ಶುಕ್ರವಾರ, ಡಿಸೆಂಬರ್ 6, 2019
18 °C

ಆಧಾರ್‌ ನೋಂದಣಿ ನಿರಾಕರಿಸಿದರೆ ದಂಡ

ಪಿಟಿಐ Updated:

ಅಕ್ಷರ ಗಾತ್ರ : | |

ಆಧಾರ್‌ ನೋಂದಣಿ ನಿರಾಕರಿಸಿದರೆ ದಂಡ

ನವದೆಹಲಿ: ಯಾವುದೇ ಕುಂಟು ನೆಪವೊಡ್ಡಿ ಆಧಾರ್ ನೋಂದಣಿ ನಿರಾಕರಿಸುವಂತಿಲ್ಲ. ನಿರಾಕರಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಮಂಗಳವಾರ ಆಧಾರ್‌ ನೋಂದಣಿ ಸಂಸ್ಥೆಗಳಿಗೆ ಖಡಕ್‌ ಎಚ್ಚರಿಕೆ ನೀಡಿದೆ.

ತಾಂತ್ರಿಕ ಅಡಚಣೆ ಅಥವಾ ಇನ್ನಾವುದೇ   ಕ್ಷುಲ್ಲಕ ಕಾರಣ ನೀಡಿ ನೋಂದಣಿ ನಿರಾಕರಿಸಿದರೆ ಅದು ವಂಚನೆಯಾಗುತ್ತದೆ ಎಂದು ಪ್ರಾಧಿಕಾರ ಸ್ಪಷ್ಟವಾಗಿ ಹೇಳಿದೆ.

ಈ ಬಗ್ಗೆ ಏಜೆನ್ಸಿಗಳ ವಿರುದ್ಧ ಪ್ರಾಧಿಕಾರಕ್ಕೆ ಸಾಕಷ್ಟು ದೂರುಗಳು ಬಂದಿವೆ. ಸಂಸ್ಥೆಗಳು ಮತ್ತು ನಿರ್ವಾಹಕರಿಗೆ ಕ್ಷೇತ್ರ ಅಧಿಕಾರಿಗಳ ಮೂಲಕ ಈಗಾಗಲೇ ಎಚ್ಚರಿಕೆ ನೀಡಲಾಗಿದೆ.

ಏಜೆನ್ಸಿಗಳ ವಿರುದ್ಧದ ಆರೋಪ ಸಾಬೀತಾದರೆ ಮೊದಲ ಬಾರಿಗೆ ₹10,000 ದಂಡ ವಿಧಿಸಲಾಗುತ್ತದೆ. ನಂತರದ ಪ್ರತಿ ತಪ್ಪಿಗೂ ₹50,000 ದಂಡ ವಿಧಿಸಲಾಗುತ್ತದೆ.  ಒಂದು ವೇಳೆ ನೋಂದಣಿ ಸಂಸ್ಥೆಗಳು ದಂಡಕ್ಕೂ ಸೊಪ್ಪು ಹಾಕದಿದ್ದರೆ ಅಂತಹ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಪ್ರಾಧಿಕಾರದ ಸಿಇಒ ಅಜಯ್‌ ಭೂಷಣ್ ಪಾಂಡೆ ಎಚ್ಚರಿಕೆ ನೀಡಿದ್ದಾರೆ.

ನಾಗರಿಕರು ಪ್ರಾಧಿಕಾರಕ್ಕೆ ದೂರು ನೀಡಿದರೆ ಅಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

ಜನರ ತೊಂದರೆ ತಪ್ಪಿಸಲು ಆಧಾರ್‌ ನೋಂದಣಿ ಸಂಸ್ಥೆಗಳ ಮೇಲೆ ನಿಗಾ ಇಡಲು ನಿರ್ಧರಿಸಲಾಗಿದೆ. ಹೀಗಾಗಿ ಈ ಸಂಸ್ಥೆಗಳನ್ನು ಸರ್ಕಾರಿ ಸಂಸ್ಥೆ  ಇಲ್ಲವೇ  ಸ್ಥಳೀಯ ಆಡಳಿತ ಸಂಸ್ಥೆಗಳ ನೇರ ಉಸ್ತುವಾರಿಗೆ ವಹಿಸಲು ನಿರ್ಧರಿಸಲಾಗಿದೆ ಎಂದರು.

ಇದಕ್ಕೆ ಪೂರಕವಾಗಿ ಸದ್ಯ ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  ಸಂಸ್ಥೆಗಳನ್ನು ಕೆಲವು ದಿನಗಳಲ್ಲೇ ಸರ್ಕಾರಿ ಇಲ್ಲವೇ  ಪುರಸಭೆ, ನಗರಸಭೆ, ಪಾಲಿಕೆಯ ಆವರಣಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗುವುದು ಅವರು ತಿಳಿಸಿದರು.

ರಹಸ್ಯ  ಕಾಪಾಡಿ

ದೂರಸಂಪರ್ಕ ಸಂಸ್ಥೆ, ಬ್ಯಾಂಕ್‌ ಅಥವಾ ಸರ್ಕಾರಿ ಕಚೇರಿ ಸಿಬ್ಬಂದಿ ಎಂದು ಸುಳ್ಳು ಹೇಳಿಕೊಂಡು ಆಧಾರ್‌ ಸಂಖ್ಯೆ ಮತ್ತು ಮೊಬೈಲ್‌ಗೆ ಬರುವ ಒಟಿಪಿ (ಒಂದು ಬಾರಿ ನೀಡುವ ಪಾಸ್‌ವರ್ಡ್‌)  ನೀಡುವಂತೆ ಕರೆ ಮಾಡಿ ವಂಚಿಸುತ್ತಿರುವ ಸಾಕಷ್ಟು ಪ್ರಕರಣ ಬೆಳಕಿಗೆ ಬಂದಿವೆ.

ಆಧಾರ್ ಸಂಖ್ಯೆ ಮತ್ತು ಒಟಿಪಿಯಂತಹ ವೈಯಕ್ತಿಕ ಹಾಗೂ ರಹಸ್ಯಮಾಹಿತಿಯನ್ನು   ಬಹಿರಂಗಪಡಿಸಬಾರದು. ಇಂತಹ ಮೋಸದ ಜಾಲಕ್ಕೆ ಬಲಿ ಬೀಳದಂತೆ  ಪಾಂಡೆ ಜನರಿಗೆ ಮನವಿ ಮಾಡಿದ್ದಾರೆ.

ಪ್ರಮಾಣ ಪತ್ರ ಕಡ್ಡಾಯ

ಆಧಾರ್‌ ಏಜೆನ್ಸಿಗಳು ಪ್ರತಿ 10 ದಿನಗಳಿಗೊಮ್ಮೆ ಪ್ರಾಧಿಕಾರದಿಂದ ನವೀಕರಣ ಪ್ರಮಾಣಪತ್ರ ಪಡೆಯುವುದು ಕಡ್ಡಾಯ. ಸಮರ್ಪಕವಾಗಿ ಸೇವೆ ಒದಗಿಸುವ ಏಜೆನ್ಸಿಗಳ ಪರವಾನಗಿಯನ್ನು ಮಾತ್ರ ನವೀಕರಣ ಮಾಡಲಾಗುತ್ತದೆ.  ಸಮರ್ಪಕ ತಂತ್ರಜ್ಞಾನ, ಸೌಲಭ್ಯ ಹೊಂದಿರುವುದು ದೃಢವಾದ ನಂತರವಷ್ಟೇ ಸಂಸ್ಥೆಗಳ ಹೆಸರನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದರು. ಆದರೆ, ಈ ಸಂಸ್ಥೆಗಳು ಯಾಕೆ ಸಣ್ಣಪುಟ್ಟ ತಾಂತ್ರಿಕ ನೆಪವೊಡ್ಡಿ ನೋಂದಣಿ ನಿರಾಕರಿಸುತ್ತಿವೆ ಎಂದು ಗೊತ್ತಾಗುತ್ತಿಲ್ಲಎಂದು ಪಾಂಡೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಒಟ್ಟು 25,000 ಆಧಾರ್‌  ನೋಂದಣಿ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ.

ಪ್ರತಿಕ್ರಿಯಿಸಿ (+)