ಶನಿವಾರ, ಡಿಸೆಂಬರ್ 7, 2019
16 °C
ಬೆಂಗಳೂರಿನ ಕಾಕಾಲ್‌ ಫೌಂಡೇಷನ್‌ ನೇತೃತ್ವದಲ್ಲಿ ನದಿ, 14 ಕೆರೆಗಳ ಪುನರುಜ್ಜೀವನಕ್ಕೆ ಸ್ಥಳೀಯರ ದಿಟ್ಟಹೆಜ್ಜೆ

ಬತ್ತಿಹೋದ ‘ದ್ಯಾವಾಸ’ ನದಿಗೆ ಮತ್ತೆ ಜೀವ!

Published:
Updated:
ಬತ್ತಿಹೋದ ‘ದ್ಯಾವಾಸ’ ನದಿಗೆ ಮತ್ತೆ ಜೀವ!

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮಳೆ ಕೊರತೆಯ ಕಾರಣ ಮೂರು ವರ್ಷಗಳಿಂದ ಸಂಪೂರ್ಣ ಬತ್ತಿ ಹೋಗಿದ್ದ ‘ದ್ಯಾವಾಸ’ ನದಿಗೆ ಮತ್ತೆ ಜೀವ ತುಂಬಲು  ಬೆಂಗಳೂರಿನ ಕಾಕಾಲ್‌ ಫೌಂಡೇಷನ್‌ ಸಹಯೋಗದಲ್ಲಿ  ಗ್ರಾಮಸ್ಥರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಸಾಗರ ತಾಲ್ಲೂಕು ಹೆಗ್ಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನ್ನೆಸರದ ಬಳಿ ಹುಟ್ಟುವ ಪುಟ್ಟ ನದಿ ದ್ಯಾವಾಸ. ಹೆಗ್ಗೋಡು, ಬಿಲಗೋಡಿ, ಮಳವಳ್ಳಿ ಮೂಲಕ 8 ಕಿ.ಮೀ ಹರಿದು ಈಚಲುಕೊಪ್ಪದ ಬಳಿ ಶರಾವತಿ ನದಿ ಸೇರುತ್ತದೆ. ಮುಂದೆ ಲಿಂಗನಮಕ್ಕಿ ಜಲಾಶಯದಲ್ಲಿ ಲೀನವಾಗುತ್ತದೆ.

14 ಕೆರೆಗಳ ಕೋಡಿ ನೀರು ಸೇರುವ ನದಿ: ದ್ಯಾವಾಸ ನದಿ ಪಾತ್ರದಲ್ಲಿ 14 ಕೆರೆಗಳು ಇವೆ. ಈ ಕೆರೆಗಳು ಮಳೆಗಾಲದಲ್ಲಿ ತುಂಬಿ ಕೋಡಿ ಬಿದ್ದ ನೀರು ನದಿಗೆ ಸೇರುತ್ತದೆ. ಬಹುತೇಕ ಕೆರೆಗಳಲ್ಲಿ ಭಾರಿ ಪ್ರಮಾಣದ ಹೂಳು ತುಂಬಿರುವ ಕಾರಣ ನೀರಿನ ಸಂಗ್ರಹ ಸಾಮರ್ಥ್ಯ ಗಣನೀಯವಾಗಿ ಕಡಿಮೆಯಾಗಿದೆ.

ಹಾಗಾಗಿ, ಕೆರೆ ಸುತ್ತಲ ಪ್ರದೇಶದ ಅಂತರ್ಜಲವೂ ಪಾತಾಳ ಕಂಡಿದೆ. ಅದರ ಫಲ ಎನ್ನುವಂತೆ ಎರಡು ವರ್ಷಗಳಿಂದ ಆ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಮಹಿಳೆಯರು ಬಹು ದೂರದವರೆಗೆ ಹೋಗಿ ನೀರು ಹೊತ್ತು ತರುತ್ತಿದ್ದಾರೆ.

ಕಾಕಾಲ್‌ ಫೌಂಡೇಷನ್‌ ಸಹಾಯಹಸ್ತ: ಇನ್ಫೋಸಿಸ್‌ ಮಾಜಿ ಅಧಿಕಾರಿ ಚಂದ್ರಶೇಖರ್ ಕಾಕಾಲ್ ಅವರು ಕಳೆದ ಬೇಸಿಗೆಯಲ್ಲಿ ಸ್ವಗ್ರಾಮ ಹೆಗ್ಗೋಡಿಗೆ ಭೇಟಿ ನೀಡಿದಾಗ ಬತ್ತಿಹೋದ ನದಿ, ನೀರಿಗಾಗಿ ಮಹಿಳೆಯರು ಪರದಾಡುವ ಸ್ಥಿತಿ ಕಂಡು ಮರುಗಿದ್ದರು.

ಹುಟ್ಟೂರಿನ ಜನರ ಪರದಾಟಕ್ಕೆ ಪರಿಹಾರ ಕಂಡುಕೊಳ್ಳಲು ನದಿಗೆ ಮರುಜೀವ ನೀಡುವ ಯೋಜನೆ ರೂಪಿಸಿದರು.

ಕೇಡಲಸರ ಶಾಲಾ ಆವರಣದಲ್ಲಿ ಸಭೆ ಕರೆದು ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರಿಗೆ ಯೋಜನೆಯ ರೂಪುರೇಷೆ ವಿವರಿಸಿದ್ದರು. ಅವರ ಈ ಕನಸು ಸಾಕಾರಗೊಳಿಸಲು ಎಲ್ಲರ ಸಹಕಾರ ಸಿಕ್ಕಿತ್ತು.

ಪುನರುಜ್ಜೀವನ ಕಾರ್ಯಗಳು:  ನದಿ ಪಾತ್ರದ ಬಳಿ ಇರುವ 14 ಕೆರೆಗಳ ಹೂಳೆತ್ತುವುದು. ನದಿ ಹರಿವಿನ ಪಥ ಸಂರಕ್ಷಣೆ. ಚೆಕ್‌ಡ್ಯಾಂಗಳ ನಿರ್ಮಾಣ, ಜಲಾನಯನ ಪ್ರದೇಶದಲ್ಲಿ ಗಿಡ ನೆಟ್ಟು ಬೆಳೆಸುವುದು. ಕನಿಷ್ಠ ಒಂದು ಸಾವಿರ ಇಂಗುಗುಂಡಿಗಳ ನಿರ್ಮಾಣ. ಕೊಳವೆಬಾವಿಗಳ ಮರುಪೂರಣಕ್ಕೆ ಫೌಂಡೇಷನ್‌ ಯೋಜನೆ ರೂಪಿಸಿದೆ.

ಯೋಜನೆ ಅನುಷ್ಠಾನಕ್ಕೂ ಮೊದಲೇ ಕಾರ್ಯಾರಂಭ: ಫೌಂಡೇಷನ್‌ ಉದ್ದೇಶಿತ ಯೋಜನೆ ಜಾರಿಗೊಳಿಸುವ ಮೊದಲೇ ಸ್ಥಳೀಯರು ಐದು ಕೆರೆಗಳ ಹೂಳೆತ್ತುವ ಕಾರ್ಯ ಪೂರ್ಣಗೊಳಿಸಿದ್ದಾರೆ.

ನಿವೃತ್ತ ಸೇನಾಧಿಕಾರಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಚಿಕ್ಕಹೊನ್ನೆಸರದ ಎರಡು ಕೆರೆಗಳು, ಸಚಿವ ಕಾಗೋಡು ತಿಮ್ಮಪ್ಪ ಅವರ ಸಹಕಾರದಲ್ಲಿ ಹೊನ್ನೆಸರ ಕೆರೆ, ಮುಂಡಿಗೆಸರ ವ್ಯಾಪ್ತಿಯ ಕಾನುಸರ, ಜವಳುಸರ ಕೆರೆಗಳ ಹೂಳೆತ್ತುವ ಕಾರ್ಯ ಮುಗಿದಿದೆ.

ಹಲವರು ತಮ್ಮ ಮನೆಗಳ ಬಳಿ ಇಂಗುಗುಂಡಿ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಎರಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ 25 ಕೊಳವೆಬಾವಿಗಳಿದ್ದು, ಪಂಚಾಯ್ತಿ ಸಹಕಾರದಲ್ಲಿ 12 ಕೊಳವೆಬಾವಿ ಮರುಪೂರಣ ಮಾಡಿದ್ದಾರೆ. 

‘ಗ್ರಾಮಸ್ಥರೇ ಸೇರಿ ₹ 2 ಲಕ್ಷ ಸಂಗ್ರಹಿಸಿ ಹೊನ್ನೆಸರ ಕೆರೆ ಹೂಳೆತ್ತಲು ಆರಂಭಿಸಿದೆವು. ಹೂಳು 15 ಅಡಿಗೂ ಹೆಚ್ಚು ಇದ್ದ ಕಾರಣ ಹಣದ ಕೊರತೆಯಾಯಿತು. ಸಚಿವ ಕಾಗೋಡು ತಿಮ್ಮಪ್ಪ ಅವರು ₹10 ಲಕ್ಷ ನೀಡಿದ್ದರು. ಹೆಗ್ಗೋಡು ಗ್ರಾಮ ಪಂಚಾಯ್ತಿ ₹ 3 ಲಕ್ಷ ನೀಡಿತ್ತು.

ಉಳಿದ ಕೆರೆಗಳ ಅಭಿವೃದ್ಧಿಗೆ ಫೌಂಡೇಷನ್‌ ಸಹಕಾರ ನೀಡುತ್ತಿದೆ’ ಎಂದು ಹೆಗ್ಗೋಡು      ಗ್ರಾಮ ಪಂಚಾಯ್ತಿ ಅಧ್ಯಕ್ಷ ಗುರುದತ್ತ ಸಂಪೆಕೈ ವಿವರ ನೀಡಿದರು.

‘ಕೆರೆ ಅಭಿವೃದ್ಧಿ ಜತೆಗೆ, ಇಡೀ ನದಿಯ ಪುನರುಜ್ಜೀವನಕ್ಕೆ ಸಮಗ್ರ ಯೋಜನೆ ರೂಪಿಸಲಾಗಿದೆ. ಸರ್ಕಾರದ ವಿವಿಧ ಯೋಜನೆಗಳು, ಉದ್ಯೋಗ ಖಾತ್ರಿ ಬಳಸಿಕೊಳ್ಳಲು   ಅಧಿಕಾರಿಗಳ ಜತೆ   ಮಾತುಕತೆ ನಡೆಸಲಾಗಿದೆ.

ಎರಡು–ಮೂರು ಗ್ರಾಮಗಳನ್ನು ಸೇರಿಸಿ, ನಾಲ್ಕು ವಿಭಾಗ ಮಾಡಲಾಗಿದೆ. ಜುಲೈ 9ರಂದು     ನಡೆಯುವ ಸಭೆಯಲ್ಲಿ ಆಯಾ ವಿಭಾಗದ ಗ್ರಾಮಸ್ಥರಿಗೆ ಪ್ರತ್ಯೇಕ ಜವಾಬ್ದಾರಿ    ನೀಡಲಾಗುವುದು’ ಎಂದು ಫೌಂಡೇಷನ್‌ ಸಂಸ್ಥಾಪಕ ಚಂದ್ರಶೇಖರ ಕಾಕಾಲ್ ಅವರು ಹೇಳಿದರು.

********

ಕೆರೆ ಅಭಿವೃದ್ಧಿ ಜತೆಗೆ, ಇಡೀ ನದಿಗೆ ಮರುಜೀವ ನೀಡಲು ಸಮಗ್ರ ಯೋಜನೆ ರೂಪಿಸಲಾಗಿದೆ. ಕಾರ್ಯ ಪೂರ್ಣಗೊಳ್ಳಲು 3ರಿಂದ 5 ವರ್ಷ ಸಮಯ ಬೇಕಾಗುತ್ತದೆ

ಚಂದ್ರಶೇಖರ ಕಾಕಾಲ್‌, ಸಂಸ್ಥಾಪಕ, ಕಾಕಾಲ್‌ ಫೌಂಡೇಷನ್

ಪ್ರತಿಕ್ರಿಯಿಸಿ (+)