ಶನಿವಾರ, ಡಿಸೆಂಬರ್ 7, 2019
16 °C
ಆನೇಕಲ್ ಬಳಿ 207ಎಕರೆ 24 ಗುಂಟೆ ಜಮೀನು ಕೊಡಲು ಪಾಲಿಕೆಯಿಂದ ಪ್ರಸ್ತಾವ

ಜಾಗ ವಿನಿಮಯಕ್ಕೆ ರಕ್ಷಣಾ ಇಲಾಖೆ ಸಹಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಗ ವಿನಿಮಯಕ್ಕೆ ರಕ್ಷಣಾ ಇಲಾಖೆ ಸಹಮತ

ಬೆಂಗಳೂರು: ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಪಾಲಿಕೆಗೆ ಅಗತ್ಯವಿರುವ 62 ಎಕರೆ ಜಮೀನನ್ನು ಬಿಟ್ಟುಕೊಟ್ಟು, ನಗರ ಹೊರವಲಯದ ಆನೇಕಲ್‌ ಬಳಿ 207 ಎಕರೆ 24 ಗುಂಟೆ ಜಮೀನು ಪಡೆಯಲು ರಕ್ಷಣಾ ಇಲಾಖೆ ಸಹಮತ ವ್ಯಕ್ತಪಡಿಸಿದೆ.

ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಪಾಲಿಕೆ ಅಧಿಕಾರಿಗಳು ಮಂಗಳವಾರ ತಮ್ಮನಾಯಕನಹಳ್ಳಿಯ ಸರ್ವೆ ನಂಬರ್‌ 23ರಲ್ಲಿರುವ ಜಮೀನಿಗೆ ಭೇಟಿ ನೀಡಿ, ನಕ್ಷೆ ಮತ್ತು ಕಂದಾಯ ದಾಖಲೆಗಳನ್ನು ಪರಿಶೀಲಿಸಿದರು.

ನಗರದ ಹೃದಯ ಭಾಗದಲ್ಲಿರುವ ರಕ್ಷಣಾ ಇಲಾಖೆಗೆ ಸೇರಿದ ವಿವಿಧ ಸ್ವತ್ತುಗಳನ್ನು ಮೂಲ ಸೌಕರ್ಯ ಅಭಿವೃದ್ಧಿ ಉದ್ದೇಶಕ್ಕೆ ಬಿಟ್ಟುಕೊಟ್ಟು, ತಮ್ಮನಾಯಕನಹಳ್ಳಿಯ ಜಮೀನನ್ನು ಬದಲಿ ಜಾಗವಾಗಿ ಸ್ವೀಕರಿಸಲು ರಕ್ಷಣಾ ಇಲಾಖೆಯ ಕರ್ನಾಟಕ ಮತ್ತು ಕೇರಳ ಉಪ ವಲಯದ ಜನರಲ್‌ ಕಮಾಂಡಿಂಗ್‌ ಆಫೀಸರ್‌ ಮೇಜರ್‌ ಜನರಲ್‌ ಕೆ.ಎಸ್‌.ನಿಜ್ಜರ್‌ ಮತ್ತು ಕರ್ನಲ್‌ ಅಶೋಕ್‌ ಮಿಶ್ರಾ ತಾತ್ವಿಕ ಒಪ್ಪಿಗೆ ನೀಡಿದರು.

‘ರಕ್ಷಣಾ ಸಚಿವಾಲಯದ ಅಧಿಕಾರಿಗಳಿಗೆ ಈ ಸಂಬಂಧ ಶೀಘ್ರವೇ  ವರದಿ ಸಲ್ಲಿಸುತ್ತೇವೆ. ಮುಂದಿನ ತೀರ್ಮಾನವನ್ನು ಸಚಿವಾಲಯ ತೆಗೆದುಕೊಳ್ಳಲಿದೆ’ ಎಂದು ನಿಜ್ಜರ್‌ ಅವರು ಪಾಲಿಕೆಯ ವಿಶೇಷ ಆಯುಕ್ತ  (ಯೋಜನೆ) ಬಿ.ಎಂ.ವಿಜಯಶಂಕರ ಅವರಿಗೆ ತಿಳಿಸಿದರು.

ಪಾಲಿಕೆ ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌, ಬೆಂಗಳೂರು ದಕ್ಷಿಣ  ಉಪವಿಭಾಗಾಧಿಕಾರಿ ಡಿ.ಬಿ.ನಟೇಶ್‌ ಅವರು ರಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ಬದಲಿ ಜಾಗದ ಕಂದಾಯ ದಾಖಲೆ ಪತ್ರಗಳನ್ನು ವಿವರಿಸಿದರು.

ಪಾಲಿಕೆಯ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಿರುವ ರೈಲ್ವೆ ಕೆಳಸೇತುವೆ, ಮೇಲ್ಸೇತುವೆ, ರಸ್ತೆ ವಿಸ್ತರಣೆ ಹಾಗೂ ಇನ್ನಿತರ ಪ್ರಮುಖ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ರಕ್ಷಣಾ ಇಲಾಖೆಗೆ ಸೇರಿದ 62 ಎಕರೆ ಬೇಕಾಗಿತ್ತು. ಈ ಜಮೀನು ಬಿಟ್ಟುಕೊಟ್ಟು ಬದಲಿ ಭೂಮಿ ಪಡೆದುಕೊಳ್ಳುವಂತೆ ಪಾಲಿಕೆಯು ರಕ್ಷಣಾ ಸಚಿವಾಲಯಕ್ಕೆ ಕೋರಿಕೆ ಸಲ್ಲಿಸಿತ್ತು.

ರಕ್ಷಣಾ ಇಲಾಖೆಯ ಸ್ವತ್ತಿನ ಭೂಮಿಗೆ ಸಮಮೌಲ್ಯದ ಜಮೀನನ್ನು ತಮ್ಮನಾಯಕನಹಳ್ಳಿ ಬಳಿ ಕೊಡುವುದಾಗಿ ಪ್ರಸ್ತಾವ ಸಲ್ಲಿಸಿತ್ತು. ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಕರ್ನಾಟಕ ಮತ್ತು ಕೇರಳ ಉಪ ವಲಯದ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.

ಪ್ರತಿಕ್ರಿಯಿಸಿ (+)