ಭಾನುವಾರ, ಡಿಸೆಂಬರ್ 8, 2019
25 °C

ಮಿಥಾಲಿ ಬಳಗಕ್ಕೆ ಲಂಕಾ ಸವಾಲು

Published:
Updated:
ಮಿಥಾಲಿ ಬಳಗಕ್ಕೆ ಲಂಕಾ ಸವಾಲು

ಡರ್ಬಿ: ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಭಾರತದ ವನಿತೆಯರು ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಬುಧವಾರ ಶ್ರೀಲಂಕಾ ತಂಡವನ್ನು ಎದುರಿಸುವರು.

ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ನಲ್ಲಿ ಉತ್ತಮ ಲಯವನ್ನು ಮುಂದುವರಿಸಿರುವ ಭಾರತ ತಂಡದ ಮುಂದೆ ಜಯ ಗಳಿಸುವುದು ಶ್ರೀಲಂಕಾ ತಂಡಕ್ಕೆ ಸುಲಭ ಸಾಧ್ಯವಲ್ಲ. ಆಡಿದ ಮೂರೂ ಪಂದ್ಯಗಳಲ್ಲಿ ಸೋಲು ಕಂಡಿರುವ ಲಂಕಾ ವನಿತೆಯರು ಭಾರತ ತಂಡಕ್ಕೆ ಹೋಲಿಸಿದರೆ ಆಟದ ಯಾವ ವಿಭಾಗದಲ್ಲೂ ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ.  ಭಾರತ ತಂಡ ವಿಶ್ವಕಪ್‌ ಅರ್ಹತಾ ಸುತ್ತಿನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ

ವನ್ನು ಮಣಿಸಿತ್ತು. ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 35 ರನ್‌ಗಳ ಜಯ ಗಳಿಸಿತ್ತು. ನಂತರ ವೆಸ್ಟ್ ಇಂಡೀಸ್ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿತ್ತು.

ಪಾಕಿಸ್ತಾನವನ್ನು 95 ರನ್‌ಗಳಿಂದ ಸೋಲಿಸಿತ್ತು. ಮೂರು ಪಂದ್ಯಗಳಿಂದ ಆರು ಪಾಯಿಂಟ್ಸ್ ಗಳಿಸಿರುವ ತಂಡ ಪಾಯಿಂಟ್ಸ್‌ ಪಟ್ಟಿಯ ಅಗ್ರ ಸ್ಥಾನದಲ್ಲಿದೆ. ಶ್ರೀಲಂಕಾ ವಿರುದ್ಧ ಜಯ ಗಳಿಸಿ ಸೆಮಿಫೈನಲ್‌ನತ್ತ ಸುಲಭವಾಗಿ ದಾಪುಗಾಲು ಹಾಕಲು ತಂಡ ಪ್ರಯತ್ನಿಸಲಿದೆ.

ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಟ್ಸ್‌ವುಮನ್‌ಗಳು ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಮೂರನೇ ಪಂದ್ಯದಲ್ಲಿ ಕಡಿಮೆ ಮೊತ್ತ ಕಲೆ ಹಾಕಿದ ತಂಡಕ್ಕೆ ಬೌಲರ್‌ಗಳು ನೆರವಾಗಿದ್ದರು.

ಕೇವಲ 18 ರನ್‌ಗಳಿಗೆ ಐದು ವಿಕೆಟ್ ಕಬಳಿಸಿದ ಎಡಗೈ ಸ್ಪಿನ್ನರ್ ಏಕ್ತಾ ಬಿಷ್ಠ್‌ ಪಾಕಿಸ್ತಾನವನ್ನು 40 ಓವರ್‌ಗಳ ಒಳಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಧ್ಯಮ ಕ್ರಮಾಂಕವನ್ನು ನಿಯಂತ್ರಿಸಿದ ಶ್ರೇಯಸ್ಸು ಆಫ್ ಸ್ಪಿನ್ನರ್‌ ದೀಪ್ತಿ ಶರ್ಮಾ ಅವರದಾಗಿತ್ತು. ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಪ್ರಥಮ ಬೌಲರ್ ಜೂಲನ್ ಗೋಸ್ವಾಮಿ ಈ ಟೂರ್ನಿಯಲ್ಲಿ ಹೆಚ್ಚು ಮಿಂಚಲಿಲ್ಲ. ಆದರೂ ಅವರ ಅನುಭವ ಇತರರ ಸಾಮರ್ಥ್ಯಕ್ಕೆ ನೆರವಾಗುತ್ತಿದೆ. ಪೂನಮ್‌ ಯಾದವ್ ಮತ್ತು ಹರ್ಮನ್‌ಪ್ರೀತ್ ಕೌರ್‌ ಉತ್ತಮ ಲಯದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಪಾಕಿಸ್ತಾನ ವಿರುದ್ಧ ಹೆಚ್ಚು ರನ್‌ ಗಳಿಸದಿದ್ದರೂ ಮೊದಲ ಎರಡು ಪಂದ್ಯಗಳಲ್ಲಿ ಮಿಂಚಿದ್ದ ಸ್ಮೃತಿ ಮಂದಾನ ಭಾರತದ ಬ್ಯಾಟಿಂಗ್ ಶಕ್ತಿ ಎನಿಸಿದ್ದಾರೆ.

ಹೀಗಾಗಿ ಅವರ ಮೇಲೆ ತಂಡ ಪೂರ್ಣ ಭರವಸೆ ಇರಿಸಿ ಕೊಂಡಿದೆ. ಮಿಥಾಲಿ ರಾಜ್ ಮತ್ತು ಪೂನಮ್‌ ರಾವುತ್ ಯಾವುದೇ ಬೌಲರ್‌ಗಳ ವಿರುದ್ಧ ರನ್‌ ಗಳಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ.

ಲಂಕನ್ನರಿಗೆ ಜಯದ ಹಂಬಲ

ನ್ಯೂಜಿಲೆಂಡ್‌ ವಿರುದ್ಧ ಒಂಬತ್ತು ವಿಕೆಟ್‌ಗಳಿಂದ ಸೋಲು ಕಂಡಿದ್ದ ಶ್ರೀಲಂಕಾ ತಂಡ ಆಸ್ಟ್ರೇಲಿಯಾ ಮುಂದೆ ಎಂಟು ವಿಕೆಟ್‌ಗಳಿಂದ ಮತ್ತು ಇಂಗ್ಲೆಂಡ್ ವಿರುದ್ಧ ಏಳು ವಿಕೆಟ್‌ಗಳಿಂದ ಸೋಲು ಕಂಡಿತ್ತು.

ಹೀಗಾಗಿ ತಂಡ ಜಯದ ಹಂಬಲದೊಂದಿಗೆ ಕಣಕ್ಕೆ ಇಳಿಯಲಿದೆ. ಚಾಮರಿ ಅಟ್ಟಪಟ್ಟು ಒಬ್ಬರೇ ತಂಡದ ಭರವಸೆ ಎನಿಸಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ 53 ರನ್‌ ಗಳಿಸಿದ್ದ ಅವರು ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿ 178 ರನ್‌ಗಳನ್ನು ಕಲೆ ಹಾಕಿದ್ದರು. ‘ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ನಮ್ಮ ತಂಡ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದೆ. ಟೂರ್ನಿಯಲ್ಲಿ ಭಾರತ ಉತ್ತಮ ಆಟ ಆಡುತ್ತಿದೆ. ಆದರೆ ನಮಗೆ ನಾಳಿನ ಪಂದ್ಯದಲ್ಲಿ ಗೆಲುವು ಒಂದೇ ಗುರಿ’ ಎಂದು ಶ್ರೀಲಂಕಾ ತಂಡದ ನಾಯಕಿ ಇನೋಕ ರಣವೀರ ಹೇಳಿದರು.

ವಿಕೆಟ್‌ ಉಳಿಸುವುದು ಮುಖ್ಯ: ಮಿಥಾಲಿ

‘ಒಂದರ ಹಿಂದೆ ಒಂದು ವಿಕೆಟ್‌ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ತಂಡದ ಪ್ರತಿಯೊಬ್ಬರ ಮೇಲೆಯೂ ಇದೆ. ವಿಕೆಟ್‌ಗಳು ಕಳೆದುಕೊಂಡರೆ ನಂತರ ಬರುವವರ ಮೇಲೆ ಒತ್ತಡ ಹೆಚ್ಚಾಗುತ್ತದೆ. ಆದ್ದರಿಂದ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಉತ್ತಮ ಜೊತೆಯಾಟದ ಕಡೆಗೆ ಗಮನ ನೀಡಲಿದ್ದೇವೆ’ ಎಂದು ಭಾರತ ತಂಡದ ನಾಯಕಿ ಮಿಥಾಲಿ ರಾಜ್‌ ಹೇಳಿದರು. ‘ಕಳೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸ್ಪಿನ್ನರ್‌ಗಳು ಉತ್ತಮ ರೀತಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಮೊದಲ ಎರಡು ಪಂದ್ಯಗಳಿಗೆ ಹೋಲಿಸಿದರೆ ವೇಗದ ಬೌಲರ್‌ಗಳು ಕೂಡ ಪಾಕಿಸ್ತಾನ ವಿರುದ್ಧ ಗಮನಾರ್ಹ ಸಾಧನೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧ ಯಾವ ಪಿಚ್‌ನಲ್ಲಿ ಆಡುತ್ತೇವೆ ಎಂಬುದನ್ನು ನೋಡಿಕೊಂಡು ತಂಡವನ್ನು ಅಂತಿಮಗೊಳಿಸಲಾಗುವುದು’ ಎಂದು ಮಿಥಾಲಿ ರಾಜ್‌ ತಿಳಿಸಿದರು.

ತಂಡಗಳು: ಭಾರತ: ಮಿಥಾಲಿ ರಾಜ್‌ (ನಾಯಕಿ), ಏಕ್ತಾ ಬಿಶ್ಠ್‌, ರಾಜೇಶ್ವರಿ ಗಾಯಕವಾಡ್‌, ಜೂಲನ್ ಗೋಸ್ವಾಮಿ, ಮಾನಸಿ ಜೋಶಿ, ಹರ್ಮನ್‌ ಪ್ರೀತ್ ಕೌರ್‌, ವೇದಾ ಕೃಷ್ಣಮೂರ್ತಿ, ಸ್ಮೃತಿ ಮಂದಾನ, ಮೋನಾ ಮೇಶ್ರಮ್‌, ನುಜ್ಜತ್ ಪರ್ವೀನ್‌, ಶಿಖಾ ಪಾಂಡೆ, ಪೂನಮ್‌ ರಾವುತ್‌, ದೀಪ್ತಿ ಶರ್ಮಾ, ಸುಶ್ಮಾ ವರ್ಮಾ, ಪೂನಮ್‌ ಯಾದವ್‌.

ಶ್ರೀಲಂಕಾ: ಇನೋಕ ರಣವೀರ (ನಾಯಕಿ), ಚಾಮರಿ ಅಟ್ಟಪಟ್ಟು, ಚಾಂದಿಮಾ ಗುಣರತ್ನೆ, ನಿಪುಣಿ ಹನ್ಸಿಕಾ, ಅಮಾ ಕಾಂಚನ, ಏಶಾನಿ ಲೋಕುಸೂರಿಯಾ, ಹರ್ಷಿತಾ ಮಾಧವಿ, ದಿಲಾನಿ ಮನೋದರ, ಹಸಿನಿ ಪೆರೇರ, ಚಾಮರಿ ಪೋಲ್ಗಂಪಾಲ, ಉದೇಶಿಕ ಪ್ರಬೋದನಿ, ಓಶಾಧಿ ರಣಸಿಂಘೆ, ಶಶಿಕಲಾ ಸಿರಿವರ್ಧನ, ಪ್ರಸಾದನಿ ವೀರಕೋಡಿ, ಶ್ರೀಪಾಲಿ ವೀರಕೋಡಿ.

ಪಂದ್ಯದ ಆರಂಭ–ಮಧ್ಯಾಹ್ನ 3ಕ್ಕೆ

ನೇರ ಪ್ರಸಾರ–ಸ್ಟಾರ್ ಸ್ಪೋರ್ಟ್ಸ್‌

ಪ್ರತಿಕ್ರಿಯಿಸಿ (+)