ಭಾನುವಾರ, ಡಿಸೆಂಬರ್ 15, 2019
21 °C
ಗೆದ್ದಲಹಳ್ಳಿಯ ಆ್ಯಕ್ಸಿಸ್‌ ಬ್ಯಾಂಕ್‌ ಎಟಿಎಂ ಘಟಕ ಬಂದ್‌ l ನಕಲಿ ಕಾರ್ಡ್‌ ಸಿದ್ಧಪಡಿಸಿ ₹20 ಲಕ್ಷ ಡ್ರಾ

ಸ್ಕಿಮ್ಮರ್‌ ಬಳಸಿ ಬ್ಯಾಂಕ್‌ ಖಾತೆಗಳಿಗೆ ಕನ್ನ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಸ್ಕಿಮ್ಮರ್‌ ಬಳಸಿ ಬ್ಯಾಂಕ್‌ ಖಾತೆಗಳಿಗೆ ಕನ್ನ

ಬೆಂಗಳೂರು: ಕೊತ್ತನೂರು ಸಮೀಪದ ಗೆದ್ದಲಹಳ್ಳಿ ಆ್ಯಕ್ಸಿಸ್‌ ಬ್ಯಾಂಕ್‌ ಶಾಖೆಯ ಎಟಿಎಂ ಘಟಕದಲ್ಲಿ ಸ್ಕಿಮ್ಮರ್‌ ಉಪಕರಣ ಬಳಸಿ ಮಾಹಿತಿ ಕದ್ದಿರುವ ಖದೀಮರು, ಗ್ರಾಹಕರ ಖಾತೆಗಳಿಗೆ ಕನ್ನ ಹಾಕಿದ್ದಾರೆ.

ನಗರದ ಸೈಬರ್‌ ಕ್ರೈಂ ಠಾಣೆಯಲ್ಲಿ ಭಾನುವಾರ (ಜುಲೈ 2) ದಾಖಲಾಗಿದ್ದ 8 ಪ್ರಕರಣಗಳ ತನಿಖೆ ಕೈಗೊಂಡಿರುವ ಪೊಲೀಸರಿಗೆ ಎಟಿಎಂ ಘಟಕದಲ್ಲಿ ಸ್ಕಿಮ್ಮರ್‌ ಉಪಕರಣದ ಕುರುಹು  ಪತ್ತೆಯಾಗಿದೆ.

‘ಬ್ಯಾಂಕ್‌ನಿಂದ ಪಡೆದಿದ್ದ ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ಗಳು ದೂರುದಾರರ ಬಳಿ ಇವೆ. ಪಾಸ್‌ವರ್ಡ್‌ ಸಹ ಸೋರಿಕೆಯಾಗಿಲ್ಲ. ಅಷ್ಟಿದ್ದರೂ ಖದೀಮರು, ಗ್ರಾಹಕರ ಖಾತೆಗಳಿಗೆ ಕನ್ನ ಹಾಕಿದ್ದಾರೆ. ಈ ಬಗ್ಗೆ ದೂರುದಾರರಿಂದ ಮಾಹಿತಿಕಲೆಹಾಕಿದಾಗ ಅವರೆಲ್ಲ  ವಾರದ ಹಿಂದಷ್ಟೇ ಕೊತ್ತನೂರು ಗೆದ್ದಲಹಳ್ಳಿಯ ಆ್ಯಕ್ಸಿಸ್‌ ಬ್ಯಾಂಕ್‌ ಎಟಿಎಂ ಘಟಕದಿಂದ ಹಣ ಡ್ರಾ ಮಾಡಿಕೊಂಡಿದ್ದು ಗೊತ್ತಾಯಿತು’ ಎಂದು ಸೈಬರ್‌ ಕ್ರೈಂ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

‘ಗ್ರಾಹಕರ ಮಾಹಿತಿಯಂತೆ ಎಟಿಎಂ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆವು. ಈ ವೇಳೆ ಎಟಿಎಂ ಯಂತ್ರಕ್ಕೆ ಸ್ಕಿಮ್ಮರ್‌ ಉಪಕರಣ ಅಳವಡಿಸಿದ್ದ ಗುರುತು ಇತ್ತು. ಅದನ್ನು ಬೆರಳಚ್ಚು ತಜ್ಞರು ಸಹ ಪರಿಶೀಲನೆ ನಡೆಸಿದರು’ ಎಂದು ವಿವರಿಸಿದರು.

ಸೆಕ್ಯುರಿಟಿ ಗಾರ್ಡ್‌ ಇಲ್ಲದ ಎಟಿಎಂ: ಪ್ರಕರಣದ ಬಗ್ಗೆ ಸೈಬರ್‌ ಕ್ರೈಂ ಪೊಲೀಸರು, ಬ್ಯಾಂಕ್‌ ಸಿಬ್ಬಂದಿಯನ್ನು ವಿಚಾರಣೆ ಒಳಪಡಿಸಿದ್ದಾರೆ.

‘ಗೆದ್ದಲಹಳ್ಳಿಯ ಮುಖ್ಯರಸ್ತೆಗೆ ಹೊಂದಿಕೊಂಡು ಎಟಿಎಂ ಘಟಕವಿದೆ.  ಅಲ್ಲಿ ಭದ್ರತಾ ಸಿಬ್ಬಂದಿ ಸಹ ಇಲ್ಲ. ಆ ಘಟಕಕ್ಕೆ ನುಗ್ಗಿದ್ದ ಖದೀಮರು, ಕಾರ್ಡ್‌ ಉಜ್ಜುವ ಜಾಗದಲ್ಲಿ ಸ್ಕಿಮ್ಮರ್‌ ಉಪಕರಣ ಅಳವಡಿಸಿದ್ದರು. ಇದಾದ ಬಳಿಕ ಗ್ರಾಹಕರು, ಅದೇ ಘಟಕದ ಸ್ಕಿಮ್ಮರ್‌ ಉಪಕರಣದಲ್ಲಿ ಕಾರ್ಡ್‌ ಉಜ್ಜಿ ಹಣ ಡ್ರಾ ಮಾಡಿಕೊಂಡು ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

‘ಕೆಲ ದಿನ ಬಿಟ್ಟು ಎಟಿಎಂಗೆ ಬಂದಿದ್ದ ಖದೀಮರು, ಆ ಉಪಕರಣವನ್ನು ವಾಪಸ್‌ ಒಯ್ದಿದ್ದರು. ಮರುದಿನವೇ 35 ಗ್ರಾಹಕರ ಬ್ಯಾಂಕ್‌ ಖಾತೆಗೆ ಕನ್ನ ಹಾಕಿ ₹20 ಲಕ್ಷ ಹಣ ಡ್ರಾ ಮಾಡಿಕೊಂಡಿದ್ದಾರೆ’ ಎಂದು ವಿವರಿಸಿದರು.

‘ಎಟಿಎಂಗೆ ಬಂದು ಹೋದವರ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಸಾಧ್ಯತೆ ಇದೆ.   ಆದರೆ, ಕ್ಯಾಮೆರಾ ನಿರ್ವಹಣಾ ಘಟಕ ಮುಂಬೈನಲ್ಲಿರುವುದಾಗಿ ಬ್ಯಾಂಕ್ ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲಿಂದ ದೃಶ್ಯಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ’ ಎಂದು ವಿವರಿಸಿದರು.

‘ಮುಂಜಾಗ್ರತಾ ಕ್ರಮವಾಗಿ  ಆ ಎಟಿಎಂ ಘಟಕವನ್ನು ಸದ್ಯ ಬಂದ್‌ ಮಾಡಿಸಿದ್ದೇವೆ. ಸ್ಥಳೀಯ ಜನರಿಗೂ ಈ ಬಗ್ಗೆ ಮಾಹಿತಿ ನೀಡಿದ್ದು, ಎಚ್ಚರವಾಗಿರುವಂತೆ ಹೇಳಿದ್ದೇವೆ. ಮಂಗಳವಾರವೂ ಇಬ್ಬರು ಗ್ರಾಹಕರು ಹಣ ಕಳೆದುಕೊಂಡ ಬಗ್ಗೆ ದೂರು ಕೊಟ್ಟಿದ್ದಾರೆ’ ಎಂದು ತಿಳಿಸಿದರು.

ಏನಿದು ಸ್ಕಿಮ್ಮರ್‌ ಉಪಕರಣ: ಎಟಿಎಂ ಯಂತ್ರದ ಕಾರ್ಡ್‌ ಉಜ್ಜುವ ಭಾಗದಲ್ಲಿ ಬ್ಯಾಂಕ್‌  ಸೆನ್ಸಾರ್‌ ಉಪಕರಣ ಅಳವಡಿಸಿರುತ್ತಾರೆ. ಗ್ರಾಹಕರು ಅಲ್ಲಿ ಕಾರ್ಡ್‌ ಉಜ್ಜಿದ ಬಳಿಕವೇ ಹಣ ಡ್ರಾ  ಪ್ರಕ್ರಿಯೆ ಆರಂಭವಾಗುತ್ತದೆ.

ಅಂಥ ಉಪಕರಣವನ್ನೇ ಹೋಲುವಂತೆ ಸ್ಕಿಮ್ಮರ್‌ ಉಪಕರಣವನ್ನೂ ವಿನ್ಯಾಸ ಮಾಡಲಾಗಿರುತ್ತದೆ. ಇದರಲ್ಲಿ ಸೂಕ್ಷ್ಮ ಕ್ಯಾಮೆರಾ ಸಹ ಇರುತ್ತದೆ. ಇಂಥ ಎಟಿಎಂ ಘಟಕಕ್ಕೆ ಹೋಗುವ ಗ್ರಾಹಕರು ಕಾರ್ಡ್‌ ಉಜ್ಜಿದ ಸಂದರ್ಭದಲ್ಲಿ ಕಾರ್ಡ್ನ ಸಂಪೂರ್ಣ ಸ್ಕಿಮ್ಮರ್‌ ಉಪಕರಣದಲ್ಲಿ ದಾಖಲಾಗುತ್ತದೆ. ಬಳಿಕ ಆ ಉಪಕರಣ ತೆಗೆದುಕೊಂಡು ಹೋಗುವ ಖದೀಮರು, ಸಾಫ್ಟ್‌ವೇರ್‌ ಬಳಸಿ ನಕಲಿ ಕಾರ್ಡ್‌ ಸಿದ್ಧಪಡಿಸಿ, ಗ್ರಾಹಕರ ಖಾತೆಯಲ್ಲಿದ್ದ ಹಣವನ್ನು ಡ್ರಾ ಮಾಡಿಕೊಳ್ಳುತ್ತಾರೆ ಎಂದು ಅಧಿಕಾರಿ ವಿವರಿಸಿದರು.

***

ಸೈಬರ್‌ ಕ್ರೈಂ ಪೊಲೀಸರಿಂದ ವಿಚಾರಣೆ

ಸ್ಕಿಮ್ಮರ್ ಉಪಕರಣ ಬಳಸಿ ಖಾತೆಗೆ ಕನ್ನ ಹಾಕುತ್ತಿದ್ದ ನೈಜೀರಿಯಾದ ಎರೆಮನ್ ಸ್ಮಾರ್ಟ್‌, ಮಾರ್ಟಿನ್ ಸಾಂಬಾ, ನಂಬೋಜ್ ಜೋಲಿ, ಟೀನಾ, ಕೆನ್ನಿ, ಓಲಾಯೆಮಿ ಹಾಗೂ ವೈಯಾಲಿಕಾವಲ್‌ನ ವಿಕ್ರಂ ರಾವ್‌ ನಿಕ್ಕಂ ಎಂಬುವರನ್ನು ಬಾಣಸವಾಡಿ ಠಾಣೆಯ ಪೊಲೀಸರು ಕೆಲ ತಿಂಗಳ ಹಿಂದಷ್ಟೇ ಬಂಧಿಸಿದ್ದರು.

ಅವರ ಮೇಲೆ ಸೈಬರ್‌ ಕ್ರೈಂ ಪೊಲೀಸರ ಅನುಮಾನವಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯಕ್ಕೆ  ಈ ಕೃತ್ಯ ಎಸಗಿದ್ದು ಯಾರು ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ.

ಪ್ರತಿಕ್ರಿಯಿಸಿ (+)