ಶನಿವಾರ, ಡಿಸೆಂಬರ್ 7, 2019
24 °C
ಐಷಾರಾಮಿ ಪಟ್ಟಿಯಲ್ಲಿ ‘ಸ್ಯಾನಿಟರಿ ಪ್ಯಾಡ್‌’: ಮಹಿಳೆಯರ ಆಕ್ರೋಶ

ಋತುಸ್ರಾವಕ್ಕೆ ತೆರಿಗೆ ಹಾಕಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಋತುಸ್ರಾವಕ್ಕೆ ತೆರಿಗೆ ಹಾಕಬೇಡಿ

ಬೆಂಗಳೂರು: ‘ಡು ನಾಟ್‌ ಟ್ಯಾಕ್ಸ್‌ ಮೈ ಪೀರಿಯಡ್ಸ್‌’ (ನನ್ನ ಋತುಸ್ರಾವಕ್ಕೆ ತೆರಿಗೆ ಹಾಕಬೇಡಿ)... ಇದು ಎರಡು ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಚರ್ಚೆಗೆ ಒಳಗಾಗಿರುವ ಅಭಿಯಾನ.  ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಯಲ್ಲಿ ಸ್ಯಾನಿಟರಿ ಪ್ಯಾಡ್‌ ಅನ್ನು ಐಷಾರಾಮಿ  ವಸ್ತುವೆಂದು ಪರಿಗಣಿಸಿ ಅದಕ್ಕೆ ಶೇ 12ರಷ್ಟು ತೆರಿಗೆ ವಿಧಿಸಿರುವುದು ಮಹಿಳೆಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

‘ಸ್ಯಾನಿಟರಿ ಪ್ಯಾಡ್‌, ಮಹಿಳೆಯರನ್ನು ಶುಚಿಯಾಗಿಡುವ ವಸ್ತುವೇ ವಿನಾ ಐಷಾರಾಮಿ ವಸ್ತುವಲ್ಲ’ ಎಂದು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಅಭಿಯಾನ ಇದಾಗಿದೆ. ಕುಂಕುಮ, ಬಳೆ ಇತ್ಯಾದಿಗಳನ್ನು ತೆರಿಗೆಯಿಂದ ಮುಕ್ತಮಾಡಿ ಸ್ಯಾನಿಟರಿ ಪ್ಯಾಡ್‌ಗೆ ದುಪ್ಪಟ್ಟು ಹಣ ವಸೂಲು ಮಾಡುತ್ತಿರುವ ಕ್ರಮ ಸರಿಯಲ್ಲ ಎಂದು ಮಹಿಳೆಯರು ಕಿಡಿಕಾರುತ್ತಿದ್ದು, ಈ ಅಭಿಯಾನಕ್ಕೆ ಹಲವಾರು ಪುರುಷರೂ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಸ್ವಚ್ಛ ಭಾರತ ಅಭಿಯಾನ ಶುರು ಮಾಡಿರುವ ಕೇಂದ್ರ ಸರ್ಕಾರ ಎಲ್ಲೆಡೆ ಸ್ವಚ್ಛತೆಯ ಬಗ್ಗೆ ಮನವರಿಕೆ ಮಾಡಿಕೊಡಲು ಸಾಕಷ್ಟು ಹರಸಾಹಸ ಪಡುತ್ತಿದೆ. ಅಂಥದ್ದರಲ್ಲಿ ಮಹಿಳೆಯರ ನೈರ್ಮಲ್ಯ ಕಾಪಾಡುವ ಪ್ಯಾಡ್‌ ಬಗ್ಗೆ ನಿರ್ಲಕ್ಷ್ಯ ತಾಳುತ್ತಿರುವುದು ಸರಿಯಲ್ಲ. ಕಾನೂನು ರೂಪಿಸುವವರಿಗೆ ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿಯೇ ಇದ್ದಂತಿಲ್ಲ’ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಜಿಎಸ್‌ಟಿ’ ಎಂದರೆ ಗುಡ್‌ ಆ್ಯಂಡ್‌ ಸಿಂಪಲ್‌ ಟ್ಯಾಕ್ಸ್‌ (ಒಳ್ಳೆಯ ಮತ್ತು ಸರಳ ತೆರಿಗೆ) ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವ್ಯಾಖ್ಯಾನಿಸಿದ್ದರು. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಹಿಳೆಯರು, ‘ಮೊದಲು ನಾವು ಕೂಡ ಈ ವ್ಯಾಖ್ಯಾನವನ್ನು ಬೆಂಬಲಿಸಿದ್ದೆವು. ಆದರೆ ಈಗ ಪರಿಸ್ಥಿತಿಯೇ ಬದಲಾಗಿದೆ.

ಗ್ರಾಮೀಣ ಭಾಗಗಳಲ್ಲಿ ಇನ್ನೂ ಸ್ಯಾನಿಟರಿ ನ್ಯಾಪ್‌ಕಿನ್‌ ಬಳಕೆ ಬಂದಿಲ್ಲ. ಆದ್ದರಿಂದ ಹೆಣ್ಣುಮಕ್ಕಳು ದೊಡ್ಡವರಾಗುತ್ತಿದ್ದಂತೆಯೇ ಶಾಲೆಗೆ ಹೋಗುವುದನ್ನು ನಿಲ್ಲಿಸಿಬಿಡುತ್ತಿದ್ದಾರೆ.  ಇಂಥವರ ಸಂಖ್ಯೆ ಶೇ 20ರಷ್ಟಿದೆ. ಅಂಥ ಬಡಜನರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ನೀಡುವುದು ಸರ್ಕಾರದ ಕರ್ತವ್ಯವಾಗಿದೆ.  ಈಗಿರುವುದಕ್ಕಿಂತ ಹೆಚ್ಚಿನ ತೆರಿಗೆ ಹಾಕಿ ಅದನ್ನು ನಮ್ಮ ಮೇಲೆ ಹೇರಿರುವುದು ಎಲ್ಲಿಯ ಕ್ರಮ? ಎಲ್ಲಿದೆ ‘ನೈರ್ಮಲ್ಯದ ಪಾಠ’ ಎಂದಿದ್ದಾರೆ.

ಮಿರಠ್‌ ‘ಪ್ರೊಗ್ರೆಸಿವ್‌ ವಿಮೆನ್‌ ವೆಲ್‌ಫೇರ್‌ ಅಸೋಸಿಯೇಷನ್‌’  ಎಂಬ ಸ್ವಯಂಸೇವಾ  ಸಂಸ್ಥೆಯು ಸ್ಯಾನಿಟರಿ ನ್ಯಾಪ್‌ಕಿನ್‌ ಇರುವ ಲಕೋಟೆಯನ್ನು ಪ್ರಧಾನಿ ಮೋದಿ ಅವರಿಗೆ ಕಳುಹಿಸಿದ್ದು, ‘ಅತ್ಯಧಿಕ ತೆರಿಗೆ ವಿಧಿಸುವ ಮೂಲಕ ಸರ್ಕಾರವು ಮಹಿಳೆಯರನ್ನು ಅಪಹಾಸ್ಯಕ್ಕೆ ಈಡುಮಾಡಿದೆ’ ಎಂದು ಬರೆದಿದ್ದಾರೆ. ‘ಸೆಕ್ಸ್‌ ನಮ್ಮ ಆಯ್ಕೆ. ಆದರೆ ಅದಕ್ಕೆ ತೆರಿಗೆ ಇಲ್ಲ, ಆದರೆ ಮಾಸಿಕ ಋತುಸ್ರಾವ ನಮ್ಮ ಹಿಡಿತದಲ್ಲಿಲ್ಲ.

ಅದಕ್ಕೆ ಈ ಪರಿಯ ತೆರಿಗೆ ಯಾಕೆ’ ಎಂಬ ಪ್ರಶ್ನೆಯನ್ನು ಸಂಸ್ಥೆಯ ಕಾರ್ಯದರ್ಶಿ ಪೂಜಾ ಸಿಂಗ್‌ ಅವರು ಪ್ರಧಾನಿಯವರ ಮುಂದಿಟ್ಟಿದ್ದಾರೆ.

‘ಇದರ ಮೇಲಿನ ತೆರಿಗೆಯನ್ನು ಕಡಿತಗೊಳಿಸಲು ಪ್ರಧಾನಿಯವರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)