ಮಂಗಳವಾರ, ಡಿಸೆಂಬರ್ 10, 2019
17 °C
ಇಂಡಿ ತಾಲ್ಲೂಕು ಹಿರೇಮಸಳಿಯಲ್ಲಿ ಅಮಾನವೀಯ ಘಟನೆ

ಅನೈತಿಕ ಸಂಬಂಧ ಶಂಕೆ: ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನೈತಿಕ ಸಂಬಂಧ ಶಂಕೆ: ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ

ಇಂಡಿ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಹಿರೇಮಸಳಿ ಗ್ರಾಮದಲ್ಲಿ ಸೋಮವಾರ ಸಂಜೆ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ, ಗುಪ್ತಾಂಗಕ್ಕೆ ಖಾರದ ಪುಡಿ ಎರಚಿ ಥಳಿಸಿದ್ದು, ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ.

ಮಹಿಳೆಯ ಮೈಮೇಲೆ ಬಾಸುಂಡೆ ಗುರುತುಗಳಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾನು ನಗ್ನಾವಸ್ಥೆಯಲ್ಲಿಯೇ ಮನೆ ಸೇರಿದ್ದು, ನೆರೆ ಹೊರೆಯವ ರಾಗಲೀ ಊರವರಾಗಲೀ ತುಂಡು ಬಟ್ಟೆಯನ್ನೂ ಕೊಡದೇ ಅಮಾನವೀಯವಾಗಿ ನಡೆದುಕೊಂಡರು ಎಂದು ಸಂತ್ರಸ್ತ ಮಹಿಳೆ ದೂರಿದ್ದಾರೆ.

ಅನೈತಿಕ ಸಂಬಂಧ?: ‘ಮಹಿಳೆಯು, ಗ್ರಾಮದಲ್ಲಿ ಪಾನ್‌ಬೀಡಾ ಅಂಗಡಿ ನಡೆಸುತ್ತಿದ್ದ ಮೌಲಾಲಿ ಅಗರಖೇಡ ಜತೆ ಹಲವು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು. ಸೋಮವಾರ ಮೌಲಾಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಅಲ್ಲಿಗೆ ತೆರಳಿದ್ದರು. ಕುಟುಂಬದವರು ಬರುತ್ತಿದ್ದಂತೆಯೇ ಗಾಬರಿಯಿಂದ ಓಡಲು ಯತ್ನಿಸಿದರು. ಇಬ್ಬರ ನಡುವಿನ ಅನೈತಿಕ ಸಂಬಂಧ ತಿಳಿದಿದ್ದ ಕುಟುಂಬದವರು ಈ ಘಟನೆಯಿಂದ ರೊಚ್ಚಿಗೆದ್ದು, ಇಬ್ಬರನ್ನೂ ವಿವಸ್ತ್ರಗೊಳಿಸಿ ಮನಸೋಇಚ್ಛೆ ಥಳಿಸಿದ್ದಾರೆ. ಆದರೆ, ಮಹಿಳೆಯು ಹಣಕಾಸಿನ ವಿಷಯದಲ್ಲಿ ಜಗಳ ನಡೆದಿದೆ ಎಂದು ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

9 ಮಂದಿ ವಿರುದ್ಧ ದೂರು: ‘ಮೌಲಾಲಿ ನನ್ನ ಬಳಿ ₹ 30 ಸಾವಿರ ಸಾಲ ಪಡೆದಿದ್ದರು. ಇದನ್ನು ಕೇಳಲು ಅವರ ಮನೆಗೆ ಹೋಗಿದ್ದಾಗ ಮನೆಯವರೆಲ್ಲ ಸೇರಿ ಈ ರೀತಿ ದೌರ್ಜನ್ಯ ನಡೆಸಿದ್ದಾರೆ’ ಎಂದು ಸಂತ್ರಸ್ತೆಯು ಒಂಬತ್ತು ಮಂದಿ ವಿರುದ್ಧ ಮಂಗಳವಾರ ದೂರು ನೀಡಿದ್ದಾರೆ.

ಪಿಎಸ್‌ಐ ದೌರ್ಜನ್ಯ: ಆರೋಪ

‘ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ದಾಖಲಿಸಲು ತೆರಳಿದರೂ, ಪಿಎಸ್‌ಐ ಶಿವಾನಂದ ಅರೆನಾಡ ಅವರು ನನ್ನ ಮೇಲೆಯೇ ದಬ್ಬಾಳಿಕೆ ನಡೆಸಿದರು. ಅವರ ಮನೆಗೆ ನೀನ್ಯಾಕೆ ಹೋಗಿದ್ದೆ? ಹಿರೇಮಸಳಿಯ ಗ್ರಾಮಸ್ಥರ ಬದಲು ರೂಗಿ ಗ್ರಾಮಸ್ಥರನ್ನು ಯಾಕೆ ಕರೆ ತಂದಿರುವೆ? ಎಂದೆಲ್ಲಾ ಅಸಂಬದ್ಧವಾಗಿ ಕೇಳಿದರು. ನನ್ನ ಸಂಬಂಧಿಕರು, ಶಾಸಕರ ಬಳಿ ದೂರು ಹೇಳಿದಾಗ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡರು’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಮಹಿಳೆಯ ಆರೋಪವನ್ನು ಅಲ್ಲಗಳೆದಿರುವ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‌ ಕುಮಾರ್‌ ಜೈನ್‌, ಠಾಣೆಯಲ್ಲಿ ಅಂಥ ಘಟನೆ ನಡೆದಿಲ್ಲ ಎಂದಿದ್ದಾರೆ. ‘ಇಂಡಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಸಿದ್ದಾರೆ. ಆ ಬಳಿಕ ಘಟನೆಯ ಸತ್ಯಾಂಶ ತಿಳಿದು ಬರಲಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)