ಬುಧವಾರ, ಡಿಸೆಂಬರ್ 11, 2019
25 °C

ಸುಗ್ರೀವಾಜ್ಞೆ ಜಾರಿಗೆ ರಾಜ್ಯ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಗ್ರೀವಾಜ್ಞೆ ಜಾರಿಗೆ ರಾಜ್ಯ ಚಿಂತನೆ

ಬೆಂಗಳೂರು:  ನಗರ  ಮತ್ತು ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳನ್ನು ಉಳಿಸಲು ಸುಗ್ರೀವಾಜ್ಞೆ ತರುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಈ ಕುರಿತು ಮಹತ್ವದ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ  ಈಗಾಗಲೇ ಹೆದ್ದಾರಿ ಬದಿಯ ಮದ್ಯದ ಅಂಗಡಿಗಳನ್ನು ಅಬಕಾರಿ ಇಲಾಖೆ ಬಂದ್‌ ಮಾಡಿದೆ. ಇದರಿಂದ ಎದುರಾಗಲಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಭೆ ಕರೆದಿದ್ದರು. ಆದರೆ, ‘ನಗರ ಪ್ರದೇಶಗಳ ಮಧ್ಯೆ ಹಾದು ಹೋಗುವ ಹೆದ್ದಾರಿಗಳನ್ನು ಡಿನೋಟಿಫೈ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ’ ಎಂದು ಮಂಗಳವಾರ ಸುಪ್ರೀಂಕೋರ್ಟ್‌ ಆದೇಶಿಸಿತು. ಹೀಗಾಗಿ ಸಭೆಯ ಕಾರ್ಯಸೂಚಿ ಬದಲಾಯಿತು.

ಅಧಿವೇಶನದ ಬದಲು ಸುಗ್ರೀವಾಜ್ಞೆ: ಹೆದ್ದಾರಿ ಡಿನೋಟಿಫೈ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಪಂಜಾಬ್‌ನಲ್ಲಿ ಮಾಡಿದಂತೆ ವಿಧಾನಮಂಡಲದಲ್ಲಿ ಮಸೂದೆ ಅಂಗೀಕರಿಸಬೇಕೇ ಎಂಬ ಚರ್ಚೆ ಸಭೆಯಲ್ಲಿ ನಡೆಯಿತು.

ಮದ್ಯದಂಗಡಿ ಉಳಿಸಲು ತುರ್ತಾಗಿ ಅಧಿವೇಶನ ಕರೆದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗಲಿದೆ.

ಹೀಗಾಗಿ, ಸುಗ್ರೀವಾಜ್ಞೆ ಮೂಲಕ ಇದನ್ನು ಜಾರಿ ಮಾಡಬಹುದೇ ಎಂಬ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ವರದಿ ನೀಡುವಂತೆ  ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.

ಕಾನೂನಿಗೆ ತಿದ್ದುಪಡಿಗೆ ಒತ್ತಾಯ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಬದಿ ಹಾಲಿ ಇರುವ ಎಲ್ಲ ಮದ್ಯದ ಅಂಗಡಿಗಳನ್ನು ಉಳಿಸುವ ಸಲುವಾಗಿ  ಕಾನೂನಿಗೇ ತಿದ್ದುಪಡಿ ತರುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು  ಮದ್ಯ ಮಾರಾಟಗಾರರು ನಿರ್ಧರಿಸಿದ್ದಾರೆ.

ಈ ಸಂಬಂಧ ಚರ್ಚಿಸಲು ಇದೇ 6 ರಂದು ರಾಜ್ಯದ ಮದ್ಯ ಮಾರಾಟಗಾರರ ಸಂಘದ ಸಭೆ ಕರೆಯಲಾಗಿದೆ ಎಂದು ಸಂಘದ ಕಾರ್ಯದರ್ಶಿ ಗೋವಿಂದರಾಜ್‌ ಹೆಗ್ಡೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಿದರೆ 1,900 ಅಂಗಡಿಗಳು ಮಾತ್ರ ಉಳಿಯಲಿವೆ.  ಗ್ರಾಮೀಣ ಭಾಗದ ಮದ್ಯದ ಅಂಗಡಿಗಳನ್ನು ಉಳಿಸಬೇಕು. ಹೀಗಾಗಿ ಪಂಜಾಬ್‌ ಮತ್ತು ಹಿಮಾಚಲ ಪ್ರದೇಶದಂತೆ ರಾಜ್ಯ ಸರ್ಕಾರವೂ  ಕಾನೂನಿಗೆ ತಿದ್ದುಪಡಿ ತರಬೇಕು ಎಂದು  ಒತ್ತಾಯಿಸಲಾಗುವುದು ಎಂದರು.

ಬೆಂಗಳೂರಿನ ಸಮಸ್ಯೆಗೆ ಪರಿಹಾರ: ಸಿ.ಎಂ ಆದೇಶ

ಬೆಂಗಳೂರು ಮಹಾನಗರ ವ್ಯಾಪ್ತಿಯೊಳಗಿದ್ದ ಹೆದ್ದಾರಿ ಬದಿಯ ಮದ್ಯದಂಗಡಿಗಳ ಪರವಾನಗಿ ನವೀಕರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಆದೇಶಿಸಿದ್ದಾರೆ. ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2015ರಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ, ರಿಂಗ್ ರೋಡ್‌ನಿಂದ  ಆಚೆಗಿರುವ ರಸ್ತೆಗಳು ಮಾತ್ರ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತವೆ. ನಗರ ಪ್ರದೇಶದೊಳಗಿನ ರಸ್ತೆಗಳನ್ನು ನಗರ ಸ್ಥಳೀಯ ಸಂಸ್ಥೆಗಳು ಅಥವಾ ರಾಜ್ಯ ಸರ್ಕಾರ ನಿರ್ವಹಿಸುವಂತೆ ಸೂಚಿಸಿತ್ತು’ ಎಂದು  ಅಧಿಕಾರಿಗಳು ಸಭೆ ಗಮನಕ್ಕೆ ತಂದರು.

ಇದರ ಅನ್ವಯ ಗೊರಗುಂಟೆ ಪಾಳ್ಯ, ಹೆಬ್ಬಾಳ, ಕೆ.ಆರ್. ಪುರ, ನಾಯಂಡನಹಳ್ಳಿ ನಗರದ ಗಡಿಯಾಗಿವೆ. ಈ ವ್ಯಾಪ್ತಿಯ ಒಳಗಿರುವ ಪ್ರದೇಶಗಳಲ್ಲಿ ಹೆದ್ದಾರಿ ಇದ್ದರೂ ತೀರ್ಪು  ಅನ್ವಯವಾಗುವುದಿಲ್ಲ ಎಂದೂ ಹೇಳಿದರು. ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಪಡೆದು ಕಾನೂನು ಇಲಾಖೆಗೆ ವರದಿ ಸಲ್ಲಿಸಬೇಕು. ಅದು ನೀಡುವ ಸಲಹೆ ಆಧರಿಸಿ ಬೆಂಗಳೂರಿನ ಮದ್ಯದಂಗಡಿಗಳ  ಪರವಾನಗಿ ನವೀಕರಿಸಲು ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಸೂಚಿಸಿದರು.

ಪ್ರತಿಕ್ರಿಯಿಸಿ (+)