ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಡಿನೋಟಿಫೈ ಅಧಿಕಾರ ರಾಜ್ಯಗಳಿಗೆ: ಮದ್ಯದಂಗಡಿಗೆ ಭಂಗವಿಲ್ಲ

Last Updated 4 ಜುಲೈ 2017, 19:42 IST
ಅಕ್ಷರ ಗಾತ್ರ

ನವದೆಹಲಿ:  ನಗರದ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಗಳನ್ನು ರಾಜ್ಯಗಳೇ ಡಿನೋಟಿಫೈ ಮಾಡಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್‌  ಆದೇಶಿಸಿದೆ.

ರಾಷ್ಟ್ರೀಯ ಹೆದ್ದಾರಿಯ 500 ಮೀಟರ್‌ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳನ್ನು ನಿಷೇಧಿಸಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಅದರಿಂದಾಗಿ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವ ನಗರ ಪ್ರದೇಶಗಳ ಮದ್ಯದ ಅಂಗಡಿಗಳನ್ನು ತೆರವು ಮಾಡುವುದು ಅನಿವಾರ್ಯವಾಗಿತ್ತು.

ಆದರೆ ಸುಪ್ರೀಂ ಕೋರ್ಟ್‌ ಮಂಗಳವಾರ ನೀಡಿದ ಆದೇಶದಿಂದಾಗಿ ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಗಳನ್ನು ಡಿನೋಟಿಫೈ ಮಾಡಿ ಮದ್ಯದ ಅಂಗಡಿಗಳು ಮುಂದುವರಿಯಲು ರಾಜ್ಯ ಸರ್ಕಾರಗಳು ಅವಕಾಶ ನೀಡಬಹುದಾಗಿದೆ. ಪಂಜಾಬ್‌ ಸರ್ಕಾರವು ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ನಗರದ  ವ್ಯಾಪ್ತಿಯ ಹೆದ್ದಾರಿಗಳನ್ನು ಮದ್ಯದ ಅಂಗಡಿಗಳ ನಿಷೇಧ ವ್ಯಾಪ್ತಿಯಿಂದ ಹೊರಗೆ ಇರಿಸಿತ್ತು.

ಈ ಮೂಲಕ, ನಗರ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮದ್ಯದ  ಅಂಗಡಿಗಳು ಮುಂದುವರಿಯಲು ಅವಕಾಶ ಕೊಡಲಾಗಿತ್ತು. ಅದನ್ನು ಪ್ರಶ್ನಿಸಿ ಅರೈವ್‌ ಸೇಫ್‌ ಸೊಸೈಟಿ ಎಂಬ ಎನ್‌ಜಿಒ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಮತ್ತು ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಅರ್ಜಿಯ ವಿಚಾರಣೆ ನಡೆಸಿ, ಪಂಜಾಬ್‌ ಸರ್ಕಾರದ ನಿರ್ಧಾರದಲ್ಲಿ ಮಧ್ಯಪ್ರವೇಶದ ಅಗತ್ಯವಿಲ್ಲ ಎಂದು ಹೇಳಿದೆ. ಕರ್ನಾಟಕವೂ ಸೇರಿ ಹಲವು ರಾಜ್ಯಗಳು ಪಂಜಾಬ್‌ ಸರ್ಕಾರದ ರೀತಿಯಲ್ಲಿಯೇ ನಿರ್ಧಾರ ಕೈಗೊಳ್ಳಲು ಚಿಂತನೆ ನಡೆಸಿದ್ದವು.

‘ಸುಪ್ರೀಂ’ ತರ್ಕ
ರಾಷ್ಟ್ರೀಯ ಹೆದ್ದಾರಿಗಳು ನಗರ ವ್ಯಾಪ್ತಿಯಲ್ಲಿದ್ದರೆ ಅವುಗಳನ್ನು ಡಿನೋಟಿಫೈ ಮಾಡುವುದು ತಪ್ಪಲ್ಲ.  ಹೆದ್ದಾರಿಯಲ್ಲಿ ವೇಗವಾಗಿ ಸಾಗುವ ವಾಹನಗಳ ಚಾಲಕರು ಕುಡಿತದ ಅಮಲಿನಲ್ಲಿ ಇರಬಾರದು ಎಂಬುದಷ್ಟೇ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿನ ಮದ್ಯದ ಅಂಗಡಿ ನಿಷೇಧಿಸಲು ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT