲ್ಲ. ಮೋದಿ ಅವರು ತಂಗಿರುವ ಅಂತಸ್ತು ಮತ್ತು ಅದರ ಮೇಲಿನ ಅಂತಸ್ತುಗಳನ್ನು ತೆರವುಗೊಳಿಸಲಾಗಿದೆ. ಹೋಟೆಲ್‌ನ ಕಾರು ಪಾರ್ಕಿಂಗ್‌ ಅನ್ನು ಕೂಡ ತೆರವು ಮಾಡಲಾಗಿದೆ.

14 ವರ್ಷಗಳ ಹಿಂದೆ ಮೊದಲ  ಭೇಟಿ

2003ರಲ್ಲಿ ಇಸ್ರೇಲ್‌ ಪ್ರಧಾನಿ ಏರಿಯಲ್‌ ಶೆರೋನ್‌ ಭಾರತಕ್ಕೆ ಭೇಟಿ ನೀಡಿದರು. ಇದು ಇಸ್ರೇಲ್‌ ಪ್ರಧಾನಿಯೊಬ್ಬರು ಭಾರತಕ್ಕೆ ನೀಡಿದ ಮೊದಲ ಭೇಟಿ. ದ್ವಿಪಕ್ಷೀಯ ಸಹಕಾರದ ಹಲವು ಒಪ್ಪಂದಗಳಿಗೆ ಆಗ ಸಹಿ ಹಾಕಲಾಯಿತು.

ನಿಧಾನಕ್ಕೆ ಬೆಳೆದ ನಂಟು

ಯೆಹೂದಿ ಸಮುದಾಯದ ಬಗ್ಗೆ ಮಹಾತ್ಮ ಗಾಂಧಿ ಅವರು ಸಹಾನುಭೂತಿ ಹೊಂದಿದ್ದರು. ಆದರೆ ಪ್ಯಾಲೆಸ್ಟೀನ್‌ ಮತ್ತು ಇಸ್ರೇಲ್‌ ನಡುವೆ ಅರಬರು ನೆಲೆಯಾಗಿದ್ದ ಪ್ರದೇಶದಲ್ಲಿ ಯೆಹೂದಿಯರು ಬಲವಂತದಿಂದ ತಂಗಿದ್ದನ್ನು ಗಾಂಧಿ ವಿರೋಧಿಸಿದ್ದರು. ಸ್ವಾತಂತ್ರ್ಯಾನಂತರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಮಹಾತ್ಮ ಗಾಂಧಿಯ ನಿಲುವನ್ನೇ ಮುಂದುವರಿಸಿದರು. ಪ್ಯಾಲೆಸ್ಟೀನ್‌ ದೇಶವನ್ನು ವಿಭಜಿಸಿ ಪ್ರತ್ಯೇಕ ಯೆಹೂದಿ ದೇಶ ರಚಿಸುವ ಪ್ರಸ್ತಾವ 1947ರಲ್ಲಿ ವಿಶ್ವಸಂಸ್ಥೆಯ ಮುಂದೆ ಇತ್ತು. ಈ ಪ್ರಸ್ತಾವದ ಪರವಾಗಿ ಮತ ಹಾಕಬೇಕು ಎಂದು ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೀನ್‌ ಅವರು ನೆಹರೂ ಅವರನ್ನು ಕೋರಿದ್ದರು. ಅದನ್ನು ನೆಹರೂ ನಿರಾಕರಿಸಿದ್ದರು. 1947ರ ನವೆಂಬರ್‌ 29ರಂದು ಪ್ರಸ್ತಾವದ ವಿರುದ್ಧ ಭಾರತ ಮತ ಚಲಾಯಿಸಿತು. ಆದರೆ 1948ರ ಮೇ 14ರಂದು ಇಸ್ರೇಲ್‌ ಸ್ವತಂತ್ರ ದೇಶವಾಗಿ ಅಸ್ತಿತ್ವಕ್ಕೆ ಬಂತು.

ಕಾರ್ಗಿಲ್‌ ಯುದ್ಧ– ಶಿಖರ ತಲುಪಿದ ಸಂಬಂಧ

1999ರ ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಭಾರತ–ಇಸ್ರೇಲ್‌ ಸೇನಾ ಸಹಕಾರ ಉತ್ತುಂಗ ತಲುಪಿತು. ಕಣ್ಗಾವಲು ಡ್ರೋನ್‌, ಲೇಸರ್‌ ಆಧರಿತ ಕ್ಷಿಪಣಿಗಳನ್ನು ಇಸ್ರೇಲ್‌ ನೀಡಿತು. ಇದರಿಂದಾಗಿ ಕ್ಷಿಪ್ರ ಅವಧಿಯಲ್ಲಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವುದು ಭಾರತಕ್ಕೆ ಸಾಧ್ಯವಾಯಿತು. 2000ದಲ್ಲಿ ಗೃಹ ಸಚಿವ ಎಲ್‌.ಕೆ. ಅಡ್ವಾಣಿ ಮತ್ತು ಹಣಕಾಸು ಸಚಿವ ಜಸ್ವಂತ್‌ ಸಿಂಗ್‌ ಅವರು ಇಸ್ರೇಲ್‌ಗೆ ಭೇಟಿ ನೀಡಿದರು. ರಕ್ಷಣಾ ವ್ಯವಸ್ಥೆ  ಆಧುನೀಕರಣಕ್ಕೆ ನೆರವು ಕೋರುವುದು ಭೇಟಿಯ ಉದ್ದೇಶವಾಗಿತ್ತು

1998ರ ಅಣ್ವಸ್ತ್ರ ಪರೀಕ್ಷೆ

1998ರಲ್ಲಿ ಎರಡನೇ ಅಣ್ವಸ್ತ್ರ ಪರೀಕ್ಷೆಯನ್ನು ಭಾರತ ನಡೆಸಿತು. ಪರಿಣಾಮವಾಗಿ ಅಮೆರಿಕ ಮತ್ತು ಪಶ್ಚಿಮದ ಇತರ ದೇಶಗಳು ನಿರ್ಬಂಧ ಹೇರಿದವು. ಆದರೆ ಇಸ್ರೇಲ್‌ ನಿರ್ಬಂಧ ಹೇರಲಿಲ್ಲ ಮಾತ್ರವಲ್ಲ, ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಪೂರೈಸಿತು. ಹಾಗಾಗಿ ನಿರ್ಬಂಧ ದೊಡ್ಡ ಮಟ್ಟದ ಪರಿಣಾಮ ಬೀರಲಿಲ್ಲ.

ಭಾರತದ ನಿಲುವಿಗೆ ಕಾರಣ

l 1950ರ ಸೆಪ್ಟೆಂಬರ್‌ನಲ್ಲಿ ಇಸ್ರೇಲ್‌ಗೆ ಭಾರತ ಮಾನ್ಯತೆ ನೀಡಿತು. ಆದರೆ ಭಾರತದ ನಿಲುವು ಪ್ಯಾಲೆಸ್ಟೀನ್‌ ಪರವಾಗಿಯೇ ಇತ್ತು.

l ಧರ್ಮದ ನೆಲೆಯಲ್ಲಿ ಭಾರತ–ಪಾಕಿಸ್ತಾನ ವಿಭಜನೆಯು ಭಾರಿ ವೇದನೆಗೆ ಕಾರಣವಾಗಿತ್ತು. ಅದೇ ರೀತಿಯ ಮತ್ತೊಂದು ವಿಭಜನೆ ಬೇಡ ಎಂಬ ಕಳಕಳಿ

l ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿದ್ದ ಮುಸ್ಲಿಂ ಸಮುದಾಯದ ಜನರು ಇಸ್ರೇಲ್‌ ಸೃಷ್ಟಿಗೆ ವಿರೋಧವಾಗಿದ್ದರು

l ಪಾಕಿಸ್ತಾನದ ಜತೆಗೆ ಯುದ್ಧ ಆಗಬಹುದು ಎಂಬ ಪರಿಸ್ಥಿತಿ ಇತ್ತು. ಅರಬ್‌ ದೇಶಗಳೂ ಸೇರಿ ಜಾಗತಿಕ ಬೆಂಬಲ ಪಡೆಯಲು ನೆಹರೂ ಬಯಸಿದ್ದರು

l ಕೆಲಸಕ್ಕಾಗಿ ಭಾರತೀಯರು ಅರಬ್‌ ದೇಶಗಳತ್ತ ಹೋಗುವುದು ಆಗಲೇ ಆರಂಭ ಆಗಿತ್ತು

l ತೈಲ ಪೂರೈಕೆಗಾಗಿ ಭಾರತ ಸಂಪೂರ್ಣವಾಗಿ ಅರಬ್‌ ದೇಶಗಳನ್ನು ಅವಲಂಬಿಸಿತ್ತು

l 1950ರಲ್ಲಿ ಅಲಿಪ್ತ ಚಳವಳಿ ಆರಂಭವಾದಾಗ ಭಾರತ ಅದರಲ್ಲಿ ಸೇರಿಕೊಂಡಿತು. ಇದು ಯಾವುದೇ ರೀತಿಯಲ್ಲಿ ಇಸ್ರೇಲ್‌ ಪರ ನಿಲುವು ತಳೆಯದಂತೆ ಭಾರತವನ್ನು ತಡೆಯಿತು. ಅಮೆರಿಕ ಪರ ಮತ್ತು ಯುಎಸ್‌ಎಸ್‌ಆರ್‌ ಪರ ಗುಂಪುಗಳ ನಡುವೆ ಶೀತಲ ಸಮರ ಆರಂಭವಾಯಿತು. ಜಾಗತಿಕ ವ್ಯವಹಾರದಲ್ಲಿ ತಟಸ್ಥ ನಿಲುವು ತಳೆಯಲು ಅಲಿಪ್ತ ರಾಷ್ಟ್ರಗಳು ನಿರ್ಧರಿಸಿದವು

l 1962ರ ಭಾರತ–ಚೀನಾ ಯುದ್ಧದ ಸಂದರ್ಭದಲ್ಲಿ ನೆಹರೂ ಅವರು ಇಸ್ರೇಲ್‌ನಿಂದ ಶಸ್ತ್ರಾಸ್ತ್ರ ನೆರವು ಕೋರಿದರು. ಆದರೆ ಅದನ್ನು ಪೂರೈಸುವ ಹಡಗುಗಳು ಇಸ್ರೇಲ್‌ ಪತಾಕೆ ಇಲ್ಲದೆ ಬರಬೇಕು ಎಂದು ಅವರು ಮನವಿ ಮಾಡಿದ್ದರು. ಇದನ್ನು ಇಸ್ರೇಲ್‌ ತಿರಸ್ಕರಿಸಿತು. ಇಸ್ರೇಲ್‌ ಪತಾಕೆ ಇರುವ ಹಡಗಿನಲ್ಲಿ ಶಸ್ತ್ರಾಸ್ತ್ರ ಪೂರೈಕೆಗೆ ಭಾರತ ಒಪ್ಪಿಕೊಂಡ ನಂತರ ಶಸ್ತ್ರಾಸ್ತ್ರ ಒದಗಿಸಿತು. ಹೀಗೆ ಎರಡೂ ದೇಶಗಳ ನಡುವೆ ಮೊದಲ ರಕ್ಷಣಾ ಪಾಲುದಾರಿಕೆ ಆರಂಭವಾಯಿತು.

l 1971ರಲ್ಲಿನ ಬಾಂಗ್ಲಾ ದೇಶ ಸೃಷ್ಟಿಗೆ ಕಾರಣವಾದ ಭಾರತ–ಪಾಕಿಸ್ತಾನ ಯುದ್ಧದಲ್ಲಿಯೂ ಇಸ್ರೇಲ್‌ ನೆರವು ನೀಡಿತು. ಪ್ರತಿಯಾಗಿ, ಪೂರ್ಣ ರಾಜತಾಂತ್ರಿಕ ಸಂಬಂಧ ಹೊಂದಬೇಕು ಎಂಬುದು ಇಸ್ರೇಲ್‌ನ ಬೇಡಿಕೆಯಾಗಿತ್ತು.

l 1992ರಲ್ಲಿ ಪಿ.ವಿ. ನರಸಿಂಹರಾವ್‌ ಪ್ರಧಾನಿಯಾಗಿದ್ದಾಗ ಇಸ್ರೇಲ್‌ ಜತೆ ಪೂರ್ಣ ರಾಜತಾಂತ್ರಿಕ ಸಂಬಂಧವನ್ನು ಭಾರತ ಆರಂಭಿಸಿತು. ಪ್ಯಾಲೆಸ್ಟೀನ್‌ ಅಧ್ಯಕ್ಷ ಯಾಸೆರ್‌ ಅರಾಫತ್‌ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಈ ನಿರ್ಧಾರಕ್ಕೆ ಬರಲಾಗಿತ್ತು.

l ಯುಎಸ್‌ಎಸ್‌ಆರ್‌ ಪತನದೊಂದಿಗೆ ಶೀತಲ ಸಮರ ಕೊನೆಗೊಂಡಿತ್ತು. 1991ರಲ್ಲಿ ಆರ್ಥಿಕ ಉದಾರೀಕರಣಕ್ಕೆ ಭಾರತ ಮುಂದಾಗಿತ್ತು. ಆರ್ಥಿಕ ಕಾರಣಗಳಿಗಾಗಿ ಇಸ್ರೇಲ್‌ ಜತೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧ ಆಗತ್ಯವಾಗಿತ್ತು. ಜತೆಗೆ ಅಮೆರಿಕದ ಒತ್ತಡವೂ ಇತ್ತು.

ವಿಶ್ವಸಂಸ್ಥೆಯಲ್ಲಿ ತಟಸ್ಥ ಧೋರಣೆ

ಇಸ್ರೇಲ್‌ ಎಸಗಿದೆ ಎಂದು ಹೇಳಲಾಗುವ ಯುದ್ಧಾಪರಾಧಗಳ ಬಗ್ಗೆ ಅಂತರರಾಷ್ಟ್ರೀಯ ಕ್ರಿಮಿನಲ್‌ ನ್ಯಾಯಾಲಯದಲ್ಲಿ ತನಿಖೆ ನಡೆಯಬೇಕು ಎಂಬ ನಿರ್ಣಯವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಲ್ಲಿ ಮತಕ್ಕೆ ಹಾಕಿದಾಗ ಭಾರತ ತಟಸ್ಥ ಧೋರಣೆ ಅನುಸರಿಸಿತು. ಈ ನಿರ್ಣಯ ಮತಕ್ಕೆ ಬಂದಾಗ 2016, 2017ರಲ್ಲಿಯೂ ಭಾರತ ತಟಸ್ಥವಾಗಿತ್ತು. ಆದರೆ ಇಸ್ರೇಲ್ ಭೂಭಾಗದ ವಿಸ್ತರಣೆ, ಪ್ಯಾಲೆಸ್ಟೀನಿಯರ  ಸ್ವ ನಿರ್ಧಾರದ ಹಕ್ಕುಗಳಂತಹ ಇಸ್ರೇಲ್‌ ವಿರುದ್ಧದ ನಿರ್ಣಯಗಳ ಪರವಾಗಿ ಭಾರತ ಮತ ಹಾಕಿದೆ.

ಪ್ಯಾಲೆಸ್ಟೀನ್‌ ಕಳವಳ ಏನು

ಭಾರತ ಮತ್ತು ಇಸ್ರೇಲ್‌ ಸಂಬಂಧ ಹೆಚ್ಚು ನಿಕಟವಾದ ನಂತರ ಪ್ಯಾಲೆಸ್ಟೀನ್‌ ಜತೆಗಿನ ಸಂಬಂಧದ ಭವಿಷ್ಯವೇನು ಎಂಬ ಪ್ರಶ್ನೆ ಎದುರಾಗಿದೆ.  ಪ್ಯಾಲೆಸ್ಟೀನ್‌ ಅಧ್ಯಕ್ಷ ಮಹಮೂದ್ ಅಬ್ಬಾಸ್‌ ಅವರು ಮೇ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಪ್ಯಾಲೆಸ್ಟೀನ್‌ಗೆ ಭಾರತದ ಬೆಂಬಲ ಅಚಲ ಎಂದು ಆಗ ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ಗಳೆಂಬ ಎರಡು ಸ್ವತಂತ್ರ, ಸಾರ್ವಭೌಮ ದೇಶಗಳ ಶಾಂತಿಯುತ ಅಸ್ತಿತ್ವಕ್ಕೆ ಭಾರತದ ಬೆಂಬಲ ಇದೆ ಎಂದು ಹೇಳಿದ್ದರು.

ಅಬ್ಬಾಸ್‌ ಭೇಟಿಗೂ ಮುನ್ನ ಭಾರತಕ್ಕೆ ಬಂದಿದ್ದ ಪ್ಯಾಲೆಸ್ಟೀನ್‌ ನಿಯೋಗವೂ ಇಸ್ರೇಲ್‌ ಜತೆಗಿನ ಬಾಂಧವ್ಯ ವೃದ್ಧಿಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಇಸ್ರೇಲ್ ಜತೆಗೆ ಸಂಬಂಧ ಉತ್ತಮಪಡಿಸಿಕೊಳ್ಳಲು ಭಾರತಕ್ಕೆ ಸಂಪೂರ್ಣ ಹಕ್ಕಿದೆ. ಆದರೆ ಇಸ್ರೇಲ್‌ ಜತೆಗಿನ ಸಂಬಂಧದ ಕಾರಣಕ್ಕೆ ಪ್ಯಾಲೆಸ್ಟೀನನ್ನು ನಿರ್ಲಕ್ಷಿಸಬಾರದು ಎಂದು ಈ ನಿಯೋಗ ಕೋರಿತ್ತು.

ಇಸ್ರೇಲ್‌ ಒಂದು ಅತಿಕ್ರಮಣಕಾರಿ ದೇಶ ಎಂಬ ಹೆಸರನ್ನೇ ಜಾಗತಿಕವಾಗಿ ಹೊಂದಿದೆ. ಅದೇ ಹೊತ್ತಿಗೆ ಪ್ಯಾಲೆಸ್ಟೀನನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ದೇಶ ಎಂದು ಪರಿಗಣಿಸಲಾಗುತ್ತಿದೆ. ಇಸ್ರೇಲ್‌ನಿಂದ ಭಾರತದ ರಕ್ಷಣಾ ಆಮದು ಗಣನೀಯವಾಗಿ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಎರಡೂ ದೇಶಗಳ ಜತೆಗೆ ಸಮಾನವಾದ ಸಂಬಂಧವನ್ನು ಉಳಿಸಿಕೊಂಡು ಹೋಗುವುದು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ.

ಇಸ್ರೇಲ್‌ನಿಂದ ಭಾರತದ ರಕ್ಷಣಾ ಆಮದಿನ ಬಗ್ಗೆ ಪ್ಯಾಲೆಸ್ಟೀನ್‌ ಅತೃಪ್ತಿ ವ್ಯಕ್ತಪಡಿಸಿದೆ. ಪ್ಯಾಲೆಸ್ಟೀನ್‌ ಮೇಲಿನ ಅತಿಕ್ರಮಣವನ್ನು ಮುಂದುವರಿಸಿಕೊಂಡು ಹೋಗಲು ಆ ದೇಶದ ರಕ್ಷಣಾ ವ್ಯಾಪಾರವೇ ದೊಡ್ಡ ಆಧಾರ. ಹಾಗಾಗಿ ಪರೋಕ್ಷವಾಗಿ ಭಾರತವೂ ಅದಕ್ಕೆ ನೆರವಾಗುತ್ತಿದೆ ಎಂಬ ಆಕ್ಷೇಪವನ್ನು ಪ್ಯಾಲೆಸ್ಟೀನ್‌ ಎತ್ತಿದೆ.

ಮೋದಿ ಭೇಟಿ ವೇಳೆ ಎರಡೂ ದೇಶಗಳ ಜತೆಗಿನ ಸಂಬಂಧದ ಸಮತೋಲನ ಕಾಯ್ದುಕೊಳ್ಳುವುದು ದೊಡ್ಡ ಸವಾಲು. ‘ಶಾಂತಿ ಪ್ರಕ್ರಿಯೆ ಮುಂದುವರಿಯಬೇಕು ಎಂಬ ಕರೆ, ಎರಡು ದೇಶಗಳ ಸಿದ್ಧಾಂತಕ್ಕೆ ಬೆಂಬಲ ಮತ್ತು ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳ ಆಚೆಗೆ ಏನೂ ಆಗದು’ ಎಂಬುದು ವಿಶ್ಲೇಷಕರ ಅಭಿಪ್ರಾಯ. ಪ್ಯಾಲೆಸ್ಟೀನ್‌ ಮೇಲೆ ಇಸ್ರೇಲ್‌ ಆಕ್ರಮಣವಾಗಿ ಈಗ 50 ವರ್ಷಗಳಾಗಿವೆ. ನಂಟಿಗೆ ಸಂಬಂಧಿಸಿ ಭಾರತ ಈಗ ಕೈಗೊಳ್ಳುವ ನಿರ್ಧಾರಗಳು ಎರಡೂ ದೇಶಗಳ ಜತೆಗಿನ ಬಾಂಧವ್ಯ ಯಾವ ದಿಕ್ಕಿನತ್ತ ಸಾಗಲಿದೆ ಎಂಬುದನ್ನು ನಿರ್ಧರಿಸಲಿವೆ.

ಪ್ರತಿಕ್ರಿಯಿಸಿ (+)